ಶುಕ್ರವಾರ, ಡಿಸೆಂಬರ್ 6, 2019
26 °C
ರಾಯಚೂರು ವೈದ್ಯ ವಿಜ್ಞಾನ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಅಳಲು

ಶಿಷ್ಯವೇತನ ಬಿಡುಗಡೆಗೆ ಲಂಚ ಕೊಡಬೇಕು!

ನಾಗರಾಜ ಚಿನಗುಂಡಿ Updated:

ಅಕ್ಷರ ಗಾತ್ರ : | |

ಶಿಷ್ಯವೇತನ ಬಿಡುಗಡೆಗೆ ಲಂಚ ಕೊಡಬೇಕು!

ರಾಯಚೂರು: ಸರ್ಕಾರದಿಂದ ಬಿಡುಗಡೆಯಾಗುವ ಶಿಷ್ಯವೇತನವನ್ನು ಸಂಬಂಧಿಸಿದ ವಿದ್ಯಾರ್ಥಿಗೆ ಕೊಡಲು ರಾಯಚೂರು ವೈದ್ಯ ವಿಜ್ಞಾನ ಸಂಸ್ಥೆಯ ಆಡಳಿತ ಸಿಬ್ಬಂದಿ ವಿದ್ಯಾರ್ಥಿಗಳಿಂದಲೇ ಲಂಚ ಪಡೆಯುತ್ತಿದ್ದಾರೆ!

ಹಿಂದುಳಿದ ವರ್ಗದ ವಿದ್ಯಾರ್ಥಿಗಳು ತಲಾ ಒಂದು ಸಾವಿರ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳು ₹5 ಸಾವಿರ ಲಂಚ ಎನ್ನುವ ನಿಯಮ ಹೇರಲಾಗಿದೆ. ಲಂಚ ಕೊಡುವುದಕ್ಕೆ ಯಾರಾದರೂ ಹಿಂದೇಟು ಹಾಕಿದರೆ, ಎಲ್ಲ ವಿದ್ಯಾರ್ಥಿಗಳ ಶಿಷ್ಯವೇತನವನ್ನು ತಡೆ ಹಿಡಿಯಲಾಗುತ್ತದೆ. ಶಿಷ್ಯವೇತನ ಮೊತ್ತದ ಚೆಕ್‌ ಹಸ್ತಾಂತರಿಸುವ ಪೂರ್ವದಲ್ಲಿಯೇ ಸಿಬ್ಬಂದಿಗೆ ನಗದು ಲಂಚ ಕೊಡಲೇಬೇಕಿದೆ.

‘ನಿಯಮಾನುಸಾರ ನಮ್ಮ ಬ್ಯಾಂಕ್‌ ಖಾತೆಗೆ ಶಿಷ್ಯವೇತನ ಜಮಾಗೊಳಿಸಬೇಕು. ಆದರೆ, ಕಾಲೇಜಿನ ಆಡಳಿತ ಸಿಬ್ಬಂದಿ ಎಲ್ಲರ ಹೆಸರಿನಲ್ಲಿ ಚೆಕ್‌ ಬರೆದು ಕೊಡುವ ಪದ್ಧತಿ ಇಟ್ಟುಕೊಂಡಿದ್ದಾರೆ. ಹಿಂದುಳಿದ ವರ್ಗದವರಿಗೆ ₹20 ಸಾವಿರ ಹಾಗೂ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ₹50 ಸಾವಿರ ಶಿಷ್ಯವೇತನವು ಪ್ರತಿವರ್ಷ ಸರ್ಕಾರದಿಂದ ಬರುತ್ತದೆ. ಸರ್ಕಾರವು ಇಷ್ಟೊಂದು ಮೊತ್ತವನ್ನು ಕೊಡುತ್ತದೆ; ಅದರಲ್ಲಿ ಒಂದು ಸಾವಿರ ಅಥವಾ ಐದು ಸಾವಿರ ಹಣ ಕೊಡುವುದಕ್ಕೆ ಏನು ಕಷ್ಟ ಎಂದು ಪ್ರಶ್ನಿಸುತ್ತಾರೆ’ ಎಂದು ಹೆಸರು ಹೇಳಲು ಇಚ್ಚಿಸದ ರಿಮ್ಸ್‌ ವಿದ್ಯಾರ್ಥಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

‘ಎಲ್ಲರಿಂದಲೂ ಹಣ ಸಂಗ್ರಹಿಸಿ ಪಡೆಯುತ್ತಾರೆ. ನಮಗೆ ಸಿಗುವ ಶಿಷ್ಯವೇತನಕ್ಕಿಂತಲೂ ಹೆಚ್ಚಿನ ಮೊತ್ತ ಆಡಳಿತ ಸಿಬ್ಬಂದಿಗೆ ಸಿಗುತ್ತಿದೆ. ಪ್ರತಿ ವರ್ಷ ಇದು ಚಾಲ್ತಿಯಲ್ಲಿದೆ. ಈ ಬಗ್ಗೆ ಪ್ರಶ್ನಿಸುವ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಅಂಕಗಳನ್ನು ಕಡಿಮೆ ಮಾಡಿಸುತ್ತಾರೆ. ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ಹಾಗೂ ಇನ್ನಿತರೆ ಸೌಲಭ್ಯಗಳಿವೆ. ಲಂಚ ಕೊಡುವುದಕ್ಕೆ ನಿರಾಕರಿಸಿದರೆ, ಸರ್ಕಾರಿ ಅನುಕೂಲಗಳನ್ನು ಕೊಡುವುದಿಲ್ಲ ಎನ್ನುವ ಆತಂಕದ ವಾತಾವರಣವನ್ನು ರಿಮ್ಸ್‌ನಲ್ಲಿ ನಿರ್ಮಾಣ ಮಾಡಲಾಗಿದೆ. ಕಾಲೇಜಿನ ಡೀನ್‌ ಅವರಿಗೆ ಈ ಬಗ್ಗೆ ದೂರು ಸಲ್ಲಿಸುವುದಕ್ಕೂ ಸಾಧ್ಯವಾಗುತ್ತಿಲ್ಲ’ ಎಂದು ಪರಿಶಿಷ್ಟ ಜಾತಿಯ ವಿದ್ಯಾರ್ಥಿಯೊಬ್ಬರು ತಿಳಿಸಿದರು.

ರಿಮ್ಸ್‌ ನಿರ್ದೇಶಕಿ ಡಾ.ಕವಿತಾ ಪಾಟೀಲ ಅವರನ್ನು ವಿಚಾರಿಸಿದಾಗ, ‘ಹಿಂದುಳಿದ ಹಾಗೂ ಪರಿಶಿಷ್ಟ ವರ್ಗಗಳ ವಿದ್ಯಾರ್ಥಿಗಳು ತುಂಬಾ ಬಡವರಿರುತ್ತಾರೆ. ಅಂಥವರಿಂದ ಹಣ ಕೇಳುವುದಕ್ಕೆ ಸಾಧ್ಯವಿಲ್ಲ. ಅಷ್ಟೊಂದು ಧೈರ್ಯ ನಮ್ಮ ಸಿಬ್ಬಂದಿಯಲ್ಲಿ ಇರಲಿಕ್ಕಿಲ್ಲ. ಈ ಬಗ್ಗೆ ಯಾವುದೇ ವಿದ್ಯಾರ್ಥಿ ಲಿಖಿತ ದೂರು ಸಲ್ಲಿಸಿದರೆ, ಖಂಡಿತವಾಗಿಯೂ ತನಿಖೆ ನಡೆಸುತ್ತೇನೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ. ಸದ್ಯಕ್ಕೆ ಶಿಷ್ಯವೇತನ ಪಡೆಯುವ ವಿದ್ಯಾರ್ಥಿಗಳನ್ನು ಗುಂಪಾಗಿ ಕರೆದು ಚರ್ಚಿಸುತ್ತೇನೆ. ಶಿಷ್ಯವೇತನ ಪಡೆಯುವುದಕ್ಕೆ ಹಣ ಕೊಟ್ಟಿರುವ ಬಗ್ಗೆ ತಿಳಿಸಿದರೆ; ಕ್ರಮ ಕೈಗೊಳ್ಳುತ್ತೇವೆ’ ಎಂದರು.

**

ಶಿಷ್ಯವೇತನ ಪಡೆಯುವ ವಿದ್ಯಾರ್ಥಿಗಳನ್ನೆಲ್ಲ ವಿಶ್ವಾಸಕ್ಕೆ ತೆಗೆದುಕೊಂಡು ಈ ಬಗ್ಗೆ ವಿಚಾರಿಸುತ್ತೇನೆ. ಹಣ ಪಡೆದುಕೊಳ್ಳುತ್ತಿರುವುದು ಪತ್ತೆಯಾದರೆ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಲಾಗುವುದು – ಡಾ.ಕವಿತಾ ಪಾಟೀಲ,ರಿಮ್ಸ್‌, ಡೀನ್‌.

**

ಪ್ರತಿಕ್ರಿಯಿಸಿ (+)