ನಂಬಿಕೆ ದ್ರೋಹ: ಮರಾಠರಿಗೆ ಆಘಾತ

7
ಮಲ್ಲಿಕಾರ್ಜುನ ಖೂಬಾಗೆ ಬಸವಕಲ್ಯಾಣ ಕ್ಷೇತ್ರದ ಬಿಜೆಪಿ ಟಿಕೆಟ್

ನಂಬಿಕೆ ದ್ರೋಹ: ಮರಾಠರಿಗೆ ಆಘಾತ

Published:
Updated:

ಬೀದರ್‌: ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ಮಲ್ಲಿಕಾರ್ಜುನ ಖೂಬಾಗೆ ಬಿಜೆಪಿ ಟಿಕೆಟ್‌ ದೊರೆತಿದೆ. ಇದರ ಬೆನ್ನ ಹಿಂದೆಯೇ ಜಿಲ್ಲೆಯ ಮರಾಠ ಸಮಾಜದಲ್ಲಿ ಅಸಮಾಧಾನ ಸ್ಫೋಟಗೊಂಡಿದೆ.ಮುಖಂಡರು ಆಘಾತಕ್ಕೆ ಒಳಗಾಗಿದ್ದು, ಇದೀಗ ಕೆಲವರು ಪಕ್ಷವನ್ನೇ ತೊರೆಯುವ ಹಂತಕ್ಕೆ ಬಂದಿದ್ದಾರೆ.

ಸುಮಾರು 35 ರಿಂದ 40 ಸಾವಿರ ಮರಾಠ ಮತದಾರರು ಇದ್ದಾರೆ. ಈ ಕ್ಷೇತ್ರದಲ್ಲಿ ಟಿಕೆಟ್‌ ಕೊಟ್ಟರೂ ಸಾಕು, ಉಳಿದ ಕ್ಷೇತ್ರಗಳಲ್ಲಿ ಮರಾಠರು ಬಿಜೆಪಿಗೆ ಸಂಪೂರ್ಣ ಬೆಂಬಲ ನೀಡಲಿದ್ದಾರೆ ಎಂದು ಮರಾಠ ಮುಖಂಡರು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು. ಆದರೆ ಬಿಜೆಪಿ ಮುಖಂಡರು ಲಿಂಗಾಯತರಿಗೆ ಮಣೆ ಹಾಕಿರುವುದು ಅವರಲ್ಲಿ ಅಸಮಾಧಾನ ಭುಗಿಲೇಳುವಂತೆ ಮಾಡಿದೆ.

ಈ ಕ್ಷೇತ್ರದಲ್ಲಿ ಲಿಂಗಾಯತರು, ಮರಾಠರು ಹಾಗೂ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿಯ ಹೆಸರು ಅಂತಿಮವಾದರೂ ಅಧಿಕೃತವಾಗಿ ಪ್ರಕಟವಾಗಿಲ್ಲ. ಜೆಡಿಎಸ್‌ನಲ್ಲಿ ಪ್ರಸ್ತುತ ಅಭ್ಯರ್ಥಿಯೇ ಇಲ್ಲ. ಮರಾಠರಿಗೆ ಬಿಜೆಪಿ ಟಿಕೆಟ್ ಕೊಟ್ಟರೆ ಗೆಲುವು ನಿಶ್ಚಿತ ಎನ್ನುತ್ತಿದ್ದ ಮರಾಠ ಮುಖಂಡರ ಲೆಕ್ಕಾಚಾರವೇ ಈಗ ಬುಡಮೇಲಾಗಿದೆ.

‘ಮರಾಠ ಸಮಾಜವನ್ನು ಪ್ರವರ್ಗ 2ಎಗೆ ಸೇರಿಸಬೇಕು ಹಾಗೂ ಶಾಹು ಮಹಾರಾಜ ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು ಎನ್ನುವ ಮರಾಠರ ಬೇಡಿಕೆಗಳಿಗೆ ಕಾಂಗ್ರೆಸ್‌ ಸ್ಪಂದಿಸಿಲ್ಲ ಎನ್ನುವ ಕಾರಣಕ್ಕೆ ಅವರು ಬಿಜೆಪಿಯನ್ನು ಬೆಂಬಲಿಸುವ ತೀರ್ಮಾನಕ್ಕೆ ಬಂದಿದ್ದರುಆದರೆ, ಈಗ ಅವರು ಬಿಜೆಪಿ ಮೇಲೆ ಇಟ್ಟಿದ್ದ ನಿರೀಕ್ಷೆಯೂ ಹುಸಿ ಯಾಗಿದೆ.

‘ಮರಾಠರಿಗೆ ಬಿಜೆಪಿ ಮುಖಂಡರು ಭರವಸೆ ಕೊಟ್ಟರೂ ಟಿಕೆಟ್‌ ಕೊಟ್ಟಿಲ್ಲ. ಕನಿಷ್ಠ ಒಂದು ಟಿಕೆಟ್‌ ಕೊಟ್ಟಿದ್ದರೂ ಸಮಾಧಾನ ಪಡಬಹುದಿತ್ತು. ಮರಾಠರನ್ನು ಸಂಪೂರ್ಣವಾಗಿ ಕಡೆಗಣಿಸಿರುವುದು ನೋವು ತಂದಿದೆ’ ಎಂದು ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್ತಿನ ಜಿಲ್ಲಾ ಘಟಕದ

ಅಧ್ಯಕ್ಷ ದಿಗಂಬರರಾವ್‌ ಮಾನಕರಿ ಹೇಳಿದರು.

‘ಮರಾಠ ಸಮಾಜ ಶೀಘ್ರ ಬಸವಕಲ್ಯಾಣದಲ್ಲಿ ಸಭೆ ಸೇರಲಿದೆ. ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಬೆಂಬಲ ನೀಡದಿರುವ ವಿಷಯವಾಗಿ ಚರ್ಚೆ ನಡೆಸಲಿದೆ. ಮುಖಂಡರು ಸಮಾಜದ ಹಿತಕ್ಕಾಗಿ ಪಕ್ಷದಿಂದ ದೂರ ಉಳಿಯಲು ಹಿಂಜರಿಯುವುದಿಲ್ಲ’ ಎಂದು ಎಚ್ಚರಿಸಿದರು.

‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮರಾಠರಿಗೆ ಹುಸಿ ಭರವಸೆ ನೀಡಿದ್ದಾರೆ. ಮುಖಂಡರೇ ಸುಳ್ಳು ಹೇಳಿದರೆ ಪಕ್ಷದವರನ್ನು ಹೇಗೆ ನಂಬಬೇಕು. ಮರಾಠರ ಸಮಾವೇಶ ನಡೆಸಲು ಹೇಳಿ ಈಗ ಹಿಂದೆ ಸರಿದು ಅವಮಾನ ಮಾಡಿದ್ದಾರೆ’ ಎಂದು ಬಸವಕಲ್ಯಾಣದ ಮರಾಠ ಸಮಾಜದ ಮುಖಂಡ ಸುಭಾಷ ಪಾಟೀಲ ಹೇಳಿದರು.

ಆಘಾತ ಉಂಟು ಮಾಡಿದ ಸುದ್ದಿ

‘ಸ್ವ ಇಚ್ಛೆಯಿಂದ ಬಿಜೆಪಿಗೆ ಹೋಗಿರಲಿಲ್ಲ. ಬಿ.ಎಸ್‌.ಯಡಿಯೂರಪ್ಪ ಟಿಕೆಟ್‌ ಕೊಡುವ ಭರವಸೆ ನೀಡಿದ ನಂತರ ಬಿಜೆಪಿ ಸೇರಿದೆ. ಚುನಾವಣೆ ಸಿದ್ಧತೆಯನ್ನೂ ನಡೆಸಿದ್ದೆ. ಆದರೆ, ಭಾನುವಾರ ರಾತ್ರಿ ಮಲ್ಲಿಕಾರ್ಜುನ ಖೂಬಾಗೆ ಟಿಕೆಟ್‌ ಪ್ರಕಟಿಸಿದ ಸುದ್ದಿ ಕೇಳಿ ಆಘಾತವಾಯಿತು’ ಎಂದು ಮಾಜಿ ಶಾಸಕ ಮಾರುತಿರಾವ್ ಮುಳೆ ಹೇಳಿದರು.

‘ಬಿಜೆಪಿ ವರಿಷ್ಠರ ನಿರ್ಧಾರದಿಂದ ನನ್ನ ಬೆಂಬಲಿಗರು ವಿಚಲಿತರಾಗಿದ್ದಾರೆ. ರಾಜಕೀಯವಾಗಿ ಅತಂತ್ರವಾಗಿ ಉಳಿಯಲು ಬಯಸುವುದಿಲ್ಲ. ಏಪ್ರಿಲ್‌ 11 ರಂದು ಬಸವಕಲ್ಯಾಣದಲ್ಲಿ ಬೆಂಬಲಿಗರ ಹಾಗೂ ಮರಾಠ ಸಮಾಜದ ಮುಖಂಡರ ಸಭೆ ಕರೆದಿದ್ದೇನೆ. ಬೆಂಬಲಿಗರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದೇನೆ’ ಎಂದು ತಿಳಿಸಿದರು.

ಮತ್ತೆ ಜೆಡಿಎಸ್‌ಗೆ ಮುಳೆ

ಬಿಜೆಪಿ ವರಿಷ್ಠರ ನಿರ್ಧಾರದಿಂದ ಬೇಸರಗೊಂಡಿರುವ ಮುಳೆ ಮತ್ತೆ ಜೆಡಿಎಸ್ ಸೇರಲು ಸಿದ್ಧತೆ ನಡೆಸಿದ್ದಾರೆ.1999ರಲ್ಲಿ ಬಸವಕಲ್ಯಾಣದಿಂದ ಜೆಡಿಎಸ್‌ನಿಂದ ಸ್ಪರ್ಧಿಸಿ ಚುನಾಯಿತರಾಗಿದ್ದರು. ಅವರಿಗೆ ಈಗಲೂ ಜೆಡಿಎಸ್‌ ಮುಖಂಡರ ಸಂಪರ್ಕ ಇದೆ. ಜೆಡಿಎಸ್‌ ಜಿಲ್ಲಾ ಘಟಕ ಈಗಾಗಲೇ ಆಹ್ವಾನ ನೀಡಿದೆ. ಮಲ್ಲಿಕಾರ್ಜುನ ಖೂಬಾ ಜೆಡಿಎಸ್‌ ಬಿಟ್ಟ ಮೇಲೆ ಬಸವಕಲ್ಯಾಣದಲ್ಲಿ ಆ ಪಕ್ಷದಲ್ಲಿ ಪ್ರಭಾವಿ ನಾಯಕರು ಇಲ್ಲ. ಮುಳೆ ಆಗಮನದಿಂದ ಕೊರತೆ ನಿವಾರಣೆ ಆಗಲಿದೆ ಎಂದು ಮುಳೆ ಬೆಂಬಲಿಗರು ಆಡಿಕೊಳ್ಳುತ್ತಿದ್ದಾರೆ.

ಚವಾಣ್‌ಗೆ ಟಿಕೆಟ್‌

ಔರಾದ್‌ ಶಾಸಕ ಪ್ರಭು ಚವಾಣ್‌ ಅವರಿಗೆ ಟಿಕೆಟ್‌ ಲಭಿಸಿದೆ. ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಯಾರ ಹೆಸರೂ ಅಂತಿಮವಾಗಿಲ್ಲ. ಜೆಡಿಎಸ್‌ನಲ್ಲಿ ಅಭ್ಯರ್ಥಿಗಳ ಕೊರತೆ ಎದ್ದು ಕಾಣುತ್ತಿದ್ದು, ಮುಖಂಡರು ಈಗಲೂ ಅಭ್ಯರ್ಥಿಯ ಶೋಧದಲ್ಲಿ ಇದ್ದಾರೆ.ಬೀದರ್‌, ಬೀದರ್‌ ದಕ್ಷಿಣ, ಭಾಲ್ಕಿ ಹಾಗೂ ಹುಮನಾಬಾದ್‌ ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಎರಡನೇ ಪಟ್ಟಿಯಲ್ಲಿ ಪ್ರಕಟವಾಗುವ ಸಾಧ್ಯತೆ ಇದೆ. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ ಅವರೂ ಬೀದರ್‌ ದಕ್ಷಿಣ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಮೊದಲ ಪಟ್ಟಿಯಲ್ಲಿ ಹೆಸರು ಪ್ರಕಟವಾಗದ್ದಕ್ಕೆ ಆತಂಕದಲ್ಲಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry