ಶುಕ್ರವಾರ, ಡಿಸೆಂಬರ್ 6, 2019
26 °C
ಬೇಸಿಗೆ ಬಂತು ಎಂದರೆ ಉಲ್ಬಣಿಸುವ ಉಪ್ಪು ನೀರಿನ ಸಮಸ್ಯೆ, ಮರೀಚಿಕೆಯಾಗುವ ಶುದ್ಧ ಕುಡಿಯುವ ನೀರು

ಸಮಸ್ಯೆಯ ಅಲೆಯಲ್ಲಿ ಮೀನುಗಾರರ ಮತಕ್ಕೆ ಬಲೆ

ಸದಾಶಿವ ಎಂ.ಎಸ್ Updated:

ಅಕ್ಷರ ಗಾತ್ರ : | |

ಸಮಸ್ಯೆಯ ಅಲೆಯಲ್ಲಿ ಮೀನುಗಾರರ ಮತಕ್ಕೆ ಬಲೆ

ಕಾರವಾರ: ಈ ಭಾಗದ ಮೀನುಗಾರರು ಎದುರಿಸುತ್ತಿರುವ ಸಮಸ್ಯೆಗಳು ವಿಧಾನಸಭಾ ಚುನಾವಣೆಯ ಪ್ರಮುಖ ಚರ್ಚಾ ವಸ್ತುವಾಗಿ ಹಿಂದೆಂದಿಗಿಂತಲೂ ಹೆಚ್ಚು ಪ್ರಚಲಿತವಾಗುವ ಸಾಧ್ಯತೆಯಿದೆ. ಒಂದೆಡೆ ಸಾಂಪ್ರದಾಯಿಕ ಮೀನುಗಾರರು, ಮತ್ತೊಂದೆಡೆ ಲೈಟ್ ಫಿಶಿಂಗ್, ಬುಲ್‌ಟ್ರಾಲ್‌ಗಳ ಮೂಲಕ ಸಮುದ್ರಕ್ಕಿಳಿಯುತ್ತಿರುವ ಬಂಡವಾಳಶಾಹಿಗಳು. ಇವುಗಳ ನಡುವೆ ಪ್ರವಾಸೋದ್ಯಮದ ಅಭಿವೃದ್ಧಿ, ಬಂದರು ಎರಡನೇ ಹಂತದ ವಿಸ್ತರಣೆಯೂ ಸುದ್ದಿ ಮಾಡುತ್ತಿದೆ.

‘ರಾಜ್ಯದಲ್ಲಿ ಸರ್ಕಾರ ಯಾವ ಪಕ್ಷದ್ದೇ ಬರಲಿ; ನಮ್ಮ ಸಮಸ್ಯೆಗಳಿಗೆ ಕಿವಿಯಾಗಬೇಕು. ಈ ಭಾಗದಲ್ಲಿ ಮೀನುಗಾರಿಕೆಗೆ ಅವಕಾಶ ನೀಡಬೇಕು’ ಎನ್ನುತ್ತ ಈ ಬಾರಿಯ ಚುನಾವಣೆಯಲ್ಲಿ ತಮ್ಮ ನಿರೀಕ್ಷೆಗಳನ್ನು ಮುಂದಿಟ್ಟವರು ಮೀನುಗಾರರ ಯುವ ಮುಖಂಡ ವಿನಾಯಕ ಹರಿಕಂತ್ರ.

‘ಗೋವಾ, ದಕ್ಷಿಣ ಕನ್ನಡ, ಉಡುಪಿಯ ಮೀನುಗಾರರೂ ಇಲ್ಲಿ ಬಂದು ಮೀನುಗಾರಿಕೆ ಮಾಡುತ್ತಿದ್ದಾರೆ. ದುಡ್ಡಿದ್ದವರು ಅದೆಲ್ಲಿಂದಲೋ ಹಣ ಸುರಿದು ಪ್ರತಿ ದೋಣಿಗೆ ₹ 50 ಲಕ್ಷದಿಂದ ₹ 60 ಲಕ್ಷ ಖರ್ಚು ಮಾಡಿ ಮೀನುಗಾರಿಕೆ ಮಾಡುತ್ತಿದ್ದಾರೆ. ಆದರೆ ಇಲ್ಲಿನ ಸಾಂಪ್ರದಾಯಿಕ ಮೀನುಗಾರರಿಗೆ ಇದರಿಂದ ತೊಂದರೆಯಾಗಿದೆ. ಲೈಟ್ ಫಿಶಿಂಗ್‌ನಿಂದಾಗಿ ಮಾರ್ಚ್ ತಿಂಗಳಲ್ಲೇ ಮೀನುಗಾರಿಕೆ ಸ್ಥಗಿತಗೊಂಡಿದೆ. ಇವುಗಳಿಗೆ ಪರಿಹಾರ ಕಂಡುಹಿಡಿಯುವವರುನಮಗೆ ಅಗತ್ಯ’ ಎನ್ನುತ್ತಾರೆ ಅವರು.

‘ಲಕ್ಷಾಂತರ ರೂಪಾಯಿಗಳ ಬಂಡವಾಳ ಹೂಡಿದವರು ಆಳಸಮುದ್ರದಲ್ಲಿ ಹಗಲು, ರಾತ್ರಿ ಎನ್ನದೇ ಮೀನುಗಾರಿಕೆ ನಡೆಸುತ್ತಿದ್ದಾರೆ. ಸಾಂಪ್ರದಾಯಿಕ ಮೀನುಗಾರರಿಗೆ ಸಮುದ್ರಕ್ಕೆ ಇಳಿದ ಮೇಲೆ ಎಷ್ಟು ಗಂಟೆಗೆ ಮೀನು ಸಿಗಲಿದೆ ಎನ್ನುವ ಮಾಹಿತಿ ಇರುವುದಿಲ್ಲ. ಆದರೆ, ಇದರಿಂದ ಕೇವಲ ನಿರೀಕ್ಷೆ ನಮ್ಮದಾಗುತ್ತದೆಯೇ ವಿನಃ ಫಲ ಸಿಗುವುದಿಲ್ಲ’ ಎಂದು ಅವರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಬೈತಖೋಲ್ ಮೀನುಗಾರಿಕಾ ಬಂದರಿನ ಸುತ್ತಮುತ್ತ ಮೀನುಗಾರರ ನೂರಾರು ಕುಟುಂಬಗಳು ವಾಸ ಮಾಡುತ್ತಿವೆ. ಆದರೆ ಅವರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇನ್ನೂ ಆಗಿಲ್ಲ. ಬೇಸಿಗೆ ಬಂತು ಎಂದರೆ ಉಪ್ಪು ನೀರಿನ ಸಮಸ್ಯೆ ಶುರುವಾಗುತ್ತದೆ. ಹಲವು ವರ್ಷ ಬೇಡಿಕೆ ಸಲ್ಲಿಸಿದ ನಂತರ ಸಾರ್ವಜನಿಕ ಶೌಚಾಲಯ, ಸ್ನಾನಗೃಹದ ವ್ಯವಸ್ಥೆ ಆಗುತ್ತಿದೆ’ ಎಂದು ಅವರು ಹೇಳಿದರು.

‘ನೈಜತೆ ಬಿಟ್ಟು ಪ್ರತಿಮೆ ಪ್ರದರ್ಶನ!’

ಸಹಜವಾಗಿ ನಡೆಯುತ್ತಿದ್ದ ಮೀನುಗಾರಿಕೆಗೆ ಪ್ರೋತ್ಸಾಹ ಕೊಟ್ಟಿದ್ದರೆ ಪ್ರವಾಸೋದ್ಯಮ ತನ್ನಿಂತಾನೇ ಅಭಿವೃದ್ಧಿಯಾಗುತ್ತಿತ್ತು. ಅದನ್ನು ಬಿಟ್ಟು ರಾಕ್‌ಗಾರ್ಡನ್‌ ಬಳಿ ಪ್ರತಿಮೆಗಳನ್ನು ಸ್ಥಾಪನೆ ಮಾಡಿ ಇದು ಮೀನುಗಾರರ ಜೀವನ ಎಂದು ತೋರಿಸುತ್ತಿದ್ದಾರೆ. ಪ್ರವಾಸೋದ್ಯಮ ಅಭಿವೃದ್ಧಿಯು ಸ್ಥಳೀಯರ ದೈನಂದಿನ ಜೀವನದ ಜೊತೆಗೇ ಹೋಗಬೇಕೇ ಹೊರತು, ಬೇರೆಯಾಗಿ ಅಲ್ಲ’ ಎಂದು ತಮ್ಮ ನಿಲುವು ವ್ಯಕ್ತಪಡಿಸಿದವರು ಮೀನುಗಾರರ ಮುಖಂಡ ಕೆ.ಟಿ.ತಾಂಡೇಲ.

‘ನಮ್ಮ ಜಿಲ್ಲೆಯ ಕಡಲತೀರದಲ್ಲಿ ಕಳೆದ ಕೆಲವು ವರ್ಷಗಳಿಂದ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಅಭಿವೃದ್ಧಿಯ ಹೆಸರಿನಲ್ಲಿ ಮೀನುಗಾರರ ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆ ಹಾಕುವ ಪ್ರಯತ್ನ ನಡೆದಿದೆ. ಕರಾವಳಿ ನಿಯಂತ್ರಣ ವಲಯ (ಸಿಆರ್‌ಜೆಡ್) ನಿಯಮಗಳ ಹೆಸರಿನಲ್ಲೇ ಅನ್ಯಾಯಗಳಾಗುತ್ತಿವೆ. ಇನ್ನು, ಕರಾವಳಿ ನಿರ್ವಹಣಾ ವಲಯದ (ಸಿಎಂಜೆಡ್) ನಿಯಮಗಳನ್ನು ಜಾರಿಗೆ ತರುವ ಕುರಿತು ವದಂತಿಗಳಿವೆ. ಅದರಲ್ಲಿ ಇನ್ನೇನು ನಿರ್ಬಂಧಗಳನ್ನು ಹೇರಲಾಗು ತ್ತದೆಯೋ ಗೊತ್ತಿಲ್ಲ. ಅದಕ್ಕಾಗಿ ಈ ಬಾರಿ ಚುನಾವಣೆ ಘೋಷಣೆಗೂ ಮೊದಲೇ ಜಿಲ್ಲಾಧಿಕಾರಿ, ಶಾಸಕರು ಮತ್ತು ಮುಖ್ಯಮಂತ್ರಿಗೆ ಸಿಎಂಜೆಡ್ ನಿಯಮ ಜಾರಿ ಮಾಡದಂತೆ ಮನವಿ ಸಲ್ಲಿಸಿದ್ದೇವೆ’ ಎಂದರು.

ಈಗಾಗಲೇ ಶಿಲ್ಪವನದ ಆಂಜನೇಯ ವಿಗ್ರಹದ ಸಮೀಪ ಅಲೆತಡೆಗೋಡೆ ನಿರ್ಮಾಣದ ನೆಪದಲ್ಲಿ ಸಮುದ್ರ ಕಿನಾರೆಯಲ್ಲಿ ಗುಂಡಿ ತೋಡಲಾಗಿದೆ. ಅಲ್ಲಿ ಮಳೆಗಾಲದಲ್ಲಿ ಮೀನುಗಾರರ ದೋಣಿಗಳು ಲಂಗರು ಹಾಕಲು ಸಾಧ್ಯವಿಲ್ಲದ ರೀತಿ ಮಾಡಲಾಗಿದೆ. ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಈ ಬಾರಿ ಚುನಾವಣೆಯಲ್ಲಿ ಅಭ್ಯರ್ಥಿಗಳು ನೀಡುವ ಭರವಸೆ ಹುಸಿಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸ್ಥಳೀಯರ ಮೇಲೂ ಇದೆ ಎಂಬುದು ಅವರ ಅನಿಸಿಕೆಯಾಗಿದೆ.

ಹೈಟೆಕ್ ಬಂದರು ನಿರ್ಮಾಣ

‘ಎಲ್ಲ ಬಂದರುಗಳನ್ನು ಹೈಟೆಕ್ ಮಾಡುವುದು, ಜಟ್ಟಿಗಳಲ್ಲಿ ಹೂಳೆತ್ತುವುದು, ಮೀನುಗಾರರು ಕೆಲಸ ಮಾಡುವ ಪ್ರದೇಶ ಮತ್ತು ಅವರ ವಾಸಸ್ಥಳದ ಸುತ್ತ ಮೂಲಸೌಕರ್ಯ ವೃದ್ಧಿಗೆ ನಮ್ಮ ಪಕ್ಷ ಆದ್ಯತೆ ನೀಡಲಿದೆ. ಮಳೆಗಾಲದಲ್ಲಿ ಸುಮಾರು 61 ದಿನಗಳ ಕಾಲ ಮೀನುಗಾರಿಕೆ ನಿಷೇಧವಾದಾಗ ಬಡ ಮೀನುಗಾರರಿಗೆ ಮಾಸಾಶನ ನೀಡುವ ಬಗ್ಗೆ ಚಿಂತನೆಯಿದೆ. ಮೀನುಗಾರ ಮಹಿಳೆಯರಿಗೆ ಬಡ್ಡಿ ರಹಿತ ಸಾಲ ಸೌಲಭ್ಯ ನೀಡುವ ಬಗ್ಗೆಯೂ ಕ್ರಮ ಕೈಗೊಳ್ಳಲಾಗುವುದು. ‘ಮತ್ಸ್ಯಾಶ್ರಯ’ ಯೋಜನೆಯಡಿ ಮೀನುಗಾರರು ನಿರ್ಮಿಸಿಕೊಳ್ಳುವ ಮನೆಗಳಿಗೆ ನಗರ ಪ್ರದೇಶದಲ್ಲಿ ₹ 5 ಲಕ್ಷ ಹಾಗೂ ಗ್ರಾಮೀಣ ಪ್ರದೇಶದಲ್ಲಿ ₹ 2.5 ಲಕ್ಷ ಸಹಾಯಧನ ನೀಡುವ ಬಗ್ಗೆ ಚರ್ಚಿಸಲಾಗುವುದು’ – ಆನಂದ್ ಅಸ್ನೋಟಿಕರ್,ಜೆಡಿಎಸ್ ಅಭ್ಯರ್ಥಿ

‘ಸರ್ಕಾರದ ಮೇಲೆ ಒತ್ತಡ ತಂತ್ರ’

‘ಮೀನುಗಾರರ ಸಮಸ್ಯೆ ಪರಿಹರಿಸಲು ಕಾಂಗ್ರೆಸ್ ಪಕ್ಷ ಉತ್ಸುಕವಾಗಿದೆ. ಈ ಬಾರಿ ಚುನಾವಣೆಗೆ ಜಿಲ್ಲಾವಾರು ಪ್ರಣಾಳಿಕೆ ಮಾಡಲಾಗಿದ್ದು, ರಾಜ್ಯದ ಕರಾವಳಿ ಭಾಗದ ಸಮಸ್ಯೆಗಳ ಪರಿಹಾರಕ್ಕೆ ಒತ್ತು ನೀಡಲಾಗಿದೆ. ಮೀನುಗಾರರಿಗೆ ಸಿಗಬೇಕಾದ ಸೌಲಭ್ಯ ಸಿಗಲೇಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಜತೆ ಕುಳಿತು ಚರ್ಚಿಸಿ ಸರ್ಕಾರದ ಮೇಲೆ ಒತ್ತಡ ತಂದು ಕೆಲಸ ಮಾಡಲಾಗುವುದು. ಮಾರ್ಚ್ ತಿಂಗಳಿನಲ್ಲೇ ಅವರಿಗೆ ದಂಧೆ ಇಲ್ಲ ಅಂದರೆ ಜೀವನ ಹೇಗೆ ಸಾಧ್ಯ? ಅವರ ಅಭಿವೃದ್ಧಿಗೆ ಸರ್ಕಾರದ ಜತೆ ಚರ್ಚಿಸಿ ಸಾಮೂಹಿಕ ನಿರ್ಧಾರ ತೆಗೆದುಕೊಳ್ಳಲಾಗುವುದು’ – ಭೀಮಣ್ಣ ನಾಯ್ಕ,ಕಾಂಗ್ರೆಸ್ ಜಿಲ್ಲಾ ಸಮಿತಿಯ ನಿಕಟಪೂರ್ವ ಅಧ್ಯಕ್ಷ

‘ಸಮಸ್ಯೆ ಬಗೆಹರಿಸಲು ಸಿದ್ಧ’

‘ಮೀನುಗಾರರ ಸಮಸ್ಯೆ ಬಗೆಹರಿಸಲು ಬಿಜೆಪಿ ಸದಾ ಸಿದ್ಧವಾಗಿದೆ. ಈಚೆಗೆ ಉಡುಪಿ ಜಿಲ್ಲೆಯಲ್ಲಿ ನಡೆದ ಮೀನುಗಾರರ ಸಮಾವೇಶದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಸಮಗ್ರ ವರದಿ ಪಡೆದುಕೊಂಡಿದ್ದಾರೆ. ಸಮುದ್ರವನ್ನೇ ನಂಬಿ ಜೀವನ ನಡೆಸುತ್ತಿರುವ ಜನರ ಆಮೂಲಾಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು. ಮೀನುಗಾರ ಮಹಿಳೆಯರಿಗೆ ವೃತ್ತಿ ನಡೆಸಿಕೊಂಡು ಹೋಗಲು ಅಗತ್ಯ ಮೂಲ ಸೌಕರ್ಯ ನೀಡಲಾಗುವುದು. ಕಾರವಾರ ಸುತ್ತಮುತ್ತ ಕೈಗೊಂಡಿರುವ ಪ್ರವಾಸೋದ್ಯಮ ಅಭಿವೃದ್ಧಿ ಕಾಮಗಾರಿಗಳಿಂದ ಮೀನುಗಾರರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು’ – ರೂಪಾಲಿ ನಾಯ್ಕ, ಬಿಜೆಪಿ ಅಭ್ಯರ್ಥಿ.

ಮಾರ್ಚ್‌ನಲ್ಲೇ ಮತ್ಸ್ಯಕ್ಷಾಮ!

ಬೈತಖೋಲ್ ಮೀನುಗಾರಿಕೆ ಬಂದರಿನ ಜಟ್ಟಿಯಲ್ಲಿ ತುಂಬಿದ್ದ ಹೂಳನ್ನು ಕಳೆದ ಜನವರಿ 28ರಿಂದ ಆರಂಭಿಸಿ ಮಾರ್ಚ್ ಕೊನೆಯ ವಾರದವರೆಗೆ ತೆಗೆಯಲಾಯಿತು. ಆದರೆ, ಅದನ್ನು ದಡದಿಂದ ದೂರದಲ್ಲಿ ಆಳ ಸಮುದ್ರದಲ್ಲಿ ಸುರಿಯಲಾಯಿತು. ಇದು ಜಲಚರಗಳ ಆಹಾರದ ಮೇಲೆ ಆವರಿಸಿ ಅವುಗಳಿಗೆ ತೊಂದರೆಯಾಗಿದೆ. ಈ ಬಾರಿ ಮಾರ್ಚ್‌ನಲ್ಲೇ ಮತ್ಸ್ಯಕ್ಷಾಮ ಕಾಣಿಸಿಕೊಳ್ಳಲು ಲೈಟ್‌ಫಿಶಿಂಗ್‌ನ ಜತೆಗೆ ಇದು ಕೂಡ ಪ್ರಮುಖ ಕಾರಣ ಎಂಬುದು ಮೀನುಗಾರರ ಆರೋಪವಾಗಿದೆ.

**

ಮೀನುಗಾರರ ಸಮಸ್ಯೆಗಳನ್ನು ಪರಿಹರಿಸುವವರು ಈ ಬಾರಿ ಆಯ್ಕೆಯಾಗಬೇಕು. ಕಳೆದ ಬಾರಿಯಂತೆ ಕೇವಲ ಭರವಸೆ ನೀಡಿ ಮರೆತರೆ ಪ್ರಯೋಜನವಿಲ್ಲ – 

ವಿನಾಯಕ ಹರಿಕಂತ್ರ,ಮೀನುಗಾರರ ಯುವ ಮುಖಂಡ.

**

ಪ್ರತಿಕ್ರಿಯಿಸಿ (+)