ಶುಕ್ರವಾರ, ಡಿಸೆಂಬರ್ 13, 2019
19 °C

ಓದಿನ ಫಲ ಎಲ್ಲಿದೆ?

ಹಾರಿತಾನಂದ Updated:

ಅಕ್ಷರ ಗಾತ್ರ : | |

ಓದಿನ ಫಲ ಎಲ್ಲಿದೆ?

ಇಂದು ‘ಓದು’ ಎನ್ನುವುದು ತುಂಬ ಮಹತ್ವದ ವಿದ್ಯಮಾನ. ಮಕ್ಕಳು ಬಾಲ್ಯದಿಂದಲೂ ನಿರಂತರ ಕೇಳುವ ಪದವೇ ಈ ‘ಓದು’; ಮನೆಯಲ್ಲೂ ಓದು, ಶಾಲೆಯಲ್ಲೂ ಓದು!

ಓದು – ಎಂದು ಹೇಳುತ್ತಿದ್ದೇವೆ ಸರಿಯೇ. ಓದನ್ನು ಒಂದು ನಿರ್ದಿಷ್ಟ ಫಲದ ಕಾರಣಕ್ಕಾಗಿಯೇ ಬಯಸುತ್ತಿರುವುದು; ಇದು ಸ್ಪಷ್ಟ. ಓದು ಎಂದು ಮಕ್ಕಳಿಗೆ ತಾಕೀತು ಮಾಡುತ್ತಿರುವ ನಾವು, ‘ಹೇಗೆ ಓದಬೇಕು’ – ಎನ್ನುವುದನ್ನೂ ಕಲಿಸುತ್ತಿದ್ದೇವೆಯೆ? ಈ ಪ್ರಶ್ನೆ ತುಂಬ ಮುಖ್ಯವಾದುದು.

ಭಾರತೀಯ ಪರಂಪರೆಯಲ್ಲಿ ಓದಿಗೆ ತುಂಬ ಮಹತ್ವವಿದೆ. ಈ ಹಿನ್ನೆಲೆಯಲ್ಲಿಯೇ ‘ಪಾರಾಯಣ’ದ ಕಲ್ಪನೆಯೂ ಮೂಡಿಕೊಂಡದ್ದು. ಕಳೆದ ವಾರ ಅದರ ಬಗ್ಗೆ ಸ್ವಲ್ಪ ವಿವರಗಳನ್ನು ನೋಡಿದೆವಷ್ಟೆ. ಅದರ ಜೊತೆಯಲ್ಲಿಯೇ ಶ್ರವಣ, ಮನನ ಮತ್ತು ನಿದಿಧ್ಯಾಸಗಳ ಬಗ್ಗೆಯೂ ಉಲ್ಲೇಖವಾಗಿತ್ತು; ಅವುಗಳ ಬಗ್ಗೆ ಇನ್ನಷ್ಟು ಸಂಗತಿಗಳನ್ನು ತಿಳಿಯೋಣ.

‘ಶ್ರವಣ’ ಎಂದರೆ ಓದುವುದು; ಅದನ್ನು ಹಿಂದಿನ ಪಾರಾಯಣಕ್ಕೂ ಇಂದಿನ ಶಿಕ್ಷಣಕ್ಕೂ ಹೋಲಿಸಬಹುದೆನಿಸುತ್ತದೆ. ಅರ್ಥ ಏನೆಂದು ವಿಚಾರಿಸದೆಯೇ ಓದುವುದನ್ನು ‘ಶ್ರವಣ’ ಎನ್ನಬಹುದು. ಇದು ಓದಿನ ಮೊದಲ ಹಂತ. ಆದರೆ ಬಹಳಷ್ಟು ಸಂದರ್ಭದಲ್ಲಿ ನಮ್ಮ ಓದು ಇಲ್ಲಿಯೇ ನಿಂತುಬಿಡುತ್ತದೆ. ಈ ಸ್ಥಿತಿಯನ್ನು ಪರಂಪರೆಯು ಮನೋಜ್ಞವಾದ ಉದಾಹರಣೆಗಳ ಮೂಲಕ ವರ್ಣಿಸಿದೆ.

‘ಸಾರಿನ ಪಾತ್ರೆಯಲ್ಲಿ ಸೌಟನ್ನು ಮುಳುಗಿಸಿಟ್ಟಿರುತ್ತೇವೆ, ದಿಟ. ಆದರೆ ಆ ಸೌಟಿಗೆ ಸಾರಿನ ರುಚಿ ಗೊತ್ತಾಗಿರುತ್ತದೆಯೋ?’ ಹೀಗೆಯೇ ಶ್ರವಣದಲ್ಲಿ ಮಾತ್ರವೇ ನಮ್ಮ ಓದು ನಿಂತರೆ ನಮ್ಮ ಪಾಡು ಕೂಡ ಸಾರಿನಲ್ಲಿರುವ ಸೌಟಿನಂತಿರುತ್ತದೆಯಷ್ಟೆ! ಇದರರ್ಥ ಶ್ರವಣ ಬೇಡ ಎಂದಲ್ಲ, ಆದರೆ ಅಷ್ಟೆ ಸಾಲದು. ಆದರೆ ದುರ್ದೈವವೆಂದರೆ ನಮ್ಮ ಇಂದಿನ ಶಿಕ್ಷಣಪದ್ಧತಿಯಲ್ಲಿ ಶ್ರವಣಕ್ಕೆ ಮಾತ್ರವೇ ಮರ್ಯಾದೆ ಸಲ್ಲುತ್ತಿರುವುದು. ಅರ್ಥ ಏನೆಂದು ತಿಳಿಯದೆಯೇ ಓದುತ್ತಿದ್ದೇವೆ; ಓದಿ ಅದನ್ನು ಚೆನ್ನಾಗಿ ಉರುಹೊಡೆದು ಬರೆಯುತ್ತಿದ್ದೇವೆ! ಇದರ ಫಲ ಹೇಗಿರುತ್ತದೆ ಎಂದರೆ:

ಯಥಾ ಖರಶ್ಚಂದನಭಾರವಾಹೀ

ಭಾರಸ್ಯ ವೇತ್ತಾ ನ ತು ಚಂದನಶ್ಚ |

‘ಕತ್ತೆಯು ಅದರ ಬೆನ್ನಿನ ಮೇಲೆ ಶ್ರೀಗಂಧದ ಕೊರಡುಗಳನ್ನು ಹೊತ್ತಿರುತ್ತದೆ, ನಿಜ. ಆದರೆ ಅದರಿಂದ ಏನು ಪ್ರಯೋಜನ? ಅದಕ್ಕೆ ಆ ಕೊರಡುಗಳ ಭಾರವಷ್ಟೆ ಅನುಭವಕ್ಕೆ ಬರುವುದು; ಗಂಧದ ಪರಿಮಳವೇನಾದರೂ ಅದಕ್ಕೆ ತಿಳಿಯುತ್ತದೆಯೆ?’

ಇಂದಿನ ನಮ್ಮ ಶಾಲೆಗಳ ಚಿತ್ರಣವನ್ನು ನೋಡಿಯೇ ಈ ಮಾತನ್ನು ಹೇಳುತ್ತಿರುವಂತಿದೆ!

ನಮ್ಮ ಓದು ನಿಜಕ್ಕೂ ಸಾರ್ಥಕವಾಗಬೇಕಾದರೆ ಶ್ರವಣದ ಮುಂದಿನ ಹಂತಗಳಾದ ಮನನ ಮತ್ತು ನಿದಿಧ್ಯಾಸನಗಳಲ್ಲೂ ಓದು ಮಗ್ನವಾಗಬೇಕು.

‘ಮನನ’ ಎಂದರೆ ನಾವು ಶ್ರವಣ ಮಾಡಿರುವುದನ್ನು ಚೆನ್ನಾಗಿ ನಮ್ಮ ಬುದ್ಧಿಯ ನೆರವಿನಿಂದ ವಿಮರ್ಶಿಸುವುದು. ‘ಉಪದೇಶವಾಕ್ಯದ ಅರ್ಥವನ್ನು ಚರ್ಚಿಸಿ, ಅದರ ಅಂತರ್ಭಾವಗಳನ್ನು ಮೇಲಕ್ಕೆತ್ತಿ ವಿಮರ್ಶೆ ಮಾಡಿ, ಅಭಿಪ್ರಾಯವನ್ನು ಶೋಧಿಸಿ ದೃಢಪಡಿಸುವುದು ಮನನ’ ಎಂದು ವ್ಯಾಖ್ಯಾನಿಸಿದ್ದಾರೆ, ಡಿವಿಜಿ. ‘ಜ್ಞಾನಸಾಧನೆಯಲ್ಲಿ ಶ್ರವಣಕ್ಕೆ ಮೊದಲಿನ ಸ್ಥಾನ; ನಿದಿಧ್ಯಾಸನಕ್ಕೆ ಕಡೆಯ ಸ್ಥಾನ. ಎರಡಕ್ಕೂ ನಡುವೆ ಸೇತುವೆಯಂತಿರುವುದು ಮನನ. ಅದು ಬುದ್ಧಿಯ ಜಾಗರೂಕ ವ್ಯಾಪಾರವನ್ನು ಅಪೇಕ್ಷಿಸುತ್ತದೆ’ ಎನ್ನುವುದು ಕೂಡ ಅವರದ್ದೇ ಮಾತುಗಳು.

ನಾವು ಓದಿದ್ದನ್ನು, ಕೇಳಿದ್ದನ್ನು, ನೋಡಿದ್ದನ್ನು ಚೆನ್ನಾಗಿ ವಿಶ್ಲೇಷಣೆಗೆ ಒಳಪಡಿಸಬೇಕು. ಅವುಗಳ ಎಲ್ಲ ಆಯಾಮಗಳನ್ನೂ ಸೂಕ್ಷ್ಮವಾದ ಪರೀಕ್ಷೆಗೆ ಒಡ್ಡಬೇಕು. ನಮಗೆ ಯಾವುದು ಅರ್ಥವಾಗಿದೆ, ಯಾವುದು ಅರ್ಥವಾಗಿಲ್ಲ; ಅರ್ಥವಾಗಿರುವುದರಲ್ಲಿ ಎಷ್ಟು ಸತ್ತ್ವವಿದೆ; ಯಾವುದನ್ನು ಒಪ್ಪಬೇಕು; ಯಾವುದನ್ನು ತಿರಸ್ಕರಿಸಬೇಕು; ಯಾವುದರ ಮಹತ್ವ ಎಲ್ಲಿಯ ತನಕ – ಇಂಥ ಪ್ರಶ್ನೆಗಳ ಹಿನ್ನೆಲೆಯಲ್ಲಿ ನಮ್ಮ ಓದನ್ನು ತಿಕ್ಕಬೇಕು.

ಈ ಪರೀಕ್ಷೆಯಲ್ಲಿ ಗೆದ್ದ ವಿವರವನ್ನು ನಮ್ಮ ಬದುಕಿಗೆ ಅನ್ವಯಿಸಿಕೊಳ್ಳುವ ಹಂತವೇ ‘ನಿದಿಧ್ಯಾಸನ’ ಎಂದು ಕರೆಯಿಸಿಕೊಳ್ಳುತ್ತದೆ; ಓದಿನ ದಿಟವಾದ ಸಾರ್ಥಕತೆ, ಫಲವಂತಿಕೆ ಇರುವುದೇ ಈ ಹಂತದಲ್ಲಿ. ವಾಹನವನ್ನು ಹೇಗೆ ಡ್ರೈವ್‌ ಮಾಡಬೇಕೆಂದು ಎಷ್ಟು ಚೆನ್ನಾಗಿ ಬಾಯ್ಮಾತಿನಲ್ಲಿ ವಿವರಿಸಿದರೂ, ಅದನ್ನು ಪರೀಕ್ಷೆಯಲ್ಲಿ ಬರೆದು ಪಾಸಾದರೂ, ಅದರ ದಿಟವಾದ ಫಲ ಸಿಗುವುದು ಮಾತ್ರ ನಾವು ವಾಹನವನ್ನು ರಸ್ತೆಯಲ್ಲಿ ಓಡಿಸಲು ತೊಡಗಿದಾಗಲೇ ಅಲ್ಲವೆ? ಹೀಗೆಯೇ ನಾವು ಕಲಿಯುವ ಎಲ್ಲ ವಿದ್ಯೆಯೂ ನಮ್ಮ ಬದುಕಿನ ಒಳಿತಿಗಾಗಿಯೇ – ಎನ್ನುವುದು ಭಾರತೀಯ ಪರಂಪರೆಯ ನಿಲುವು.

ಪ್ರತಿಕ್ರಿಯಿಸಿ (+)