ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎದೆಹಾಲು ಕುಡಿಸಿ ಶಿಶು ರಕ್ಷಿಸಿ

Last Updated 12 ಏಪ್ರಿಲ್ 2018, 19:40 IST
ಅಕ್ಷರ ಗಾತ್ರ

ನವದೆಹಲಿ: ಶಿಶು ಜನನದಿಂದ ಮೊದಲ ಎರಡು ವರ್ಷದವರೆಗೆ ಎದೆಹಾಲು ಕುಡಿಸುವುದರಿಂದ, ಪ್ರತಿ ವರ್ಷ ಐದರ ವಯೋಮಾನದೊಳಗಿನ 8.2 ಲಕ್ಷ ಮಕ್ಕಳ ಜೀವ ರಕ್ಷಿಸಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)–ಯುನಿಸೆಫ್‌ ಬಿಡುಗಡೆಗೊಳಿಸಿರುವ 10 ಅಂಶಗಳ ನೂತನ ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

ವಿಶ್ವದಾದ್ಯಂತ ತಾಯಂದಿರು ಎದೆಹಾಲು ಕುಡಿಸುವ ಅಭ್ಯಾಸಕ್ಕೆ ಪ್ರೋತ್ಸಾಹ ನೀಡುವುದು, ಮಾತೃತ್ವ ಸೇವೆ ಒದಗಿಸುವುದನ್ನು ಹೆಚ್ಚಿಸುವುದು ಈ ಮಾರ್ಗಸೂಚಿಯ ಉದ್ದೇಶ.

‘ಭಾಗಶಃ ಎದೆಹಾಲು ಕುಡಿಸಿದರೆ ಅಥವಾ ಕುಡಿಸದೆ ಇದ್ದರೆ ಶಿಶು ಅತಿಸಾರ ಹಾಗೂ ಇತರೆ ಸೋಂಕುಗಳಿಗೆ ಗುರಿಯಾಗಿ ಸಾವನ್ನಪ್ಪುವ ಅಪಾಯ ಹೆಚ್ಚಿರುತ್ತದೆ. ಜನಿಸಿದ ಮೊದಲ ಎರಡು ತಾಸಿನಲ್ಲಿ ಎದೆಹಾಲು ಕುಡಿಸುವುದರಿಂದ ಶಿಶುಗಳು ಸೋಂಕಿಗೆ ಗುರಿಯಾಗುವುದನ್ನು ತಪ್ಪಿಸಬಹುದು’ ಎಂದು ಯುನಿಸೆಫ್‌ ನಿರ್ದೇಶಕಿ ಹೆನ್ರಿಯೆಟ ಎಚ್ ಫೋರ್ ಹೇಳಿದ್ದಾರೆ.

ಆಸ್ಪತ್ರೆಗಳಿಗೆ ಮಾರ್ಗಸೂಚಿ: ತಾಯಂದಿರು ಯಾವ ರೀತಿ ಎದೆಹಾಲು ಕುಡಿಸಬೇಕು, ಗರ್ಭಧಾರಣೆ ಪೂರ್ವ ಹಾಗೂ ಶಿಶುವಿನ ಜನನದ ನಂತರ ಹೇಗೆ ಕಾಳಜಿ ವಹಿಸಬೇಕು ಎನ್ನುವ ಕುರಿತು ಆಸ್ಪತ್ರೆಗಳಲ್ಲಿ ಲಿಖಿತ ನಿಯಮಗಳು ಇರಬೇಕು ಎಂದು ಮಾರ್ಗಸೂಚಿಯಲ್ಲಿ ವಿವರಿಸಲಾಗಿದೆ.

ಎದೆಹಾಲಿಗೆ ಪರ್ಯಾಯಗಳನ್ನು ಬಳಸುವುದನ್ನು ಕಡಿಮೆ ಮಾಡಬೇಕು ಎಂದು ಮಾರ್ಗಸೂಚಿಯಲ್ಲಿ ಶಿಫಾರಸು ಮಾಡಲಾಗಿದೆ.

‘ಜೀವನ–ಸಾವಿನ ವ್ಯತ್ಯಾಸ’

‘ವಿಶ್ವದಾದ್ಯಂತ ಆಸ್ಪತ್ರೆಗಳು ಮತ್ತು ಸಮುದಾಯಗಳಲ್ಲಿ ಶಿಶುಗಳಿಗೆ ಎದೆಹಾಲುಕುಡಿಸಲಾಗುತ್ತದೆಯೇ ಇಲ್ಲವೇ ಎನ್ನುವುದರ ಆಧಾರದ ಮೇಲೆ ಜೀವನ ಹಾಗೂ ಸಾವಿನ ವ್ಯತ್ಯಾಸ ತಿಳಿಯಬಹುದು. ಶಿಶು ಸಂಪೂರ್ಣ ಬೆಳವಣಿಗೆ ಹೊಂದುವುದು ಸಹ ಎದೆಹಾಲಿನ ಮೇಲೆ ನಿರ್ಧಾರವಾಗುತ್ತದೆ’ ಎಂದು ಡಬ್ಲ್ಯುಎಚ್‌ಒ ಪ್ರಧಾನ ನಿರ್ದೇಶಕ ಡಾ. ಟೆಡ್ರಸ್ ಅಧನಾಮ್ ಗೆಬ್ರೆಯೆಸಸ್ ತಿಳಿಸಿದ್ದಾರೆ.

‘ತಾಯಂದಿರು ಹಾಗೂ ಶಿಶುಗಳ ಕಾಳಜಿ ವಹಿಸಲು, ಸೂಚಿತ ಹತ್ತು ಅಂಶಗಳನ್ನು ಅಳವಡಿಸಿಕೊಳ್ಳುವುದಕ್ಕಿಂತ ಉತ್ತಮ ಮಾರ್ಗವಿಲ್ಲ. ಇದರಿಂದ ಪ್ರತಿ ದೇಶದಲ್ಲೂ ಆರೋಗ್ಯ ರಕ್ಷಣೆ ಸಾಧಿಸಬಹುದು’ ಅವರು ಹೇಳಿದ್ದಾರೆ.

* ಎದೆಹಾಲು ಕುಡಿಯುವುದರಿಂದ ಶಿಶುಗಳ ಬುದ್ಧಿಮಟ್ಟ ಹೆಚ್ಚುತ್ತದೆ, ಕುಡಿಸುವುದರಿಂದ ತಾಯಂದಿರು ಸ್ತನ ಕ್ಯಾನ್ಸರ್‌ಗೆ ತುತ್ತಾಗುವ ಅಪಾಯ ಕಡಿಮೆಯಾಗುತ್ತದೆ

  –ಹೆನ್ರಿಯೆಟ ಎಚ್ ಫೋರ್, ಯುನಿಸೆಫ್‌ ನಿರ್ದೇಶಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT