ಸೋಮವಾರ, ಜೂಲೈ 13, 2020
23 °C

ಷರೀಫ್‌ ರಾಜಕೀಯ ಜೀವನ ಅಂತ್ಯ

ಪಿಟಿಐ Updated:

ಅಕ್ಷರ ಗಾತ್ರ : | |

ಷರೀಫ್‌ ರಾಜಕೀಯ ಜೀವನ ಅಂತ್ಯ

ಇಸ್ಲಾಮಾಬಾದ್‌: ಪಾಕಿಸ್ತಾನದ ಪದಚ್ಯುತ ಪ್ರಧಾನಿ ನವಾಜ್‌ ಷರೀಫ್‌ ಅವರು ಜೀವಿತಾವಧಿವರೆಗೂ ಚುನಾವಣೆಗಳಲ್ಲಿ ಸ್ಪರ್ಧಿಸುವುದನ್ನು ನಿಷೇಧಿಸಿ ಸುಪ್ರೀಂಕೋರ್ಟ್‌ ಶುಕ್ರವಾರ ಮಹತ್ವದ ತೀರ್ಪು ನೀಡಿದೆ.

ರಾಜಕಾರಣಿ ಒಬ್ಬರನ್ನು ಎಷ್ಟು ಅವಧಿಯವರೆಗೆ ಅನರ್ಹಗೊಳಿಸಬಹುದು ಎಂಬುದರ ಕುರಿತು ಸ್ಪಷ್ಟನೆ ಕೋರಿ ಸಲ್ಲಿಕೆಯಾಗಿದ್ದ 17 ಅರ್ಜಿಗಳ ವಿಚಾರಣೆ ನಡೆಸಿದ ಐವರು ನ್ಯಾಯಮೂರ್ತಿಗಳಿದ್ದ ನ್ಯಾಯಪೀಠ, ಈ ತೀರ್ಪು ನೀಡಿದೆ.

ಸಂವಿಧಾನದ ಕಲಂ 62(1)ಎಫ್‌ ಅಡಿ, ಸುಪ್ರೀಂ ಕೋರ್ಟ್‌ನಿಂದ ಒಮ್ಮೆ ಅನರ್ಹಗೊಂಡ ವ್ಯಕ್ತಿ ಜೀವನ ಪೂರ್ತಿ ಚುನಾವಣೆಗಳಲ್ಲಿ ಸ್ಪರ್ಧಿಸುವಂತಿಲ್ಲ  ಎಂದು ಸುಪ್ರೀಂಕೋರ್ಟ್‌ ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ. 

ಈ ಮೂಲಕ ಮೂರು ಬಾರಿ ಪ್ರಧಾನಿಯಾಗಿದ್ದ ನವಾಜ್‌ ಷರೀಫ್‌ ಅವರ ರಾಜಕೀಯ ಜೀವನ ಅಂತ್ಯಗೊಂಡಿದೆ ಎಂದು ವಿಶ್ಲೇಷಿಸಲಾಗಿದೆ. ಈ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಬಯಸಿದ್ದ ಷರೀಫ್‌ ಅವರಿಗೆ ಆದ ಅತಿ ದೊಡ್ಡ ಹಿನ್ನಡೆ ಇದು ಎಂದು ಹೇಳಲಾಗಿದೆ.

ಪನಾಮಾ ಪೇಪರ್ಸ್‌ ಸೋರಿಕೆ ಪ್ರಕರಣದಲ್ಲಿ ನವಾಜ್‌ ಷರೀಫ್‌ ಅವರನ್ನು ಕಲಂ 62ರ ಅಡಿ 2017ರ ಜುಲೈ 28ರಂದು ಚುನಾವಣೆಗಳಲ್ಲಿ ಸ್ಪರ್ಧಿಸದಂತೆ ಅನರ್ಹಗೊಳಿಸಲಾಗಿತ್ತು. ಅಕ್ರಮ ಸಂಪಾದನೆ ಹಾಗೂ ತೆರಿಗೆ ವಂಚನೆಯಿಂದ ಗಳಿಸಿದ ಕಾಳಧನವನ್ನು ಅಂತರರಾಷ್ಟ್ರೀಯ ಬ್ಯಾಂಕ್‌ಗಳಲ್ಲಿ ಇರಿಸಿರುವವರ ಪಟ್ಟಿಯು, ಪನಾಮ ಪೇಪರ್ಸ್‌ ಸೋರಿಕೆಯಿಂದ ಬಹಿರಂಗಗೊಂಡಿತ್ತು.

ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನಲ್ಲಿ ತಮ್ಮ ಮಗ ಸ್ಥಾಪಿಸಿರುವ ಕಂಪನಿಯಿಂದ ಪಡೆಯುತ್ತಿರುವ ವೇತನದ ವಿವರವನ್ನು 2013ರಲ್ಲಿ ಘೋಷಿಸಲು ಷರೀಫ್ ವಿಫಲರಾಗಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌, ಪ್ರಾಮಾಣಿಕ ಮತ್ತು ನ್ಯಾಯನಿಷ್ಠರಾಗಿಲ್ಲ ಎಂದು ಅವರನ್ನು ಅನರ್ಹಗೊಳಿಸಿತ್ತು. 

ಕಳೆದ ಫೆಬ್ರುವರಿಯಲ್ಲಿ ಆಡಳಿತಾರೂಡ ಪಾಕಿಸ್ತಾನ ಮುಸ್ಲಿಂ ಲೀಗ್‌–ನವಾಜ್‌ನ (ಪಿಎಂಎಲ್‌ಎನ್‌) ಮುಖ್ಯಸ್ಥ ಸ್ಥಾನದಿಂದಲೂ ಷರೀಫ್‌ ಅವರನ್ನು ಪದಚ್ಯುತಗೊಳಿಸಲಾಗಿತ್ತು.

ಈ ತೀರ್ಪು ಮುಂಬರುವ ಸಾರ್ವತ್ರಿಕ ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎನ್ನಲಾಗಿದೆ.

ಪಾಕಿಸ್ತಾನ ತೆಹರಿಕ್‌–ಎ ಇನ್ಸಾಫ್‌ (ಪಿಟಿಐ) ಪಕ್ಷದ ನಾಯಕ ಜಹಾಂಗೀರ್‌ ತರೀನ್‌ ಅವರಿಗೂ ಈ ತೀರ್ಪು  ಅನ್ವಯವಾಗಲಿದೆ. ಅವರನ್ನು ಕಳೆದ ಡಿಸೆಂಬರ್‌ 15ರಂದು ಅನರ್ಹಗೊಳಿಸಲಾಗಿತ್ತು.

3 ಬಾರಿಯೂ ಅವಧಿ ಪೂರ್ಣಗೊಳಿಸಲಿಲ್ಲ

ನವಾಜ್‌ ಷರೀಫ್‌ ಅವರು ಈವರೆಗೆ ಮೂರು ಬಾರಿ ಪ್ರಧಾನಿಯಾಗಿ ಆಯ್ಕೆಯಾಗಿದ್ದರು. ಆದರೆ ಒಮ್ಮೆಯೂ ಅವಧಿ ಪೂರ್ಣಗೊಳಿಸಿಲ್ಲ. 1990ರ ನವೆಂಬರ್‌ 6ರಿಂದ 1993ರ ಜುಲೈ 18ರವರೆಗೆ ಮೊದಲ ಅವಧಿ, 1997ರ ಫೆಬ್ರುವರಿ 17ರಿಂದ 1999ರ ಅಕ್ಟೋಬರ್‌ 12ರವರೆಗೆ ಎರಡನೇ ಅವಧಿ ಮತ್ತು 2013ರ ಜೂನ್‌ 5ರಿಂದ 2017ರ ಜುಲೈ 28ರವರೆಗೆ ಮೂರನೇ ಅವಧಿಗೆ ಪ್ರಧಾನಿಯಾಗಿದ್ದರು.

* ನವಾಜ್‌ ಷರೀಫ್‌ ಅವರು ಜನರ ಮನಸ್ಸಿನಲ್ಲಿ ಎಲ್ಲಿಯವರೆಗೂ ಇರುವರೊ ಅಲ್ಲಿಯವರೆಗೂ ಸುಪ್ರೀಂ ಕೋರ್ಟ್‌ನ ಅನರ್ಹತೆ ತೀರ್ಪಿಗೆ ಯಾವುದೇ ಅರ್ಥವಿರುವುದಿಲ್ಲ

-ಮರಿಯಂ ಔರಂಗಜೇಬ್‌, ಮಾಹಿತಿ ಖಾತೆ ರಾಜ್ಯ ಸಚಿವೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.