ಶುಕ್ರವಾರ, ಡಿಸೆಂಬರ್ 13, 2019
19 °C
ಕೆಲವು ಆಕಾಂಕ್ಷಿಗಳು ತಟಸ್ಥರಾಗಿರಲು ನಿರ್ಧಾರ; ಬಂಡಾಯವಾಗಿ ಕಣಕ್ಕಿಳಿಯಲು ಹಲವರ ಚಿಂತನೆ

ಬಿಜೆಪಿ, ಕಾಂಗ್ರೆಸ್‌ನಲ್ಲಿ ಅಸಮಾಧಾನದ ಹೊಗೆ

ಕೆ.ಎಸ್. ಗಿರೀಶ್ Updated:

ಅಕ್ಷರ ಗಾತ್ರ : | |

ಬಿಜೆಪಿ, ಕಾಂಗ್ರೆಸ್‌ನಲ್ಲಿ ಅಸಮಾಧಾನದ ಹೊಗೆ

ಚಾಮರಾಜನಗರ: ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ ಹಾಗೂ ಬಿಜೆಪಿ ತಮ್ಮ ತಮ್ಮ ಅಭ್ಯರ್ಥಿಗಳನ್ನು ಘೋಷಿಸಿದ ಬೆನ್ನಲ್ಲೇ ಉಭಯ ಪಕ್ಷಗಳಲ್ಲಿ ಅಸಮಾಧಾನದ ಹೊಗೆಯಾಡ ತೊಡಗಿದೆ.                 

ಬೇರೆ ಕ್ಷೇತ್ರಗಳಿಗೆ ಹೋಲಿಸಿದರೆ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲೇ ಎರಡೂ ಪಕ್ಷಗಳಲ್ಲಿ ಹೆಚ್ಚಿನ ಅಸಮಾ ಧಾನ ಗೋಚರಿಸುತ್ತಿದೆ.

ಈಗಾಗಲೇ ಕಾಂಗ್ರೆಸ್‌ನ ಬಿ.ರಾಚಯ್ಯ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ. ಉಳಿದ ಟಿಕೆಟ್ ಆಕಾಂಕ್ಷಿಗಳಾದ ಶಾಸಕ ಎಸ್.ಜಯಣ್ಣ, ಬಾಲರಾಜ್ ಅವರೂ ಮುಂದಿನ ನಡೆ ನಿರ್ಧರಿಸಲು ಬೆಂಬಲಿಗರ ಸಭೆ ಕರೆದಿದ್ದಾರೆ.

ಇತ್ತ ಬಿಜೆಪಿಯಲ್ಲೂ ಪರಿಸ್ಥಿತಿ ಇದೇ ರೀತಿ ಇದೆ. ನಂಜುಂಡಸ್ವಾಮಿ ಅವರಿಗೆ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಪ್ರಮುಖ ಟಿಕೆಟ್ ಆಕಾಂಕ್ಷಿಯಾಗಿದ್ದ ಚಂದ್ರಕಲಾ ಬಾಯಿ ಪಕ್ಷದ ನಡೆಯನ್ನು ಬಹಿರಂಗವಾಗಿಯೇ ಖಂಡಿಸಿದ್ದಾರೆ. ಮಾತ್ರವಲ್ಲ, ಮಂಗಳವಾರ  ಬೆಂಬಲಿಗರ ಸಭೆ ಕರೆದಿದ್ದಾರೆ.

ಚಾಮರಾಜನಗರದಲ್ಲಿ ನಿರೀಕ್ಷೆ ಯಂತೆ ಕಾಂಗ್ರೆಸ್‌ನಲ್ಲಿ ಹಾಲಿ ಶಾಸಕ ಪುಟ್ಟರಂಗಶೆಟ್ಟಿ ಅವರಿಗೆ ಟಿಕೆಟ್ ಸಿಕ್ಕಿದೆ. ಆದರೆ, ಇವರ ವಿರುದ್ಧ ಸ್ಪರ್ಧಿಸುವುದಾಗಿ ಈಗಾಗಲೇ ಚಿನ್ನಸ್ವಾಮಿ ಘೋಷಿಸಿದ್ದಾರೆ.

ಇತ್ತ ಬಿಜೆಪಿಯಲ್ಲಿ ಪರಿಸ್ಥಿತಿ ಏನೂ ಭಿನ್ನವಾಗಿಲ್ಲ. ಸಾಲು ಸಾಲು ಆಕಾಂಕ್ಷಿಗಳಲ್ಲಿ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ ಟಿಕೆಟ್ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.‌ ಆದರೆ, ಇದರಿಂದ ಪಕ್ಷದ ಪ್ರಮುಖ ಬಣಗಳಲ್ಲಿ ಅಸಮಾಧಾನ ಹೊಗೆಯಾಡುತ್ತಿದೆ.

ಇತ್ತೀಚೆಗಷ್ಟೇ ಪಕ್ಷಕ್ಕೆ ಬಂದ ರಾಮಚಂದ್ರ, ಪಕ್ಷದಲ್ಲೆ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ನಾಗಶ್ರೀ ಪ್ರತಾಪ್ ಹಾಗೂ ನಿಜಗುಣ ರಾಜು ಅವರಲ್ಲಿ ಅಸಮಾಧಾನ ಇದೆ. ಇವರೂ ಬೆಂಬಲಿಗರ ಜತೆ ಚರ್ಚೆ ನಡೆಸಿದ್ದು, ಮುಂದಿನ ನಡೆ ಕುತೂಹಲ ಮೂಡಿಸಿದೆ.

ಇವರಲ್ಲಿ ರಾಮಚಂದ್ರು ಹಾಗೂ ನಿಜಗುಣ ರಾಜು ಬಂಡಾಯ ಸ್ಪರ್ಧೆಯ ಸಾಧ್ಯತೆಯನ್ನು ತಳ್ಳಿ ಹಾಕಿದ್ದಾರೆ. ಗುಂಡ್ಲುಪೇಟೆ ಹಾಗೂ ಹನೂರಿನಲ್ಲಿ ಉಭಯ ಪಕ್ಷಗಳಿಗೂ ಬಂಡಾಯದ ಬಿಸಿ ಎದುರಾಗಿಲ್ಲ.

ಋಣ ತೀರಿಸಿದ ಸಿಎಂ!

ತಮ್ಮ ರಾಜಕೀಯ ಗುರುವಾದ ಮಾಜಿ ಸಚಿವ ದಿ.ಬಿ.ರಾಚಯ್ಯ ಅವರ ಋಣ ತೀರಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಯತ್ನ ಯಶಸ್ಸು ಕಂಡಿದೆ. ಸಾಲು ಸಾಲು ಆಕಾಂಕ್ಷಿಯಗಳು ಇದ್ದಾಗ್ಯೂ, ಪ್ರಬಲ ವಿರೋಧ ವ್ಯಕ್ತವಾದರೂ ರಾಚಯ್ಯ ಅವರ ಪುತ್ರ ಎ.ಆರ್.ಕೃಷ್ಣಮೂರ್ತಿ ಅವರನ್ನು ಪಕ್ಷಕ್ಕೆ ಕರೆತಂದುದು  ಮಾತ್ರವಲ್ಲ ಅವರಿಗೆ ಕೊಳ್ಳೇಗಾಲ ಕ್ಷೇತ್ರದ ಟಿಕೆಟ್‌ನ್ನೂ ನೀಡುವ ಮೂಲಕ ತಮ್ಮ ಬಲ ಪ್ರದರ್ಶಿಸಿದ್ದಾರೆ.

ಕೇವಲ ಒಂದೆರಡು ತಿಂಗಳಲ್ಲಿ ನಡೆದ ಈ ಬೆಳವಣಿಗೆಗಳಿಂದ ಹಾಲಿ ಶಾಸಕ ಜಯಣ್ಣ ಸೇರಿದಂತೆ ಇತರ ಟಿಕೆಟ್‌ ಆಕಾಂಕ್ಷಿಗಳು ಭ್ರಮನಿರಸನಗೊಂಡಿದ್ದಾರೆ. ಸಿದ್ದರಾಮಯ್ಯ 1983ರಲ್ಲಿ ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾಗಿ ನೇಮಕವಾಗುವಲ್ಲಿ ರಾಚಯ್ಯ ಅವರ ಶಿಫಾರಸ್ಸೂ ಇತ್ತು ಎನ್ನಲಾಗಿದೆ. ಈಗಾಗಿಯೇ ಸಿದ್ದರಾಮಯ್ಯ ರಾಚಯ್ಯ ಪುತ್ರ ಎ.ಆರ್.ಕೃಷ್ಣಮೂರ್ತಿ ಅವರ ಕಡೆ ಒಲವು ತೋರಿದ್ದಾರೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಹಿಂಬಾಲಕರನ್ನು ಕೈಬಿಡದ ಯಡಿಯೂರಪ್ಪ

ಪಕ್ಷ ತ್ಯಜಿಸಿ ಕೆ.ಜೆ.ಪಿಗೆ ಹೋದಾಗ ತಮ್ಮ ಹಿಂದೆ ಬಂದ ಜಿಲ್ಲೆಯ ಮುಖಂಡರನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕೈಬಿಟ್ಟಿಲ್ಲ.

ಚಾಮರಾಜನಗರದ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿದ್ದ ರಾಮಚಂದ್ರ ಅವರನ್ನು ಪಕ್ಷಕ್ಕೆ ಕರೆತಂದು ಟಿಕೆಟ್ ನೀಡುವುದು, ಮಲ್ಲಿಕಾರ್ಜುನಪ್ಪ ಅವರಿಗೆ ವಿಧಾನಪರಿಷತ್ ಸದಸ್ಯರನ್ನಾಗಿ ಮಾಡುವ ಲೆಕ್ಕಾಚಾರ ತಳೆಕೆಳಗು ಮಾಡುವಲ್ಲಿ ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ. ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ಯಡಿಯೂರಪ್ಪ ಹಿಂದೆ ಕೆಜೆಪಿ ಸೇರಿದ್ದ ಮಲ್ಲಿಕಾರ್ಜುನಪ್ಪ ಅವರಿಗೆ ಈ ಬಾರಿಯೂ ಟಿಕೆಟ್ ಸಿಗುವಂತೆ ಮಾಡುವಲ್ಲಿ ಅವರು ಸಫಲರಾಗಿದ್ದಾರೆ. ಇದೇ ರೀತಿ ತಮ್ಮ ಹಿಂದೆ ಬಂದಿದ್ದ ನಿರಂಜನಕುಮಾರ್ ಅವರನ್ನೂ ಯಡಿಯೂರಪ್ಪ ಈ ಬಾರಿ ಕೈಬಿಟ್ಟಿಲ್ಲ. ಉಪಚುನಾವಣೆಯಲ್ಲಿ ಸೋತ ನಂತರವೂ ಮತ್ತೆ ಅವರಿಗೆ ಟಿಕೆಟ್‌ ಕೊಡಿಸಿದ್ದಾರೆ.

 

ಪ್ರತಿಕ್ರಿಯಿಸಿ (+)