ಶನಿವಾರ, ಡಿಸೆಂಬರ್ 14, 2019
22 °C

ಅಣ್ಣ ಬದುಕಿದ್ದು ಪ್ರಶ್ನೆಗಳಲ್ಲಿ...

ಪ್ರೀತಿ ನಾಗರಾಜ್ Updated:

ಅಕ್ಷರ ಗಾತ್ರ : | |

ಅಣ್ಣ ಬದುಕಿದ್ದು ಪ್ರಶ್ನೆಗಳಲ್ಲಿ...

ಬಸವಣ್ಣನನ್ನು ಪ್ರಜ್ಞೆ ಮೂಡಿದ ವಯಸ್ಸಿನಲ್ಲಿ ನಾನು ಮೊದಲು ಭೇಟಿಯಾದದ್ದು ಲಂಕೇಶರ ‘ಸಂಕ್ರಾಂತಿ’ ನಾಟಕದಲ್ಲಿ. ಬಸವಣ್ಣನ ಬೇರೆಲ್ಲ ಚಿತ್ರಣಗಳ ನಡುವೆಯೂ ನನ್ನ ಮನಸ್ಸಿಗೆ ಬರುವ ಈ ಸಮ-ಸಮಾಜದ ಕನಸುಗಾರ ವಿರೋಧಾಭಾಸಗಳಿಂದ ಕೂಡಿದ, ಅಂತಲೇ ಆಪ್ತವೆನಿಸುವ ಬಸವಣ್ಣ ಈ ನಾಡಿನ ನೆಲದ ಮೇಲೆ ಓಡಾಡಿದ ಎನ್ನುವ ಕಾರಣಕ್ಕೇ ರೋಮಾಂಚನ ಮೂಡಿಸುವ ಮನುಷ್ಯ.

ನನ್ನ ಪುಟ್ಟ ದಾವಣಗೆರೆಯ ಪ್ರತಿಮಾ ಸಭಾದ ಸದಸ್ಯರು ಬೆಳಗಿನ ಹೊತ್ತು ಮೇಷ್ಟ್ರುಗಳಾಗಿ ಸಾಯಂಕಾಲದ ಹೊತ್ತು ಕಲಾವಿದರಾಗಿ ಅಶೋಕ ಬಾದರದಿನ್ನಿ ಅವರ ನಿರ್ದೇಶನದಲ್ಲಿ ‘ಸಂಕ್ರಾಂತಿ’ಯನ್ನು ನಮ್ಮ ಮುಂದಿಟ್ಟಿದ್ದರು. ಅದರಲ್ಲಿ ಚಿತ್ರಿತವಾಗುವ ಬಸವಣ್ಣ ಬಾಲ್ಯದ ನನ್ನ ಮನಸ್ಸಿನ ಮೇಲೆ ಪರಿಣಾಮ ಬೀರಿ ನಂತರದ ದಿನಗಳಲ್ಲಿ ಭ್ರಮನಿರಸನ ಮಾಡದೆ ಉಳಿದು ಬೆಳೆದುಬಿಟ್ಟ. ಈಗಲೂ ನನ್ನ ಬಸವಣ್ಣ ಉಸಿರಾಡುವ ವ್ಯಕ್ತಿ. ‘ಜ್ವಾಳದ ರಾಶಿನ ಮುತ್ತು ಮಾಡಿದ’ ಜಾದೂಗಾರನಲ್ಲ. ತನ್ನ ಕನಸಿನ ಪರಿಕಲ್ಪನೆಯಲ್ಲೇ ಸಿಲುಕಿ ಅದನ್ನು ಜನಗಳಿಗೆ ಅರ್ಥೈಸಲು ಯತ್ನಿಸಿ ಈ ಲೋಕದಿಂದ ಮರೆಯಾದ ಮಿಂಚು. ಅವನ ಅಸಹಾಯಕತೆ ಬಹು ಆಪ್ತವೆನಿಸಿಬಿಡುತ್ತದೆ.

ಅವನಿಗೂ ಗೊತ್ತಿತ್ತೇನೋ, ಈ ಜಗತ್ತು ಬದಲಾಗುವುದಿಲ್ಲ. ಇಲ್ಲಿ ಹೊಸತು ಹುಟ್ಟಲಾರದು ಎಂದು. ಇನ್ನೇನೂ ಚಿಗುರಲಾರದೆನ್ನುವಾಗ ಬಸವ ಇಲ್ಲಿದ್ದ, ಇದೇ ನೆಲದ ಮೇಲೆ  ಸಮ ಸಮಾಜದ ಕನಸನ್ನು ಬಿತ್ತಿ ಬೆಳೆದಿದ್ದ ಎನ್ನುವ ಆಲೋಚನೆಯೇ ರೋಮಾಂಚಕಾರಿ.

ಅವನ ವ್ಯಕ್ತಿತ್ವವೇ ವಿರೋಧಾಭಾಸಗಳಿಂದ ಕೂಡಿದ್ದು. ಅವ ಸೌಮ್ಯ ಆದರೂ ಸ್ಪಷ್ಟ, ನಿರ್ಗುಣಿ ಆದರೂ ಲೌಕಿಕ, ಮಂತ್ರಿ ಆದರೂ ಲಾಲಸೆ ಇಲ್ಲದವ, ಭಂಡಾರಿ ಆದರೂ ವ್ಯವಹಾರಿಯಲ್ಲ – ಹೀಗೇ ಇನ್ನೂ ನೂರಾರು ಮಾತುಗಳ ಮೂಲಕ ಬಸವಣ್ಣನನ್ನು ಅರ್ಥೈಸಿಕೊಳ್ಳಲು ಹೊರಟರೆ ಪದಕೋಶ ತಲೆಯಲ್ಲಿ ತುಂಬಿಕೊಳ್ಳಬಹುದೇ ಹೊರತು, ಭಾವಕೋಶ ಬರಿದೇ ಉಳಿದುಬಿಡಬಹುದು.

ಲಿಂಗಾಯತ ಎನ್ನುವ ಪದವೇ ಈವತ್ತು ಅತ್ಯಂತ ಸಂಕೀರ್ಣ ಮತ್ತು ತೀರಾ ವಿಚಿತ್ರ ಆಯಾಮಗಳೊಂದಿಗೆ ಚರ್ಚೆಗೊಳಗಾಗಿರುವ ಸಂದರ್ಭದಲ್ಲಿ ಈ ವರ್ಷದ ಬಸವ ಜಯಂತಿ ಬೇರೆಯೇ ಅರ್ಥ ಹೊರಡಿಸುತ್ತಿದೆ. ಬಸವ ನಮ್ಮವನೇ? ಅಥವಾ ಲಿಂಗಾಯತ ನಮ್ಮದೇ? ಅಥವಾ ತನ್ನ ಕನಸಿನ ದುರ್ಭರತೆ ತಿಳಿದೂ, ಈ ನೆಲದ ಜಾತಿಗಳನ್ನು ಒಂದುಗೂಡಿಸಿ ಬಾಳಿಸಲೆತ್ನಿಸಿದ ಆ ಮನಸ್ಸು ನಮ್ಮದೇ?

ಎಲ್ಲಿದ್ದಾನೆ ಬಸವಣ್ಣ ಎಂದು ಹಲವು ಸಾರಿ ಯೋಚಿಸಿದ್ದೇನೆ. ಅವನು ಸಮಾಜದಲ್ಲಿ ನಾವು ಎತ್ತುವ  ಪ್ರಶ್ನೆಗಳಲ್ಲಿದ್ದಾನೆ. ಆಚರಣೆಗಳನ್ನು ಮೀರಿ ಮನುಷ್ಯತ್ವವನ್ನು ಎತ್ತಿ ಹಿಡಿಯುವ ಪ್ರಯತ್ನಗಳಲ್ಲಿದ್ದಾನೆ. ಹಲವಾರು ಯುಗಪುರುಷರಂತೆ ಬಸವಣ್ಣನೂ ಅಳಿಯಲಾರದ ಜಾತಿ ಬಿಕ್ಕಟ್ಟೊಂದನ್ನು ಬಗೆಹರಿಸಲು ಪ್ರಯತ್ನಿಸಿದ. ಪ್ರಯತ್ನದಲ್ಲಿ ಗೆದ್ದ, ಆದರೆ ಸಮಾಜದ ದೃಷ್ಟಿಯಲ್ಲಿ ಅಳಿದ ಮೇಲೆ ಸೋತನೋ ಬಿಟ್ಟನೋ ಅದು ಮುಖ್ಯವಲ್ಲ. ಪ್ರಯತ್ನ ಪಟ್ಟ ಎನ್ನುವುದು ಮುಖ್ಯ.

ತನ್ನ ಪ್ರಾರ್ಥನೆಯ ಹಾಡುಗಳನ್ನು, ಭಜನೆಯ ಪದಗಳನ್ನೂ ಜೊತೆಗೆ ಕೆಲವು ನೂರು ಶರಣರ ಹೆಸರುಗಳನ್ನು ಬರೆಯಲು ಅನುಕೂಲ ಆಗುವಷ್ಟು, ಮತ್ತು ಅಂಗಡಿ ಉದ್ರಿ ಲೆಕ್ಕ, ಸಾವ್ಕಾರ ಕೊಡಬೇಕಿದ್ದ ಬತ್ತದ ಹಳೇ  ಬಾಬ್ತು ನೆನಪಿಟ್ಟುಕೊಳ್ಳುವಷ್ಟು ಅಕ್ಷರ ಮತ್ತು ಲೆಕ್ಕವನ್ನು ಕಲಿತಿದ್ದ ನನ್ನಜ್ಜನಲ್ಲಿ ಬಸವಣ್ಣನಿದ್ದ.

ವಚನಗಳನ್ನು ಹೇಳಿಕೊಡುತ್ತಾ, ಜನಪದ ಹಾಡುಗಳನ್ನು ಹಾಡಿಸುತ್ತಾ, ಹೆಣ್ಣು ಮಕ್ಕಳೆಂದರೆ ಅಪಾರ ಧೈರ್ಯ ತುಂಬುತ್ತಿದ್ದ ಆ ‘ಶರಣ’ ಬೂದಾಳು ದ್ಯಾಮಪ್ಪ, ಬಸವಣ್ಣನ ಒಂದು ಎಳೆಯನ್ನು ಹೇಗೋ ಎರವಲು ಪಡೆದು ಶಕ್ತಿವಂತನಾಗಿದ್ದ. ‘ಹೊಲೆಮಾದಿಗರ ಆಳ ಮಗನ ಕುಟಗ ಪಾತ್ರಿ ತೊಳಿಸಿಗ್ಯಂಡ್ರೆ ನೀರ್ ಚುಮುಕ್ಸಿ ಒಳಗ ತಕ್ಕಂತೀ... ಮೈಲಿಗೆ ಆಕ್ಕತಿ ಅಂತ... ಆದರ ಅದೇ ಆಳಮಗ ರೊಕ್ಕಾ ತಂದುಕೊಟ್ರ ಚಕ್ಕಂತ ಇಸಗಂದು ಸೆರಗಿಗೆ ಕಟ್ಟಿಗ್ಯಂತೀ? ರೊಕ್ಕಕ್ಕ  ಮೈಲಿಗಿ ಇಲ್ಲೇನವಾ?’ ಅಂತ ಅವನ ದತ್ತು ತಾಯಿಯನ್ನು ಕೇಳುತ್ತಿದ್ದನಂತೆ. ಆ ಪ್ರಶ್ನೆಗೆ ಇಂಬುಕೊಟ್ಟಿದ್ದು ಬಸವಣ್ಣನಲ್ಲದೇ ಇನ್ಯಾರು?

ಎಂಬತ್ತರ ದಶಕದ ಹುಟ್ಟಿನಲ್ಲೇ ತೀರಿಹೋದ ಅಜ್ಜನ ಕೈಬರಹದ ಪುಸ್ತಕದಲ್ಲಿ ಅಣ್ಣನ-ಅಕ್ಕನ ವಚನಗಳು ಸಾಲುಸಾಲಾಗಿ ಇದ್ದವು. ಅಕ್ಷರ ಜ್ಞಾನವೊಂದೇ ಜ್ಞಾನವಲ್ಲ ಎಂಬುದನ್ನು ಸಾರುವಂತೆ ಪುಟಗಳನ್ನು ತುಂಬಿದ್ದ ಶರಣರ ಹೆಸರುಗಳ ಜೊತೆಯೇ ಒಂದಿಡೀ ಪುಟ ‘ಸೂಳೆ’ ಎಂಬ ವಿಶೇಷಣ ಹೊತ್ತ ಶರಣೆಯರ ಹೆಸರುಗಳಿದ್ದವು ಎನ್ನುವುದನ್ನು ನಾನು ಕಂಡದ್ದು ತೀರಾ ಇತ್ತೀಚೆಗೆ. ಅದೂ ನನ್ನ ‘ಗ್ರಾಸ್ ರೂಟ್ಸ್ ಆಕ್ಟಿವಿಸಮ್’ ಎನ್ನುವ ಪರದೆಯನ್ನು ಸರಿಸಿ ನೋಡಿದಾಗ ಸಿಕ್ಕ ಬೆಳಕಿನ ತುಂಡು. ಇತಿಹಾಸದಲ್ಲಿ ಎಲ್ಲವೂ ಇದೆ ಎಂದು ನಾನು ಹೇಳುತ್ತಿಲ್ಲ. ನೂರಾರು ವರ್ಷಗಳ ಹಿಂದೆ ಇಲ್ಲಿಗೆ ಬಸವಣ್ಣ ಬಂದಿದ್ದ. ತನ್ನ ಸಮಯ ಮುಗಿದಾಗ ನಮ್ಮ-ನಿಮ್ಮಂತೆಯೇ ಮನುಷ್ಯ ಜೀವನ ಕಳಚಿಟ್ಟು ಹೋದ. ಆ ನಡುವಿನಲ್ಲಿ ಮನುಷ್ಯ ಮಾತ್ರರಿಗೆ ಸಾಧ್ಯವಾಗಬಹುದೇ ಎಂದು ಪ್ರಶ್ನೆ ಹುಟ್ಟಿಸಬಲ್ಲ ಕೆಲಸಗಳನ್ನು ಮಾಡಿ ಆ ಕೊನೆಯಿಲ್ಲದ ಬಾವಿಯನ್ನು ಇಣುಕಿ ನೋಡುವ ಹುಚ್ಚು ಹತ್ತಿಸಿಬಿಟ್ಟ.

ಪ್ರಶ್ನೆಯ, ಚಿಂತನೆಯ ಮತ್ತು ನಮ್ಮೊಳಗಿರುವ ದ್ವಂದ್ವ-ವೈರುಧ್ಯಗಳ ಮೂಲಕವೇ ಸಮಾಜವನ್ನು ಅರ್ಥೈಸಿಕೊಳ್ಳಬೇಕು ಎನ್ನುವ ಅತ್ಯಂತ ಪ್ರಾಜ್ಞ ಸೆಲೆಯನ್ನು ಬಿತ್ತಿದ. ಜಾತಿಯಿಲ್ಲದ ಸಮಾಜ ಕಟ್ಟಬೇಕೆನ್ನುವುದು ಅವನ ಅಪೇಕ್ಷೆಯಾಗಿದ್ದೀತು. ತನ್ನ ದಾರಿಯಲ್ಲಿ ಸಿಕ್ಕ ಜನರೆಲ್ಲರನ್ನೂ ಪೊರೆಯುತ್ತಾ, ತದ ನಂತರ ತನ್ನ ಕನಸು ಚೂರಾದದ್ದನ್ನು ಕಂಡು ಆಸೆ ತೊರೆಯುತ್ತಾ ಕೂಡಲ ಸಂಗಮದತ್ತ ಪ್ರಯಾಣ ಬೆಳೆಸುವಾಗ ಬಸವಣ್ಣ ಥೇಟ್ ಭ್ರಮನಿರಸನಗೊಂಡ ನಮ್ಮ-ನಿಮ್ಮಂತಹ ಕ್ಷುದ್ರ ಜಂತುಗಳಂತೆ ಕಂಡು ಕಣ್ಣಲ್ಲಿ ನೀರು ತರಿಸಿಬಿಡುತ್ತಾನೆ. ಒಮ್ಮೊಮ್ಮೆ ನಾನು ಬಸವಣ್ಣನ ‘ಅಂತ್ಯ’ದ ಬಗ್ಗೆ ಇರುವ ಪ್ರಶ್ನೆಗಳನ್ನು ಕಂಡು ಸೋಜಿಗಗೊಳ್ಳುತ್ತೇನೆ. ಅದೇಕೆ ಮುಖ್ಯವಾಗುತ್ತದೆ ಎಂದು ಯೋಚಿಸಿದ್ದೇನೆ.

ಇಂದಿಗೂ ಬದುಕುಳಿದಿರುವ ಕೆಲ ಆಚರಣೆಗಳು ಹಳ್ಳಿಗಳಲ್ಲಿ ಮಠಗಳಲ್ಲಿ ‘ದಾಸೋಹ’ವೆಂದು ಕರೆಸಿಕೊಳ್ಳುತ್ತವೆ. ಕಳಚೂರಿ ಅರಸ ಬಿಜ್ಜಳನ ಮಂತ್ರಿಯಾಗಿದ್ದ ಬಸವಣ್ಣ ತನ್ನ ಜನಕ್ಕೆ ರಾಜಕೀಯ ಪ್ರಜ್ಞೆಯನ್ನೂ ಬೆಳೆಸಿದ್ದರೆ ಆಶ್ಚರ್ಯವೇನಿಲ್ಲ. ರಾಜಕೀಯವನ್ನು ಅರ್ಥೈಸಿಕೊಂಡರೆ ಮಾತ್ರ ಬದುಕು ಎನ್ನುವ ಸತ್ಯಕ್ಕೆ ಇಂದು ಲಿಂಗಾಯತ ಧರ್ಮ ಸಾಕ್ಷಿಯಾಗಿದೆ. ಆದರೆ ‘ಐ ಡೋಂಟ್ ಲೈಕ್ ಪಾಲಿಟಿಕ್ಸ್ ಯಾ...ಸೋ ಡರ್ಟಿ’ ಎನ್ನುವ ಎಳೆ ಅಥವಾ ವಯಸ್ಕ ಮನಸ್ಸುಗಳಿಗೆ ರಾಜಕೀಯಕ್ಕೆ ವಿಮುಖವಾಗಿ ನೀವು ನಿಂತು ಈ ಜೀವನವನ್ನು ಜಯಿಸಿಕೊಳ್ಳಲಾರಿರಿ ಎನ್ನುವ ವಿಷಯ ಅರ್ಥವಾಗಬೇಕಿದೆ.

ಇವತ್ತು ಲಿಂಗಾಯತವನ್ನು ಅರ್ಥ ಮಾಡಿಕೊಳ್ಳಬೇಕಾದರೆ ಈ ಎಲ್ಲ ಅಂಶಗಳನ್ನಿಟ್ಟುಕೊಂಡು ವಿಚಾರ ಮಂಥನ ಮಾಡಿ ಪುನರ್ಮನನ ಮಾಡಿಕೊಳ್ಳಬೇಕಿದೆಯೇ ಹೊರತು ಮಠಗಳ ವ್ಯಾಖ್ಯಾನದ ಮೂಲಕ, ಜಾತಿ-ಲೆಕ್ಕಾಚಾರದ ಮೂಲಕ ಈ ಶರಣ ಚಳವಳಿಯ ಬೇರು ಬಿಳಲುಗಳನ್ನು ಮುಟ್ಟಲಾಗದು.

ಸ್ತ್ರೀ ಸಮಾನತೆಗೆ ಮುನ್ನುಡಿ

ಸ್ತ್ರೀ ಸಂವೇದನೆಗೆ ಬಸವಣ್ಣ ಅತ್ಯಂತ ಪ್ರಬಲ ಮೇಲ್ಪಂಕ್ತಿ ಹಾಕಿದ. ಆ ವಿವೇಚನೆ ಅವನನ್ನು ದಾಟಿ ಶತಶತಮಾನಗಳ ಕಾಲ ನಡೆದು ಬರುವಾಗ ಸ್ವಲ್ಪ ಕಾಲು ತೊಡರಿದ್ದೂ ಇದೆ.

ಆದರೆ ಮಡಿ, ಮೈಲಿಗೆ, ಸೂತಕಗಳ ಭಾರದಿಂದ ಬಿಡಿಸಿ ದೇವರೊಂದಿಗೆ ನೇರ ಮಾತುಕತೆಯಲ್ಲಿ ತೊಡಗುವಂತೆ ಮಾಡಿದ ಬಸವಣ್ಣನ ಮನಸ್ಸು ಅದೆಂಥಾ ಹೆಣ್ಣು ಹೃದಯಿಯಾಗಿದ್ದಿರಬೇಕು? ಇಷ್ಟ ಲಿಂಗ ಪೂಜೆ, ಆಸ್ತಿಯ ಮೇಲಿನ ಹಕ್ಕು ಎಲ್ಲವೂ ಸಮಸಮ ಎನ್ನುವಾಗ ಈ ಸಮುದಾಯದ ಹೆಣ್ಣುಮಕ್ಕಳಿಗೆ ನಿಂತ ನೆಲ ಗಟ್ಟಿಯಾಗಿದೆ ಎನ್ನಿಸುವುದು ಉತ್ಪ್ರೇಕ್ಷೆಯಲ್ಲ.

ಹುಟ್ಟು ಮತ್ತು ಸಾವು ಸೂತಕವಲ್ಲ, ಋತುಚಕ್ರ ಸೂತಕವಲ್ಲ; ಬದಲಿಗೆ ಸಂಭ್ರಮಿಸುವ ಸಂದರ್ಭಗಳು ಎಂದು ಈಗಲೂ ಮಧ್ಯ-ಉತ್ತರ ಕರ್ನಾಟಕದ ಲಿಂಗಾಯತರು ನಂಬಿ ಆಚರಿಸುತ್ತಾರೆ. ಸಾವಿಗೆ ಕೈವಲ್ಯದ ಮೆರವಣಿಗೆ, ಹೆಣ್ಣು-ಗಂಡುಗಳಿಗಿಬ್ಬರಿಗೂ ತಮ್ಮ ಮೃತ ಸಂಬಂಧಿಗಳ ಅಂತ್ಯಕ್ರಿಯೆ ನೆರವೇರಿಸಲು ಸಮಾನ ಅವಕಾಶ ಇದೆ. ಇದು ‘ಗಂಡು ಬೇಕು’ ಎನ್ನುವ ವ್ಯಾಮೋಹವನ್ನು ಮೀರಲು ಅವಕಾಶ ಮಾಡಿಕೊಟ್ಟಿದೆ.

ತಂದೆ ತೊರೆದುಹೋದ ನಂತರ ಕ್ಯಾನ್ಸರಿಗೆ ಬಲಿಯಾಗಿ ಸತ್ತ ತನ್ನ ತಾಯಿಯ ಕೊನೆಯ ಪೂಜೆಯನ್ನು ಮಾಡಲು ಏಳು ವರ್ಷದ ಹೆಣ್ಣುಕೂಸಿಗೆ ಬಲ ಕೊಟ್ಟದ್ದು ಬಸವಣ್ಣ. ‘ಎಣ್ಣುಡ್ಗಿ ಕೈಲಿ ಪೂಜೆ ಮಾಡುಸ್ತೀರ’ ಅಂತ ಹಿಂದೆಮುಂದೆ ನೋಡುತ್ತಾ ಪ್ರಶ್ನಿಸಿದ ‘ಸ್ವಾಮೇರಿಗೆ’ ಲಿಂಗಾಯತ ಧರ್ಮದ ವಿಧಿಗಳನ್ನು ವಿವರಿಸಿ ‘ಅಪಾ... ನಿನ್ ಕೈಯ್ಯಾಗ ಆದರೆ ನೀನು ಮಾಡು. ಆಗಲಿಲ್ಲ ಅಂತಂದ್ರ ಜಗ ಕಾಲಿ ಮಾಡು...ನಾವೇ ಪೂಜಿ ಮಾಡುಸ್ತವಿ... ಈ ಜಾತ್ಯಾಗ ನಿಮ್ಮಂತರಿಗೆ ಜಾಗಿಲ್ಲ’ ಅಂತ ಪಕ್ಕಾ ಹಳ್ಳಿಗಾಡಿನ ದೊಡ್ಡವರೊಬ್ಬರು ಆತ್ಮವಿಶ್ವಾಸದಿಂದ ಹೇಳಬಲ್ಲ ಛಾತಿ ಕೊಟ್ಟದ್ದೂ ಅವನೇ.

ಶರಣ ಚಳವಳಿಯಲ್ಲಿ ಅಕ್ಕನಂತಹ ಅಕ್ಕ ಭವ ಕಳಚಿ ಎದೆ ಸೆಟೆದು ನಿಲ್ಲುವಾಗ ಹೆಣ್ಣು ಮಕ್ಕಳನ್ನು ಹೀಗಳೆಯುವರುಂಟೇ ಮತ್ತೆ? ಬಸವಣ್ಣ ಅಕ್ಕನ ಕಾರಣೀಭೂತನಲ್ಲ... ಪ್ರಭೆಯನ್ನು ಮರೆಮಾಡದೆ, ತನ್ನ ವ್ಯಕ್ತಿತ್ವಕ್ಕೆ ಈಕೆ ಅಪಾಯವೆಂದು ಭಾವಿಸದೆ ಶರಣ ಚಳವಳಿಯನ್ನು ಸಮುದಾಯದ ಅಭಿವ್ಯಕ್ತಿಯಾಗಿ ಬೆಳೆಸಿದ ಮಹಾಸಮುದ್ರ.  ಹೆಣ್ಣು ಸಂಸಾರ ಎಲ್ಲವೂ ಮಾಯೆ ಎನ್ನುತ್ತಿದ್ದ ಕಾಲಕ್ಕೆ ಬಸವಣ್ಣ ‘ಪರಸ್ತ್ರೀ’ ಯ ಮೇಲಿನ ಭೋಗ ಲಾಲಸೆ ಮಾತ್ರ ಮಾಯೆ ಎಂದು ಎಲ್ಲ ವಾದಸರಣಿಗೆ ಹೊಸ ಆಯಾಮ ತಂದುಕೊಟ್ಟ.

ಹೆಣ್ಣು-ಹೊನ್ನು-ಮಣ್ಣನ್ನು ಮೀರಬೇಕಾದ ಆಕರ್ಷಣೆಗಳು ಎನ್ನುವ ದಾರ್ಶನಿಕರಿದ್ದಾಗ ಬಸವಣ್ಣನ ಈ ಸಾಲುಗಳು ಸಮಾಧಾನ ತರುವ ವಿಷಯ. ಹೆಣ್ಣು ನನ್ನನ್ನು ಹೊತ್ತವಳು, ಕೂಡಿದವಳು, ಮಾಯೆಯಲ್ಲ ಎನ್ನುವ ಸಾಲುಗಳು ಹೆಣ್ಣು ಮಣ್ಣು-ಹೊನ್ನಿನಂತೆ ಆಕರ್ಷಣೆ ಅಲ್ಲ, ಬದಲಿಗೆ ನಮ್ಮನ್ನು ಹಡೆದು-ಕೂಡಿದವಳು ಎಂಬ ದೃಷ್ಟಿ ಕೋನವೇ ಅನನ್ಯವಾದದ್ದು.

ಪ್ರತಿಕ್ರಿಯಿಸಿ (+)