ಇನ್ನೂ ಮುಗಿಯದ ಟಿಕೆಟ್ ಬೇಗುದಿ

7
ಮೂರು ಕ್ಷೇತ್ರಗಳಲ್ಲಿ ಭಿನ್ನಮತ ಶಮನಕ್ಕೆ ಪಕ್ಷದ ವರಿಷ್ಠರ ಕಸರತ್ತು

ಇನ್ನೂ ಮುಗಿಯದ ಟಿಕೆಟ್ ಬೇಗುದಿ

Published:
Updated:

ಮಂಗಳೂರು: ನಾಮಪತ್ರ ಸಲ್ಲಿಕೆ ಆರಂಭವಾಗಿ ಮೂರು ದಿನ ಕಳೆದರೂ ಮಂಗಳೂರು ನಗರದ ಮೂರು ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಲು ಬಿಜೆಪಿ ವರಿಷ್ಠರಿಗೆ ಸಾಧ್ಯವಾಗಿಲ್ಲ. ದಿನದಿಂದ ದಿನಕ್ಕೆ ಟಿಕೆಟ್‌ ಹಂಚಿಕೆ ಬೇಗುದಿ ಹೆಚ್ಚುತ್ತಿದ್ದು, ಟಿಕೆಟ್‌ ಆಕಾಂಕ್ಷಿಗಳನ್ನು ಸಮಾಧಾನಪಡಿಸುವುದರಲ್ಲಿ ಬಿಜೆಪಿ ನಾಯಕರು ಸುಸ್ತು ಹೊಡೆಯುತ್ತಿದ್ದಾರೆ.

ಮಂಗಳೂರು (ಉಳ್ಳಾಲ), ಮಂಗಳೂರು ನಗರ ದಕ್ಷಿಣ ಮತ್ತು ಮಂಗಳೂರು ಉತ್ತರ ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ನಾಲ್ಕು ದಿನಗಳಿಂದ ಬಿಜೆಪಿ ವರಿಷ್ಠರು ನಡೆಸುತ್ತಿರುವ ಕಸರತ್ತು ಇನ್ನೂ ಫಲ ನೀಡಿಲ್ಲ. ಮೂರೂ ಕ್ಷೇತ್ರಗಳಲ್ಲಿ ಟಿಕೆಟ್‌ ವಂಚಿತರು ಬಂಡಾಯ ಏಳುವ ಅಥವಾ ತಣ್ಣಗಿದ್ದುಕೊಂಡೇ ಪಕ್ಷದ ವಿರುದ್ಧ ಕೆಲಸ ಮಾಡುವ ಅಪಾಯದ ಮುನ್ಸೂಚನೆ ಅರಿತಿರುವ ನಾಯಕರು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮುಂದುವರಿಸಿದ್ದಾರೆ.

ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಜೆ.ಆರ್.ಲೋಬೊ ಅವರನ್ನು ಎದುರಿಸಲು ಹಿರಿಯ ಮುಖಂಡ ಎನ್‌.ಯೋಗೀಶ್‌ ಭಟ್‌ ಅವರನ್ನೇ ಕಣಕ್ಕಿಳಿಸಬೇಕೆಂಬ ಒತ್ತಡ ಪಕ್ಷದೊಳಗೆ ಹೆಚ್ಚುತ್ತಿದೆ. ಭಟ್‌ ಅವರು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ದೀರ್ಘಕಾಲದಿಂದ ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗಿದ್ದ ಯುವ ಮುಂದಾಳುಗಳು, ಈಗ ಇಕ್ಕಟ್ಟಿಗೆ ಸಿಲುಕಿದ್ದಾರೆ. ಯೋಗೀಶ್‌ ಭಟ್‌

ಹೆಸರು ಚಲಾವಣೆಗೆ ಬರುತ್ತಿದ್ದಂತೆಯೇ ಕೆಲವರು ಪಕ್ಷದ ಚಟುವಟಿಕೆಗಳಿಂದ ತಟಸ್ಥರಾಗುವಂತೆ ವರ್ತಿಸುತ್ತಿದ್ದಾರೆ. ಇದು ಪಕ್ಷದ ವರಿಷ್ಠರನ್ನು ಕಂಗೆಡಿಸಿದೆ ಎಂದು ಬಿಜೆಪಿ ಮುಖಂಡರೊಬ್ಬರು ಹೇಳಿದರು.

ಮಂಗಳೂರು ಉತ್ತರದಲ್ಲಿ ಜೆ.ಕೃಷ್ಣ ಪಾಲೇಮಾರ್‌ ಅವರಿಗೆ ಮತ್ತೊಮ್ಮೆ ಅವಕಾಶ ಮಾಡಿಕೊಡುವಂತೆ ಬಿಜೆಪಿ ಹಿಂದುಳಿದ ವರ್ಗಗಳ ಘಟಕದ ಮುಖಂಡ ಸತ್ಯಜಿತ್‌ ಸುರತ್ಕಲ್‌ ಅವರನ್ನು ಮನವೊಲಿಸುವ ಪ್ರಯತ್ನವೂ ಇನ್ನೂ ಫಲ ಕಂಡಿಲ್ಲ. ಈ ಬಾರಿ ತಮಗೆ ಟಿಕೆಟ್‌ ನೀಡಲೇಬೇಕು ಎಂದು ಪಟ್ಟು ಹಿಡಿದಿರುವ ಸತ್ಯಜಿತ್‌, ತಮ್ಮ ಬೆಂಬಲಿಗರ ಮೂಲಕ ಬಿಜೆಪಿ ಜಿಲ್ಲಾ ಘಟಕದ ಮೇಲೆ ಒತ್ತಡ ಹಾಕಿಸುತ್ತಿದ್ದಾರೆ. ಪಾಲೇಮಾರ್‌ ಅವರಿಗೆ ಟಿಕೆಟ್‌ ಘೋಷಿಸಿದರೆ ಸತ್ಯಜಿತ್‌ ಬಂಡಾಯ ಏಳಬಹುದು ಎಂಬ ಆತಂಕ ಪಕ್ಷದ ನಾಯಕರನ್ನು ಕಾಡುತ್ತಿದೆ.

ಮಂಗಳೂರು ಕ್ಷೇತ್ರದಲ್ಲೂ ಟಿಕೆಟ್‌ ಆಕಾಂಕ್ಷಿಗಳ ನಡುವೆ ಸಹಮತ ಮೂಡಿಸುವ ಕಸರತ್ತು ಅಂತ್ಯ ಕಂಡಿಲ್ಲ. ಚಂದ್ರಹಾಸ ಉಳ್ಳಾಲ್‌, ಸಂತೋಷ್ ಬೋಳಿಯಾರ್‌, ಸತೀಶ್‌ ಕುಂಪಲ ಜೊತೆಗೆ ಸತತ ಮೂರು ದಿನಗಳಿಂದ ಪಕ್ಷದ ನಾಯಕರು ಮಾತುಕತೆ ನಡೆಸಿದರೂ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ.

ಮೂರೂ ಕ್ಷೇತ್ರಗಳಲ್ಲಿ ನಡೆದಿರುವ ಈ ಬೆಳವಣಿಗೆಗಳು ಬಿಜೆಪಿ ನಾಯಕರ ಕೈ ಕಟ್ಟಿಹಾಕಿವೆ. ಜಿಲ್ಲೆಯ ಕೆಲವು ನಾಯಕರೊಂದಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಗುರುವಾರ ಚರ್ಚೆ ನಡೆಸಿದ್ದು, ತ್ವರಿತವಾಗಿ ಪಟ್ಟಿ ಅಂತಿಮಗೊಳಿಸಲು ವೇದಿಕೆ ಸಿದ್ಧಪಡಿಸುವಂತೆ ತಾಕೀತು ಮಾಡಿದ್ದಾರೆ ಎಂದು ಗೊತ್ತಾಗಿದೆ.

ಭಿನ್ನಮತ ಶಮನಕ್ಕೆ ಯತ್ನ: ಈಗ ಟಿಕೆಟ್‌ ಘೋಷಣೆಯಾಗಿರುವ ಐದು ಕ್ಷೇತ್ರಗಳ ಪೈಕಿ ಮೂರು ಕಡೆ ಭಿನ್ನಮತ ಹೊಗೆಯಾಡುತ್ತಿದೆ. ಪುತ್ತೂರಿನಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವ ಮಠಂದೂರು ಅವರಿಗೆ ಮತ್ತೆ ಅವಕಾಶ ನೀಡಿರುವುದಕ್ಕೆ ಅಶೋಕ್‌ಕುಮಾರ್‌ ರೈ ಕೋಡಿಂಬಾಡಿ ಮತ್ತು ಅರುಣ್‌ಕುಮಾರ್ ಪುತ್ತಿಲ ಬೆಂಬಲಿಗರು ಸಿಟ್ಟಾಗಿದ್ದಾರೆ.

ಬೆಳ್ತಂಗಡಿಯಲ್ಲಿ ಬಿ.ಟಿ.ರಂಜನ್‌ಗೌಡ ಮತ್ತು ಮೂಡುಬಿದಿರೆಯಲ್ಲಿ ಜಗದೀಶ್ ಅಧಿಕಾರಿ ಟಿಕೆಟ್‌ ಹಂಚಿಕೆ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.

ಈ ಎಲ್ಲರನ್ನೂ ಗುರುವಾರ ಪಕ್ಷದ ಜಿಲ್ಲಾ ಘಟಕದ ಕಚೇರಿಗೆ ಕರೆಸಿಕೊಂಡು ಮಾತುಕತೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಅವಕಾಶ ಒದಗಿಸುವ ಭರವಸೆಯನ್ನು ಪಕ್ಷದ ಮುಖಂಡರು ನೀಡಿದ್ದು, ಪಕ್ಷದ ಪರವಾಗಿ ಕೆಲಸ ಮಾಡುವುದಾಗಿ ಶುಕ್ರವಾರವೇ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸುವಂತೆ ಒತ್ತಡ ಹೇರಿದ್ದಾರೆ.

ತೆರೆಮರೆಯಲ್ಲಿ ಪೈಪೋಟಿ?

ಸಂಸದ ನಳಿನ್‌ಕುಮಾರ್ ಕಟೀಲ್‌ ಮತ್ತು ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಡಾ.ಪ್ರಭಾಕರ ಭಟ್‌ ತಮ್ಮ ಬೆಂಬಲಿಗರಿಗೆ ಟಿಕೆಟ್‌ ಕೊಡಿಸಲು ತೆರೆಮರೆಯಲ್ಲಿ ಪೈಪೋಟಿ ನಡೆಸುತ್ತಿದ್ದಾರೆ ಎಂಬ ಸುದ್ದಿ ಬಿಜೆಪಿ ಕಾರ್ಯಕರ್ತರ ವಲಯದಲ್ಲಿ ದಟ್ಟವಾಗಿ ಹಬ್ಬಿದೆ. ಬಿಜೆಪಿ ರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್‌.ಸಂತೋಷ್‌ ಮೂಲಕ ನಳಿನ್‌ಕುಮಾರ್‌ ತಮ್ಮ ಬೆಂಬಲಿಗರಿಗೆ ಟಿಕೆಟ್‌ ಪಡೆಯಲು ಯತ್ನಿಸುತ್ತಿದ್ದಾರೆ. ಪ್ರಭಾಕರ ಭಟ್‌ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ಮೂಲಕ ಪ್ರಭಾವ ಬೀರುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry