ಅಕ್ರಮ ಹಣ ವರ್ಗಾವಣೆ: ಪತ್ರಕರ್ತ ಉಪೇಂದ್ರ ರೈ ಸಿಬಿಐ ವಶಕ್ಕೆ

7

ಅಕ್ರಮ ಹಣ ವರ್ಗಾವಣೆ: ಪತ್ರಕರ್ತ ಉಪೇಂದ್ರ ರೈ ಸಿಬಿಐ ವಶಕ್ಕೆ

Published:
Updated:

ನವದೆಹಲಿ: ಅಕ್ರಮ ಹಣಕಾಸು ವರ್ಗಾವಣೆ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವ ಪತ್ರಕರ್ತ ಉಪೇಂದ್ರ ರೈ ಅವರನ್ನು ವಿಚಾರಣೆಗಾಗಿ ನ್ಯಾಯಾಲಯ ಮೂರು ದಿನಗಳ ಕಾಲ ಸಿಬಿಐ ವಶಕ್ಕೆ ನೀಡಿದೆ.

ಇದಕ್ಕೂ ಮುನ್ನ ಸುಪ್ರೀಂ ಕೋರ್ಟ್‌, ‘ರೈ ಪ್ರಕರಣದಲ್ಲಿ ಮಧ್ಯ ಪ್ರವೇಶಿಸುವುದಿಲ್ಲ’ ಎಂದು ಹೇಳಿತ್ತು. ‘ಅವರು ಸಲ್ಲಿಸಿರುವ ಅರ್ಜಿಯ ಮೂಲಕವೇ ರಕ್ಷಣೆ ಪಡೆದುಕೊಳ್ಳಲಿ’ ಎಂದು ನ್ಯಾಯಮೂರ್ತಿಗಳಾದ ಎ.ಕೆ. ಸಿಕ್ರಿ ಮತ್ತು ಅಶೋಕ್ ಭೂಷಣ್ ಅವರಿದ್ದ ಪೀಠ ಹೇಳಿದೆ.

ಅನುಮಾನಾಸ್ಪದ ಹಣ ವರ್ಗಾವಣೆ ಮತ್ತು ಸುಳ್ಳು ಮಾಹಿತಿ ನೀಡಿ ವಿಮಾನ ನಿಲ್ದಾಣ ಪ್ರವೇಶದ ಪಾಸ್ ಪಡೆದಿರುವ ಆರೋಪದಲ್ಲಿ ರೈ ಅವರನ್ನು ಸಿಬಿಐ ಪೊಲೀಸರು ಗುರುವಾರ ಬಂಧಿಸಿದ್ದಾರೆ.

‘ರೈ ಹಾಗೂ ಮತ್ತಿಬ್ಬರನ್ನು ವಿಚಾರಣೆ ನಡೆಸಿ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಏರ್‌ ಒನ್‌ ಏವಿಯೇಷನ್ ಪ್ರೈವೇಟ್ ಲಿಮಿಟೆಡ್‌ನ ಮುಖ್ಯ ಭದ್ರತಾ ಅಧಿಕಾರಿ ಪ್ರಸೂನ್ ರಾಯ್ ವಿರುದ್ಧವೂ ಮೊಕದ್ದಮೆ ದಾಖಲಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿದಂತೆ ಲಖನೌ, ನೊಯಿಡಾ, ದೆಹಲಿ ಮತ್ತು ಮುಂಬೈನ ಎಂಟು ಕಡೆ ಶೋಧ ನಡೆಸಲಾಗುತ್ತಿದೆ’ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.

ಉಪೇಂದ್ರ ರೈ ಅವರ ಬ್ಯಾಂಕ್‌ ಖಾತೆಗೆ 2017ರಲ್ಲಿ ₹79 ಕೋಟಿ ಪಾವತಿಯಾಗಿದ್ದು, ಇದೇ ಅವಧಿಯಲ್ಲಿ ₹78.51 ಕೋಟಿ ಬೇರೆ ಖಾತೆಗೆ ವರ್ಗಾವಣೆಯಾಗಿದೆ ಎಂದು ಎಫ್‌ಐಆರ್‌ನಲ್ಲಿ ಸಿಬಿಐ ಉಲ್ಲೇಖಿಸಿದೆ.

ಆರೋಪ ನಿರಾಕರಿಸಿರುವ ರೈ, ‘2ಜಿ ಹಗರಣದಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಭಾಗಿಯಾಗಿರುವ ಬಗ್ಗೆ ಲೇಖನ ಬರೆದ ಕಾರಣಕ್ಕೆ ನನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ’ ಎಂದು ಆರೋಪಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry