ಮತದಾನ ಜಾಗೃತಿಗೆ ಬೈಕ್ ಸವಾರಿ

7
ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ ನಗರ ಪ್ರದಕ್ಷಿಣೆ

ಮತದಾನ ಜಾಗೃತಿಗೆ ಬೈಕ್ ಸವಾರಿ

Published:
Updated:

ಯಾದಗಿರಿ: ಜಿಲ್ಲಾ ಚುನಾವಣಾಧಿಕಾರಿ ಜೆ.ಮಂಜುನಾಥ್ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್ ಅವರು ನಗರದಲ್ಲಿ ಶುಕ್ರವಾರ ಬೈಕ್ ಸವಾರಿ ನಡೆಸುವ ಮೂಲಕ ನಗರದಲ್ಲಿ ಮತದಾನ ಜಾಗೃತಿ ಮೂಡಿಸಿದರು.

ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಸ್ವೀಪ್ ಸಮಿತಿ ಹಾಗೂ ಜಿಲ್ಲಾ ಮೆಕ್ಯಾನಿಕ್ ಸೇವಾ ಸಂಘ ಆಶ್ರಯದಲ್ಲಿ ಕರ್ನಾಟಕ ಹಮ್ಮಿಕೊಂಡಿದ್ದ ಬೈಕ್ ಜಾಥಾಕ್ಕೆ ಜಿಲ್ಲಾಡಳಿತ ಭವನದ ಆವರಣದಲ್ಲಿ ಹಸಿರು ನಿಶಾನೆ ತೋರಿಸಲಾಯಿತು. ಜಾಥಾವು ಸುಭಾಷಚಂದ್ರ ಬೋಸ್ ವೃತ್ತ, ಲಾಲ್ ಬಹದ್ದೂರ್ ಶಾಸ್ತ್ರೀ ವೃತ್ತ, ತಹಶೀಲ್ದಾರ್ ಕಚೇರಿ ಮತ್ತು ಅಂಬೇಡ್ಕರ್ ವೃತ್ತ ಮಾರ್ಗವಾಗಿ ಜಿಲ್ಲಾಡಳಿತ ಭವನಕ್ಕೆ ಮರಳಿತು.

ಜಿಲ್ಲಾ ಚುನಾವಣಾಧಿಕಾರಿ ಜೆ.ಮಂಜುನಾಥ್ ಮಾತನಾಡಿ,‘ರಾಜ್ಯ ವಿಧಾನಸಭೆ ಚುನಾವಣೆಗೆ ಮೇ 12ರಂದು ಮತದಾನ ನಡೆಯಲಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಮಾಡುವುದು ಮಹತ್ವದ ಕೆಲಸ. ಈ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬರೂ ತಪ್ಪದೇ ಭಾಗವಹಿಸಬೇಕು’ ಎಂದರು.

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೃಢ ವಿಶ್ವಾಸವುಳ್ಳ ಭಾರತದ ಪೌರರಾದ ನಾವು, ನಮ್ಮ ದೇಶದ ಪ್ರಜಾಸತ್ತಾತ್ಮಕ ಸಂಪ್ರದಾಯಗಳು ಮತ್ತು ಮುಕ್ತ, ನ್ಯಾಯಸಮ್ಮತ, ಶಾಂತಿಯುತ ಚುನಾವಣೆಗಳ ಘನತೆ ಎತ್ತಿ ಹಿಡಿಯುತ್ತೇವೆ. ಪ್ರತಿಯೊಂದು ಚುನಾವಣೆಯಲ್ಲಿ ನಿರ್ಭೀತರಾಗಿ ಮತ್ತು ಧರ್ಮ, ಜನಾಂಗ, ಜಾತಿ, ಮತ, ಭಾಷೆ ಅಥವಾ ಯಾವುದೇ ಪ್ರೇರೇಪಣೆಗಳ ದಾಕ್ಷಿಣ್ಯಗಳಿಂದ ಪ್ರಭಾವಿತರಾಗದೆ ಮತ ಚಲಾಯಿಸುತ್ತೇವೆಯೆಂದು ಈ ಮೂಲಕ ಪ್ರತಿಜ್ಞೆ ಸ್ವೀಕರಿಸುತ್ತೇವೆ’ ಎಂದು ಪ್ರತಿಜ್ಞಾವಿಧಿ ಬೋಧಿಸಿದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಡಾ.ಬಿ.ಎಸ್.ಮಂಜು ನಾಥ್ ಸ್ವಾಮಿ, ಜಿಲ್ಲಾ ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಸಿದ್ದೇಶ್ವರಪ್ಪ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಬ್ದುಲ್ ರಹಮಾನ್, ಬಾಲ ಕಾರ್ಮಿಕ ಇಲಾಖೆಯ ಯೋಜನಾ ನಿರ್ದೇಶಕ ರಘುವೀರ್‌ಸಿಂಗ್ ಠಾಕೂರ್, ಕಾರ್ಮಿಕ ನಿರೀಕ್ಷಕರಾದ ಶಿವಶಂಕರ ಬಿ.ತಳವಾರ, ಕಾರ್ಯನಿರ್ವಾಹಕ ಶಿವರಾಜ್ ನಾಯಕ, ಜಿಲ್ಲಾ ಮೆಕ್ಯಾನಿಕ್ ಸೇವಾ ಸಂಘದ ಅಧ್ಯಕ್ಷ ಪ್ರಕಾಶ ಚವ್ಹಾಣ, ಕಾರ್ಯದರ್ಶಿ ಇಮ್ರಾನ್ ಡೈಮಂಡ್, ಖಜಾಂಚಿ ಮನೋಹರ್, ಅಹಮದ್ ಡೈಮಂಡ್, ಎಸ್.ಕೆ.ಮಹಿಬೂಬ್, ರೋಹಿತ್ ರಸಾಳಕರ್ ಜಾಥಾ ಕಾರ್ಯಕ್ರಮದಲ್ಲಿ ಇದ್ದರು.

ಸುಡು ಬಿಸಿಲಲ್ಲೇ ಸವಾರಿ

ಜಿಲ್ಲಾಧಿಕಾರಿ ಜೆ.ಮಂಜುನಾಥ್ 42 ಡಿಗ್ರಿ ಸುಡು ಬಿಸಿಲಿನಲ್ಲಿ ಬೈಕ್‌ ಏರಿ ನಗರದಲ್ಲಿ ಸವಾರಿ ಮಾಡುವ ಮೂಲಕ ಮತದಾನ ಜಾಗೃತಿ ಮೂಡಿಸಿದ್ದು, ಜನರ ಮೆಚ್ಚುಗೆಗೆ ಪಾತ್ರರಾದರು.

‘ಹಿಂದಿನ ಎಲ್ಲಾ ಜಿಲ್ಲಾಧಿಕಾರಿಗಳು ಮತದಾನ ಜಾಗೃತಿಗೆ ಸಾಂಕೇತಿಕವಾಗಿ ಚಾಲನೆ ನೀಡುತ್ತಿದ್ದರು. ಪ್ರಸಕ್ತ ಚುನಾವಣೆ ಪೂರ್ವದಲ್ಲಿ ಜಿಲ್ಲಾಧಿಕಾರಿ ಮತದಾನ ಜಾಗೃತಿಯನ್ನು ಪರಿಣಾಮಕಾರಿಯಾಗಿ ಮೂಡಿಸಲು ಬೆವರು ಸುರಿಸುತ್ತಿದ್ದಾರೆ’ ಎಂದು ನಗರದ ನಾಗರಿಕರಾದ ಕೊಟ್ರೇಶ್, ಮಂಜುನಾಥ್, ರಾಜಪ್ಪ ಮೆಚ್ಚು ವ್ಯಕ್ತಪಡಿಸಿದರು.

**

ಮತದಾನದಿಂದ ಅರ್ಹ ಮತದಾರರು ಹೊರಗುಳಿಯಬಾರದು. ಸ್ವೀಪ್ ಸಮಿತಿ ಅಧಿಕಾರಿಗಳು ಜನರಲ್ಲಿ ಮತದಾನ ಕುರಿತು ಅರಿವು ಮೂಡಿಸಬೇಕು

– ಜೆ.ಮಂಜುನಾಥ್, ಜಿಲ್ಲಾ ಚುನಾವಣಾಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry