ಶುಕ್ರವಾರ, ಮಾರ್ಚ್ 5, 2021
27 °C

ಹೋಳಾದ ಎಂ.ಇ.ಎಸ್: ಯಾರಿಗೆ ಸಿಗಲಿದೆ ಇದರ ಲಾಭ?

ಉಮಾಪತಿ. ಡಿ. Updated:

ಅಕ್ಷರ ಗಾತ್ರ : | |

ಹೋಳಾದ ಎಂ.ಇ.ಎಸ್: ಯಾರಿಗೆ ಸಿಗಲಿದೆ ಇದರ ಲಾಭ?

ಬೆಳಗಾವಿಯ ಹದಿನೆಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಐದರಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯ (ಎಂ.ಇ.ಎಸ್) ಸದಸ್ಯರೇ ಗೆದ್ದು ಬರುತ್ತಿದ್ದ ಕಾಲವೊಂದಿತ್ತು.

ತೀವ್ರ ಒಳಜಗಳದಲ್ಲಿ ಮುಳುಗಿರುವ ಸಮಿತಿಯು ಎರಡು ಬಣಗಳಾಗಿ ಒಡೆದಿದ್ದು, ಈ ಚುನಾವಣೆಯಲ್ಲಿ ಅತೀವ ಪ್ರಯಾಸದಿಂದ ಒಂದು ಸ್ಥಾನ ಗೆದ್ದರೆ ಅದೇ ದೊಡ್ಡದು ಎಂಬ ಪರಿಸ್ಥಿತಿ ಏರ್ಪಟ್ಟಿದೆ. ಈ ಸ್ಥಿತಿಯ ಹೆಚ್ಚಿನ ಲಾಭ ಬಿಜೆಪಿಗೆ ದಕ್ಕುವ ಸಾಧ್ಯತೆ ಇದೆ.

ಬೆಳಗಾವಿ, ನಿಪ್ಪಾಣಿ, ಖಾನಾಪುರ, ಬೀದರ್, ಭಾಲ್ಕಿ ಹಾಗೂ 855 ಗ್ರಾಮಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂಬುದು ಎಂ.ಇ.ಎಸ್.ನ ಏಕೈಕ ಕಾರ್ಯಸೂಚಿ. ಬೇರೆ ಯಾವ ಚುನಾವಣಾ ಭರವಸೆಗಳನ್ನೂ ಸಮಿತಿ ನೀಡುವುದಿಲ್ಲ.

ಎಂ.ಇ.ಎಸ್. ಶಾಸಕರು ನಯಾಪೈಸೆ ಖರ್ಚಿಲ್ಲದೆ ಆರಿಸಿ ಬರುತ್ತಿದ್ದರು. ಬೈಸಿಕಲ್, ಸ್ಕೂಟರುಗಳಲ್ಲಿ ಅಡ್ಡಾಡುತ್ತಿದ್ದ ಕಾಲವೊಂದಿತ್ತು. ಶಾಸಕ ಸ್ಥಾನದಿಂದ ಹಣ ಮತ್ತು ಸುಖದ ನಿರೀಕ್ಷೆ ಆ ಕಾಲದಲ್ಲಿ ಇರಲಿಲ್ಲ. ಇಲ್ಲಿನ ಮರಾಠಿ ಮತದಾರರ ಭಾಷೆ ಮತ್ತು ಮಹಾರಾಷ್ಟ್ರ ಬದ್ಧತೆಯೂ ಅಖಂಡವಾಗಿತ್ತು.

ಸಾಕ್ಷಾತ್ ಲಕ್ಷ್ಮಿಯೇ ಮನೆ ಬಾಗಿಲಿಗೆ ಬಂದು ನಿಂತರೂ ಆಕೆಯನ್ನು ಹೊರಗೆ ನಿಲ್ಲಿಸಿ- ‘ನಿಲ್ಲು ಲಕ್ಷ್ಮಿದೇವಿ, ಸಿಂಹಕ್ಕೆ (ಚುನಾವಣಾ ಚಿಹ್ನೆ) ಮತ ಕೊಟ್ಟು ಬಂದು ನಿನ್ನನ್ನು ಒಳಗೆ ಕರೆದುಕೊಳ್ಳುತ್ತೇನೆ’ ಎನ್ನಲಾಗುತ್ತಿತ್ತು ಎಂಬ ಕತೆ ಇಲ್ಲಿ ಜನಜನಿತ.

ಇದೀಗ ತಮ್ಮದೇ ಅಧಿಕೃತ ಎಂ.ಇ.ಎಸ್. ಎಂಬ ಜಿದ್ದಿಗೆ ಬಿದ್ದಿರುವ ಎರಡು ಬಣಗಳು ಚುನಾವಣಾ ಕಣದಲ್ಲಿ ಮುಖಾಮುಖಿಯಾಗಿವೆ. ಎರಡು ಬಣಕ್ಕೂ ಸೇರದ ಸಂಭಾಜಿ ಪಾಟೀಲ್ ಕೂಡ ತಮ್ಮ ಮೂಲ ಕ್ಷೇತ್ರವಾದ ಬೆಳಗಾವಿ ದಕ್ಷಿಣ ತೊರೆದು, ಉತ್ತರದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಅವರು ಇನ್ನೂ ಪ್ರಚಾರ ಆರಂಭಿಸಿಲ್ಲ.

ಮಧ್ಯವರ್ತಿ ಮಹಾರಾಷ್ಟ್ರ ಏಕೀಕರಣ ಸಮಿತಿ, ತಾನೇ ಅಧಿಕೃತ ಎಂದು ಸಾರಿ ಬೆಳಗಾವಿ ದಕ್ಷಿಣ, ಬೆಳಗಾವಿ ಗ್ರಾಮಾಂತರ, ಖಾನಾಪುರ ಕ್ಷೇತ್ರಗಳಿಂದ ಪ್ರಕಾಶ್ ಮರಗಾಳೆ, ಮನೋಹರ ಕಿಣೇಕರ, ಅರವಿಂದ ಪಾಟೀಲ ಅವರನ್ನು ಕಣಕ್ಕಿಳಿಸಿದೆ.

ಕಿರಣ್ ಠಾಕೂರ್ ನೇತೃತ್ವದ ಮತ್ತೊಂದು ಬಣ ಬಾಳಾಸಾಹೇಬ ಕಾಕತ್ಕರ್, ಕಿರಣ್ ಸಾಯನಾಕ, ಮೋಹನ್ ಬೆಳಗುಂದಕರ್ ಹಾಗೂ ವಿಲಾಸ ಬೆಳಗಾಂವಕರ್ ಅವರನ್ನು ಹುರಿಯಾಳುಗಳು ಎಂದು ಸಾರಿದೆ.

ಈ ಬಣಗಳು ಮರಾಠಿ ಮತ ವಿಭಜನೆಯಲ್ಲಿ ತೊಡಗಿವೆ ಎಂದು ಮರಾಠಿ ಮತದಾರರು ಆಕ್ರೋಶ ಪ್ರಕಟಿಸಿದ್ದಾರೆ. ಒಂದು ಬಣದ ಅಭ್ಯರ್ಥಿಗಳನ್ನು ಮತದಾರರು ತಮ್ಮ ಗಲ್ಲಿ ಪ್ರವೇಶಿಸದಂತೆ ತಡೆದು ಘೇರಾವ್ ಮಾಡುವ ಪ್ರಕರಣಗಳು ನಡೆಯುತ್ತಿವೆ. ನೂರಕ್ಕೆ ನೂರು ಮರಾಠಿ ಜನರಿರುವ ಚವಾಟಗಲ್ಲಿಯು ನಿನ್ನೆ ಅಂತಹುದ್ದೊಂದು ಪ್ರಸಂಗಕ್ಕೆ ಸಾಕ್ಷಿಯಾಯಿತು.

ಮಹಾರಾಷ್ಟ್ರಕ್ಕೆ ಸೇರಿದ ಪ್ರದೇಶವೆಂದು ನಾಮಫಲಕ ಹಾಕಿ ಭಾರೀ ವಿವಾದ ಮತ್ತು ಹಿಂಸೆಗೆ ಕಾರಣವಾಗಿದ್ದ ಬೆಳಗಾವಿ ದಕ್ಷಿಣ ಕ್ಷೇತ್ರದ ಎಳ್ಳೂರಿನಲ್ಲಿ ಮರಾಠಿ ಮತದಾರರು ಠಾಕೂರ್ ಬಣದ ಅಭ್ಯರ್ಥಿ ಕಿರಣ್ ಸಾಯನಾಕ ಅವರನ್ನು ತರಾಟೆಗೆ ತೆಗೆದುಕೊಂಡರು. ಸಾಯನಾಕ ಪೊಲೀಸ್ ರಕ್ಷಣೆ ಪಡೆದು ಪ್ರಚಾರ ಮುಂದುವರಿಸಬೇಕಾಯಿತು. ಕೆಲ ದಿನಗಳ ಹಿಂದೆ ಬೆಳಗಾವಿ ಗ್ರಾಮಾಂತರ ಕ್ಷೇತ್ರದಲ್ಲಿ ಇದೇ ಬಣದ ಮೋಹನ ಬೆಳಗಾಂವಕರ ಕೂಡ ಜನರ ಸಿಟ್ಟಿಗೆ ಗುರಿಯಾದರು.

ಮಧ್ಯವರ್ತಿ ಮಹಾರಾಷ್ಟ್ರ ಏಕೀಕರಣ ಸಮಿತಿಗೆ ಮಹಾರಾಷ್ಟ್ರದ ಹಿರಿಯ ನಾಯಕ ಶರದ್ ಪವಾರ್ ಬೆಂಬಲ ಉಂಟು. ಮಧ್ಯವರ್ತಿ ಬಣವನ್ನು ಬರ್ಖಾಸ್ತು ಮಾಡಿರುವುದಾಗಿ ಠಾಕೂರ್ ಬಣ ಮಾಡಿದ ಘೋಷಣೆಯನ್ನು ಆ ಬಣದ ಮುಂದಾಳುಗಳಾದ ದೀಪಕ್ ದಳವಿ, ಮಾಲೋಜಿ ಅಷ್ಟೇಕರ್, ರಾಮ ಆಪ್ಟೆ ಪ್ರಶ್ನಿಸಿದ್ದಾರೆ.

‘ಹಿಂದೂ-ಮುಸ್ಲಿಂ ಗಲಭೆಯಾದಾಗ ನಮ್ಮನ್ನು ವಿಚಾರಿಸಿಕೊಳ್ಳಲು ಬಾರದ, ನಮ್ಮ ಹುಡುಗರು ಜೈಲು ಸೇರಿದಾಗ ಅವರಿಗೆ ಜಾಮೀನು ಕೊಡಿಸಲು ತಲೆ ಕೆಡಿಸಿಕೊಳ್ಳದ ನೀವು ಈಗ ಯಾಕೆ ಬಂದಿದ್ದೀರಿ’ ಎಂಬ ಪ್ರಶ್ನೆ, ವಾರದ ಹಿಂದೆ ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಪ್ರಚಾರಕ್ಕೆ ಹೋಗಿದ್ದ ಠಾಕೂರ್ ಬಣದ ಕಾಕತ್ಕರ್ ಅವರಿಗೆ ಎದುರಾಗಿತ್ತು.

ಮರಾಠಾ ಮತಗಳನ್ನು ಒಡೆಯುವ ಕೆಲಸ ಮಾಡುತ್ತಿದೆಯೆಂದು ಆಪಾದಿಸಿ ಮರಾಠಿ ಪತ್ರಿಕೆಯೊಂದರ ಪ್ರತಿಗಳನ್ನು ಸುಟ್ಟ ವಿಡಿಯೊ ವೈರಲ್ ಆಗಿದೆ.

ಗಡಿ ಸಮಸ್ಯೆ ಬಗೆಹರಿದು ಮಹಾರಾಷ್ಟ್ರಕ್ಕೆ ಬೆಳಗಾವಿ ಬರುವುದು ಸಾಧ್ಯವೇ ಇಲ್ಲ ಎಂದು ಖಾಸಗಿ ಸಮಾಲೋಚನೆಯೊಂದರಲ್ಲಿ ಶರದ್ ಪವಾರ್  ಅವರು ಎಂ.ಇ.ಎಸ್. ನಾಯಕರಿಗೆ ಹೇಳಿದ್ದುಂಟು. ‘ಬೆಳಗಾವಿ ನಮಗೆ ಬರುವುದಿಲ್ಲ, ಆದರೆ ಬೆಳಗಾವಿಗೆ ಐದು ಕಿ.ಮೀ. ದೂರದ ಬೆಳಗುಂದಿ ಮಹಾರಾಷ್ಟ್ರಕ್ಕೆ ಸೇರುತ್ತದೆ. ಬೆಳಗುಂದಿಗೆ ನವ ಬೆಳಗಾಂವ್ ಎಂದು ಹೆಸರಿಟ್ಟು, ನೂರಾರು ಕೋಟಿ ರೂಪಾಯಿ ವೆಚ್ಚ ಮಾಡಿ, ಬೆಳಗಾವಿಗಿಂತ ಸುಂದರವಾಗಿ ಕಟ್ಟೋಣ. ಬೆಳಗಾವಿಯ ಜನ ನವ ಬೆಳಗಾಂವ್ ನೋಡಲು ಸಾಲುಗಟ್ಟಿ ಬರುವಂತೆ ಮಾಡೋಣ’ ಎಂಬ ಪವಾರ್ ಸಲಹೆಯನ್ನು ಎಂ.ಇ.ಎಸ್. ಒಪ್ಪದೇ ಹೋದ ಪ್ರಸಂಗವನ್ನು ಹಿರಿಯ ಪತ್ರಕರ್ತರೊಬ್ಬರು ನೆನೆಯುತ್ತಾರೆ.

‘ಸಾವಿರ ವರ್ಷ ಚಳವಳಿ ಮಾಡಿದರೂ ಆಗದ ಮಾತಿದು. ಇದೊಂದು ಅವಕಾಶವಿದೆ. ಮಾಡಿ ಮುಗಿಸೋಣ. ಈ ಸಲಹೆ ಜಾರಿಯಾದರೆ ಕೆಲವು ಜನರ ದಂಧೆಯೇ ಬಂದ್ ಆಗಲಿದೆ. ಅದಕ್ಕೇ ನೀವು ಈ ಪರಿ ವಿರೋಧ ಮಾಡುತ್ತಿದ್ದೀರಿ’ ಎಂದು ಸಿಟ್ಟಿಗೆದ್ದ ಪವಾರ್ ಬಹುಕಾಲ ಬೆಳಗಾವಿಯತ್ತ ತಲೆ ಹಾಕಲಿಲ್ಲ.

ಇತ್ತೀಚೆಗೆ ಬೆಳಗಾವಿಗೆ ಬಂದಿದ್ದ ಅವರು ಎಂ.ಇ.ಎಸ್. ಅಭ್ಯರ್ಥಿಗಳಿರುವಲ್ಲಿ ತಮ್ಮ ಎನ್.ಸಿ.ಪಿ. ಅಭ್ಯರ್ಥಿಗಳನ್ನು ಹೂಡುವುದಿಲ್ಲವೆಂದು ಬೆಂಬಲ ಸಾರಿದರು. ಸುಪ್ರೀಂ ಕೋರ್ಟ್‌ನಲ್ಲಿ ಮಹಾರಾಷ್ಟ್ರ ಹೂಡಿರುವ ಗಡಿ ತಕರಾರು ಕೇಸಿಗೆ ಹೆಚ್ಚಿನ ಬಲ ಬರಬೇಕಿದ್ದರೆ ಎಂ.ಇ.ಎಸ್. ಹೆಚ್ಚು ಸ್ಥಾನಗಳಲ್ಲಿ ಗೆದ್ದು ಬರಬೇಕು ಎಂದೂ ಸಾರಿದರು.

ಹೊಸ ಮರಾಠಿ ತಲೆಮಾರು ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಹೋಗಿ ತಮ್ಮ ತಮ್ಮ ನಡುವೆ ಹಿಂದಿಯಲ್ಲಿ ಮಾತಾಡಿಕೊಳ್ಳುತ್ತದೆ. ಹಿಂದುತ್ವ ವಿಚಾರಕ್ಕೆ ಮಾರು ಹೋಗಿದೆ. ಮೋದಿಯವರ ಅಭಿಮಾನ ಬೆಳೆಸಿಕೊಂಡಿದೆ.

ಭಾಷಾ ವಿವಾದದ ಕಾರಣ ಬೆಳಗಾವಿ ಬಹುಕಾಲ ಅಭಿವೃದ್ಧಿಯಿಂದ ವಂಚಿತವಾಯಿತು. ಸದಾ ಕನ್ನಡ-ಮರಾಠಿ ಗಲಭೆ ನಡೆಯುವ ಬೆಳಗಾವಿ ಪ್ರಕ್ಷುಬ್ಧ ಪ್ರದೇಶ ಎಂಬ ಕಾರಣ ನೀಡಿ ಮಾಹಿತಿ ತಂತ್ರಜ್ಞಾನ ಕಂಪನಿಗಳು ಇಲ್ಲಿಗೆ ಬರಲು ಒಪ್ಪಲಿಲ್ಲ. ಅತ್ತ ಕೊಲ್ಲಾಪುರ ಇತ್ತ ಹುಬ್ಬಳ್ಳಿ ಅಭಿವೃದ್ಧಿಯಾಗಿರುವ ಪರಿಯನ್ನು ನೋಡಿದರೆ ಬೆಳಗಾವಿಯ ದುಃಸ್ಥಿತಿ ಮನದಟ್ಟಾಗುತ್ತದೆ.

305 ಕನ್ನಡ ಅಭ್ಯರ್ಥಿಗಳು!

ಬೆಳಗಾವಿಯ ಕನ್ನಡ ಸಂಘಟನೆಗಳ ಚುನಾವಣಾ ನಡೆಯೊಂದು 1985ರ ವಿಧಾನಸಭಾ ಚುನಾವಣೆಯಲ್ಲಿ ದೊಡ್ಡ ಸುದ್ದಿ ಮಾಡಿತ್ತು. ಎಂ.ಇ.ಎಸ್. ಮತದಾರರನ್ನು ಗೊಂದಲಕ್ಕೆ ಕೆಡಹುವ ಮತ್ತು ಕಳ್ಳ ಮತದಾನವನ್ನು ಪ್ರತಿಭಟಿಸುವ ಉದ್ದೇಶದಿಂದ 305 ಮಂದಿ ಕನ್ನಡಿಗರು ಪಕ್ಷೇತರ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದರು. ಮತಪತ್ರವು ವೃತ್ತಪತ್ರಿಕೆಯ ಹಾಳೆಯಷ್ಟು ದೊಡ್ಡದಿತ್ತು. ಆದರೆ ಎಂ.ಇ.ಎಸ್. ಮನೆ ಮನೆಗೆ ತೆರಳಿ ಪ್ರಚಾರ ನಡೆಸಿ ತನ್ನ ಚುನಾವಣಾ ಚಿಹ್ನೆ ‘ಸಿಂಹ’ಕ್ಕೇ ಮತ ಚಲಾಯಿಸುವಂತೆ ಮರಾಠಿ ಮತದಾರರಲ್ಲಿ ಅರಿವು ಮೂಡಿಸಿತು.

ಎಂ.ಇ.ಎಸ್. ಅಭ್ಯರ್ಥಿ ರಾಜಭಾವು ಮಾನೆ ಗೆದ್ದರು. ಚುನಾವಣೆ ರದ್ದುಪಡಿಸುವ ಉದ್ದೇಶದಿಂದ, ತೀವ್ರ ಅಸ್ವಸ್ಥ ಅಭ್ಯರ್ಥಿಯಿಂದ ನಾಮಪತ್ರ ಹಾಕಿಸಿದ್ದೂ ಉಂಟು. ಆತ ನಿಧನ ಹೊಂದಿದರೆ ಚುನಾವಣೆ ರದ್ದಾಗುತ್ತದೆ ಎಂಬ ನಿರೀಕ್ಷೆ ಒಂದು ಭಾಷೆಯ ಬೆಂಬಲಿಗರದ್ದಾಗಿತ್ತು. ಆಸ್ಪತ್ರೆ ಸೇರಿದ್ದ ಆ ಅಭ್ಯರ್ಥಿಗೆ ಮತ್ತೊಂದು ಭಾಷೆಯ ಬೆಂಬಲಿಗರು ಹಾಲು ಹಣ್ಣು ನೀಡಿ ಉಪಚರಿಸಿದರು. ಕಡೆಗೆ ಆತ ನಿಧನ ಹೊಂದಲಿಲ್ಲ. ನಂತರ ಗೆದ್ದ ಪಕ್ಷದ ಶಾಸಕ ಬಂದು, ನಿಧನರಾಗದೇ ಉಳಿದಿದ್ದ ಅಭ್ಯರ್ಥಿಯನ್ನು ಸನ್ಮಾನಿಸಿದ್ದುಂಟು!

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.