ಆಡಳಿತ ವಿರೋಧಿ ಅಲೆ ನಡುವೆ ಗೆಲುವಿಗೆ ಪೈಪೋಟಿ

7
ಅರಕಲಗೂಡು ಕ್ಷೇತ್ರ: ಚೊಚ್ಚಲ ಜಯ ಕಾಣುವ ನಿರೀಕ್ಷೆಯಲ್ಲಿ ಯೋಗಾ ರಮೇಶ್‌

ಆಡಳಿತ ವಿರೋಧಿ ಅಲೆ ನಡುವೆ ಗೆಲುವಿಗೆ ಪೈಪೋಟಿ

Published:
Updated:

ಹಾಸನ: ಮಲೆನಾಡು, ಅರೆಮಲೆನಾಡು ಪ್ರದೇಶ ಹೊಂದಿರುವ ಅರಕಲಗೂಡು ವಿಧಾನಸಭಾ ಕ್ಷೇತ್ರದಲ್ಲಿ ಮೇಲ್ನೋಟಕ್ಕೆ ತ್ರಿಕೋನ ಸ್ಪರ್ಧೆ ಕಾಣಿಸುತ್ತಿದ್ದರೂ ಅಂತಿಮವಾಗಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ ಗೆಲುವಿಗಾಗಿ ಹಣಾಹಣಿ ನಡೆಯುವ ಲಕ್ಷಣ ಗೋಚರಿಸುತ್ತಿವೆ.

ಕಾಂಗ್ರೆಸ್‌ನಿಂದ ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು, ಜೆಡಿಎಸ್ ನಿಂದ ‘ಪ್ರಾಮಾಣಿಕ ರಾಜಕಾರಣಿ’ ಎಂದೇ ಗುರುತಿಸಿಕೊಂಡಿರುವ ಎ.ಟಿ.ರಾಮಸ್ವಾಮಿ ಹಾಗೂ ಬಿಜೆಪಿಯಿಂದ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಯೋಗಾ ರಮೇಶ್ ಕಣಕ್ಕಿಳಿದಿದ್ದಾರೆ. ಮೂವರು ಅಭ್ಯರ್ಥಿಗಳು ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ಕಳೆದ ಬಾರಿ ಯೋಗಾ ರಮೇಶ್‌ ಸ್ಪರ್ಧೆ, ರಾಮಸ್ವಾಮಿ ಗೆಲುವಿಗೆ ಅಡ್ಡಿಯಾಗಿತ್ತು ಎಂದು ವಿಶ್ಲೇಷಿಸಲಾಗಿತ್ತು.

ಒಕ್ಕಲಿಗ ಹಾಗೂ ಕುರುಬ ಸಮುದಾಯಗಳು ಪ್ರಾಬಲ್ಯ ಹೊಂದಿರುವ ಕ್ಷೇತ್ರದಲ್ಲಿ ದಲಿತರ ಹಾಗೂ ವೀರಶೈವ ಲಿಂಗಾಯತರ ಮತಗಳ ವಿಭಜನೆ ಫಲಿತಾಂಶದ ಮೇಲೆ ಪರಿಣಾಮ ಬೀರಬಲ್ಲದು.

ಸಚಿವ ಮಂಜು ತಮ್ಮ ವರ್ಚಸ್ಸು, ಅಭಿವೃದ್ಧಿ ಕಾರ್ಯಗಳು ಶ್ರೀರಕ್ಷೆಯಾಗುವ ನಿರೀಕ್ಷೆಯಲ್ಲಿದ್ದಾರೆ. ಎ.ಟಿ.ರಾಮಸ್ವಾಮಿ, ಆಡಳಿತ ವಿರೋಧಿ ಅಲೆ, ತಮ್ಮ ಕಾರ್ಯ ಶೈಲಿ ಗೆಲುವಿನ ದಡ ಸೇರಿಸಬಹುದು ಎಂಬ ಲೆಕ್ಕಾಚಾರದಲ್ಲಿದ್ದರೆ, ಯೋಗಾ ರಮೇಶ್‌ ತಮ್ಮ ಸಂಘಟನಾ ಸಾಮರ್ಥ್ಯ, ಪಕ್ಷದ ಸಾಂಪ್ರದಾಯಿಕ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ.

ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ, ಉನ್ನತ ಶಿಕ್ಷಣಕ್ಕೆ ತಾಲ್ಲೂಕು ಕೇಂದ್ರಕ್ಕೆ ತೆರಳಬೇಕಿರುವುದು, ಕೈಗಾರಿಕಾ ಕೇಂದ್ರ, ನನೆಗುದಿಗೆ ಬಿದ್ದ ರಂಗೇನಹಳ್ಳಿ ಏತ ನೀರಾವರಿ ಯೋಜನೆಗಳು..ಇವು ಪ್ರಮುಖ ಅಸ್ತ್ರಗಳಾಗಿವೆ.

ಮಂಜು ಹ್ಯಾಟ್ರಿಕ್‌ ಜಯದ ನಿರೀಕ್ಷೆಯಲ್ಲಿದ್ದಾರೆ. ಆದರೆ, ಸಚಿವರಾಗಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡಿಲ್ಲ ಎಂಬ ಟೀಕೆ,

ಸಹಜವಾದ ಆಡಳಿತ ವಿರೋಧಿ ಅಲೆ, ಆಡಳಿತದಲ್ಲಿ ಭ್ರಷ್ಟಾಚಾರ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರ ಜತೆ ಸಮನ್ವಯತೆ ಸಾಧಿಸುವಲ್ಲಿ ವಿಫಲರಾಗಿದ್ದಾರೆ ಎಂಬ ಆರೋಪ ಇದೆ.

ಕಾಂಗ್ರೆಸ್ ಟಿಕೆಟ್ ವಂಚಿತ, ಕಾಂಗ್ರೆಸ್ ಹಿಂದುಗಳಿದ ವರ್ಗಗಳ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ, ಕುರುಬ ಸಮುದಾಯದ ಶೇಷೇಗೌಡ ಅವರು ಭಾರತೀಯ ಹೊಸ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವುದು ಮಂಜುಗೆ ತೊಡಕಾಗಿದೆ.

ಕುರುಬ ಸಮಾಜದ ಯುವ ಮುಖಂಡ ಅನಿಲ್‌ ಕುಮಾರ್‌ ಸೇರಿದಂತೆ ಕೆಲ ಕಾಂಗ್ರೆಸ್‌ ಮುಖಂಡರು ಜೆಡಿಎಸ್‌ ಸೇರ್ಪಡೆಯಾಗಿದ್ದಾರೆ. ಹಳ್ಳಿ ಮೈಸೂರು ಹೋಬಳಿಯಲ್ಲಿ ಹೆಚ್ಚು ಮತಗಳನ್ನು ಪಡೆಯುವುದು ಕೊಂಚ ಕಷ್ಟವಾಗಬಹುದು ಎಂದು ಹೇಳಲಾಗುತ್ತಿದೆ.

ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯ, ಕಾಂಗ್ರೆಸ್ ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಮಂಜು ನೆಚ್ಚಿಕೊಂಡಿದ್ದಾರೆ. ಅವರ ಪುತ್ರ ರಾಮನಾಥಪುರ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯ ಮಂಥರ್‌ಗೌಡ ಅವರಿಗೆ ಬೆಂಬಲವಾಗಿ ನಿಂತಿದ್ದಾರೆ.

ಬೆಂಗಳೂರು ಸುತ್ತಮುತ್ತ ಭೂ ಒತ್ತುವರಿ ತನಿಖಾ ಸಮಿತಿ ಅಧ್ಯಕರಾಗಿ ದಕ್ಷತೆಯಿಂದ ಕಾರ್ಯನಿರ್ವಹಿಸಿ ರಾಜ್ಯ ಮಟ್ಟದಲ್ಲಿ ಗಮನ ಸೆಳೆದಿದ್ದ ಎ.ಟಿ.ರಾಮಸ್ವಾಮಿ, ಸತತ ಎರಡು ಸೋಲುಗಳ ನಂತರ ಈ ಬಾರಿ ಗೆಲುವಿನ ಹಾದಿಯ ಹುಡುಕಾಟದಲ್ಲಿದ್ದಾರೆ.

ಹೇಮಾವತಿ ಬಲ ಮೇಲ್ದಂಡೆ ನಾಲೆಗೆ ನೀರು ಹರಿಸಲು ಹೋರಾಟ, ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯವೈಖರಿ ವಿರುದ್ಧ ಪ್ರತಿಭಟನೆ  ಮೂಲಕ ಹಿಂದಿನ ಚುನಾವಣೆಯಲ್ಲಾದ ತಪ್ಪುಗಳ ವಿಮರ್ಶೆ ಮಾಡಿಕೊಂಡು ಪ್ರಚಾರದಲ್ಲಿ ತೊಡಗಿದ್ದಾರೆ. ಈಗಾಗಲೇ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ, ಎಚ್‌.ಡಿ.ಕುಮಾರಸ್ವಾಮಿ ಕ್ಷೇತ್ರದಲ್ಲಿ ಪ್ರಚಾರ ನಡೆಸಿ ಹೋಗಿದ್ದಾರೆ. ಇದರಿಂದ ಪಕ್ಷದ ಸಾಂಪ್ರದಾಯಿಕ ಮತ ಬ್ಯಾಂಕ್‌ ಗಟ್ಟಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಕಳೆದ ಬಾರಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೂವತ್ತೆರಡು ಸಾವಿರ ಮತ ಪಡೆದಿದ್ದ ಯೋಗಾ ರಮೇಶ್, ಈ ಬಾರಿ ಫಲಿತಾಂಶದ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ತಮ್ಮ ಸಂಘಟನಾ ಶಕ್ತಿ ಮೇಲೆ ನಂಬಿಕ ಇಟ್ಟು ಅನ್ಯ ಪಕ್ಷಗಳ ಕಾರ್ಯಕರ್ತರನ್ನು ಸೆಳೆದು ನೆಲೆ ಭದ್ರಪಡಿಸಿಕೊಳ್ಳಲು ಯತ್ನಿಸುತ್ತಿದ್ದು, ಚೊಚ್ಚಲ ಗೆಲುವು ಕಾಣುವ ನಿರೀಕ್ಷೆಯಲ್ಲಿದ್ದಾರೆ. ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಪ್ರಚಾರ ನಡೆಸಿ ಹೋಗಿರುವುದು ಕಾರ್ಯಕರ್ತರಲ್ಲೂ ಹುಮ್ಮಸ್ಸು ಉಂಟು ಮಾಡಿದೆ.

ಹಿಂದಿನ ಎರಡು ಚುನಾವಣೆಗಳ ಫಲಿತಾಂಶ

ವರ್ಷ–ಗೆದ್ದವರು–ಪಕ್ಷ–ಸಮೀಪ ಸ್ಪರ್ಧಿ–ಪಕ್ಷ

2008–ಎ.ಮಂಜು–ಕಾಂಗ್ರೆಸ್‌–ಎ.ಟಿ.ರಾಮಸ್ವಾಮಿ–ಜೆಡಿಎಸ್‌

2013–ಎ.ಮಂಜು–ಕಾಂಗ್ರೆಸ್‌–ಎ.ಟಿ.ರಾಮಸ್ವಾಮಿ–ಜೆಡಿಎಸ್‌

ಕಣದಲ್ಲಿ ಸ್ಪರ್ಧಿಗಳು

ಎ.ಟಿ.ರಾಮಸ್ವಾಮಿ (ಜೆಡಿಎಸ್ )

ಎ.ಮಂಜು (ಕಾಂಗ್ರೆಸ್ )

ಎಚ್. ಯೋಗಾರಮೇಶ್ (ಬಿಜೆಪಿ)

ಎಚ್.ಪಿ.ಮಂಜುನಾಥ್ (ಡಾ.ಬಿ.ಆರ್.ಅಂಬೇಡ್ಕರ್ ಭಾರತೀಯ ಜನತಾ ಪಾರ್ಟಿ) ಶೇಷೇಗೌಡ (ಭಾರತೀಯ ಹೊಸ ಕಾಂಗ್ರೆಸ್ ಪಕ್ಷ)

ಕೆ.ಎಂ.ಲತಾ (ರಿಪಬ್ಲಿಕನ್ ಪಾರ್ಟಿ )

ಎಚ್.ಟಿ.ಸತ್ಯ (ಎಐಎಂಎಪಿ)

ಇಬ್ಬರಿಗೂ 7ನೇ ಚುನಾವಣೆ

ಮಂಜು ಮತ್ತು ರಾಮಸ್ವಾಮಿಗೂ ಇದು ಏಳನೇ ಚುನಾವಣೆ. ಇಬ್ಬರು ಮೂರು ಬಾರಿ ಗೆದ್ದಿದ್ದಾರೆ, ಮೂರು ಬಾರಿ ಸೋತಿದ್ದಾರೆ. ಈ ಬಾರಿ ಶತಾಯಗತಾಯ ಗೆಲ್ಲಲೇಬೇಕೆಂದು ಇಬ್ಬರೂ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಕ್ಷೇತ್ರದಲ್ಲಿ ಬಲಾಢ್ಯರ ವಿರುದ್ಧ ಸ್ಪರ್ಧಿಸುವ ಸವಾಲು ಬಿಜೆಪಿಗೆ ಎದುರಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry