ಇನ್ಫಿ ವಿರುದ್ಧ ‘ಸೆಬಿ’ಗೆ ದೂರು

7
ಪಾಲನೆಯಾಗದ ಕಾರ್ಪೊರೇಟ್‌ ಆಡಳಿತದ ನಿಯಮ

ಇನ್ಫಿ ವಿರುದ್ಧ ‘ಸೆಬಿ’ಗೆ ದೂರು

Published:
Updated:
ಇನ್ಫಿ ವಿರುದ್ಧ ‘ಸೆಬಿ’ಗೆ ದೂರು

ನವದೆಹಲಿ: ಕಾರ್ಪೊರೇಟ್‌ ಆಡಳಿತದ ಉನ್ನತ ಸಂಪ್ರದಾಯ ಕಾಯ್ದುಕೊಳ್ಳುವಲ್ಲಿ ಇನ್ಫೊಸಿಸ್‌ನ ಹೊಸ ಆಡಳಿತ ಮಂಡಳಿ ವಿಫಲಗೊಂಡಿದೆ ಎಂದು ಅನಾಮಧೇಯ ವ್ಯಕ್ತಿಯೊಬ್ಬರು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಗೆ (ಸೆಬಿ) ದೂರು ನೀಡಿದ್ದಾರೆ.

ಐ.ಟಿ ದೈತ್ಯ ಸಂಸ್ಥೆಯು ಈ ಮೊದಲು ಅನುಸರಿಸುತ್ತಿದ್ದ ಕಾರ್ಪೋರೇಟ್‌ ಆಡಳಿತದ ಉನ್ನತ ಮಟ್ಟವನ್ನು ಕಾಯ್ದುಕೊಳ್ಳಲು ಸಂಸ್ಥೆಯ ಕಾರ್ಯನಿರ್ವಾಹಕಯೇತರ ಅಧ್ಯಕ್ಷ ನಂದನ್‌ ನಿಲೇಕಣಿ ವಿಫಲರಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಸಂಸ್ಥೆಯ ವಾರ್ಷಿಕ ವರದಿಯಲ್ಲಿ, ಮೂವರು ನಿರ್ದೇಶಕರ ಜತೆಗಿನ ವಿವಾದಗಳನ್ನು ಇತ್ಯರ್ಥಪಡಿಸಲಾಗಿರುವುದನ್ನು ಉಲ್ಲೇಖಿಸಲಾಗಿದೆ. ಸಂಸ್ಥೆಯ ಮಾಜಿ ಅಧ್ಯಕ್ಷ ಆರ್‌. ಶೇಷಸಾಯಿ, ನಾಮಕರಣ ಮತ್ತು ಸಂಭಾವನೆ ಸಮಿತಿಯ ಮಾಜಿ ಮುಖ್ಯಸ್ಥ ಜೆಫ್‌ ಲೀಮನ್‌  ಸೇರಿದಂತೆ ಮೂವರು ನಿರ್ದೇಶಕರು ತೆಗೆದುಕೊಂಡ ವಿವಾದಾತ್ಮಕ ನಿರ್ಧಾರಗಳನ್ನು ಕೈಬಿಡಲಾಗಿದೆ.

ಸಂಸ್ಥೆ ಮತ್ತು ಉನ್ನತ ಉದ್ಯೋಗಿಗಳ ನಡುವಣ ವಿವಾದಗಳನ್ನು ಪರಸ್ಪರ ಒಪ್ಪಿತ ರೀತಿಯಲ್ಲಿ ಬಗೆಹರಿಸಿಕೊಳ್ಳಲಾಗಿದೆ. ಈ ಮೂವರು ಕೆಲ ತಪ್ಪುಗಳನ್ನು ಎಸಗಿರುವುದನ್ನು ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಆದರೂ ವಿವಾದಗಳನ್ನು ಕೈಬಿಟ್ಟಿರುವುದು ಸಂಸ್ಥೆ ಮತ್ತು ನಿರ್ದೇಶಕರ ಪಾಲಿಗೆ ಕಳಂಕ ತಂದಿದೆ’ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಸಂಸ್ಥೆಯು ಇದುವರೆಗೂ ಪಾಲಿಸಿಕೊಂಡು ಬಂದಿದ್ದ ಕಾರ್ಪೊರೇಟ್‌ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಲ್ಲಿ ನಂದನ್‌ ನಿಲೇಕಣಿ   ನೇತೃತ್ವದಲ್ಲಿನ ನಿರ್ದೇಶಕ ಮಂಡಳಿ ತೀವ್ರ ನಿರಾಶೆ ಮೂಡಿಸಿದೆ ಎಂದು ಅಭಿಪ್ರಾಯಪಟ್ಟಿರುವ ದೂರುದಾರರು, ಇಂತಹ ಒಪ್ಪಂದಗಳನ್ನು ಆಗಸ್ಟ್‌ನಲ್ಲಿ ಷೇರುದಾರರ ಗಮನಕ್ಕೆ ಏಕೆ ತರಲಾಗಿಲ್ಲ ಎಂದೂ ಪ್ರಶ್ನಿಸಿದ್ದಾರೆ.

ಈ ಸಂಬಂಧ, ಪ್ರತಿಕ್ರಿಯೆ ಬಯಸಿ ಕಳಿಸಿದ ಇ–ಮೇಲ್‌ಗೆ ಸಂಸ್ಥೆಯು ಉತ್ತರ ನೀಡಿಲ್ಲ.ಪನಯಾ ಸಂಸ್ಥೆಯ ಸ್ವಾಧೀನ ವಿಷಯದಲ್ಲಿ ಸಂಸ್ಥೆಯ ಕೆಲ ಉನ್ನತ ಅಧಿಕಾರಿಗಳು ನಿರ್ವಹಿಸಿದ ಪಾತ್ರವನ್ನು ಪ್ರಶ್ನಿಸಿ ಕಳೆದ ವರ್ಷವೂ ಅನಾಮಧೇಯ ವ್ಯಕ್ತಿಯೊಬ್ಬರು ‘ಸೆಬಿ’ಗೆ ದೂರು ನೀಡಿದ್ದರು.

ಕಾರ್ಪೊರೇಟ್‌ ಆಡಳಿತದ ನಿಯಮಗಳನ್ನು ಪಾಲಿಸುವಲ್ಲಿ ಸಂಸ್ಥೆಯ ಸಹ ಸ್ಥಾಪಕರು ಮತ್ತು ನಿರ್ದೇಶಕ ಮಂಡಳಿ ಮಧ್ಯೆ ಜಟಾಪಟಿ ನಡೆದು ಬೋರ್ಡ್‌ರೂಂ ಕಲಹ ಬೀದಿಗೆ ಬಂದಿತ್ತು. ಅಂತಿಮವಾಗಿ ಸಿಇಒ ವಿಶಾಲ್‌ ಸಿಕ್ಕಾ ಅವರು ಸಂಸ್ಥೆಯನ್ನು ತೊರೆದಿದ್ದರು. ಪನಯಾ ಸಂಸ್ಥೆಯನ್ನು ಮಾರಾಟ ಮಾಡುವುದಾಗಿ ಸಂಸ್ಥೆಯು ಕಳೆದ ತಿಂಗಳು ಪ್ರಕಟಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry