ಗಡಿ ಭಾಗದ ಶಾಲೆಯಲ್ಲಿ ಕನ್ನಡ ಕಹಳೆ

7
ಖಾಸಗಿ ಶಾಲೆಗೆ ಸೆಡ್ಡು ಹೊಡೆಯುವ ಸರ್ಕಾರಿ ಶಾಲೆ; ಕನ್ನಡಮಯ ವಾತಾವರಣ ನಿರ್ಮಿಸಿದ ಶಿಕ್ಷಕ ನಾಗೇಶ್‌

ಗಡಿ ಭಾಗದ ಶಾಲೆಯಲ್ಲಿ ಕನ್ನಡ ಕಹಳೆ

Published:
Updated:
ಗಡಿ ಭಾಗದ ಶಾಲೆಯಲ್ಲಿ ಕನ್ನಡ ಕಹಳೆ

ಹಲವು ಕಾರಣ ನೀಡಿ ಗಡಿ ಭಾಗದಲ್ಲಿರುವ ಕನ್ನಡ ಸರ್ಕಾರಿ ಶಾಲೆಗಳನ್ನು ಮುಚ್ಚಲಾಗುತ್ತಿದೆ. ಇದಕ್ಕೆ ಹೊರತಾಗಿ ಆಂಧ್ರಪ್ರದೇಶದ ಗಡಿ ಭಾಗದ ತೆಲುಗು ಪ್ರಭಾವದ ತಾಲ್ಲೂಕಿನ ನಗರಗೆರೆ ಹೋಬಳಿಯ ನಂಜಯ್ಯಗಾರಹಳ್ಳಿಯಲ್ಲಿರುವ ಸರ್ಕಾರಿ ಶಾಲೆ ಎಲ್ಲರಿಗೂ ಮಾದರಿಯಾಗುವಂತೆ ತಲೆ ಎತ್ತಿ ನಿಂತಿದೆ.

ದಾನಿಗಳ ಸಹಕಾರ, ಸ್ನೇಹಿತರ ನೆರವಿನಿಂದ ಸರ್ಕಾರಿ ಶಾಲೆಯನ್ನು ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯವಂತೆ ಮಾಡಲಾಗಿದೆ. ಮೂಲಸೌಲಭ್ಯ ಅಭಿವೃದ್ಧಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಪಾಲಕರ ಮೇಲ್ವಿಚಾರಣೆಯಡಿ ಶಾಲೆಗೆ ಹೊಸ ರೂಪ ನೀಡಲಾಗಿದೆ. ಈ ಸಾಧನೆಯ ರೂವಾರಿ ಶಾಲೆಯ ಶಿಕ್ಷಕ ಟಿ.ಕೆ.ನಾಗೇಶ್. ಗ್ರಾಮದಲ್ಲಿ ಕನ್ನಡದ ಕಂಪು ಸೂಸುವ ಮೂಲಕ ಭಾಷೆ ಹಾಗೂ ಸರ್ಕಾರಿ ಶಾಲೆಯನ್ನು ಉಳಿಸಿ ಬೆಳೆಸುವ ಕಾಯಕ ನಿರಂತರವಾಗಿ ನಡೆಯುತ್ತಿದೆ.

ಹಾಸನ ಮೂಲದ ನಾಗೇಶ್ 11 ವರ್ಷಗಳಿಂದ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕರ್ನಾಟದದ ಗಡಿ ಭಾಗದಲ್ಲಿ ಗ್ರಾಮವಿದೆ. ಆದರೆ ಇಲ್ಲಿಯ ಜನರ ಆಡು ಭಾಷೆ, ಮಾತೃ ಭಾಷೆ ತೆಲುಗು. ಇಲ್ಲಿನ ಜನ ತಾವು ಆಂಧ್ರದವರೇ ಎನ್ನುವ ಭಾವನೆಯಲ್ಲಿ ಬದುಕುತ್ತಿದ್ದರು. ನಾಗೇಶ್‌ ಮೊದಲ ಬಾರಿಗೆ ಶಾಲೆಗೆ ಬಂದಾಗ ಇಲ್ಲಿಯ ಬಹುತೇಕ ಮಕ್ಕಳಿಗೆ ಕನ್ನಡ ಮಾತನಾಡಲೂ ಬರುತ್ತಿರಲಿಲ್ಲ. ಅಷ್ಟೇ ಅಲ್ಲ, ಪಾಲಕರು ತಮ್ಮ ಮಕ್ಕಳನ್ನು ಶಾಲೆಗೂ ಸೇರಿಸುತ್ತಿರಲಿಲ್ಲ. ಒಂದು ರೀತಿಯ ಅನಿಶ್ವಿತತೆಯ ಭಾವ ಎಲ್ಲರಲ್ಲೂ ಕಾಡುತ್ತಿತ್ತು. ಶಾಲೆಯಲ್ಲಿ ಶೈಕ್ಷಣಿಕ ವಾತಾವರಣ ಇರಲಿಲ್ಲ.

‘ಮನಸ್ಸಿದ್ದರೆ ಮಾರ್ಗ’ ಎಂಬಂತೆ ನಾಗೇಶ್ ಗ್ರಾಮಕ್ಕೆ ಬಂದು ವಾಸ್ತವ್ಯ ಮಾಡಿದರು. ಗ್ರಾಮದ ಮನೆ ಮನೆಗೆ ತೆರಳಿ ಶಿಕ್ಷಣದ ಮಹತ್ವ ತಿಳಿಸಿದರು. ಪೋಷಕರ ಮನವೊಲಿಸಿ ಮಕ್ಕಳನ್ನು ಶಾಲೆಗೆ ಕರೆತಂದು ಶಿಕ್ಷಕರೊಂದಿಗೆ ಉತ್ತಮ ಬಾಂಧವ್ಯ ಕಲ್ಪಿಸಿ, ಗುಣಮಟ್ಟದ ಶಿಕ್ಷಣಕ್ಕೆ ಮುಂದಾದರು. ಸರ್ಕಾರದ ಸೌಲಭ್ಯಗಳ ಜೊತೆ ಸ್ಥಳೀಯರ ನೆರವು ಪಡೆದು ಶಾಲೆಯಲ್ಲಿ ಹೊಸ ವಾತಾವರಣ ನಿರ್ಮಿಸಿದರು.

ಗ್ರಾಮಸ್ಥರಲ್ಲಿ ಕನ್ನಡದ ಭಾವನೆ ಮೂಡಿಸಲು ಪ್ರತಿ ವರ್ಷ ಶಾಲೆಯಲ್ಲಿ ‘ನುಡಿ ಹಬ್ಬ’ ಆರಂಭಿಸಿದರು. ಮಕ್ಕಳ ಜೊತೆ ಪಾಲಕರಲ್ಲೂ ಕನ್ನಡಾಭಿಮಾನ ಮೂಡಿಸುವ ಪ್ರಯತ್ನಕ್ಕೆ ಮುಂದಾದರು. ಅದರ ಪರಿಣಾಮವಾಗಿ ತೆಲುಗು ಭಾಷಿಕ ಮಕ್ಕಳ ಬಾಯಲ್ಲಿ ಕನ್ನಡದ ಘೋಷಣೆಗಳು ಶುರುವಾಗಿವೆ. ಇದೆಲ್ಲ ಸಾಧ್ಯವಾಗಿದ್ದು ಕೇವಲ ಹತ್ತು ವರ್ಷಗಳಲ್ಲಿ.

ಮೂಲಸೌಲಭ್ಯಗಳಿಲ್ಲದೆ ಸೊರಗಿದ್ದ ಶಾಲೆಗೆ ದಾನಿಗಳು ಸಹಾಯ ಹಸ್ತ ಚಾಚಿದರು. ಈಗ ಇಲ್ಲಿ ಎಲ್ಲವೂ ‘ಸ್ಮಾರ್ಟ್‌ ಕ್ಲಾಸ್‌’. ಪ್ರೊಜೆಕ್ಟರ್ ಮೂಲಕ ಮಕ್ಕಳಿಗೆ ಪಾಠ ಹೇಳುವ ವ್ಯವಸ್ಥೆಯಾಗಿದೆ. ಕಂಪ್ಯೂಟರ್ ಕಲಿಯುತ್ತಿದ್ದಾರೆ. ತೆಲುಗು ಬಿಟ್ಟು ಕನ್ನಡವೂ ಬಾರದ ಮಕ್ಕಳು ಇಂಗ್ಲಿಷ್‌ನಲ್ಲಿ ಪಟಪಟನೆ ಮಾತನಾಡುವಷ್ಟರ ಮಟ್ಟಿಗೆ ಬೆಳೆಸಿದ್ದಾರೆ.

ಶಾಲೆಯಲ್ಲಿ ಸದ್ಯ 1ರಿಂದ 7ನೇ ತರಗತಿಯವರೆಗೆ ಒಟ್ಟು 114 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಪ್ರತಿ ವರ್ಷ ‘ಫೇಸ್‍ಬುಕ್ ಗೆಳೆಯರ ಬಳಗ'ದಿಂದ ನೋಟ್ ಪುಸ್ತಕ, ಪೆನ್, ಪೆನ್ಸಿಲ್ ಮತ್ತಿತರ ಕಲಿಕಾ ಸಾಮಗ್ರಿಗಳ ಸಹಾಯ ಪಡೆದು ಮಕ್ಕಳಿಗೆ ವಿತರಿಸಲಾಗುತ್ತಿದೆ. ಮಧ್ಯಾಹ್ನದ ಬಿಸಿಯೂಟ ಆಡುಗೆ ತಯಾರಿಸಲು ಅಗತ್ಯವಿರುವ ಗ್ರೈಂಡರ್, ತಟ್ಟೆ, ಲೋಟ, ಕುಡಿಯುವ ನೀರಿನ ಫಿಲ್ಟರ್‌,... ಎಲ್ಲವೂ ದಾನಿಗಳ ಕೊಡುಗೆಯಿಂದ ಶಾಲೆ ಸೇರಿವೆ.

ಕೈಜೋಡಿಸಿದ ಪತ್ನಿ

ಗೌರಿಬಿದನೂರು ಪಟ್ಟಣದಿಂದ 35 ಕಿ.ಮೀ ದೂರದಲ್ಲಿ ಈ ಶಾಲೆ ಇದೆ. ಇಲ್ಲಿ ಕೆಲಸ ಮಾಡಲು ಶಿಕ್ಷಕರು ಹಿಂದೇಟು ಹಾಕುವರು. ಹೀಗಾಗಿ ಇಲ್ಲಿ ಶಿಕ್ಷಕರ ಕೊರತೆ ಸಾಮಾನ್ಯ. ಮಕ್ಕಳಿಗೆ ಪಾಠ ಮಾಡಲು ಶಿಕ್ಷಕರಿಲ್ಲದೆ ತೊಂದರೆ ಆಗುತ್ತಿತ್ತು. ಇದನ್ನು ಗಮನಿಸಿದ ನಾಗೇಶ್‌ ಅವರ ಪತ್ನಿ ಶೈಲಜಾ ಕೈಜೋಡಿಸಲು ಮುಂದಾದರು.

ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಶೈಲಜಾ, ಅಲ್ಲಿ ಕೆಲಸ ಬಿಟ್ಟು ಪತಿಯ ಸಮಾಜಮುಖಿ ಸೇವೆಗೆ ನೆರವಾದರು. ಉಚಿತವಾಗಿ ಮಕ್ಕಳಿಗೆ ಪಾಠ ಕಲಿಸುತ್ತಿದ್ದಾರೆ. ತಮ್ಮ 4 ವರ್ಷದ ಮಗನಿಗೂ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿಸಲು ಮುಂದಾಗಿದ್ದಾರೆ. ಶಾಲೆಯ ಅಭಿವೃದ್ಧಿಗೆ ನಾಗೇಶ್‌ ಮತ್ತು ಶೈಲಜಾ ಅವರ ಸೇವೆಯನ್ನು ಗ್ರಾಮಸ್ಥರು ಸ್ಮರಿಸುತ್ತಾರೆ.

5 ಕನ್ನಡ ಸರ್ಕಾರಿ ಶಾಲೆಗಳಿಗೆ ಬೀಗ

ಆಂಧ್ರದ ಗಡಿ ಭಾಗದಲ್ಲಿ ಕನ್ನಡಪರ ವಾತಾವರಣ ಇಲ್ಲ. ಇನ್ನು ಕನ್ನಡ ಶಾಲೆಗಳ ಸ್ಥಿತಿ ಇನ್ನೂ ಗಂಭೀರ. ಇದಕ್ಕೆ ತೆಲುಗು ಭಾಷೆ ಪ್ರಭಾವ, ಪೋಷಕರ ಇಂಗ್ಲಿಷ್ ವ್ಯಾಮೋಹ, ಸರ್ಕಾರಿ ಶಾಲೆ ಎಂಬ ತಾತ್ಸಾರ ಸೇರಿದಂತೆ ಹಲವು ಕಾರಣಗಳಿಂದ ಈ ಭಾಗದಲ್ಲಿ ಸರ್ಕಾರದ ಆದೇಶದನ್ವಯ ಈಗಾಗಲೇ 5 ಶಾಲೆಗಳಿಗೆ ಬೀಗ ಜಡಿಯಲಾಗಿದೆ.

ಶಿಕ್ಷಕ ನಾಗೇಶ್‌ ಅವರ ವೈಯಕ್ತಿಕ ಆಸಕ್ತಿ ಮತ್ತು ಪರಿಶ್ರಮದ ಫಲವಾಗಿ ನಂಜಯ್ಯಗಾರಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆ ವಿಭಿನ್ನವಾಗಿ ಗುರುತಿಸಿಕೊಂಡು ಮುನ್ನಡೆಯುತ್ತಿದೆ. ಪ್ರತಿ ವರ್ಷವೂ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ. ಶಾಲೆಯ ಅಭಿವೃದ್ಧಿಗೆ ಆರಂಭದಲ್ಲಿ ಗ್ರಾಮಸ್ಥರ ತಾತ್ಸಾರವಿತ್ತು. ಆದರೆ ಈಗ ಎಲ್ಲರೂ ಜತೆಗೂಡುತ್ತಿದ್ದಾರೆ ಎನ್ನುತ್ತಾರೆ ಗ್ರಾಮದ ಹಿರಿಯರಾದ ವೆಂಕಟೇಶ.

ಎ.ಎಸ್‌.ಜಗನ್ನಾಥ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry