ಮತದಾರ ವೇದಿಕೆಗಳು ರೂಪುಗೊಳ್ಳಲಿ

7

ಮತದಾರ ವೇದಿಕೆಗಳು ರೂಪುಗೊಳ್ಳಲಿ

Published:
Updated:
ಮತದಾರ ವೇದಿಕೆಗಳು ರೂಪುಗೊಳ್ಳಲಿ

ಕರ್ನಾಟಕದ ರಾಜಕೀಯ ಮೇಲಾಟ ಪ್ರಜಾಪ್ರಭುತ್ವದ ಸೋಲು– ಗೆಲುವಿನ ಚರ್ಚೆಯಾಗಿ ರೂಪಾಂತರಗೊಂಡು, ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರದ ಕಾರ್ಯವೈಖರಿಯ ಬಗ್ಗೆ ಚಿಂತಿಸುವ ಹಂತಕ್ಕೆ ಬಂದು ನಿಂತಿದೆ. ಈ ಸಂದರ್ಭದಲ್ಲಿ ಮತ ಚಲಾಯಿಸಿದ ಜನರ ಕರ್ತವ್ಯಗಳೇನು? ‘ಇನ್ನು ಗೆದ್ದ ಶಾಸಕರದ್ದೇ ಆಟ, ನಾವೇನು ಮಾಡಲು ಸಾಧ್ಯ’ ಎನ್ನುವ ಸಿನಿಕತನದ ಮಾತುಕತೆಗಳು ನಡೆಯುತ್ತಿವೆ. ಇವು ಮತದಾರರ ಅಸಹಾಯಕತೆ ಮಾತ್ರವಲ್ಲ, ಪ್ರಜಾಪ್ರಭುತ್ವದ ಸೋಲಿನ ಲಕ್ಷಣಗಳೂ ಆಗಿವೆ.

ಈ ಚುನಾವಣೆಯಲ್ಲಿ ಗಣನೀಯ ಪ್ರಮಾಣದ ಮತದಾರರು ‘ನೋಟಾ’ ಚಲಾಯಿಸಿ ‘ನಮ್ಮ ಆಯ್ಕೆಗೆ ಸಮರ್ಥ ಅಭ್ಯರ್ಥಿಗಳಿಲ್ಲ’ ಎಂಬುದನ್ನು ಸೂಚಿಸಿದರು. ಕೆಲವೆಡೆ ತಮ್ಮ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿ ಮತದಾನ ಬಹಿಷ್ಕಾರಗಳೂ ನಡೆದವು. ಇವೆಲ್ಲ ಒಂದೆಡೆ, ಇವುಗಳಾಚೆ ಶಾಸಕರನ್ನು, ಮಂತ್ರಿಗಳನ್ನು ಎಚ್ಚರದಲ್ಲಿಡಲು ಮತದಾರರು ಐದು ವರ್ಷ ಜಾಗೃತಗೊಳ್ಳುವ ಬಗ್ಗೆ ಚಿಂತಿಸಬೇಕಾಗಿದೆ.

ಮತದಾರರು ಇನ್ನು ಮುಂದೆ ವಿರೋಧಪಕ್ಷದ ನಾಯಕರಂತೆ ಕೆಲಸ ಮಾಡಬೇಕಿದೆ. ಅಂತಹದ್ದೊಂದು ಪ್ರಾಯೋಗಿಕತೆಯ ಯೋಚನಾ ಲಹರಿ ಇಲ್ಲಿದೆ. ಸದ್ಯಕ್ಕೆ ಆಯಾ ಮತಕ್ಷೇತ್ರದ ಬಹುಪಾಲು ಜನರನ್ನು ಒಂದೆಡೆ ಸಂಪರ್ಕದ ಜಾಲಕ್ಕೆ ತರಲು ವೆಚ್ಚರಹಿತ ಅವಕಾಶಗಳಿವೆ. ಅದಕ್ಕಾಗಿ ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ಗಳನ್ನು ಬಳಸಿಕೊಳ್ಳಬಹುದಾಗಿದೆ. ಪ್ರತೀ ಗ್ರಾಮದ ವಿದ್ಯಾವಂತ ಯುವತಿ– ಯುವಕರು ಈ ವೇದಿಕೆಯ ಭಾಗವಾಗಬೇಕು. ಬಹಳ ಮುಖ್ಯವಾಗಿ ಪಕ್ಷಾತೀತವಾಗಿ ಸಂವಿಧಾನದ ಆಶಯಗಳನ್ನು ಬಲಪಡಿಸುವ ಪ್ರಾಥಮಿಕ ಘಟಕಗಳಂತೆ ಈ ವೇದಿಕೆಗಳು ರೂಪುಗೊಳ್ಳಬೇಕು.

ಮತದಾರರ ಪರವಾಗಿ ಎಲ್ಲರ ಜತೆಗಿನ ಸಂಪರ್ಕ ಮತ್ತು ಸಂವಹನದ ಕೆಲಸ ಮಾಡಲು ಒಂದಷ್ಟು ಕ್ರಿಯಾಶೀಲ ಯುವ ಜನರು ಅವರವರ ಕೆಲಸ ಮತ್ತು ಜವಾಬ್ದಾರಿಗಳ ಮಧ್ಯೆ ಮುಂದಾಳತ್ವ ವಹಿಸಬೇಕು. ಈ  ಮತದಾರ ವೇದಿಕೆಗಳು ಚರ್ಚೆ ಮಾಡಿ ಆಯಾ ಗ್ರಾಮಗಳ ಸಮಸ್ಯೆಗಳನ್ನು ಪಟ್ಟಿ ಮಾಡಬೇಕು. ಈ ಸಮಸ್ಯೆಗಳನ್ನು ಈಡೇರಿಸುವಂತೆ ಪ್ರತಿತಿಂಗಳು ಅಥವಾ ಕನಿಷ್ಠ ಆರು ತಿಂಗಳಿಗೆ ಒಂದು ಬಾರಿ ಆಯಾ ಮತಕ್ಷೇತ್ರದ ವಿಧಾನಸಭಾ ಸದಸ್ಯರಿಗೆ ಬೇಡಿಕೆ ಪತ್ರವೊಂದನ್ನು ಸಲ್ಲಿಸಬೇಕು. ಈ ಪತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗಪಡಿಸಬೇಕು. ಈ ಪತ್ರದ ಪ್ರತಿಗಳನ್ನು ಆಯಾ ಕ್ಷೇತ್ರದ ಲೋಕಸಭಾ ಸದಸ್ಯರಿಗೂ ಪತ್ರಿಕೆಗಳಿಗೂ ತಹಶೀಲ್ದಾರ್‌ಗೂ ಜಿಲ್ಲಾಧಿಕಾರಿಗೂ ಆಯಾ ಸಮಸ್ಯೆಗೆ ನೇರವಾಗಿ ಸಂಬಂಧಪಡುವ ಇಲಾಖೆಯ ಮಖ್ಯಸ್ಥರಿಗೂ ತಲುಪುವಂತೆ ಮಾಡಬೇಕು.

ಈ ವೇದಿಕೆಗಳು ಅಧಿಕಾರ ವಿಕೇಂದ್ರೀಕರಣದ ಪ್ರಾಥಮಿಕ ಘಟಕಗಳಾದ ಗ್ರಾಮ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯ್ತಿ ಸದಸ್ಯರನ್ನೂ ಪಟ್ಟಣ, ನಗರ, ಮಹಾನಗರ ಪಾಲಿಕೆ ಸದಸ್ಯರನ್ನೂ ಎಚ್ಚರಿಸುವಂತೆ ವಿಸ್ತರಿಸಿಕೊಳ್ಳಬೇಕು.

ಇಂಥ ಜಾಗೃತ ವೇದಿಕೆಗಳು ಮಾಹಿತಿ ಹಕ್ಕನ್ನು ಪರಿಣಾಮಕಾರಿಯಾಗಿ ಬಳಸಬಹುದು. ಯೋಜನೆಗಳಿಗೆ ಸಂಬಂಧಪಟ್ಟಂತೆ ಬೇರೆ ಬೇರೆ ಇಲಾಖೆಗಳಿಂದ ವೇದಿಕೆಯ ಸದಸ್ಯರು ಮಾಹಿತಿ ಪಡೆದು, ಅದನ್ನು ಬಹಿರಂಗಪಡಿಸುವಂತಾಗಬೇಕು. ಎಲ್ಲೇ ಆದರೂ ಭ್ರಷ್ಟಾಚಾರ ಕಂಡುಬಂದಲ್ಲಿ ಆ ಬಗ್ಗೆ ದೂರು ಕೊಟ್ಟು ಪ್ರತಿರೋಧವನ್ನು ದಾಖಲಿಸಬೇಕು.

ಊರಿಗೊಂದು ವೇದಿಕೆ ಸಾಧ್ಯವಾಗದಿದ್ದರೆ ಕನಿಷ್ಠ ಗ್ರಾಮಪಂಚಾಯ್ತಿಗೆ ಒಂದರಂತೆ ವೇದಿಕೆ ರೂಪುಗೊಳ್ಳಬೇಕು. ಈ ಎಲ್ಲಾ ಗ್ರಾಮಾಂತರ ವೇದಿಕೆಗಳನ್ನು ಜೊತೆಗೂಡಿಸುವ ತಾಲ್ಲೂಕು ವೇದಿಕೆ, ಈ ತಾಲ್ಲೂಕು ವೇದಿಕೆಗಳನ್ನು ಒಳಗೊಂಡ ಜಿಲ್ಲಾ ವೇದಿಕೆಗಳು... ಹೀಗೆ ವೇದಿಕೆಗಳು ಪರಸ್ಪರ ಕೊಂಡಿಗಳಂತೆ ಸಂಪರ್ಕವನ್ನು ಸಾಧಿಸಿ ಕೆಲಸ ಮಾಡಬಹುದು. ಜನರಲ್ಲಿ ಸರ್ಕಾರಿ ಯೋಜನೆಗಳ ಬಗೆಗೆ ಜಾಗೃತಿ ಮೂಡಿಸಬೇಕಿದೆ. ಮುಖ್ಯವಾಗಿ ಯಾವ ಯಾವ ಸರ್ಕಾರಿ ಯೋಜನೆಗಳಿವೆ, ಅವುಗಳನ್ನು ಪಡೆಯಲು ಫಲಾನುಭವಿಗಳಿಗೆ ಇರಬೇಕಾದ ಅರ್ಹತೆಗಳೇನು? ವಿವಿಧ ಯೋಜನೆಗಳ ಅವಧಿ, ಅವುಗಳಿಗೆ ಅರ್ಜಿ ಹಾಕುವ ಕ್ರಮ, ಆಯ್ಕೆಯಾದ ಫಲಾನುಭವಿಗಳ ಪಟ್ಟಿ ಮುಂತಾದ ಸಂಗತಿಗಳನ್ನು ಕ್ಷೇತ್ರದ ಮತದಾರರಿಗೆ ತಿಳಿಯಪಡಿಸುವ ಕೆಲಸವೂ ಈ ವೇದಿಕೆಗಳ ಮೂಲಕ ಆಗಬೇಕು.

ತಮ್ಮ ಕ್ಷೇತ್ರದಲ್ಲಿ ನಡೆಯುವ ಬೇರೆ ಬೇರೆ ಕಾರ್ಯಕ್ರಮಗಳಿಗೆ ಜನಪ್ರತಿನಿಧಿಗಳು ಬರುವ ಸೂಚನೆಗಳು ಸಿಕ್ಕರೆ, ಅಂತಹ ಕಡೆಗಳಲ್ಲಿ ಮತದಾರರ ಜತೆ ಅವರು ಸಂವಾದ ನಡೆಸುವಂತಹ ಇಕ್ಕಟ್ಟಿನ ಸಂದರ್ಭಗಳನ್ನು ಈ ವೇದಿಕೆ ಸೃಷ್ಟಿಸಬೇಕು. ಅಂತೆಯೇ ಜನಪ್ರತಿನಿಧಿಗಳ ಮನೆಯ ಮುಂದೆ ಮತದಾರರನ್ನು ಕರೆದೊಯ್ದು ಸಂವಾದದಲ್ಲಿ ಭಾಗಿಯಾಗುವಂತೆ ಮಾಡಬೇಕು. ಹೀಗೆ ಐದು ವರ್ಷದಲ್ಲಿ ಎಷ್ಟು ಸಾಧ್ಯವೋ ಅಷ್ಟರಮಟ್ಟಿಗೆ ಮತದಾರರು ಮತ್ತು ಜನಪ್ರತಿನಿಧಿಗಳು ಮುಖಾಮುಖಿಯಾಗುವಂತಹ ಸಂದರ್ಭಗಳನ್ನು ಸೃಷ್ಟಿಸಬೇಕು. ಪ್ರತೀ ಆರು ತಿಂಗಳು ಅಥವಾ ವರ್ಷಕ್ಕೆ ಒಂದು ಬಾರಿಯಂತೆ ಶಾಸಕರು ಈ ಕ್ಷೇತ್ರಕ್ಕಾಗಿ ಏನು ಮಾಡಿದ್ದಾರೆ, ಮಾಡುವ ಕೆಲಸಗಳು ಎಷ್ಟಿವೆ ಎನ್ನುವ ವರದಿಯೊಂದನ್ನು ಸಿದ್ಧಪಡಿಸಿ ಜನರಿಗೆ ಈ ವಿಷಯಗಳು ತಲುಪುವಂತೆ ನೋಡಿಕೊಳ್ಳಬೇಕು. ಹೀಗೆ ಮತದಾರ ವೇದಿಕೆಗಳು ಕಾರ್ಯಪ್ರವೃತ್ತವಾದರೆ, ಆಡಳಿತದ ಐದು ವರ್ಷದ ಅವಧಿ ಮುಗಿದು ಮುಂದಿನ ಚುನಾವಣೆ ಸಂದರ್ಭದಲ್ಲಿ ಜಾಗೃತ ವೇದಿಕೆಗಳು ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆ ಇರುತ್ತದೆ. ಆಯ್ಕೆ ಬಯಸಿದ ಚುನಾಯಿತ ಪ್ರತಿನಿಧಿಗಳಲ್ಲಿ ಪಕ್ಷಾತೀತವಾಗಿ ಒಳ್ಳೆಯ ಅಭ್ಯರ್ಥಿಯ ಬಗೆಗೆ ಜನರಲ್ಲಿ ಅರಿವು ಮೂಡಿಸಲು ಅವಕಾಶವಿದೆ ಅಥವಾ ಇಂತಹ ಜಾಗೃತ ವೇದಿಕೆಗಳ ಕ್ರೀಯಾಶೀಲ ವ್ಯಕ್ತಿಯೇ ಅಭ್ಯರ್ಥಿಯಾಗುವ ಸಾಧ್ಯತೆಯೂ ಇದೆ.

ಈ ಕನಸು ಮೇಲುನೋಟಕ್ಕೆ ಕಷ್ಟಸಾಧ್ಯ ಎನ್ನುವಂತಿದೆ. ಇದೊಂದು ಕೇಳಿ ಖುಷಿಪಡಬೇಕಾದ ರಮ್ಯ ಕಥೆಯಂತಿದೆ. ಆದರೂ ಈ ಜಾಗೃತ ಮತದಾರ ವೇದಿಕೆಗಳನ್ನು ಪ್ರಾಯೋಗಿಕವಾಗಿ ಕೆಲವೆಡೆ ಶಿಕ್ಷಿತರು ಆರಂಭಿಸುವ ಸಾಧ್ಯತೆಯಿದೆ. ಇದಕ್ಕೆ ಯಾವುದೇ ಹಣಕಾಸಿನ ಅಗತ್ಯವಿಲ್ಲ. ಬದ್ಧತೆಯ ಜತೆ ಒಂದಷ್ಟು ಸಮಯ ಮೀಸಲಿಟ್ಟರೆ ಸಾಕು. ‘ವ್ಯವಸ್ಥೆಯನ್ನು ಬದಲಿಸಲು ಮತದಾರರು ಏನು ಮಾಡಲು ಸಾಧ್ಯ’ ಎನ್ನುವ ಸಿನಿಕತನವನ್ನು ಬದಿಗಿಟ್ಟು ಇಂತಹದ್ದೊಂದು ಜಾಗೃತ ಮತದಾರರ ವೇದಿಕೆಯ ಬಗ್ಗೆ ಚಿಂತಿಸೋಣ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry