3

ಬಿಹಾರದ ಕಲ್ಪನಾ ಕುಮಾರಿ ಟಾಪರ್‌

Published:
Updated:
ಬಿಹಾರದ ಕಲ್ಪನಾ ಕುಮಾರಿ ಟಾಪರ್‌

ನವದೆಹಲಿ: ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸಲಾದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಲ್ಲಿ (ನೀಟ್‌) ಬಿಹಾರದ ಕಲ್ಪನಾ ಕುಮಾರಿ ದೇಶಕ್ಕೆ ಟಾಪರ್‌ ಆಗಿ ಹೊಹೊಮ್ಮಿದ್ದಾರೆ. ಉತ್ತರಪ್ರದೇಶದ ವಿದ್ಯಾರ್ಥಿಗಳು ಗರಿಷ್ಠ ಸಂಖ್ಯೆಯಲ್ಲಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.

ಒಟ್ಟು 720 ಅಂಕಗಳಿಗೆ ಕಲ್ಪನಾ 691 ಅಂಕಗಳನ್ನು ಪಡೆದು ಮೊದಲ ಸ್ಥಾನ ಪಡೆದರೆ, ತೆಲಂಗಾಣದ ರೋಹನ್‌ ಪುರೋಹಿತ್‌  ಎರಡನೇ ಸ್ಥಾನ ಮತ್ತು ದೆಹಲಿಯ ಹಿಮಾಂಶು ಶರ್ಮಾ ಮೂರನೇ ಸ್ಥಾನ ಪಡೆದರು.

ದೇಶದಾದ್ಯಂತ 13.36 ಲಕ್ಷ ವಿದ್ಯಾರ್ಥಿಗಳು ನೀಟ್‌ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು, ಕಳೆದ ಸಾಲಿಗೆ ಹೋಲಿಸಿದರೆ ಶೇ 16.49ರಷ್ಟು ಏರಿಕೆಯಾಗಿತ್ತು. ಈ ಪೈಕಿ, 12.69 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 7.14 ಲಕ್ಷ ಮಂದಿ ತೇರ್ಗಡೆಯಾಗಿದ್ದಾರೆ.

ಮೇ 6ರಂದು ಕೇಂದ್ರ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) ದೇಶದ 136 ನಗರಗಳಲ್ಲಿ, 11 ಭಾಷೆಗಳಲ್ಲಿ ಪರೀಕ್ಷೆ ನಡೆಸಿತ್ತು.

cbseresults.nic.in; cbseneet.nic.in; www.mcc.nic.in ಅಥವಾ www.mohfw.nic.in. – ಈ ವೆಬ್‌ಸೈಟ್‌ಗಳ ಮೂಲಕ ಫಲಿತಾಂಶ ಪಡೆಯಬಹುದಾಗಿದೆ.

ದೆಹಲಿ ಹೈಕೋರ್ಟ್‌ ತಿರಸ್ಕಾರ

ನೀಟ್‌ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂದು ಆರೋಪಿಸಿ ಫಲಿತಾಂಶಕ್ಕೆ ತಡೆಯಾಜ್ಞೆ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್‌ ತಿರಸ್ಕರಿಸಿದೆ.

‘ಗುರುಗ್ರಾಮ ಪರೀಕ್ಷಾ ಕೇಂದ್ರದಲ್ಲಿ ಪ್ರಶ್ನೆಪತ್ರಿಕೆ ಕೊರತೆಯಾಗಿತ್ತು, ಸೋರಿಕೆಯಾಗಿದ್ದರಿಂದ ಈ ರೀತಿ ಆಗಿತ್ತು’ ಎಂದು ವಿದ್ಯಾರ್ಥಿ ಪರ ವಕೀಲರು ನ್ಯಾಯ

ಮೂರ್ತಿ ಪ್ರತಿಭಾ ಎಂ. ಸಿಂಗ್‌ ಅವರ ಗಮನಕ್ಕೆ ತಂದರು.

ಇದಕ್ಕೆ ಸ್ಪಷ್ಟನೆ ನೀಡಿದ ಸಿಬಿಎಸ್‌ಇ ಪರ ವಕೀಲರು, ‘ಪ್ರಶ್ನೆಪತ್ರಿಕೆ ವಿತರಿಸುವ ವೇಳೆ ಗೊಂದಲ ಉಂಟಾಗಿದ್ದರಿಂದ ಕೊರತೆ ಉಂಟಾಗಿತ್ತು, ನಂತರ ತಕ್ಷಣವೇ ಅಲ್ಲಿಗೆ ಪ್ರಶ್ನೆಪತ್ರಿಕೆ ಕಳುಹಿಸಿಕೊಡಲಾಗಿತ್ತು’ ಎಂದು ತಿಳಿಸಿದರು.

ವೈದ್ಯಕೀಯ ಮಂಡಳಿಗೆ ಸುಪ್ರೀಂ ನೋಟಿಸ್‌

ನೀಟ್‌ ಪ್ರವೇಶ ಪರೀಕ್ಷೆಗೆ ಹಾಜರಾಗಲು ಸಾಮಾನ್ಯ ವರ್ಗಕ್ಕೆ ಗರಿಷ್ಠ ವಯೋಮಿತಿ ನಿಗದಿಗೊಳಿಸಿದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ ‌ಕೇಂದ್ರ ಸರ್ಕಾರ ಹಾಗೂ ಭಾರತೀಯ ವೈದ್ಯಕೀಯ ಮಂಡಳಿಗೆ (ಎಂಸಿಐ) ಸುಪ್ರೀಂಕೋರ್ಟ್‌ ನೋಟಿಸ್‌ ನೀಡಿದೆ.

ನ್ಯಾಯಮೂರ್ತಿಗಳಾದ ಆದರ್ಶ್‌ ಕುಮಾರ್‌ ಗೋಯೆಲ್‌ ಹಾಗೂ ಅಶೋಕ್‌ ಭೂಷಣ್‌ ನೇತೃತ್ವದ ನ್ಯಾಯಪೀಠವು, ಎಂಸಿಐ, ಕೇಂದ್ರ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಿದ್ದು, ಸಂಪೂರ್ಣ ವರದಿ ಸಲ್ಲಿಸುವಂತೆ ಸೂಚಿಸಿದೆ. ವಿಚಾರಣೆಯನ್ನು ಜುಲೈ 10ಕ್ಕೆ ಮುಂದೂಡಿದೆ.

ನೀಟ್‌ ಪರೀಕ್ಷೆಗೆ ಹಾಜರಾಲು ಸಾಮಾನ್ಯ ವರ್ಗಕ್ಕೆ 25 ವರ್ಷ ಹಾಗೂ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ 30 ವರ್ಷ ಗರಿಷ್ಠ ವಯೋಮಿತಿ ನಿಗದಿಗೊಳಿಸಿ ಎಂಸಿಐ ಆದೇಶ ಹೊರಡಿಸಿತ್ತು. ಇದನ್ನು 170 ವಿದ್ಯಾರ್ಥಿಗಳು ದೆಹಲಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಮೇ 11ರಂದು  ಹೈಕೋರ್ಟ್ ಈ ಅರ್ಜಿಯನ್ನು ವಜಾಗೊಳಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry