‘ನಾನು’: ವಿಶ್ವಮಾನವತೆಯ ಗುರುತಿನ ಚೀಟಿ

7

‘ನಾನು’: ವಿಶ್ವಮಾನವತೆಯ ಗುರುತಿನ ಚೀಟಿ

Published:
Updated:

ನಾನು ಯಾರು? ಈ ವಿಷಯ ಇಂದು ತುಂಬ ಮುಖ್ಯ.

ನಾನು ಯಾರು? ನನ್ನ ಹೆಸರೇನು? ನನ್ನ ಜಾತಿ ಯಾವುದು? ನನ್ನ ಭಾಷೆ ಯಾವುದು? ನನ್ನ ಕಸುಬು ಯಾವುದು? ನನ್ನ ದೇಶ ಯಾವುದು?  – ಹೀಗೆ ‘ನನ್ನ’ ಎಲ್ಲ ವಿಷಯಗಳೂ ತುಂಬ ಮುಖ್ಯವಾಗುತ್ತಿವೆ. ಈ ವಿವರಗಳು ಪ್ರಭುತ್ವಕ್ಕೂ ಬೇಕು; ಪ್ರಜೆಗಳಿಗೂ ಬೇಕು; ವ್ಯಾಪಾರಿಗಳಿಗೂ ಬೇಕು; ರಾಜಕಾರಣಿಗೂ ಬೇಕು. ಒಟ್ಟಿನಲ್ಲಿ ಎಲ್ಲರಿಗೂ ಬೇಕು. ಪ್ರಭುತ್ವಕ್ಕೆ ನಮ್ಮನ್ನು ಗಮನಿಸುತ್ತಿರಲು ಬೇಕು; ಪ್ರಜೆಗಳಿಗೆ ನಮ್ಮ ಅಂತಸ್ತು–ಸ್ಥಾನಮಾನಗಳನ್ನು ತಿಳಿದುಕೊಳ್ಳಲು ಈ ವಿವರಗಳು ಬೇಕು; ನಮ್ಮ ಆರ್ಥಿಕ ಸ್ಥಿತಿಗತಿಗಳನ್ನು ಪತ್ತೆಮಾಡಿ ಅದಕ್ಕೆ ತಕ್ಕಂಥ ವ್ಯಾಪಾರೀತಂತ್ರಗಳನ್ನು ಹೆಣೆಯುವ ಉಮೇದು ವ್ಯಾಪಾರಿಗಳಿಗೆ; ಚುನಾವಣೆಯದಲ್ಲಿ ಆಮಿಷಗಳನ್ನು ಒಡ್ಡಲು ರಾಜಕಾರಣಿಗಳಿಗೆ ನಮ್ಮ ವಿವರಗಳ ನೆರವು ಬೇಕೇ ಬೇಕು! ಹೀಗಾಗಿ ನಾಗರಿಕಸಮಾಜದಲ್ಲಿ ‘ನಾನು ಯಾರು’ ಎಂದು ಘೋಷಿಸಿಕೊಳ್ಳುವುದು ತುಂಬ ಮಹತ್ವದ ವಿದ್ಯಮಾನ.

‘ನಾನು ಯಾರು?’ ಇದು ಅಧ್ಯಾತ್ಮದಲ್ಲಿ ತುಂಬ ಮಹತ್ವದ ಪ್ರಶ್ನೆ. ಆದರೆ ಅಲ್ಲಿ ಈ ಪ್ರಶ್ನೆಯು ಲೋಕವನ್ನು ಉದ್ದೇಶಿಸಿರುವಂಥದ್ದಲ್ಲ; ನಮ್ಮನ್ನು ನಾವೇ ಉದ್ದೇಶಿಸಿ ಕೇಳಿಕೊಳ್ಳುವಂಥದ್ದು; ಬರಿ ಕೇಳಿಕೊಂಡರೆ ಸಾಲದು, ಉತ್ತರವನ್ನೂ ಅನ್ವೇಷಿಸಬೇಕೆಂದು ಅದು ಒತ್ತಾಯಿಸುತ್ತದೆ. ಅಷ್ಟೇಕೆ, ಈ ಪ್ರಶ್ನೆಯ ಜಾಡನ್ನು ಹಿಡಿದು ಚಿಂತನೆಗೆ ತೊಡಗುವುದೇ ‘ಅಧ್ಯಾತ್ಮ’ ಎಂದೆನಿಸಿಕೊಳ್ಳುತ್ತದೆ. ರಮಣ ಮಹರ್ಷಿಗಳಿಗೆ ಎದುರಾದ ‘ನಾನು ಯಾರು?’ ಎಂಬ ಜಿಜ್ಞಾಸೆಯು ಅಧ್ಯಾತ್ಮಕ್ಷೇತ್ರದಲ್ಲಿ ಕ್ರಾಂತಿಯನ್ನೇ ಉಂಟುಮಾಡಿತು. ಈ ದೇಹ ಎನ್ನುವುದು ‘ನಾನೋ’? ನನ್ನ ಹೆಸರು ‘ನಾನೋ’? ನನ್ನ ವೃತ್ತಿ ‘ನಾನೋ’? ನನ್ನ ಬುದ್ಧಿ ’ನಾನೋ’? ಇಲ್ಲೂ ಕೂಡ ನನ್ನ ಗುರುತನ್ನು ಪತ್ತೆಮಾಡುವುದೇ ಮುಖ್ಯ ಹೌದೆನ್ನಿ! ಆದರೆ ಲೋಕ ಬಯಸುವ ನಮ್ಮ ಗುರುತಿಗೂ, ನಾವು ನಮಗಾಗಿ ಕಂಡುಕೊಳ್ಳಲು ಬಯಸುವ ನಮ್ಮ ನಿಜವಾದ ಗುರುತಿಗೂ ವ್ಯತ್ಯಾಸವಿದೆ. ‘ನಾನು ಯಾರು’ ಎನ್ನುವುದು ಬಹಿರಂಗದಲ್ಲಿ ಎಷ್ಟೆಷ್ಟು ಸ್ಪಷ್ಟವೂ ದೃಢವೂ ಆಗುತ್ತಹೋಗಿ ಕೋಟಿ ಮಂದಿಯಲ್ಲೂ ನನ್ನ ಪ್ರತ್ಯೇಕತೆ ಎದ್ದುಕಾಣುತ್ತದೆಯೋ ಅಷ್ಟಷ್ಟು ನಮ್ಮ ಲೋಕದ ವ್ಯವಹಾರ ಹೆಚ್ಚು ಅಧಿಕೃತವೂ ಕ್ರಿಯಾಶೀಲವೂ ಆಗುತ್ತಹೋಗುವುದು. ಆದರೆ ಅಧ್ಯಾತ್ಮದ ಸಂದರ್ಭದಲ್ಲಿ ಈ ಗುರುತಿನ ವ್ಯವಹಾರ ಇದಕ್ಕೆ ವಿರುದ್ಧವಾಗಿ ನಡೆಯುತ್ತಿರುತ್ತದೆ. ‘ನಾನು ಯಾರು’ ಎಂದು ಸಿದ್ಧವಾಗುವ ವಿವರಗಳು ಕರಗಿಹೊಗುತ್ತ ಅಂತರಂಗದಲ್ಲಿ ವೈಶಾಲ್ಯ ಒದುಗುವುದೇ ಆಧ್ಯಾತ್ಮಿಕತೆಯ ಸಾಧನೆಯ ಪ್ರಮುಖ ಅಂಶ.

ಹೀಗೆ ‘ನಾನು ಯಾರು’ – ಎನ್ನುವುದು ಎರಡು ಭಿನ್ನ ಸ್ತರದಲ್ಲಿ ಕೆಲಸಮಾಡಬಹುದು. ಒಂದರಲ್ಲಿ ಲೌಕಿಕವಾಗಿ ಲಾಭದಾಯಕ ಆಗಬಹುದು; ಮತ್ತೊಂದರಲ್ಲಿ ಅಂಥ ಲಾಭಗಳು ಆಗದೆಯೇ ಇರಬಹುದು. ಆದರೆ ನಾವಿಲ್ಲಿ ಗಮನಿಸಬೇಕಾದ್ದು ‘ದಿಟವಾದ ಲಾಭಕರವಾದುದು ಯಾವುದು?’ ಲೌಕಿಕವಾಗಿ ನಾವು ಯಾವುದನ್ನು ಲಾಭ ಎಂದು ಎಣಿಸುತ್ತಿದ್ದೇವೆಯೋ ನಿಜವಾಗಿ ನೋಡಿದರೆ ಅದರಲ್ಲಿ ನಮಗೆ ನಷ್ಟವೇ ಸಂಭವಿಸುತ್ತಿದೆ! ನಮ್ಮಲ್ಲಿ ‘ನಾನು’ ಎನ್ನುವುದು ಹೆಚ್ಚೆಚ್ಚು ಗಟ್ಟಿಯಾಗುತ್ತಹೋದೆಂತೆಲ್ಲ ಸಮಾಜದಲ್ಲಿ ಪ್ರತ್ಯೇಕತೆಯ ಭಾವ ಹೆಚ್ಚುತ್ತಿರುತ್ತದೆ. ಪ್ರತ್ಯೇಕತೆಯ ಭಾವ ನಮ್ಮಲ್ಲಿ ದೃಢವಾಗುತ್ತಿದ್ದಂತೆ ಪೈಪೋಟಿಯೂ ಹೆಚ್ಚುತ್ತದೆ. ಪೈಪೋಟಿ ಇದ್ದರೆ ಮತ್ಸರ, ದ್ವೇಷ, ಕ್ರೋಧ, ಮೋಸ – ಹೀಗೆ ಒಂದೊಂದೇ ವಿಕಾರಗಳು ಹುಟ್ಟಿಕೊಂಡು, ಅವೆಲ್ಲವೂ ಒಂದಾಗಿ ನಮ್ಮ ವ್ಯಕ್ತಿತ್ವವನ್ನೂ ಸಮಾಜವನ್ನೂ ನಾಶಮಾಡತ್ತಸಾಗುತ್ತವೆ. ಸಂಸ್ಕೃತದ ಸುಭಾಷಿತವೊಂದು ಇಲ್ಲಿ ನೆನಪಾಗುತ್ತದೆ:

ಅಯಂ ನಿಜಃ ಪರೋ ವೇತಿ ಗಣನಾ ಲಘುಚೇತಸಾಂ |

ಉದಾರಚರಿತಾನಾಂ ತು ವಸುದೈವ ಕುಟುಂಬಕಮ್‌|| ಇದರ ತಾತ್ಪರ್ಯ ಹೀಗೆ: ‘ಇವನು ನನ್ನವನು ಅಥವಾ ಬೇರೆಯವನು ಎಂಬ ಎಣಿಕೆ ಅಲ್ಪಮನಸ್ಸಿನವರದ್ದು. ಉದಾರವಾದ ಮನಸ್ಸಿನವನಿಗೆ ಈ ಭೂಮಂಡಲವೇ ಅವನ ಪಾಲಿಗೆ ಕುಟುಂಬವಾಗಿರುತ್ತದೆ.’

ಇಂದು ನಮಗೆ ಬೇಕಾಗಿರುವ ಗುರುತು ಎಂದರೆ ‘ಇಡಿಯ ಜಗತ್ತೇ ನನ್ನ ಮನೆ’ ಎನ್ನುವುದು. ನಾನು ಯಾರು – ಎಂಬ ನಮ್ಮ ಹುಡುಕಾಟ ನಿಜವಾಗಿಯೂ ನಮ್ಮನ್ನು ಸೇರಿಸಬೇಕಾದ ಗುರಿ ಎಂದರೆ ಈ ವಿಶ್ವಮಾನವ ತತ್ತ್ವವೇ ಹೌದು. ಇಡಿಯ ಸೃಷ್ಟಿಗೆ ಸೇರಿದವನು ‘ನಾನು’, ಸೃಷ್ಟಿಯಲ್ಲಿ ಇರುವುದೆಲ್ಲವೂ ‘ನಾನೇ’; ‘ನನ್ನ’ ವಿಸ್ತಾರವೇ ವಿಶ್ವ – ಇಂಥ ಅರಿವೇ ನಮ್ಮ ದಿಟವಾದ ಗುರುತು. ನಾವು ಇಂದು ಅಂಥ ಗುರುತಿನ ಚೀಟಿಗಳಾಗಬೇಕಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry