ಸೋಮವಾರ, ಡಿಸೆಂಬರ್ 9, 2019
24 °C

‘ಆಮಿಷಗಳಿಗೆ ದಲಿತ ಸಮುದಾಯ ಬಲಿ’: ಪತ್ರಕರ್ತ ಇಂದೂಧರ ಹೊನ್ನಾಪುರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಆಮಿಷಗಳಿಗೆ ದಲಿತ ಸಮುದಾಯ ಬಲಿ’: ಪತ್ರಕರ್ತ ಇಂದೂಧರ ಹೊನ್ನಾಪುರ

ಬೆಂಗಳೂರು: ‘ನಮಗೆ ಅಂಬೇಡ್ಕರ್‌ ನಿಜವಾಗಿಯೂ ಆದರ್ಶವಾಗಿದ್ದರೆ ಕೋಮುವಾದಿಗಳ ಆಮಿಷ, ಪಿತೂರಿಗೆ ನಾವು ಸುಲಭವಾಗಿ ಬಲಿಯಾಗುತ್ತಿರಲಿಲ್ಲ’ ಎಂದು ಪತ್ರಕರ್ತ ಇಂದೂಧರ ಹೊನ್ನಾಪುರ ಅಭಿಪ್ರಾಯಪಟ್ಟರು.

ರಾಜ್ಯ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕದ ವತಿಯಿಂದ ಶನಿವಾರ ಆಯೋಜಿಸಿದ್ದ ಪ್ರೊ.ಬಿ.ಕೃಷ್ಣಪ್ಪ ಅವರ 80ನೇ ಜನ್ಮದಿನದ ಅಂಗವಾಗಿ ‘ಸಾಮಾಜಿಕ ಸಮತಾ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಜಾಗೃತಿ ಕೊರತೆಯಿಂದಾಗಿ ನಮ್ಮ ಅಸ್ಥಿತ್ವವನ್ನು ಮಾರಿಕೊಳ್ಳುತ್ತಿದ್ದೇವೆ. ಒಡೆದಾಳುವವರ ಪಿತೂರಿಯಿಂದ ಕೋಮುವಾದ, ಹಿಂದುತ್ವವನ್ನು ಒಪ್ಪಿಕೊಳ್ಳುತ್ತಿದ್ದೇವೆ. ಇದರಿಂದಾಗಿ ದಲಿತ ಚಳವಳಿಗೆ ಸೋಲಾಗಿದೆ. ಮೀಸಲಾತಿ ಹೆಸರಿನಲ್ಲಿ ಮೋಸ, ವಂಚನೆ ನಡೆಯುತ್ತಿದ್ದರೂ ಮೌನವಾಗಿದ್ದೇವೆ. ಮೀಸಲಾತಿ ಜಾರಿ, ದಲಿತರ ಹತ್ಯೆ ಮತ್ತು ಕಾನೂನಿನನ್ವಯ ಸವಲತ್ತುಗಳು ಸಿಗದಿರುವುದರ ಬಗ್ಗೆ ಸುಪ್ರೀಂ ಕೋರ್ಟ್ ಏಕೆ ಪ್ರಶ್ನಿಸುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌.ಜಿ ಸಿದ್ದರಾಮಯ್ಯ, ‘ಬ್ರಾಹ್ಮಣವಾದ ಹಿಂದಿನಿಂದಲೂ ದಲಿತ ಚಳವಳಿಗಳನ್ನು ಉಳುವುಗೊಟ್ಟಿಲ್ಲ. ನಮ್ಮ ಹೋರಾಟಗಳನ್ನು ಹತ್ತಿಕ್ಕುವ ಶಕ್ತಿಗಳು ನಮ್ಮೊಳಗೆ ಇವೆ. ಜನ ರಾಜಕಾರಣದ ಬದಲು, ಜಾತಿ ರಾಜಕಾರಣ ನಡೆಯುತ್ತಿರುವುದು ವಿಷಾದದ ಸಂಗತಿ’ ಎಂದು ಹೇಳಿದರು.

ಪತ್ರಕರ್ತ ದಿನೇಶ್ ಅಮೀನ್‌ ಮಟ್ಟು ಮಾತನಾಡಿ, ‘ಅಗೋಚರ ಅಸ್ಪೃಷ್ಯತೆ ಅಪಾಯಕಾರಿಯಾಗಿ ಬೆಳೆಯುತ್ತಿದೆ. ಖಾಸಗಿ ಕ್ಷೇತ್ರದಲ್ಲಿ ಉದ್ಯೋಗ ಮೀಸಲಾತಿಗಾಗಿ ಹೋರಾಟ ನಡೆಸಬೇಕಿದೆ. ದಲಿತ ಚಳವಳಿಗಳ ಗುರಿ, ಆದ್ಯತೆಗಳು ಬದಲಾಗಬೇಕು’ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)