ದೇವಸ್ಥಾನದ ಶೆಡ್‌ಗೆ ನುಗ್ಗುವ ಮಳೆ ನೀರು

7
ಮಲೆಮಹದೇಶ್ವರ ಬೆಟ್ಟದಲ್ಲಿ ಭಕ್ತರ ವಿಶ್ರಾಂತಿಗಾಗಿ ನಿರ್ಮಿಸಿರುವ ಶೆಡ್‌

ದೇವಸ್ಥಾನದ ಶೆಡ್‌ಗೆ ನುಗ್ಗುವ ಮಳೆ ನೀರು

Published:
Updated:
ದೇವಸ್ಥಾನದ ಶೆಡ್‌ಗೆ ನುಗ್ಗುವ ಮಳೆ ನೀರು

ಮಲೆಮಹದೇಶ್ವರ ಬೆಟ್ಟ: ಇಲ್ಲಿನ ಮಲೆಮಹದೇಶ್ವರ ದೇವಾಲಯದಲ್ಲಿ ಭಕ್ತರ ವಿಶ್ರಾಂತಿಗಾಗಿ ನಿರ್ಮಿಸಿರುವ ಶೆಡ್‌ಗೆ ಮಳೆ ನೀರು ನುಗ್ಗುತ್ತಿದೆ. ಇದರಿಂದ ಭಕ್ತಾದಿಗಳ ವಿಶ್ರಾಂತಿಗೆ ಭಂಗ ಉಂಟಾಗುತ್ತಿದೆ.

ಭಕ್ತರು ನೆರಳಿನಲ್ಲಿ ವಿಶ್ರಾಂತಿ ಪಡೆಯಲೆಂದು ಸುಮಾರು ₹4.75 ಕೋಟಿ ವೆಚ್ಚದಲ್ಲಿ ಶೆಡ್‌ ನಿರ್ಮಿಸಲಾಗಿದೆ. ಆದರೆ, ಅವೈಜ್ಞಾನಿಕ ಕಾಮಗಾರಿಯಿಂದಾಗಿ ರಸ್ತೆಯ ಮೇಲೆ ಬಿದ್ದ ನೀರೂ ಶೆಡ್‌ಗೆ ಬರುತ್ತಿದೆ. ಅಲ್ಲದೆ, ಶೆಡ್‌ ಮೇಲೆ ಬಿದ್ದ ನೀರು ಹೊರಗೆ ಹೋಗಲೆಂದು ಪೈಪ್‌ ಹಾಕಲಾಗಿದೆ. ಆದರೆ, ಆ ಪೈಪ್‌ನಲ್ಲಿ ಬಂದ ನೀರು ಸಹ ಶೆಡ್‌ ಆವರಣದೊಳಗೆ ನುಗುತ್ತದೆ.

ಶೆಡ್‌ಗೆ ಹೊಂದಿಕೊಂಡಂತೆ ವಾಹನ ನಿಲುಗಡೆ ಸ್ಥಳವಿದೆ. ಇಲ್ಲಿ ಬಿದ್ದ ಮಳೆ ನೀರು ಕಸ–ಕಡ್ಡಿ, ಮಣ್ಣನ್ನು ಹೊತ್ತು ಶೆಡ್‌ಗೆ ಬರುವುದರಿಂದ ಆವರಣ ಕೆಸರುಮಯವಾಗುತ್ತಿದೆ. ದೇವಸ್ಥಾನದ ಸಿಬ್ಬಂದಿ ನೀರನ್ನು ಹೊರಹಾಕುತ್ತಾರೆ. ಆದರೆ, ಮಳೆ ಬಂದರೆ ಮತ್ತೆ ಕೆಸರುಮಯವಾಗುತ್ತದೆ. ಇದರಿಂದ ಭಕ್ತರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ.

ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಆದರೆ, ದೇವಸ್ಥಾನದಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸುವಲ್ಲಿ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವು ವಿಫಲವಾಗಿದೆ ಎಂದು ಮೈಸೂರಿನಿಂದ ಬಂದಿದ್ದ ಮಹೇಶ್‌ ಹಾಗೂ ಆನಂದ್‌ ದೂರಿದರು.

ಯಾತ್ರಾ ಸ್ಥಳವಾಗಿರುವ ಇಲ್ಲಿಗೆ ಪ್ರತಿ ವರ್ಷ ಐದಾರು ಬಾರಿ ಬರುತ್ತೇವೆ. ಹೆಚ್ಚಿನ ಆದಾಯ ತರುವ ದೇವಾಲಯಗಳಲ್ಲಿ ಇದೂ ಒಂದು. ಆದರೆ, ಪ್ರಾಧಿಕಾರದ ನಿರ್ಲಕ್ಷ್ಯದಿಂದಾಗಿ ಭಕ್ತರಿಗೆ ತೊಂದರೆ ಉಂಟಾಗುತ್ತಿದೆ. ದೇವಾಲಯದ ಮುಂಭಾಗದಲ್ಲಿರುವ ಶೆಡ್‌ನಲ್ಲಿ ಕನಿಷ್ಠ ಸೌಕರ್ಯಗಳನ್ನೂ ಕಲ್ಪಿಸಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಮೂಲಸೌಕರ್ಯ ಮರೀಚಿಕೆ

ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಶೆಡ್‌ ನಿರ್ಮಿಸಲಾಗಿದೆ. ಆದರೆ, ಬಿಸಿಲಿನ ಝಳದಿಂದ ಬಸವಳಿದ ಭಕ್ತರು ನೆರಳಿಗಾಗಿ ಇಲ್ಲಿಗೆ ಬಂದರೆ ನೆಮ್ಮದಿಗಿಂತ ಕಿರಿಕಿರಿ ಹೆಚ್ಚು. ಮಳೆಗಾಲದಲ್ಲಿ ಇಲ್ಲಿಗೆ ಬರಲು ಸಾಧ್ಯವಾಗುವುದಿಲ್ಲ. ಒಳಚರಂಡಿ ವ್ಯವಸ್ಥೆ ಇದ್ದರೂ, ಮಳೆ ನೀರು ಹೋಗಲು ಚರಂಡಿಗೆ ಸಂಪರ್ಕ ಕಲ್ಪಿಸಿಲ್ಲ. ಅಲ್ಲದೆ, ಶೆಡ್‌ನ ತಳಭಾಗದಲ್ಲಿ ಹಾಕಿರುವ ಕಾಂಕ್ರೀಟ್‌ನ ಹೊದಿಕೆ ಕಳಪೆ ಗುಣಮಟ್ಟದಿಂದ ಕೂಡಿದೆ. ಮುಂಗಾರುಮಳೆ ಚುರುಕುಗೊಂಡಿದ್ದು, ಮತ್ತಷ್ಟು ಅವ್ಯವಸ್ಥೆ ಆಗುವ ಮುನ್ನವೇ ಅಧಿಕಾರಿಗಳು ಎಚ್ಚೆತ್ತು ಸಮಸ್ಯೆ ಬಗೆಹರಿಸಬೇಕು ಎಂದು ಮಹೇಶ್‌ ಆಗ್ರಹಿಸಿದರು.

ಜಿ.ಪ್ರದೀಪ್‌ ಕುಮಾರ್‌

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry