‘ಗುರುವಿಗೆ ಗೌರವ ಕೊಡದ ಮೋದಿ’

7
ಪ್ರಧಾನಿ ವಿರುದ್ಧ ಕಾಂಗ್ರೆಸ್‌ ಅಧ್ಯಕ್ಷ ಟೀಕೆ

‘ಗುರುವಿಗೆ ಗೌರವ ಕೊಡದ ಮೋದಿ’

Published:
Updated:
‘ಗುರುವಿಗೆ ಗೌರವ ಕೊಡದ ಮೋದಿ’

ಮುಂಬೈ: ಹಿಂದುತ್ವದ ಬಗ್ಗೆ ಪಾಠ ಮಾಡುವ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಗುರು ಎಲ್‌.ಕೆ. ಅಡ್ವಾಣಿ ಅವರಿಗೆ ಗೌರವ ಕೊಡಲಿಲ್ಲ. ಅಷ್ಟೇ ಅಲ್ಲದೆ, ಅವರನ್ನು ಅವಮಾನಿಸಿದ್ದಾರೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ.

ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ರಾಹುಲ್‌, ‘ಮೋದಿ ಅವರ ಗುರು ಯಾರು ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಸಮಾರಂಭಗಳಲ್ಲಿ ಕೂಡ ಅವರನ್ನು ಮೋದಿ ಘನತೆಯಿಂದ ನಡೆಸಿಕೊಳ್ಳಲಿಲ್ಲ. ನಾನು ಸದಾ ಶಿಷ್ಟಾಚಾರ ಅನುಸರಿಸುತ್ತೇನೆ. ಕಾರ್ಯಕ್ರಮಗಳಲ್ಲಿ ನಾನು ಸದಾ ಅಡ್ವಾಣಿ ಜತೆಗೆ ಇರುತ್ತೇನೆ’ ಎಂದು ಹೇಳಿದರು.

ಹಿರಿಯ  ಮುಖಂಡರಾದ ಅಟಲ್‌ ಬಿಹಾರಿ ವಾಜಪೇಯಿ, ಜಸ್ವಂತ್‌ ಸಿಂಗ್‌ ಮತ್ತು ಅವರ ಕುಟುಂಬಗಳನ್ನು ಕೂಡ ಮೋದಿ ಅವರು ಗೌರವದಿಂದ ನಡೆಸಿಕೊಂಡಿಲ್ಲ ಎಂದರು.

ಬಿಜೆಪಿ ತಿರುಗೇಟು: ಆದರೆ, ರಾಹುಲ್‌ ಟೀಕೆಯನ್ನು ಅಲ್ಲಗಳೆದಿರುವ ಬಿಜೆಪಿ, ಅವರು ‘ತೀರಾ ಕೀಳುಮಟ್ಟದ ರಾಜಕಾರಣ’ ಮಾಡುತ್ತಿದ್ದಾರೆ ಎಂದು ಆರೋಪಿಸಿದೆ. ದೇಶದ ಅತ್ಯಂತ ಹಳೆಯ ರಾಜಕೀಯ ಪಕ್ಷದ ಅಧ್ಯಕ್ಷ ಇಷ್ಟೊಂದು ಕೀಳು ಮಟ್ಟಕ್ಕೆ ಇಳಿಯಬಾರದು ಎಂದು ಹೇಳಿದೆ.

ರಾಹುಲ್‌ ಅವರಿಗೆ ಭಾರತೀಯ ಮೌಲ್ಯಗಳ ಬಗ್ಗೆ ಯಾವುದೇ ಅರಿವು ಇಲ್ಲ ಎಂಬುದು ಸ್ಪಷ್ಟ. ಅವರು ಸದಾ ರಾಜಕೀಯ ಮತ್ತು ಸಾಮಾಜಿಕ ನಿಯಮಗಳನ್ನು ಮುರಿಯುತ್ತಲೇ ಇರುತ್ತಾರೆ ಎಂದು ಬಿಜೆಪಿ ವಕ್ತಾರ ಅನಿಲ್‌ ಬಲೂನಿ ಹೇಳಿದ್ದಾರೆ.

**

ಮಾನನಷ್ಟ ಮೊಕದ್ದಮೆ: ರಾಹುಲ್‌ ವಿರುದ್ಧ ಆರೋಪ ನಿಗದಿ

ಠಾಣೆ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಕಾರ್ಯಕರ್ತರೊಬ್ಬರು ಸಲ್ಲಿಸಿರುವ ಮಾನನಷ್ಟ ಮೊಕದ್ದಮೆಯಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ವಿಚಾರಣೆ ಎದುರಿಸಲಿದ್ದಾರೆ. ಇಲ್ಲಿನ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಅವರ ವಿರುದ್ಧ ಆರೋಪ ನಿಗದಿ ಮಾಡಿದೆ.

ರಾಹುಲ್‌ ಅವರು ಸಿವಿಲ್‌ ನ್ಯಾಯಾಧೀಶ ಎ.ಐ. ಶೇಖ್‌ ಅವರ ಮುಂದೆ ಮಂಗಳವಾರ ಬೆಳಿಗ್ಗೆ ಹಾಜರಾದರು. ರಾಹುಲ್‌ ವಿರುದ್ಧದ ಆರೋಪಗಳನ್ನು ನ್ಯಾಯಾಧೀಶರು ಓದಿ ಹೇಳಿದರು. ಆದರೆ ರಾಹುಲ್‌ ಅವರು ‘ನಾನು ಯಾವ ತಪ್ಪನ್ನೂ ಮಾಡಿಲ್ಲ’ ಎಂದರು.

ಬಳಿಕ ಅವರ ವಿರುದ್ಧ ಆರೋಪ ನಿಗದಿ ಮಾಡಲಾಯಿತು.

2014ರ ಮಾರ್ಚ್‌ 6ರಂದು ನಡೆದ ಚುನಾವಣಾ ಪ್ರಚಾರ ಭಾಷಣದಲ್ಲಿ ಮಾತನಾಡಿದ್ದ ರಾಹುಲ್‌ ಅವರು, ಮಹಾತ್ಮ ಗಾಂಧಿ ಹತ್ಯೆ ಹಿಂದೆ ಆರ್‌ಎಸ್‌ಎಸ್‌ ಕೈವಾಡ ಇದೆ ಎಂದಿದ್ದರು. ಇದರ ವಿರುದ್ಧ, ಆರ್‌ಎಸ್‌ಎಸ್‌ ಕಾರ್ಯಕರ್ತ ರಾಜೇಶ್‌ ಕುಂಠೆ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

**

ಅಡ್ವಾಣಿ ಅವರನ್ನು ಮೋದಿ ನಡೆಸಿಕೊಂಡ ರೀತಿ ಬಗ್ಗೆ ನನಗೆ ಸದಾ ಬೇಸರ ಅನಿಸುತ್ತದೆ. ಮೋದಿಗಿಂತ ಕಾಂಗ್ರೆಸ್‌ ಪಕ್ಷ ಅವರಿಗೆ ಹೆಚ್ಚು ಗೌರವ ಕೊಟ್ಟಿದೆ.

–ರಾಹುಲ್‌ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry