ಬಿಡುವು ನೀಡಿದ ಮಳೆ: ಬಿತ್ತನೆ ಚುರುಕು

7
ಮುಂಗಾರು ಹಂಗಾಮಿನಲ್ಲಿ ಹೆಸರು, ಈರುಳ್ಳಿ, ಶೇಂಗಾ ಬಿತ್ತನೆಗೆ ಗದಗ ಜಿಲ್ಲೆಯ ರೈತರ ಆಸಕ್ತಿ

ಬಿಡುವು ನೀಡಿದ ಮಳೆ: ಬಿತ್ತನೆ ಚುರುಕು

Published:
Updated:
ಬಿಡುವು ನೀಡಿದ ಮಳೆ: ಬಿತ್ತನೆ ಚುರುಕು

ಗದಗ: ಕಳೆದ ಐದು ದಿನಗಳಿಂದ ಮೃಗಶಿರ ಮಳೆ ಬಿಡುವು ನೀಡಿದ್ದು, ಜಿಲ್ಲೆಯಾದ್ಯಂತ ಬಿತ್ತನೆ ಕಾರ್ಯ ಚುರುಕು ಪಡೆದಿದೆ. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಒಟ್ಟು 2.40 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿಯನ್ನು ಕೃಷಿ ಇಲಾಖೆ ಹಾಕಿಕೊಂಡಿದೆ.

ವಾರದ ಹಿಂದಿನವರೆಗೆ ಮಳೆ ಬಿಡುವು ನೀಡದ ಕಾರಣ ಜಮೀನಿನಲ್ಲಿ ನೀರು ನಿಂತು, ರೈತರು ಕೃಷಿ ಚಟವಟಿಕೆ ಪ್ರಾರಂಭಿಸಲು ಹಿನ್ನಡೆ ಆಗಿತ್ತು. ಇದೀಗ ಮತ್ತೆ ಬಿಸಿಲು ಮೂಡಿದ್ದು, ರೈತರು ಬಿತ್ತನೆ ಪ್ರಾರಂಭಿಸಿದ್ದಾರೆ.

ಜಿಲ್ಲೆಯಲ್ಲಿ ಮೇ ತಿಂಗಳ ವಾಡಿಕೆ ಮಳೆ ಪ್ರಮಾಣ 71.6 ಮಿ.ಮೀ. ಆದರೆ, ಈ ಬಾರಿ ವಾಡಿಕೆಗಿಂತ ಎರಡು ಪಟ್ಟು ಹೆಚ್ಚು ಅಂದರೆ 145.4 ಮಿ.ಮೀ ಮಳೆಯಾಗಿತ್ತು. ಹೀಗಾಗಿ ಗದಗ, ಶಿರಹಟ್ಟಿ, ರೋಣ, ಲಕ್ಷ್ಮೇಶ್ವರ ಭಾಗದಲ್ಲಿ ರೈತರು ಮೇ ತಿಂಗಳ ಅಂತ್ಯದಲ್ಲೇ ಹೆಸರು ಬಿತ್ತನೆ ಮಾಡಿದ್ದರು.

ಬೀಜ ಈಗ ಚಿಗುರೊಡೆದಿದ್ದು, ರೈತರು ಬೆಳೆ ನಡುವೆ ಕಳೆ ತೆಗೆಯಲು ಎಡೆ ಹೊಡೆಯುತ್ತಿದ್ದಾರೆ. ಗದಗ ತಾಲ್ಲೂಕಿನ ಸಂಭಾಪುರ, ಅಡವಿಸೋಮಾಪುರ, ಲಕ್ಕುಂಡಿ, ಹಾತಲಗೇರಿ ಗ್ರಾಮಗಳಲ್ಲಿ ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ.

ಕಳೆದೆರಡು ವರ್ಷ ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದ ಮಳೆ ಲಭಿಸಿರಲಿಲ್ಲ. ಹೀಗಾಗಿ ಬಿತ್ತನೆ ಪ್ರದೇಶ ಗಣನೀಯವಾಗಿ ತಗ್ಗಿತ್ತು. ಈ ಬಾರಿ ಉತ್ತಮ ಮಳೆ ಲಭಿಸಿರುವುದರಿಂದ ದ್ವಿದಳ ಧಾನ್ಯ ಬಿತ್ತನೆ ಪ್ರದೇಶದ ವಿಸ್ತೀರ್ಣ ಹೆಚ್ಚಾಗುವ ನಿರೀಕ್ಷೆ ಇದೆ. ಈ ಬಾರಿ ಒಟ್ಟು 80 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಹೆಸರು ಬಿತ್ತನೆ ಗುರಿಯನ್ನು ಕೃಷಿ ಇಲಾಖೆ ನಿಗದಿಪಡಿಸಿದೆ.

ಕಳೆದ ವರ್ಷ 78 ಹೆಕ್ಟೇರ್‌ ಪ್ರದೇಶದಲ್ಲಿ ಹೆಸರು ಬಿತ್ತನೆ ಗುರಿ ನಿಗದಿಪಡಿಸಲಾಗಿತ್ತು. ಆದರೆ, ಮಳೆ ಕೊರತೆಯಿಂದ ಬಿತ್ತನೆ ತಡವಾಗಿ ಇಳುವರಿ ಪ್ರಮಾಣ ಗಣನೀಯವಾಗಿ ಕುಸಿದು ರೈತರಿಗೆ ತೀವ್ರ ನಷ್ಟವಾಗಿತ್ತು.

‘ಆರ್ಥಿಕವಾಗಿ ಚೆನ್ನಾಗಿರುವ ದೊಡ್ಡ ರೈತರು ಈಗಾಗಲೇ ಬಿತ್ತನೆ ಕಾರ್ಯ ಮುಗಿಸಿದ್ದಾರೆ. ನಮ್ಮಂತ ಸಾಮಾನ್ಯ ರೈತರು ಈಗ ಬಿತ್ತನೆ ಪ್ರಾರಂಭಿಸುತ್ತಿದ್ದೇವೆ. ನಾಲ್ಕು ಎಕರೆ ಹೊಲದಲ್ಲಿ ಅರ್ಧ ಶೇಂಗಾ, ಇನ್ನರ್ಧ ಭಾಗದಲ್ಲಿ ಈರುಳ್ಳಿ ಬಿತ್ತನೆ ಮಾಡುತ್ತೇವೆ. ಕೂಲಿ ಕಾರ್ಮಿಕರು ಸಿಗುತ್ತಿಲ್ಲ, ಮನೆ ಮಂದಿ ಎಲ್ಲ ಸೇರಿ ಕೆಲಸ ಮಾಡುತ್ತಿದ್ದೇವೆ’ ಎಂದು ಭೂಮಿ ಹದಗೊಳಿಸುತ್ತಿದ್ದ ಸಂಭಾಪುರ ಗ್ರಾಮದ ರೈತ ದ್ಯಾಮಪ್ಪ ಕಾಯಣ್ಣವರ ಹೇಳಿದರು.

ಈ ಬಾರಿ ಗದಗ ಜಿಲ್ಲೆಯಲ್ಲಿ 50 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಗೋವಿನ ಜೋಳ, 42 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಶೇಂಗಾ, 4 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ತೊಗರಿ ಬಿತ್ತನೆ ಗುರಿ ನಿಗದಿಪಡಿಸಲಾಗಿದೆ.

ಕಳೆದ ಬಾರಿ ಮುಂಗಾರಿನಲ್ಲಿ ಬಳ್ಳಿ ಶೇಂಗಾ ಮತ್ತು ಈರುಳ್ಳಿ ರೈತರ ಕೈ ಹಿಡಿದಿತ್ತು. ಹೀಗಾಗಿ ಈ ಬಾರಿಯೂ ಹೆಚ್ಚಿನ ರೈತರು ಶೇಂಗಾ ಮತ್ತು ಈರುಳ್ಳಿ ಬಿತ್ತಲು ಆಸಕ್ತಿ ತೋರಿಸುತ್ತಿದ್ದಾರೆ.

‘ರೈತರಿಗೆ ಅಲ್ಪಾವಧಿಯಲ್ಲಿ ಹೆಚ್ಚಿನ ಲಾಭ ತಂದುಕೊಡುವ ಹೆಸರು ಬಿತ್ತನೆ ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಹೀಗಾಗಿ ಹೆಸರಿನ ಬೀಜಕ್ಕೆ ಹೆಚ್ಚು ಬೇಡಿಕೆ ಕಂಡುಬರುತ್ತಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

15 ದಿನಗಳ ಹಿಂದೆಯೇ ಬಿತ್ತನೆ ಮಾಡಿದ್ದೀವಿ. ಈಗ ಬೆಳೆ ಹುಟ್ಟಿ ನಿಂತೈತಿ. ಭೂಮಿಯಲ್ಲಿ ತೇವಾಂಶ ಇದೆ. ಇನ್ನೊಂದು ವಾರ ಬಿಟ್ಟು ಮತ್ತೆ ಮಳೆಯಾದರೆ ಬೆಳೆ ಕೈ ಹಿಡಿಯುತ್ತದೆ

– ಗುರುಬಸಪ್ಪ ಬಳಿಗಾರ, ಲಕ್ಕುಂಡಿ ಗ್ರಾಮದ ರೈತ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry