ಮನೆಗೇ ಹೋಗಿ ಆಯ್ತಾ...

7

ಮನೆಗೇ ಹೋಗಿ ಆಯ್ತಾ...

Published:
Updated:
ಮನೆಗೇ ಹೋಗಿ ಆಯ್ತಾ...

ಬೆಂಗಳೂರು: ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರು ಪತ್ರಕರ್ತರೊಂದಿಗೆ ಮಾತನಾಡುವ ಶೈಲಿಯೇ ಬದಲಾಗಿದೆ. ಇತ್ತೀಚೆಗೆ ಕಗ್ಗದಾಸಪುರ ಹಾಗೂ ಬೆಳ್ಳಂದೂರು ಕೆರೆಗೆ ಭೇಟಿ ನೀಡಿದ ಬಳಿಕ ಬಿಬಿಎಂಪಿ ಕಚೇರಿಯಲ್ಲಿ ಅವರು ಅಧಿಕಾರಿಗಳ ಸಭೆ ನಡೆಸಿದರು.

ಬೆಳಿಗ್ಗೆಯಿಂದ ಪತ್ರಕರ್ತರನ್ನು ಉಪವಾಸ ಸುತ್ತಾಡಿಸಿದ್ದ ಅವರು ಪತ್ರಿಕಾಗೋಷ್ಠಿಗೂ ಬಹಳ ಕಾಲ ಕಾಯಿಸಿದರು. ಕೊನೆಗೂ ತಮ್ಮ ಕೊಠಡಿಯ ಬಾಗಿಲು ತೆರೆದು, ‘ಸಭೆ ನಡೆಸಿದ ಬಳಿಕ ನಿಮ್ಮ ಜತೆ ಮಾತನಾಡಬೇಕೆಂದಿದ್ದೆ. ನಿಮಗೆ ಮನೆಗೆ ಹೋಗಲು ತಡವಾಗುತ್ತದೆಯಲ್ಲವೇ ಅದಕ್ಕೆ ಈಗಲೇ ಮಾತನಾಡುತ್ತಿದ್ದೇನೆ’ ಎಂದು ಕುಟುಕಿದರು.

‘ಮನೆಗೆ ಹೋಗುವುದಿಲ್ಲ ಸಾರ್‌, ನಿಮ್ಮದೇ ಸುದ್ದಿ ಬರೆಯಬೇಕಲ್ಲಾ. ಅದಕ್ಕೆ ಕಚೇರಿಗೆ ಹೋಗಬೇಕು’ ಎಂದು ಪತ್ರಕರ್ತರು ತಿರುಗೇಟು ನೀಡಿದರು. ಅಂತೂ ಎಲ್ಲ ಕ್ಯಾಮೆರಾಗಳು ಚಾಲೂ ಆದವು. ಅಷ್ಟರಲ್ಲೆ ಇನ್ನೊಂದು ತಗಾದೆ.

‘ಕ್ಯಾಮೆರಾಗಳ ದೀಪಗಳನ್ನು ಆರಿಸಬೇಕು. ಇಲ್ಲವಾದರೆ ಮಾತನಾಡುವುದಿಲ್ಲ’ ಅಂದುಬಿಟ್ಟರು. ಪುಟ್ಟ ಎಲ್‌ಇಡಿ ದೀಪಗಳು ಡಿಸಿಎಂ ಕಣ್ಣಿಗೆ ಚುಚ್ಚುತ್ತಿದ್ದವಂತೆ...

ಕ್ಯಾಮೆರಾಮನ್‌ಗಳು ಅದ್ಹೇಗೋ ಪರದಾಡಿ ಗೋಷ್ಠಿಯನ್ನು ಮುಗಿಸಿದರು. ಹಳೆಯ ಟೇಪುಗಳನ್ನೇ ಪುನಃ ಬಿಚ್ಚಿಟ್ಟ ಡಿಸಿಎಂ, ಕೊನೆಗೆ ‘ಆಯ್ತು ಇನ್ನು ಮನೆಗೇ ಹೋಗಿ ಆಯ್ತಾ’ ಎಂದು ಪತ್ರಕರ್ತರನ್ನು ಮನೆಗೆ ಕಳುಹಿಸುವ ‘ಕಾಳಜಿ’ ಮೆರೆದರು.

‘ಇಲ್ಲ ಸರ್‌ ಆಫೀಸಿಗೆ ಹೋಗ್ತಿದ್ದೀವಿ’ ಎಂದ ಒಬ್ಬ ಪತ್ರಕರ್ತ. ‘ಹೌದಾ ಆಯ್ತು, ಆಫೀಸಿಗೇ ಹೋಗಿ ಆಯ್ತಾ...’ ಎಂದು ಮತ್ತಷ್ಟು ‘ಮಮಕಾರ’ ತೋರಿದರು. ಬೆಳಿಗ್ಗಿಂದಲೇ ಸುತ್ತಾಡಿ ಹೈರಾಣಾಗಿದ್ದ ಪತ್ರಕರ್ತರು ವೃಥಾ ವಾದಿಸಿ ಕಾಲಹರಣ ಬೇಡ ಅಂದು ಸ್ಥಳದಿಂದ ತೆರಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry