7

ಹರಪನಹಳ್ಳಿ: ಸಂಭ್ರಮದ ರಂಜಾನ್ ಆಚರಣೆ

Published:
Updated:
ಹರಪನಹಳ್ಳಿ: ಸಂಭ್ರಮದ ರಂಜಾನ್ ಆಚರಣೆ

ಹರಪನಹಳ್ಳಿ: ಪವಿತ್ರ ರಂಜಾನ್ ಹಬ್ಬವನ್ನು ಪಟ್ಟಣದಲ್ಲಿ ಶನಿವಾರ ಶ್ರದ್ಧಾ ಭಕ್ತಿಯಿಂದ ಆಚರಿಸುವ ಮೂಲಕ ಮುಸ್ಲಿಮರ ಮೂವತ್ತು ದಿನಗಳ ಉಪವಾಸ ಅಂತ್ಯಗೊಂಡಿತು.

ಸಾವಿರಾರು ಮುಸ್ಲಿಮರು ಮೇಲು –ಕೀಳೆಂಬ ಭೇದ–ಭಾವ ತೊರೆದು ಪಟ್ಟಣದ ಮೂರು ಕಡೆಗಳಲ್ಲಿ ಸಾಮೂಹಿಕ ಪ್ರಾರ್ಥನೆ ನೆರವೇರಿಸುವ ಮೂಲಕ ರಂಜಾನ್ ಹಬ್ಬದ ಮೆರುಗು ಹೆಚ್ಚಿಸಿದರು.

ಹೊಸಪೇಟೆ ರಸ್ತೆಯ ತರಳಬಾಳು ಕಲ್ಯಾಣ ಮಂಟಪ ಹಿಂಭಾಗದ ದರ್ಗಾದಲ್ಲಿ ಅಲಿ ಆಧೀಸ್ ಪಂಗಡದ ಮುಸ್ಲಿಮರು ಬೆಳಿಗ್ಗೆ 8.30ಕ್ಕೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಹಡಗಲಿ ರಸ್ತೆಯ ದ‌ರ್ಗಾದಲ್ಲಿ ಅಲಿ ಸುನ್ನಿ ಪಂಗಡದವರು 10 ಗಂಟೆಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಎಚ್‌ಪಿಎಸ್ ಕಾಲೇಜು ಹಿಂಭಾಗ ಹಕ್ ಸಮಿತಿಯವರು 8 ಗಂಟೆಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ರಂಜಾನ್ ಹಿನ್ನೆಲೆಯಲ್ಲಿ ಸಾವಿರಾರು ಮುಸ್ಲಿಂ ಮಹಿಳೆಯರೂ ಸಾಮೂಹಿಕ ಪ್ರಾರ್ಥನೆ ನೆರವೇರಿಸಿದರು. ಇದಕ್ಕಾಗಿ ಹೊಸಪೇಟೆ ರಸ್ತೆಯ ಈದ್ಗಾ ಮೈದಾನದಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿತ್ತು. ಬೆಳಿಗ್ಗೆ 8 ಗಂಟೆ ವೇಳೆಗೆ ಒಂದೆಡೆ ಜಮಾಯಿಸಿದ ಮುಸ್ಲಿಂ ಮಹಿಳೆಯರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ರಂಜಾನ್ ಹಬ್ಬಕ್ಕೆ ಶುಭ ಕೋರಿದರು.

ಶನಿವಾರ ಮುಂಜಾನೆಯಿಂದಲೇ ಮಕ್ಕಳು, ಮೊಮ್ಮಕ್ಕಳು, ಸ್ನೇಹಿತರು, ಸಂಬಂಧಿಗಳೊಂದಿಗೆ ಮಸೀದಿಗಳಿಗೆ ತೆರಳಿದ ಮುಸ್ಲಿಮರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ನಂತರ ಬಡ ಮುಸ್ಲಿಮರಿಗೆ ಬಟ್ಟೆ, ಆಹಾರ ಸಾಮಗ್ರಿ, ಹಣವನ್ನು ದಾನವಾಗಿ ನೀಡುವ ಮೂಲಕ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದರು.

ಪಟ್ಟಣದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆದ ಹಡಗಲಿ ರಸ್ತೆ, ಹೊಸಪೇಟೆ ರಸ್ತೆಯ ಈದ್ಗಾ ಮೈದಾನಗಳ ಸುತ್ತ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry