ಬ್ಯಾಂಕ್‌ಗಳ ವಿಲೀನ: ಗ್ರಾಹಕರ ಪರದಾಟ

7

ಬ್ಯಾಂಕ್‌ಗಳ ವಿಲೀನ: ಗ್ರಾಹಕರ ಪರದಾಟ

Published:
Updated:

ಔರಾದ್: ಎಸ್‌ಬಿಎಂ ಸೇರಿ ಇತರ ಕೆಲವು ಬ್ಯಾಂಕ್‌ಗಳು ಎಸ್‌ಬಿಐನಲ್ಲಿ ವಿಲೀನವಾದ ನಂತರ ಗ್ರಾಹಕರು ಹೆಚ್ಚಿನ ಸಮಸ್ಯೆ ಎದುರಿಸಬೇಕಾಗಿದೆ ಎಂದು ಸಾಮಾಜಿಕ ಹೋರಾಟಗಾರ ಗುರುನಾಥ ವಡ್ಡೆ ಹೇಳಿದ್ದಾರೆ.

ಈ ಕುರಿತು ಅವರು ಕೇಂದ್ರ ಸರ್ಕಾರ ಮತ್ತು ಬ್ಯಾಂಕಿನ ಹಿರಿಯ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.

ತೆಲಂಗಾಣ ಮತ್ತು ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಔರಾದ್ ತಾಲ್ಲೂಕು ಕೇಂದ್ರದಲ್ಲಿದ್ದ ಎಸ್‌ಬಿಎಚ್‌, ಎಸ್‌ಬಿಎಂ ಶಾಖೆಗಳನ್ನು ಎಸ್‌ಬಿಐನೊಂದಿಗೆ ವಿಲೀನ ಮಾಡಲಾಗಿದೆ. ಇಲ್ಲಿರುವ ಎಸ್‌ಬಿಐ ಶಾಖೆ ಹಳೆಯದಾಗಿದ್ದು, ಸ್ಥಳಾವಕಾಶದ ಕೊರತೆ ಇದೆ. ವಿಲೀನದ ನಂತರ ಮೂರು ಶಾಖೆಗಳ ಖಾತೆದಾರರು ಒಂದೆಡೆ ಬರುವ ಕಾರಣ ಹೆಚ್ಚಿನ ದಟ್ಟಣೆ ಇರುತ್ತದೆ. ಸಣ್ಣ ಕೆಲಸಕ್ಕೂ ಗಂಟೆಗಟ್ಟಲೆ ಕಾಯಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ಮೂರು ಶಾಖೆ ಸೇರಿ ಒಂದೇ ಎಟಿಎಂ ಇದೆ. ಅದೂ ಬ್ಯಾಂಕ್ ಕೆಲಸದ ಅವಧಿಯಲ್ಲಿ ಮಾತ್ರ ತೆರೆದಿರುತ್ತದೆ. ಇದರಿಂದಾಗಿ ಜನ ತಮ್ಮ ಖಾತೆಯಲ್ಲಿ ಹಣ ಇದ್ದರೂ ಬಳಸಲು ಆಗದೆ ಗೋಳಾಡುತ್ತಿದ್ದಾರೆ. ಪಟ್ಟಣದಲ್ಲಿ ಕೆನರಾ ಬ್ಯಾಂಕ್, ಗ್ರಾಮೀಣ ಬ್ಯಾಂಕ್ ಶಾಖೆಗಳ ಎಟಿಎಂಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಹೀಗಾಗಿ ರೈತರು, ವ್ಯಾಪಾರಿಗಳು ಸೇರಿ ಎಲ್ಲರಿಗೂ ಸಮರ್ಪಕ ಬ್ಯಾಂಕ್ ಸೇವೆ ಸಿಗುತ್ತಿಲ್ಲ. ಸಂಬಂಧಿತರು ಇದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಗುರುನಾಥ ವಡ್ಡೆ ಮನವಿ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry