ವಾಸ್ತುಶಿಲ್ಪ: ಪ್ರೀತಿ ಸುಸಾನ್‌ಗೆ ಮೊದಲ ರ‍್ಯಾಂಕ್‌

7

ವಾಸ್ತುಶಿಲ್ಪ: ಪ್ರೀತಿ ಸುಸಾನ್‌ಗೆ ಮೊದಲ ರ‍್ಯಾಂಕ್‌

Published:
Updated:

ಬೆಂಗಳೂರು/ಮೂಡುಬಿದಿರೆ: ವಾಸ್ತುಶಿಲ್ಪ ಕೋರ್ಸ್‌ಗಳ ಪ್ರವೇಶಕ್ಕೆ ಅರ್ಹತೆ ಪಡೆದವರ ರ‍್ಯಾಂಕ್‌ ಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಸೋಮವಾರ ಬಿಡುಗಡೆ ಮಾಡಿದ್ದು, ಒಟ್ಟು 2,160 ರ‍್ಯಾಂಕ್‌ಗಳನ್ನು ಪ್ರಕಟಿಸಿದೆ.

ಬೆಂಗಳೂರಿನ ಪ್ರೀತಿ ಸುಸಾನ್‌ ವರ್ಗೀಸ್‌ ಪ್ರಥಮ, ಮೂಡಿಗೆರೆಯ ವೈಷ್ಣವಿ ನಾಯಕ್‌ ದ್ವಿತೀಯ ಹಾಗೂ ಅನುಷಾ ಎಸ್. ಪಾಟೀಲ ಮೂರನೇ ರ‍್ಯಾಂಕ್‌ ಗಳಿಸಿದ್ದಾರೆ.

ನಿರೀಕ್ಷೆಗಿಂತ ಹೆಚ್ಚು ಅಂಕ ಸಿಕ್ಕಿದೆ: ‘ನಾಟಾ ಪರೀಕ್ಷೆಯಲ್ಲಿ ಎರಡನೇ ರ‍್ಯಾಂಕ್ ನಿರೀಕ್ಷಿಸಿರಲಿಲ್ಲ. ನನ್ನ ನಿರೀಕ್ಷೆಗೂ ಮೀರಿ ಫಲಿತಾಂಶ ಸಿಕ್ಕಿರುವುದು ಖುಷಿ ತಂದಿದೆ. ಆಳ್ವಾಸ್‌ನ ಶೈಕ್ಷಣಿಕ ವಾತಾವರಣ, ವಿಶೇಷ ತರಬೇತಿ ನನ್ನ ಸಾಧನೆಗೆ ಸ್ಫೂರ್ತಿಯಾಗಿದೆ. ಮುಂದೆ ವಾಸ್ತುಶಿಲ್ಪದಲ್ಲಿ ಅಥವಾ ಇಎನ್‌ಸಿಯಲ್ಲಿ ಎಂಜಿನಿಯರಿಂಗ್‌ ಪದವಿ ಮುಂದುವರಿಸಬೇಕೆಂದು ಆಸೆ ಇದೆ’ ಎಂದು ಎರಡನೇ ರ‍್ಯಾಂಕ್ ಪಡೆದ ವೈಷ್ಣವಿ ನಾಯಕ್ ಹೇಳಿದರು.

ಅವರು ಮೂಡುಬಿದಿರೆ ಒಂಟಿಕಟ್ಟೆಯ ಹಣ್ಣಿನ ವ್ಯಾಪಾರಿ ವಿವೇಕಾನಂದ ನಾಯಕ್ ಮತ್ತು ವಿನುತಾ ನಾಯಕ್ ಅವರ ಪುತ್ರಿ. ಆಳ್ವಾಸ್‌ನ ದತ್ತು ವಿದ್ಯಾರ್ಥಿನಿಯಾಗಿರುವ ಅವರು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ 97ರಷ್ಟು ಅಂಕ ಪಡೆದಿದ್ದರು.

‘100 ರ‍್ಯಾಂಕ್ ಒಳಗಡೆ 16 ಮಂದಿ, 200ರ ಒಳಗಡೆ 18 ಮಂದಿ, 500ರ ಒಳಗಡೆ 54 ಮಂದಿ, 1000ದ ಒಳಗಡೆ 92, 2000ದ ರ‍್ಯಾಂಕ್ ಒಳಗಡೆ 134 ಮಂದಿ ಹಾಗೂ 2000ದ ಮೇಲ್ಪಟ್ಟು 12 ಮಂದಿ ರ‍್ಯಾಂಕ್ ಗಳಿಸಿದ್ದಾರೆ. ಆಳ್ವಾಸ್‌ನಲ್ಲಿ 348 ಮಂದಿ ಪರೀಕ್ಷೆ ಬರೆದಿದ್ದು 326 ಮಂದಿ ತೇರ್ಗಡೆ ಹೊಂದಿದ್ದಾರೆ’ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಮೋಹನ ಅಳ್ವ ತಿಳಿಸಿದರು.

ನೂರರೊಳಗಿನ ರ‍್ಯಾಂಕ್‌ ಸಾಧಕರು: ನಿಧಿ ಜಿ.ಎ(11ನೇ ರ‍್ಯಾಂಕ್), ವೇಣುಗೋಪಾಲ ಕೆ.ಆರ್ (29), ಅಖಿಲ್ ಎಸ್.ಆರ್ (46), ನೇಹಾ ಕಿಣಿ (50), ವರ್ಷಿಣಿ ಕೆ.ಎಸ್ (54), ತೇಜಸ್ವಿನಿ ಕೆ.ಎಸ್ ( 57), ಅಯಿನಾ ಸಮನ್(66), ಚಂದನಾ ಆರ್. (68), ಅಕ್ಷಯ್ ಕುಮಾರ್ ಯು. (76), ಶುಭಾ ಟಿ.ರೆಡ್ಡಿ (80), ಚಂದನಾ ಪಿ. (83), ವರಿಧಿ ಬಿ.ಎಸ್ (87), ನವನೀತ್ ಪಿ. (88) ಹಾಗೂ ಸೌಂದರ್ಯ ಎಚ್.ಕೆ (91) ರ‍್ಯಾಂಕ್ ಪಡೆದಿದ್ದಾರೆ.

‘ನೀಟ್‌ ನೋಂದಣಿ ಗೊಂದಲ’

ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಯುಜಿ ನೀಟ್‌ 2018 ಅರ್ಹತೆ ಪಡೆದಿರುವ ವಿದ್ಯಾರ್ಥಿಗಳಿಂದ ಪರೀಕ್ಷಾ ಪ್ರಾಧಿಕಾರ ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಿದ್ದು, ಅನೇಕರಲ್ಲಿ ಈ ಬಗ್ಗೆ ಗೊಂದಲ ಉಂಟಾಗಿವೆ.

ಈ ಗೊಂದಲದ ಪರಿಣಾಮ, ಸಿಇಟಿಗೆ ಶುಲ್ಕ ಕಟ್ಟಿ ನೋಂದಣಿ ಮಾಡಿಕೊಂಡವರು ನೀಟ್‌ ನೋಂದಣಿ ವೇಳೆ ಮತ್ತೊಮ್ಮೆ ಶುಲ್ಕ ಪಾವತಿಸುತ್ತಿದ್ದಾರೆ.

‘ಸಿಇಟಿಯಲ್ಲಿ ಈಗಾಗಲೇ ಹಣ ಕಟ್ಟಲಾಗಿದೆ. ಆದರೆ, ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿನ ಸರಿಯಾದ ಮಾಹಿತಿ ಇಲ್ಲದಿರುವುದರಿಂದ, ವೈದ್ಯಕೀಯ

ಕೋರ್ಸ್‌ಗಳ ನೋಂದಣಿ ವೇಳೆ ಮತ್ತೊಮ್ಮೆ ₹ 1000 ಕಟ್ಟಿದ್ದಾರೆ’ ಎಂದು ಪೋಷಕರಾದ ವಿಜಯಕುಮಾರ್‌ ತಿಳಿಸಿದರು.

‘ಈಗಾಗಲೇ ಸಿಇಟಿಗೆ ನೋಂದಣಿ ಮಾಡಿಕೊಂಡವರು, ವೈದ್ಯಕೀಯ ಕೋರ್ಸ್‌ಗಳಿಗಾಗಿ ಆಹ್ವಾನಿಸಿರುವ ಅರ್ಜಿಯನ್ನು ಭರ್ತಿ ಮಾಡಿ, ನೋಂದಾಯಿಸಿಕೊಂಡರೆ ಸಾಕು. ಶುಲ್ಕ ಪಾವತಿಸುವ ಅಗತ್ಯವಿಲ್ಲ. ಸಿಇಟಿ ಬರೆಯದೆ ಕೇವಲ ನೀಟ್‌ ಪರೀಕ್ಷೆ ಬರೆದವರು ಹೊಸದಾಗಿ ಶುಲ್ಕ ಪಾವತಿಸಿ ನೋಂದಣಿ ಆಗಬೇಕು’ ಎಂದು ಕೆಇಎ ಸಾರ್ವಜನಿಕ ಸಂಪರ್ಕಾಧಿಕಾರಿ ಎ.ಎಸ್‌. ರವಿ ಮಾಹಿತಿ ನೀಡಿದರು.

ಯುಜಿ ನೀಟ್‌–2018ರಲ್ಲಿ ನಿಗದಿಪಡಿಸಿರುವ ಕನಿಷ್ಠ ಅಂಕ ಅಥವಾ ಅದಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಗಳು ಮಾತ್ರ ವೈದ್ಯ, ದಂತ ವೈದ್ಯ ಕೋರ್ಸ್‌ಗಳ ಪ್ರವೇಶಕ್ಕೆ ನೋಂದಣಿ ಮಾಡಿಕೊಳ್ಳಬಹುದು. ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್‌ಗಳಿಗಾಗಿ ಇದೇ 28ರಿಂದ ಕೌನ್ಸೆಲಿಂಗ್‌ ಆರಂಭವಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry