ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದ್ಮಶ್ರೀ ಪ್ರಶಸ್ತಿ ಜತೆಗೆ ನಗದು ನೀಡಲಾಗುತ್ತದೆ ಎಂಬುದು ತಪ್ಪು ಮಾಹಿತಿ

Published 28 ಡಿಸೆಂಬರ್ 2023, 0:16 IST
Last Updated 28 ಡಿಸೆಂಬರ್ 2023, 0:16 IST
ಅಕ್ಷರ ಗಾತ್ರ

‘ಕುಸ್ತಿಪಟು ಬಜರಂಗ್ ಪೂನಿಯಾ ಅವರು ಮೋದಿ ಸರ್ಕಾರ ನೀಡಿರುವ ಪದ್ಮಶ್ರೀ ಪ್ರಶಸ್ತಿಯನ್ನೇನೋ ವಾಪಸ್‌ ಮಾಡಿದ್ದಾರೆ. ಅದೇ ಮೋದಿ ಸರ್ಕಾರವು ಪದ್ಮಶ್ರೀ ಪ್ರಶಸ್ತಿ ಜತೆಗೆ ನೀಡಿರುವ ₹10 ಲಕ್ಷ ನಗದನ್ನು ವಾಪಸ್‌ ನೀಡಿಲ್ಲ. ಅವರಿಗೆ ಸರ್ಕಾರದ ಹಣ ಬೇಕು, ಪ್ರಶಸ್ತಿ ಬೇಡ. ಪ್ರಶಸ್ತಿ ವಾಪಸ್‌ ಮಾಡುವುದಾದರೆ ಅದರ ಜತೆಗೆ ನೀಡಲಾಗಿರುವ ನಗದನ್ನೂ ವಾಪಸ್‌ ಮಾಡಬೇಕು. ಇವರದೆಲ್ಲಾ ನಕಲಿ ಪ್ರತಿಭಟನೆ’ ಎಂಬ ವಿವರ ಇರುವ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕೆಲವು ಪೋಸ್ಟ್‌ಗಳಲ್ಲಿ ಪದ್ಮಶ್ರೀ ‍ಪ್ರಶಸ್ತಿ ಜತೆಗೆ ₹15 ಲಕ್ಷ ನಗದು ನೀಡಲಾಗುತ್ತದೆ ಎಂದು ಇದ್ದರೆ, ಇನ್ನೂ ಕೆಲವು ಪೋಸ್ಟ್‌ಗಳಲ್ಲಿ ₹1 ಕೋಟಿ ನಗದು ನೀಡಲಾಗಿದೆ ಎಂದು ಹೇಳಲಾಗಿದೆ. ಆದರೆ ಪ್ರಶಸ್ತಿ ಜತೆಗೆ ನಗದು ನೀಡಲಾಗುತ್ತದೆ ಎಂಬ ಈ ಎಲ್ಲಾ ಪೋಸ್ಟ್‌ಗಳಲ್ಲಿ ಇರುವುದು ತಪ್ಪು ಮಾಹಿತಿ.

ಕೇಂದ್ರ ಸರ್ಕಾರದ ಗೃಹ ಸಚಿವಾಲಯವು ಪದ್ಮ ಪುರಸ್ಕಾರಗಳನ್ನು ನೀಡುತ್ತದೆ. ಈ ಪುರಸ್ಕಾರಗಳಿಗೆ ಸಂಬಂಧಿಸಿದಂತೆ ಸಚಿವಾಲಯವು ಪ್ರತ್ಯೇಕ ಜಾಲತಾಣವನ್ನು ಹೊಂದಿದೆ. ಅವುಗಳಲ್ಲಿ ಪದ್ಮ ಪುಸರಸ್ಕಾರಗಳು, ಅವುಗಳನ್ನು ಯಾರಿಗೆ ನೀಡಲಾಗುತ್ತದೆ, ಆಯ್ಕೆ ಪ್ರಕ್ರಿಯೆ ಮತ್ತು ಆಯ್ಕೆ ಮಾನದಂಡಗಳು ಏನು ಎಂಬ ವಿವರಗಳೂ ಇವೆ. ಪ್ರಶಸ್ತಿಯು ಪದಕ, ರಾಷ್ಟ್ರಪತಿಯ ಸಹಿ ಇರುವ ಪ್ರಶಸ್ತಿ ಪತ್ರ ಹೊಂದಿರುತ್ತದೆ. ಜತೆಗೆ ಪದಕದ ಪ್ರತಿಕೃತಿಯೊಂದನ್ನೂ ನೀಡಲಾಗುತ್ತದೆ. ಪುರಸ್ಕೃತರು ಆ ಪ್ರತಿಕೃತಿಯನ್ನು ಸರ್ಕಾರಿ ಕಾರ್ಯಕ್ರಮಗಳಲ್ಲಿ ಧರಿಸಬಹುದು ಎಂಬ ವಿವರಗಳಿವೆ. ಈ ಪುರಸ್ಕಾರಗಳ ಜತೆಗೆ ನಗದು ನೀಡಲಾಗುತ್ತದೆ ಎಂಬ ಮಾಹಿತಿ ಇಲ್ಲ. ಹೀಗಾಗಿ ಪದ್ಮಶ್ರೀ ಪ್ರಶಸ್ತಿ ಜತೆಗೆ ಬಜರಂಗ್ ಪೂನಿಯಾ ಅವರಿಗೆ ನಗದು ನೀಡಲಾಗಿತ್ತು ಮತ್ತು ಅವರು ಅದನ್ನು ವಾಪಸ್‌ ಮಾಡಿಲ್ಲ ಎಂಬುದು ಸುಳ್ಳು ಮಾಹಿತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT