ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Fact Check: ಸಿಜೆಐ ವಿಚಾರಣೆ ಮಧ್ಯದಲ್ಲಿಯೇ ಎದ್ದು ನಡೆದಿಲ್ಲ

Published 19 ಮಾರ್ಚ್ 2024, 23:33 IST
Last Updated 19 ಮಾರ್ಚ್ 2024, 23:33 IST
ಅಕ್ಷರ ಗಾತ್ರ

ಚುನಾವಣಾ ಬಾಂಡ್‌ಗೆ ಸಂಬಂಧಿಸಿದಂತೆ ಎಸ್‌ಬಿಐ ಆಲ್ಫಾ ನ್ಯೂಮರಿಕಲ್‌ ನಂಬರ್‌ ವಿವರಗಳನ್ನು ನೀಡದೇ ಇರುವ ಕುರಿತ ಪ್ರಕರಣದ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ನಡೆದ ವಿಚಾರಣೆಯ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಅವರು ವಿಚಾರಣೆ ಮಧ್ಯದಲ್ಲಿಯೇ ಎದ್ದು ನಡೆದಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ‘ವಾವ್‌! ವಕೀಲರು ಮಾತನಾಡುತ್ತಲೇ ಇದ್ದಾರೆ. ಆದರೆ, ಚಂದ್ರಚೂಡ್‌ ಏನೂ ಹೇಳದೆ, ಹೊರಟು ನಿಂತರು. ನ್ಯಾಯಾಂಗದಲ್ಲಿ ಕೌಟುಂಬಿಕ ಹಿನ್ನಲೆ ಹೊಂದಿರುವ ನ್ಯಾಯಮೂರ್ತಿಗಳಿಗೆ ಎಷ್ಟು ಅಹಂಕಾರ ಇದೆ ಮತ್ತು ಇದು ಎಷ್ಟು ಅಪಾಯಕಾರಿ ಎಂಬುದನ್ನು ಇದು ತೋರಿಸುತ್ತದೆ. ಇದು ನೋಡಿ ಸು‌ಪ್ರೀಂ ಕೋರ್ಟ್‌. ಸುಪ್ರೀಂ ಕೋರ್ಟ್‌!’ ಎಂದು ಅಜೀತ್‌ ಭಾರತಿ (@ajeetbharti) ಎಂಬವರು ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದರು. ಜಯೇಶ್‌ ಮೆಹ್ತಾ (@JMehta65) ಎಂಬವರು, ‘ಸಿಜೆಐ ಈ ರೀತಿ ವರ್ತಿಸಲು ಹೇಗೆ ಸಾಧ್ಯ? ಸಾಲಿಸಿಟರ್‌ ಜನರಲ್‌ ಅವರು ತಮ್ಮ ವಾದವನ್ನು ಮಂಡಿಸುತ್ತಿದ್ದಾರೆ. ವಿಚಾರಣೆಯನ್ನು ಮುಂದಕ್ಕೂ ಹಾಕದೆ, ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್‌ ಅವರೂ ಸೇರಿದಂತೆ ಇತರ ನ್ಯಾಯಮೂರ್ತಿಗಳು ಎದ್ದು ಹೊರಡುತ್ತಿದ್ದಾರೆ. ಇದು ಕೇಂದ್ರ ಸರ್ಕಾರಕ್ಕೆ ಮಾಡಿದ ಅವಮಾನ. ರಾಷ್ಟ್ರಪತಿ ಅವರು, ಚಂದ್ರಚೂಡ್‌ ಅವರಿಂದ ಒತ್ತಾಯಪೂರ್ವಕವಾಗಿ ರಾಜೀನಾಮೆ ಪಡೆದುಕೊಳ್ಳಬೇಕು’ ಎಂದು ಬರೆದುಕೊಂಡಿದ್ದಾರೆ. ಆದರೆ, ಇದು ತಿರುಚಿದ ವಿಡಿಯೊ.

ಚುನಾವಣಾ ಬಾಂಡ್‌ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ರೀತಿ ಚರ್ಚೆ ನಡೆಯುತ್ತಿದೆ ಎಂಬುದರ ಕುರಿತು ಸಾಲಿಸಿಟರ್‌ ಜನರಲ್‌ ಅವರು ಪೀಠದ ಗಮನಕ್ಕೆ ತರುತ್ತಿದ್ದರು. ‘ನೀವೂ (ಪೀಠ) ಬಯಸಿರದ, ಚುನಾವಣಾ ಬಾಂಡ್‌ ಯೋಜನೆ ಕೂಡ ಉದ್ದೇಶಿಸದ ಬೇರೆಯದೇ ಚರ್ಚೆಯೊಂದು ನಡೆಯುತ್ತಿದೆ. ಯಾರು ದೇಣಿಗೆ ನೀಡಿದ್ದಾರೆ ಎಂಬುದು ತಿಳಿದರೆ, ಮತದಾರರು ಯಾರಿಗೆ ಮತ ಹಾಕಬೇಕು ಎಂದು ಅವರೇ ನಿರ್ಧರಿಸುತ್ತಾರೆ ಎಂದು ನಾವು ತಿಳಿದಿದ್ದೆವು...’ ಎಂದು ಅವರು ತಮ್ಮ ಮಾತು ಮುಂದುವರಿಸಿದ್ದರು. ಇದೇ ವೇಳೆ ಸಿಜೆಐ ಚಂದ್ರಚೂಡ್‌ ಅವರು ತಮ್ಮ ಕುರ್ಚಿಯನ್ನು ಸರಿಪಡಿಸಿಕೊಳ್ಳಲು ಎದ್ದಿದ್ದರು. ಇದೇ ಸಮಯಕ್ಕೆ ವಿಡಿಯೊವನ್ನು ಎಡಿಟ್‌ ಮಾಡಿ ತಪ್ಪು ಅರ್ಥ ಬರುವಂತೆ ಹಂಚಿಕೊಳ್ಳಲಾಗುತ್ತಿದೆ. ಕುರ್ಚಿ ಸರಿ ಮಾಡಿಕೊಂಡು ಸಿಜೆಐ ಅವರು ವಿಚಾರಣೆಯನ್ನು ಮುಂದುವರಿಸಿದ್ದರು. ಸುಪ್ರೀಂ ಕೋರ್ಟ್‌, ತನ್ನ ಯೂಟ್ಯೂಬ್‌ ಚಾನೆಲ್‌ನಲ್ಲಿ ವಿಚಾರಣೆಯ ಲೈವ್‌ ನೀಡುತ್ತದೆ. ಈ ವಿಡಿಯೊದಲ್ಲಿ ಸಿಜೆಐ ಅವರು ವಿಚಾರಣೆಯನ್ನು ಮುಂದುವರಿಸಿರುವ ವಿಡಿಯೊ ಸಿಗುತ್ತದೆ ಎಂದು ಬೂಮ್‌ಲೈವ್‌ ಫ್ಯಾಕ್ಟ್‌ಚೆಕ್‌ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT