ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

140 ಕೋಟಿ ಭಾರತೀಯರು ‘ಅನ್ಯಾಯ ಕಾಲ’ದಲ್ಲಿ ಬದುಕುತ್ತಿದ್ದಾರೆ: ಕಾಂಗ್ರೆಸ್‌

Published 28 ಜನವರಿ 2024, 13:27 IST
Last Updated 28 ಜನವರಿ 2024, 13:27 IST
ಅಕ್ಷರ ಗಾತ್ರ

ನವದೆಹಲಿ: ದೇಶದ 140 ಕೋಟಿ ಜನರು ಬಿಜೆಪಿ ಹೇರಿರುವ ‘ಅನ್ಯಾಯ ಕಾಲ’ದಲ್ಲಿ ಬದುಕುತ್ತಿದ್ದಾರೆ ಎಂದು ಕಾಂಗ್ರೆಸ್‌ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್‌ ಖೇರಾ ಭಾನುವಾರ ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಮತ್ತು ಅದರ ಆರ್ಥಿಕತೆಯಲ್ಲಿ ವಾಸ್ತವವಾಗಿ ಏನು ನಡೆಯುತ್ತಿದೆ ಎಂಬುದನ್ನು ಮುಚ್ಚಿಟ್ಟು, ತಳುಕು ಬಳುಕನ್ನು ತೋರುವ ಕಲೆಯನ್ನು ಬಿಜೆಪಿ ಸರ್ಕಾರವು ಕರಗತ ಮಾಡಿಕೊಂಡಿದೆ ಎಂದರು.

‘ಉತ್ತರಪ್ರದೇಶ ಮತ್ತು ಹರಿಯಾಣದ ಯುವಕರು ಯುದ್ಧದಲ್ಲಿ ಪಾಲ್ಗೊಳ್ಳಲು ಇಸ್ರೇಲ್‌ಗೆ ತೆರಳಲು ಸರದಿಯಲ್ಲಿ ನಿಂತಿರುವುದು ದೇಶದ ಆರ್ಥಿಕತೆಯ ವಾಸ್ತವ ಸ್ಥಿತಿಗೆ ಉದಾಹರಣೆ’ ಎಂದು ಹೇಳಿದರು.

ಇನ್ನೊಂದು ದೇಶಕ್ಕಾಗಿ ಯುದ್ಧಕ್ಕಾಗಿ ತೆರಳಲು ಸಿದ್ಧರಾಗಿರುವ ಯುವಕರ ಮಾಸಿಕ ವರಮಾನ ₹ 10 ಸಾವಿರ. ಇಸ್ರೇಲ್‌ ಅವರಿಗೆ ಇದಕ್ಕಿಂತ 13–14 ಪಟ್ಟು ಹೆಚ್ಚು ಸಂಬಳ ನೀಡುವ ಭರವಸೆ ನೀಡಿದೆ ಎಂದು ತಿಳಿಸಿದರು.

ಉತ್ತರಪ್ರದೇಶದಲ್ಲಿ 60 ಸಾವಿರ ಪೊಲೀಸ್‌ ಕಾನ್‌ಸ್ಟೆಬಲ್‌ ಹುದ್ದೆಗೆಗಳಿಗೆ 51 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದಾರೆ. ಇದು ದುರದೃಷ್ಟಕರ ಎಂದಿರುವ ಖೇರಾ ಅವರು, ‘ಕಳೆದ 10 ವರ್ಷಗಳಲ್ಲಿ ಮೋದಿ ಸರ್ಕಾರವು ದೇಶವನ್ನು ನಿರುದ್ಯೋಗದಲ್ಲಿ ‘ವಿಶ್ವಗುರು’ವಾಗಿಸಿದೆ ಎಂದು ಲೇವಡಿ ಮಾಡಿದರು.

ಕೆಲವೇ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಕೊನೆಯ ಬಜೆಟ್‌ ಮಂಡಿಸಲಿದೆ. ಸರ್ಕಾರದ ಇಡೀ ಆಡಳಿತ ವ್ಯವಸ್ಥೆಯೇ ‘ವಿಕಸಿತ್‌ ಭಾರತ’ ಘೋಷವಾಕ್ಯವನ್ನು ಪ್ರಚಾರ ಮಾಡುತ್ತಿದೆ ಎಂದರು.

ದೇಶವು ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದರೂ ಕೇಂದ್ರ ಸರ್ಕಾರವು ಹಿಂಬಾಗಿಲಿನ ಮೂಲಕ ಚುನಾಯಿತ ಸರ್ಕಾರಗಳನ್ನು ಉರುಳಿಸುವಲ್ಲಿ ಮಗ್ನವಾಗಿದೆ. ಇದರಿಂದ ಸರ್ಕಾರದ ಆದ್ಯತೆಗಳೇನು ಎಂಬುದನ್ನು ತಿಳಿದುಕೊಳ್ಳಬಹುದು ಎಂದು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT