ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಫೆ.17ರಂದು ಬಿಜೆಪಿ ರಾಷ್ಟ್ರೀಯ ಮಂಡಳಿ ಸಭೆ

11,500 ಪ್ರತಿನಿಧಿಗಳು ಭಾಗಿಯಾಗುವ ನಿರೀಕ್ಷೆ
Published 15 ಫೆಬ್ರುವರಿ 2024, 13:34 IST
Last Updated 15 ಫೆಬ್ರುವರಿ 2024, 13:34 IST
ಅಕ್ಷರ ಗಾತ್ರ

ನವದೆಹಲಿ: ಎರಡು ದಿನಗಳು ನಡೆಯಲಿರುವ ಬಿಜೆಪಿ ರಾಷ್ಟ್ರೀಯ ಮಂಡಳಿ ಸಭೆಯು ಇಲ್ಲಿಯ ಭಾರತ ಮಂಟಪಂನಲ್ಲಿ ಫೆಬ್ರುವರಿ 17ರಂದು ಆರಂಭವಾಗಲಿದೆ. ಸುಮಾರು 11,500 ಪ್ರತಿನಿಧಿಗಳು ಸಭೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ಪಕ್ಷವು ಗುರುವಾರ ತಿಳಿಸಿದೆ.

ಬಿಜೆಪಿ ಹಿರಿಯ ನಾಯಕ ರವಿಶಂಕರ್‌ ಪ್ರಸಾದ್‌ ಅವರು ಪಕ್ಷದ ಮುಖ್ಯಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದರು. ದೇಶದಾದ್ಯಂತ ಇರುವ ಪಕ್ಷದ ಪದಾಧಿಕಾರಿಗಳು, ಚುನಾಯಿತ ಮೇಯರ್‌ಗಳು, ಹಾಲಿ ಮತ್ತು ಮಾಜಿ ಶಾಸಕರು ಹಾಗೂ ಸಂಸದರು ಸಭೆಯಲ್ಲಿ ಭಾಗಿಯಾಗುವ ಪ್ರತಿನಿಧಿಗಳಲ್ಲಿ ಸೇರಿದ್ದಾರೆ .

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಸಭೆಯ ಉದ್ಘಾಟನಾ ಭಾಷಣ ಮಾಡಲಿದ್ದಾರೆ. ಸಭೆಯ 2ನೇ ದಿನವಾದ ಫೆ.18ರಂದು ಪ್ರಧಾನಿ ನರೇಂದ್ರ ಮೋದಿ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ ಎಂದು ಅವರು ಹೇಳಿದರು.

2014, 2019ರ ಲೋಕಸಭೆ ಚುನಾವಣೆಗಳ ವೇಳೆಯೂ ಮಂಡಳಿ ಸಭೆ ನಡೆಸಲಾಗಿತ್ತು. ಆ ಚುನಾವಣೆಗಳಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿತ್ತು. ಮುಂಬರಲಿರುವ ಲೋಕಸಭೆ ಚುನಾವಣೆ ಕುರಿತು ಈ ಸಭೆಯಲ್ಲಿ ಚರ್ಚೆ ನಡೆಸಲಾಗುವುದು. ಸದ್ಯ ಎರಡು ನಿರ್ಣಯಗಳು ಕಾರ್ಯಸೂಚಿಯಲ್ಲಿವೆ. ‘ವಿಕಸಿತ ಭಾರತ ಅಭಿಯಾನ’ ಕುರಿತ ವಸ್ತುಪ್ರದರ್ಶನವನ್ನೂ ಸಭೆ ನಡೆಯುವ ಸ್ಥಳದಲ್ಲಿ ಏರ್ಪಡಿಸಲಾಗುವುದು ಎಂದರು.

ಸಂಘಟನೆಗೆ ಸಂಬಂಧಿಸಿದಂತೆ ಸಮಗ್ರ ಕಾರ್ಯಸೂಚಿಯನ್ನು ಸಭೆಯಲ್ಲಿ ನಿರ್ಧರಿಸಲಾಗುವುದು. ಕಾಂಗ್ರೆಸ್‌ ಮತ್ತು ಕಮ್ಯುನಿಸ್ಟ್‌ ಪಕ್ಷಗಳು ಬಿಜೆಪಿ ವಿರುದ್ಧ ಹಲವು ಟೀಕೆಗಳನ್ನು ಮಾಡುತ್ತವೆ. ಆದರೆ, ಪ್ರಜಾಪ್ರಭುತ್ವದ ಮಾದರಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಂಘಟನಾ ಕೆಲಸಗಳನ್ನು ಮಾಡುತ್ತಿರುವುದು ಬಿಜೆಪಿ ಮಾತ್ರ ಎಂದು ರವಿಶಂಕರ್‌ ಪ್ರಸಾದ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT