ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಸಾಂ: ಮುಂದುವರಿದ ಪ್ರವಾಹ, 3 ಮಂದಿ ಸಾವು

Published 3 ಜೂನ್ 2024, 16:05 IST
Last Updated 3 ಜೂನ್ 2024, 16:05 IST
ಅಕ್ಷರ ಗಾತ್ರ

ಗುವಾಹಟಿ: ಈಶಾನ್ಯ ರಾಜ್ಯ ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿದೆ. ಪ್ರವಾಹದಿಂದಾಗಿ ಮೂವರು ಮೃತಪಟ್ಟಿದ್ದು, ಈ ಮೂಲಕ ಒಟ್ಟು ಮೃತರ ಸಂಖ್ಯೆ 18ಕ್ಕೆ ಏರಿಕೆಯಾಗಿದೆ. 13 ಜಿಲ್ಲೆಗಳಲ್ಲಿ 5.35 ಲಕ್ಷಕ್ಕೂ ಹೆಚ್ಚು ಮಂದಿ ಸಂತ್ರಸ್ತರಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಧಾರಾಕಾರ ಮಳೆಯಿಂದಾಗಿ ಕೊಪಿಲಿ, ಬರಾಕ್‌ ಮತ್ತು ಕುಶಿಯಾರ ನದಿಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿವೆ. ರಾಜ್ಯದಾದ್ಯಂತ ಪ್ರವಾಹದಿಂದ ನಿರಾಶ್ರಿತರಾಗಿರುವ 39 ಸಾವಿರಕ್ಕೂ ಅಧಿಕ ಜನರು ವಿವಿಧ ಜಿಲ್ಲೆಗಳಲ್ಲಿರುವ 193 ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ ಎಂದು ಹೇಳಲಾಗಿದೆ.

ನಾಗಾಂವ್‌ ಅತಿ ಹೆಚ್ಚು ಹಾನಿಗೊಳಗಾದ ಜಿಲ್ಲೆಯಾಗಿದ್ದು, 3 ಲಕ್ಷಕ್ಕೂ ಅಧಿಕ ಜನರು ಪ್ರವಾಹದಿಂದ ಸಂತ್ರಸ್ತರಾಗಿದ್ದಾರೆ. ಉಳಿದಂತೆ ಕಚಾರ್‌(1,09,798) ಹಾಗೂ ಹೊಜೈ ಜಿಲ್ಲೆಯಲ್ಲಿ 86,382 ಜನರು ಸಂತ್ರಸ್ತರಾಗಿದ್ದಾರೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ(ಎಎಸ್‌ಡಿಎಂಎ) ಪ್ರಕಟಣೆಯಲ್ಲಿ ತಿಳಿಸಿದೆ.

ವಿವಿಧ ಜಿಲ್ಲೆಗಳಲ್ಲಿ ರಸ್ತೆ, ಸೇತುವೆ ಸೇರಿದಂತೆ ಮೂಲಸೌಕರ್ಯಗಳು ಹಾಳಾಗಿರುವ ಬಗ್ಗೆ ವರದಿಯಾಗುತ್ತಿವೆ. ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌, ಸ್ಥಳೀಯ ಆಡಳಿತ ಸೇರಿದಂತೆ ವಿವಿಧ ತಂಡಗಳು ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಜೊತೆಗೆ, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವೈದ್ಯಕೀಯ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಅದು ಹೇಳಿದೆ.

ಸಿಡಿಲಿಗೆ ನಾಲ್ವರು ಬಲಿ: ಒಡಿಶಾದ ಗಂಜಾಂ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಭಾನುವಾರ ಸಿಡಿಲು ಬಡಿದು 4 ಮಂದಿ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮೃತರನ್ನು ಸಂನ್ಯಾಸಿ ಸಾಹು, ಲಂಬೋದರ್‌ ಪಾಣಿಗ್ರಹಿ, ಸಂಜಯ್‌ ಗೌಡ ಹಾಗೂ ದುಗುನ್‌ ಪ್ರಧಾನ್‌ ಎಂದು ಗುರುತಿಸಲಾಗಿದೆ.

ಅಸ್ಸಾಂನ ಗುವಾಹಟಿಯಲ್ಲಿ ಭಾರಿ ಮಳೆಯಿಂದಾಗಿ ಜಲಾವೃತಗೊಂಡಿರುವ ರಸ್ತೆಯಲ್ಲಿ ವಾಹನ ಸವಾರರ ಪರದಾಟ –ಪಿಟಿಐ ಚಿತ್ರ
ಅಸ್ಸಾಂನ ಗುವಾಹಟಿಯಲ್ಲಿ ಭಾರಿ ಮಳೆಯಿಂದಾಗಿ ಜಲಾವೃತಗೊಂಡಿರುವ ರಸ್ತೆಯಲ್ಲಿ ವಾಹನ ಸವಾರರ ಪರದಾಟ –ಪಿಟಿಐ ಚಿತ್ರ
ಅಸ್ಸಾಂನ ಗುವಾಹಟಿಯಲ್ಲಿ ಭಾರಿ ಮಳೆಯಿಂದಾಗಿ ಜಲಾವೃತಗೊಂಡಿರುವ ರಸ್ತೆಯಲ್ಲಿ ತರಕಾರಿ ವ್ಯಾಪಾರಿ ತೆರಳಿದರು –ಪಿಟಿಐ ಚಿತ್ರ
ಅಸ್ಸಾಂನ ಗುವಾಹಟಿಯಲ್ಲಿ ಭಾರಿ ಮಳೆಯಿಂದಾಗಿ ಜಲಾವೃತಗೊಂಡಿರುವ ರಸ್ತೆಯಲ್ಲಿ ತರಕಾರಿ ವ್ಯಾಪಾರಿ ತೆರಳಿದರು –ಪಿಟಿಐ ಚಿತ್ರ

ಶಾಖಾಘಾತ: ಒಡಿಶಾದಲ್ಲಿ 20 ಮಂದಿ ಸಾವು

ಭುವನೇಶ್ವರ: ಪೂರ್ವ ಮತ್ತು ಉತ್ತರ ಭಾರತದಾದ್ಯಂತ ತೀವ್ರ ಬಿಸಿಗಾಳಿಯಿಂದಾಗಿ ಜನರು ತತ್ತರಿಸುತ್ತಿದ್ದಾರೆ. ಈ ನಡುವೆಯೇ ಕಳೆದ ಮೂರು ದಿನಗಳಲ್ಲಿ ಒಡಿಶಾದಲ್ಲಿ 20 ಮಂದಿ ಶಾಖಾಘಾತದಿಂದಲೇ ಮೃತಪಟ್ಟಿದ್ದಾರೆ ಎಂದು ಒಡಿಶಾ ಸರ್ಕಾರ ತಿಳಿಸಿದೆ.

ಕಳೆದ ಶುಕ್ರವಾರದಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 99 ಮಂದಿ ಶಂಕಿತ ಶಾಖಾಘಾತದಿಂದ ಮೃತಪಟ್ಟಿರುವುದಾಗಿ ವರದಿಯಾಗಿದೆ. ಮರಣೋತ್ತರ ಪರೀಕ್ಷೆ ಮತ್ತು ತನಿಖೆಯ ಬಳಿಕ ಶಾಖಾಘಾತದಿಂದಲೇ 20 ಮಂದಿ ಮೃತಪಟ್ಟಿರುವುದು ಖಚಿತವಾಗಿದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ವಿಶೇಷ ಪರಿಹಾರ ಆಯುಕ್ತರು ಅವಲೋಕನ ಸಭೆ ನಡೆಸಿದ್ದಾರೆ. ಬಿಸಿಗಾಳಿ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಲು ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

ಜೊತೆಗೆ ಶಂಕಿತ ಶಾಖಾಘಾತದಿಂದ ಮೃತಪಟ್ಟವರ ಮರಣೋತ್ತರ ಪರೀಕ್ಷೆ ನಡೆಸಿ ಖಚಿತಪಡಿಸಿಕೊಳ್ಳುವಂತೆ ಸೂಚಿಸಿದ್ದಾರೆ. ಈ ಮಧ್ಯೆ ಒಡಿಶಾದ ಕರಾವಳಿ ಜಿಲ್ಲೆಗಳಲ್ಲಿ ಸೋಮವಾರ ರಾತ್ರಿ ಭಾರಿ ಮಳೆ ಸುರಿದಿದ್ದು ಈ ಭಾಗದಲ್ಲಿ ತಾಪಮಾನ ಇಳಿಕೆಯಾಗಿರುವುದಾಗಿ ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT