ಕೇಂದ್ರಪಾರ (ಒಡಿಶಾ): ಇಸ್ರೊದ ಚಂದ್ರಯಾನ–3 ಯೋಜನೆಯ ವಿಕ್ರಮ್ ಲ್ಯಾಂಡರ್ ಬುಧವಾರ ಚಂದಿರನ ಮೇಲೆ ಯಶಸ್ವಿಯಾಗಿ ಲ್ಯಾಂಡ್ ಆದ ಕೆಲವೇ ನಿಮಿಷಗಳಲ್ಲಿ ಒಡಿಶಾದ ಕೇಂದ್ರಪಾರ ಜಿಲ್ಲಾ ಆಸ್ಪತ್ರೆಯಲ್ಲಿ ಜನಿಸಿದ ಮಕ್ಕಳಿಗೆ ‘ಚಂದ್ರಯಾನ’ ಎಂದು ನಾಮಕರಣ ಮಾಡಲು ಪೋಷಕರು ನಿರ್ಧರಿಸಿದ್ದಾರೆ.
‘ಬುಧವಾರ ನಮ್ಮ ಸಂಭ್ರಮಕ್ಕೆ ಎರಡೆರಡು ಕಾರಣಗಳಿದ್ದವು. ಚಂದ್ರಯಾನದ–3 ಲ್ಯಾಂಡ್ ಆದ ಕೆಲವೇ ನಿಮಿಷಗಳಲ್ಲಿ ನಮಗೆ ಮಗು ಜನಿಸಿದೆ. ಹೀಗಾಗಿ ಮಗುವಿಗೆ ಚಂದ್ರಯಾನ ಎಂದು ಹೆಸರಿಡಲು ನಾವು ನಿರ್ಧರಿಸಿದ್ದೇವೆ’ ಎಂದು ಪ್ರವತ್ ಮಲ್ಲಿಕ್ ಎಂಬುವವರು ತಿಳಿಸಿದ್ದಾರೆ.
ಕೇಂದ್ರಪಾರ ಜಿಲ್ಲಾ ಆಸ್ಪತ್ರೆಯಲ್ಲಿ ಬುಧವಾರ ಸಂಜೆ ಮೂರು ಗಂಡು ಮಕ್ಕಳು ಮತ್ತು ಒಂದು ಹೆಣ್ಣು ಮಗು ಜನಿಸಿದೆ. ಈ ಮಕ್ಕಳಿಗೆ ‘ಚಂದ್ರಯಾನ’ ಎಂದು ಹೆಸರಿಡುವುದಾಗಿ ಪೋಷಕರು ಹೇಳಿದ್ದಾರೆ. ಮಗು ಜನಿಸಿದ 21 ದಿನಕ್ಕೆ ನಾಮಕರಣ ಮಾಡುವುದು ಕೇಂದ್ರಪಾರದಲ್ಲಿ ಆಚರಣೆಯಲ್ಲಿರುವ ಸಂಪ್ರದಾಯ.
ಜಿಲ್ಲಾ ಆಸ್ಪತ್ರೆಯಲ್ಲಿ ಬುಧವಾರ ಸಂಜೆ ಮಕ್ಕಳಿಗೆ ಜನ್ಮ ನೀಡಿದ ಮಹಿಳೆಯರೆಲ್ಲರೂ ತಮ್ಮ ಮಗುವಿಗೆ ಚಂದ್ರಯಾನ ಎಂದು ಹೆಸರಿಡುವ ಬಗ್ಗೆ ಉತ್ಸುಕತೆ ತೋರಿದ್ದಾರೆ ಎಂದು ಆಸ್ಪತ್ರೆಯ ಮುಖ್ಯ ನರ್ಸ್ ಅಂಜನಾ ಸಾಹೂ ಹೇಳಿದ್ದಾರೆ. ಹಿಂದೊಮ್ಮೆ, ಒಡಿಶಾಕ್ಕೆ ಅಪ್ಪಳಿಸಿದ್ದ ಚಂಡಮಾರುತದ ಹೆಸರನ್ನೂ ಹಲವು ಮಕ್ಕಳಿಗೆ ಇಡಲಾಗಿತ್ತು ಎಂದೂ ಅಂಜನಾ ಇದೇ ವೇಳೆ ನೆನಪು ಮಾಡಿಕೊಂಡರು.
ಆಸ್ಪತ್ರೆಯ ಹೆಚ್ಚುವರಿ ಜಿಲ್ಲಾ ವೈದ್ಯಾಧಿಕಾರಿ ಡಾ.ಪಿ.ಕೆ.ಪ್ರಹರಾಜ್ ಮಾತನಾಡಿ, ದೇಶದ ಐತಿಹಾಸಿಕ ಕ್ಷಣದಲ್ಲಿ ಮಗು ಜನಿಸಿರುವುದು ಪಾಲಕರಿಗೆ ಖುಷಿ ತರಿಸಿದೆ. ಹೀಗಾಗಿ ‘ಚಂದ್ರಯಾನ’ದ ಎಂದು ಹೆಸರಿಡುವ ಮೂಲಕ ಭಾರತದ ಬಾಹ್ಯಾಕಾಶ ಸಂಶೋಧನೆಯ ಸಾಧನೆಯನ್ನು ಸಂಭ್ರಮಿಸಲು ಅವರು ಬಯಸಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.