ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ಒಳನೋಟ: ಕೆಲಸದ ಹೊರೆ; ಬದುಕಿಗೆ ಬರೆ
ಒಳನೋಟ: ಕೆಲಸದ ಹೊರೆ; ಬದುಕಿಗೆ ಬರೆ
ಜಾಗತಿಕ ಮಟ್ಟದಲ್ಲಿ ದೀರ್ಘ ಅವಧಿಯ ದುಡಿಮೆ, ಕೆಲಸದ ಒತ್ತಡ ಭಾರತೀಯರಲ್ಲಿಯೇ ಹೆಚ್ಚು
ಫಾಲೋ ಮಾಡಿ
Published 28 ಸೆಪ್ಟೆಂಬರ್ 2024, 22:36 IST
Last Updated 28 ಸೆಪ್ಟೆಂಬರ್ 2024, 22:36 IST
Comments

26 ವರ್ಷದ ಅನ್ನಾ ಸೆಬಾಸ್ಟಿಯನ್ ಪೆರಾಯಿಲ್ ಎಲ್ಲರಂತೆಯೇ ಜೀವನದಲ್ಲಿ ಹಲವು ಕನಸು ಕಂಡಿದ್ದರು. ಅಪಾರ ಶ್ರಮದಿಂದ ಚಾರ್ಟೆಡ್ ಅಕೌಂಟೆಂಟ್ ಪರೀಕ್ಷೆ ಪಾಸು ಮಾಡಿ, ಪುಣೆಯ ಅರ್ನ್ಸ್ಟ್ ಆ್ಯಂಡ್ ಯಂಗ್ (ಇವೈ) ಕಂಪನಿಯಲ್ಲಿ ಲೆಕ್ಕ ಪರಿಶೋಧಕಿಯಾಗಿ ಉದ್ಯೋಗಕ್ಕೆ ಸೇರಿದ್ದರು. ಅದು ಅವರ ಮೊದಲ ಕೆಲಸ. ಸಹಜವಾಗಿಯೇ ಅತೀವ ಉತ್ಸಾಹದಿಂದ ಕೆಲಸ ಮಾಡುತ್ತಿದ್ದ ಅವರಿಗೆ ಮೇನೇಜರ್‌ಗಳು ಹೆಚ್ಚು ಹೆಚ್ಚು ಕೆಲಸ ವಹಿಸುತ್ತಿದ್ದರು. ಅಷ್ಟು ಕೆಲಸದ ಹೊರೆ ನಿಭಾಯಿಸುವುದು ಕಷ್ಟವೆನಿಸಿದರೂ ಹೆಚ್ಚು ಶ್ರಮ ಪಟ್ಟರೆ ತನಗೆ ಉತ್ತಮ ಭವಿಷ್ಯ ಇರುತ್ತದೆ ಎಂದು ಭಾವಿಸಿದ ಅವರು, ರಾತ್ರಿ ಹಗಲು ಕೆಲಸ ಮಾಡಿದರು. ಆದರೆ, ಆ ಅತಿಯಾದ ಕೆಲಸವೇ ಅವರ ಜೀವಕ್ಕೆ ಮುಳುವಾಯಿತು. ವೃತ್ತಿ ಆರಂಭಿಸಿದ ನಾಲ್ಕೇ ತಿಂಗಳಲ್ಲಿ ಅವರ ಜೀವನವೇ ಅಂತ್ಯಗೊಂಡಿತು.

ತನ್ನ ಮಗಳ ಸಾವಿಗೆ ಕೆಲಸದ ಒತ್ತಡ ಹಾಗೂ ನಿದ್ರಾಹೀನತೆ ಕಾರಣ ಎಂದು ಅನ್ನಾ ಅವರ ತಾಯಿ ಅನಿತಾ ಅಗಸ್ಟೀನ್ ಅವರು ಇವೈ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ. ‘ಇದು ವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಯಾಗಿದ್ದು, ಮ್ಯಾನೇಜರ್‌ಗಳು ಮತ್ತು ತಂಡಗಳ ಆಚೆಗಿನ ವಿಚಾರವಾಗಿದೆ. ಉದ್ಯೋಗದ ವಾತಾವರಣ, ಕೆಲಸದ ಒತ್ತಡ ಮತ್ತು ಸುದೀರ್ಘ ಅವಧಿಯ ದುಡಿಮೆ ತನ್ನ ಮಗಳ ಮೇಲೆ ಪರಿಣಾಮ ಬೀರಿವೆ’ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಕೆಲಸ ಬಿಡು ಎಂದರೂ ಒಪ್ಪದಿದ್ದ ತನ್ನ ಮಗಳು ನೌಕರಿಯಿಂದಾಗಿಯೇ ಪ್ರಾಣ ಬಿಟ್ಟಿದ್ದಾಳೆ ಎಂದು ಅನ್ನಾ ತಂದೆ ಸಿಬಿ ಜೋಸೆಫ್ ಅಳಲು ತೋಡಿಕೊಂಡಿದ್ದಾರೆ. 

ಅನ್ನಾ ಪ್ರಕರಣ ಮೊದಲನೆಯದೇನಲ್ಲ. ಐಟಿ ರಾಜಧಾನಿ ಬೆಂಗಳೂರಿನಲ್ಲಿ ಇಂಥವರ ಸಂಖ್ಯೆ ದೊಡ್ಡದಾಗಿದೆ. ಜೀವನ ನಿರ್ವಹಣೆ ಮತ್ತು ಉತ್ತಮ ಬದುಕಿನ ಕನಸು ಹೊತ್ತು ಕೆಲಸಕ್ಕೆ ಸೇರುತ್ತಿರುವವರ ಪೈಕಿ ಅನೇಕರು ಸುದೀರ್ಘ ಕೆಲಸದ ಅವಧಿ, ಹೆಚ್ಚುವರಿ ಹೊಣೆಗಾರಿಕೆ, ಹಗಲು ರಾತ್ರಿಗಳ ಪರಿವೆ ಇಲ್ಲದ ಕೆಲಸ, ನಿದ್ರಾಹೀನತೆಯಿಂದ ಬಳಲಿ ಚಿಕ್ಕ ವಯಸ್ಸಿನಲ್ಲಿಯೇ ಹಲವು ಕಾಯಿಲೆಗಳಿಗೆ ಗುರಿಯಾಗುತ್ತಿರುವುದು, ಜೀವಕ್ಕೆ ಅಪಾಯ ತಂದುಕೊಳ್ಳುತ್ತಿರುವುದು ಕೆಲಸದ ಸ್ಥಳದಲ್ಲಿನ ಒತ್ತಡದ ವಾತಾವರಣಕ್ಕೆ ಕನ್ನಡಿ ಹಿಡಿಯುತ್ತಿದೆ.    

ಭಾರತದ ಯುವ ಜನರು ಹಾಗೂ ವೃತ್ತಿಪರರ ಮುಂದಿರುವ ಮುಖ್ಯ ಸವಾಲುಗಳಲ್ಲಿ ವೃತ್ತಿ ಬದುಕು ಮತ್ತು ವೈಯಕ್ತಿಕ ಬದುಕಿನ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಕೂಡ ಒಂದಾಗಿದೆ. ‘ದಿನಾ ಬೆಳಿಗ್ಗೆ 9 ಗಂಟೆಗೆ ಕೆಲಸ ಆರಂಭಿಸಿದರೆ ಮಧ್ಯರಾತ್ರಿವರೆಗೆ ಮಾಡುತ್ತಲೇ ಇರುತ್ತೇವೆ. ಊಟ, ನಿದ್ದೆ, ಶೌಚಕರ್ಮ, ನಿದ್ದೆಗೂ ಸಮಯ ಇರುವುದಿಲ್ಲ. ರಜೆ ಸಿಗುವುದು ಅಪರೂಪ. ಹಬ್ಬ ಹರಿದಿನದಂದು ನೆಂಟರಿಷ್ಟರನ್ನು ನೋಡಲು ಸಮಯ ಇಲ್ಲ. ಕಾಯಿಲೆ ಬಂದರೆ ಆಸ್ಪತ್ರೆಗೆ ಹೋಗವುದಕ್ಕೂ ಸಮಯ ಸಿಗುವುದಿಲ್ಲ’ ಎನ್ನುತ್ತಾರೆ ಕಾರ್ಪೊರೇಟ್ ವಲಯದ ಪ್ರಮುಖ ಕಂಪನಿಯಲ್ಲಿ ಕೆಲಸ ಮಾಡುವ ಬೆಂಗಳೂರಿನ ಮೌನೇಶ್. ಬಹುತೇಕರದ್ದು ಇದೇ ಕಥೆ.

ದೇಹಕ್ಕೆ ಕಾಲಕಾಲಕ್ಕೆ ವಿಶ್ರಾಂತಿ, ವೇಳೆಗೆ ತಕ್ಕಂತೆ ಪೌಷ್ಟಿಕ ಆಹಾರ ಹಾಗೂ ಅಗತ್ಯ ಪ್ರಮಾಣದ ನಿದ್ದೆ ಬೇಕು. ಹಗಲೂ ರಾತ್ರಿ ಕೆಲಸ ಮಾಡುವುದು, ವೇಳೆ ತಪ್ಪಿಸಿ ತಿನ್ನುವುದು, ಏನು ಸಿಕ್ಕರೆ ಅದನ್ನು (ಪೌಷ್ಟಿಕತೆ ಇಲ್ಲದ ಆಹಾರ) ತಿನ್ನುವುದು ಅನಾರೋಗ್ಯಕ್ಕೆ ಕಾರಣ. ಬೇಗ ಕೆಲಸ ಮುಗಿಸಬೇಕು ಎನ್ನುವ ಒತ್ತಡ, ಕೆಲಸ ಇರುತ್ತೋ ಇಲ್ಲವೋ ಎನ್ನುವ ಅನಿಶ್ಚಿತತೆ ಹೀಗೆ ದೈಹಿಕ ಹಾಗೂ ಮಾನಸಿಕ ಒತ್ತಡಗಳು ಉದ್ಯೋಗಿಗಳಿಗೆ ಮಾರಕವಾಗುತ್ತಿವೆ ಎನ್ನುತ್ತಾರೆ ಮನೋವೈದ್ಯ ಡಾ.ಸಿ.ಆರ್.ಚಂದ್ರಶೇಖರ್. 

ಹಿಂದೆ ಉದ್ಯೋಗಿಗಳ ಪ್ರಾಜೆಕ್ಟ್ ಕೊನೆಯಲ್ಲಿ ಮಾತ್ರ ಕೆಲಸದ ಅವಧಿ ವಿಸ್ತರಣೆಯಾಗುತ್ತಿತ್ತು. ಕೋವಿಡ್‌ ನಂತರ ಕೆಲಸದ ಅವಧಿ ವಿಸ್ತರಣೆಯು ಒಂದು ಸಾಮಾನ್ಯ ಪ್ರಕ್ರಿಯೆಯೇ ಆಗಿದೆ. ಮನೆಯಿಂದ ಕೆಲಸ ಮಾಡುವ (ವರ್ಕ್ ಫ್ರಮ್ ಹೋಮ್) ಮತ್ತು ಹೈಬ್ರಿಡ್ (ವಾರದಲ್ಲಿ ಕೆಲವು ದಿನ ಮಾತ್ರ ಆಫೀಸಿಗೆ ಹೋಗಿ, ಉಳಿದ ದಿನ ಮನೆಯಿಂದ ಕೆಲಸ ಮಾಡುವುದು) ಪದ್ಧತಿಗಳು ಚಾಲ್ತಿಗೆ ಬಂದ ನಂತರ ವೃತ್ತಿ ಮತ್ತು ವೈಯಕ್ತಿಕ ಬದುಕಿನ ನಡುವಿನ ಅಂತರವೇ ಇಲ್ಲದಂತಾಗಿದೆ ಎನ್ನುವುದು ಉದ್ಯೋಗಿಗಳು ಅಳಲು. 

ಐಟಿ ಕ್ಷೇತ್ರದಲ್ಲಿ ಹೆಚ್ಚು ಸಮಸ್ಯೆ  

ಎಐ ಚಿತ್ರ

ಎಐ ಚಿತ್ರ

ಕಣಕಾಲಮಠ

ವಿವಿಧ ಕ್ಷೇತ್ರಗಳಲ್ಲಿನ ಭಾರತೀಯರ ಕೆಲಸದ ಅವಧಿಯ ಬಗ್ಗೆ ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐಎಲ್‌ಒ) 2023ರಲ್ಲಿ ದತ್ತಾಂಶ ಪ್ರಕಟಿಸಿದೆ.

ಭಾರತದಲ್ಲಿ ಐಟಿ ವಲಯ ಮತ್ತು ಮಾಧ್ಯಮ ರಂಗದಲ್ಲಿ ಮಹಿಳೆಯರು ವಾರಕ್ಕೆ 56.5 ಗಂಟೆ ಕೆಲಸ ಮಾಡುತ್ತಿದ್ದಾರೆ. ಇದು ಜಾಗತಿಕ ಮಟ್ಟದಲ್ಲಿಯೇ ಅತಿ ಹೆಚ್ಚಿನ ಕೆಲಸದ ಅವಧಿಯಾಗಿದೆ. ವೃತ್ತಿಪರ, ವೈಜ್ಞಾನಿಕ ಮತ್ತು ತಾಂತ್ರಿಕ ವಲಯದಲ್ಲಿ ದುಡಿಯುತ್ತಿರುವ ಭಾರತದ ಮಹಿಳೆಯರು ವಾರಕ್ಕೆ 53.2 ಗಂಟೆ ಕೆಲಸ ಮಾಡುತ್ತಿದ್ದಾರೆ ಎಂದು ಅದು ಹೇಳಿದೆ. 

ಉದ್ಯೋಗಿಗಳ ವಯಸ್ಸು ಕಡಿಮೆ ಇದ್ದಷ್ಟೂ ಕೆಲಸದ ಅವಧಿ ಹೆಚ್ಚಾಗುತ್ತದೆ. ನಿದರ್ಶನಕ್ಕೆ, ಭಾರತದಲ್ಲಿ ಐಟಿ ವಲಯದಲ್ಲಿರುವ 24 ವಯಸ್ಸಿದೊಳಗಿನ ಮಹಿಳೆಯರು ವಾರಕ್ಕೆ 57 ಗಂಟೆ ಕೆಲಸ ಮಾಡಿದರೆ, ಅದೇ ವೃತ್ತಿಪರ, ವೈಜ್ಞಾನಿಕ ಮತ್ತು ತಾಂತ್ರಿಕ ವಲಯದಲ್ಲಿರುವ ಇದೇ ವಯಸ್ಸಿನ ಮಹಿಳೆಯರು 55 ಗಂಟೆ ಕೆಲಸ ಮಾಡುತ್ತಿದ್ದಾರೆ.      

ಇಷ್ಟಾದರೂ ಕಾರ್ಪೊರೇಟ್ ವಲಯದಲ್ಲಿ ಪುರುಷರದ್ದೇ ಪಾರುಪತ್ಯ. ವೃತ್ತಿಪರ, ವೈಜ್ಞಾನಿಕ ಮತ್ತು ತಾಂತ್ರಿಕ ವಲಯದಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರ ಸಂಖ್ಯೆ ಕೇವಲ ಶೇ 8.5 ಮತ್ತು ಐಟಿ ವಲಯದಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರ ಸಂಖ್ಯೆ ಶೇ 20 ಮಾತ್ರ.

ಕೆಲಸದ ಖುಷಿ ಇಲ್ಲ

ಭಾರತದ ಉದ್ಯೋಗಿಗಳ ಪೈಕಿ ಬಹುತೇಕರಿಗೆ ತಮ್ಮ ಕೆಲಸದ ಬಗ್ಗೆ ಖುಷಿ ಇಲ್ಲ ಎನ್ನುವ ಅಂಶ ಗ್ಯಾಲಪ್ ಎನ್ನುವ ಸಂಸ್ಥೆಯ ಅಧ್ಯಯನದಿಂದ ತಿಳಿದುಬಂದಿದೆ. ಜಾಗತಿಕ ಮಟ್ಟದಲ್ಲಿ ಉದ್ಯೋಗಿಗಳ ಮಾನಸಿಕ ಆರೋಗ್ಯದಲ್ಲಿ ಕುಸಿತ ಉಂಟಾಗುತ್ತಿದ್ದು, ಅದರಲ್ಲಿ ಕೆಲಸದ ಒತ್ತಡ ಮತ್ತು ಕೆಲಸದ ಸ್ಥಳದಲ್ಲಿನ ಅಸಂತೃಪ್ತಿಯ ಪಾತ್ರ ಹಿರಿದಾಗಿದೆ. ಆದರೆ, ಭಾರತದಲ್ಲಿ ಕೇವಲ ಶೇ 14 ಮಂದಿ ಮಾತ್ರ ತಾವು ಉದ್ಯೋಗದಲ್ಲಿ ಸಂತೋಷ ಕಾಣುತ್ತಿದ್ದು, ಪ್ರಗತಿ ಹೊಂದುತ್ತಿರುವುದಾಗಿ ಭಾವಿಸಿದ್ದಾರೆ. ಉಳಿದ ಶೇ 84ರಷ್ಟು ಮಂದಿ ಉದ್ಯೋಗದಲ್ಲಿ ನರಳುತ್ತಿದ್ದಾರೆ (ಕೆಲಸದ ಒತ್ತಡ, ಹಣಕಾಸಿನ ಮತ್ತು ಭವಿಷ್ಯದ ಅಭದ್ರತೆ ಎದುರಿಸುವುದು) ಇಲ್ಲವೇ ಸಂಘರ್ಷ ನಡೆಸುತ್ತಿದ್ದಾರೆ (ಮೂಲಸೌಕರ್ಯಗಳ ಕೊರತೆ, ಭವಿಷ್ಯದ ಚಿಂತೆ, ದೈಹಿಕ ಮತ್ತು ಮಾನಸಿಕ ನೋವು ಅನುಭವಿಸುವುದು). ಜಾಗತಿಕ ಮಟ್ಟದಲ್ಲಿ ಉದ್ಯೋಗದಲ್ಲಿ ಖುಷಿ ಇದ್ದು, ಪ್ರಗತಿ ಸಾಧಿಸುತ್ತಿರುವುದಾಗಿ ಹೇಳಿರುವವರ ಸಂಖ್ಯೆ ಶೇ 34ರಷ್ಟಿದೆ. 

ಜಾಗತಿಕವಾಗಿ, ಪ್ರತಿ ಐವರಲ್ಲಿ ಒಬ್ಬರು ಕೆಲಸದ ಸ್ಥಳದಲ್ಲಿ ಒಂಟಿತನ ಅನುಭವಿಸುತ್ತಾರೆ ಎಂದು ವರದಿ ತಿಳಿಸಿದೆ. ಸಮಾಜದಿಂದ ಬೇರ್ಪಡುವುದು ಮತ್ತು ದೀರ್ಘಾವಧಿಯವರೆಗೆ ಅಥವಾ ಪದೇ ಪದೇ ಒಂಟಿಯಾಗಿ ಕಳೆಯುವುದು ಜನರ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಹಾರ್ವಡ್ ಪ್ರಾಧ್ಯಾಪಕರಾದ ಲೀಸಾ ಬರ್ಕ್‌ಮನ್ ಅಭಿಪ್ರಾಯ ಪಟ್ಟಿದ್ದಾರೆ. ಸಾಮುದಾಯಿಕ ಜೀವನ ಮತ್ತು ಸಾಮಾಜಿಕ ಸಂಪರ್ಕಗಳ ಕೊರತೆ ಇರುವವರು ಇತರರಿಗಿಂತ ಶೀಘ್ರವಾಗಿ ಸಾಯುವ ಅಪಾಯ ಎರಡು ಪಟ್ಟು ಹೆಚ್ಚಾಗಿರುತ್ತದೆ. ಉದ್ಯೋಗ ಸಂಬಂಧಿ ಒತ್ತಡ ಮತ್ತಿತರ ಕಾರಣಗಳಿಂದ ಜಾಗತಿಕ ಮಟ್ಟದಲ್ಲಿ ಸಾಯುವವರ ಸಂಖ್ಯೆ ಭಾರತದಲ್ಲಿಯೇ ಹೆಚ್ಚಾಗಿದೆ. ಇಲ್ಲಿ ವಾರ್ಷಿಕವಾಗಿ 2 ಲಕ್ಷ ಮಂದಿ ಒತ್ತಡದಿಂದಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ಒಂಟಿತನದಂಥ ನಕಾರಾತ್ಮಕ ಭಾವನೆಗಳು ಉದ್ಯೋಗಿಗಳಿಗೆ ಕೆಲಸದಲ್ಲಿ ಕ್ರಿಯಾಶೀಲವಾಗಿ ತೊಡಗಲು ಅಡ್ಡಿಪಡಿಸುತ್ತವೆ. ಕ್ರಿಯಾಶೀಲವಾಗಿ ತೊಡಗದೇ ಇದ್ದರೆ ಉದ್ಯೋಗಿಗೆ ಕೆಲಸದ ತೃಪ್ತಿಯೂ ಸಿಗುವುದಿಲ್ಲ; ಅವರಿಂದ ಗುಣಮಟ್ಟದ ಕೆಲಸವೂ ಸಾಧ್ಯವಿಲ್ಲ. ಉದ್ಯೋಗಿಗಳ ಕ್ರಿಯಾಶೀಲ ಪಾಲ್ಗೊಳ್ಳುವಿಕೆಯ ಕೊರತೆಯಿಂದ ಜಾಗತಿಕ ಆರ್ಥಿಕತೆಗೆ ₹743 ಲಕ್ಷ ಕೋಟಿ ಅಥವಾ ಜಿಡಿಪಿಯ ಶೇ 9ರಷ್ಟು ನಷ್ಟ ಉಂಟಾಗುತ್ತಿದೆ ಎಂದು ಗ್ಯಾಲಪ್ ವರದಿ ತಿಳಿಸಿದೆ. 

ಕೆಲಸವನ್ನು ಖುಷಿಯಿಂದ ಮಾಡಲಾಗದೇ ಇರುವವರು ಹಲವು ರೀತಿಯ ನಕಾರಾತ್ಮಕ ಭಾವನೆಗಳಿಗೆ ಗುರಿಯಾಗುತ್ತಾರೆ. ಅವರು ಒತ್ತಡ, ಒಂಟಿತನ, ಚಿಂತೆ, ಕೋಪ ಮುಂತಾದವುಗಳಿಗೆ ಪದೇ ಪದೇ ಗುರಿಯಾಗಿರುತ್ತಾರೆ. ಇದು ನಿರುದ್ಯೋಗಿಯಾಗಿರುವುದಕ್ಕೆ ಸಮನಾಗಿದೆ ಎನ್ನುತ್ತದೆ ವರದಿ. ಇದೇ ಮಾತನ್ನು ಪುನರುಚ್ಚರಿಸುವ ಡಾ.ಚಂದ್ರಶೇಖರ್, ‘ಅನೇಕ ಉದ್ಯೋಗಿಗಳು ದೇಹವನ್ನು ವಿಪರೀತ ದಂಡಿಸಿ ಮಾನಸಿಕ ಒತ್ತಡಕ್ಕೆ ಗುರಿಯಾಗುತ್ತಾರೆ. ಜತೆಗೆ ಭಯಕ್ಕೆ, ಕೋಪಕ್ಕೆ, ದುಃಖಕ್ಕೆ, ಹತಾಶೆಗೆ ಒಳಗಾಗುತ್ತಾರೆ. ಕೆಲಸ ಸಮಯಕ್ಕೆ ಸರಿಯಾಗಿ ಮಾಡಲಾಗುತ್ತಿಲ್ಲ ಎನ್ನುವ ಕೊರಗು ಇಲ್ಲವೇ ವೃತ್ತಿಜೀವನದಲ್ಲಿ ಕ್ಷಿಪ್ರಗತಿಯಲ್ಲಿ ಮೇಲೇರಬೇಕು ಎನ್ನುವ ಅತಿ ಮಹತ್ವಾಕಾಂಕ್ಷೆ ಎರಡೂ ಅವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿವೆ’ ಎನ್ನುತ್ತಾರೆ. 

ಕಾರ್ಮಿಕರ ಕಾನೂನುಗಳು ಸಮರ್ಪಕವಾಗಿರುವ ದೇಶಗಳಲ್ಲಿ ಉದ್ಯೋಗಿಗಳು ಉಳಿದ ದೇಶಗಳಿಗಿಂತ ಉತ್ತಮ ಕೆಲಸದ ವಾತಾವರಣ ಹೊಂದಿರುತ್ತಾರೆ. ಉತ್ತಮ ಸಂಬಳ, ಹೆರಿಗೆ ರಜೆ, ಸಾಮಾಜಿಕ ಭದ್ರತೆ, ಕೆಲಸದ ಭದ್ರತೆ, ರಕ್ಷಣೆ ಮುಂತಾದ ಅಂಶಗಳಿಗೂ ಕೆಲಸದಲ್ಲಿ ಉದ್ಯೋಗಿಗಳು ಅನುಭವಿಸುವ ತೃಪ್ತಿಗೂ ನೇರ ಸಂಬಂಧವಿದೆ. ಅಂತಹ ಕಡೆ ಕೆಲಸ ಮಾಡುವ ಉದ್ಯೋಗಿಗಳಲ್ಲಿ ನಕಾರಾತ್ಮಕ ಭಾವನೆಗಳು ಕಡಿಮೆ ಇರುತ್ತವೆ. ಆದರೆ, ಹೆಚ್ಚಿನ ಉದ್ಯೋಗಿಗಳು ಕಾರ್ಮಿಕ ಕಾನೂನಿಗಿಂತಲೂ ಮುಖ್ಯವಾಗಿ ಉತ್ತಮ ಭವಿಷ್ಯವಿರುವ ಕೆಲಸಗಳಿಗೆ ಆದ್ಯತೆ ನೀಡುತ್ತಾರೆ. ಅದು ಸಮಸ್ಯೆಗಳಿಗೆ ಕಾರಣವಾಗುತ್ತಿದೆ.

‘ಅತಿಯಾದ ಆಸೆ, ಅತಿಯಾದ ನಿರೀಕ್ಷೆ, ಅತಿಯಾದ ಒತ್ತಡ ದೇಹಕ್ಕೆ ಮತ್ತು ಮನಸ್ಸಿಗೆ ಮಾರಕ. ಒತ್ತಡದ ಕೆಲಸ, ದೀರ್ಘ ಅವಧಿಯ ದುಡಿಮೆ ಉದ್ಯೋಗಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದು, 25ರ ವಯಸ್ಸಿನ ಒಳಗಿನ ಶೇ 30 ಮಂದಿಗೆ ಹೃದಯಾಘಾತವಾಗುತ್ತಿದೆ. ಚಿಕ್ಕವಯಸ್ಸಿಗೇ ರಕ್ತದೊತ್ತಡ, ಮಧುಮೇಹ, ಸರ್ವಿಕಲ್ ಸ್ಪಾಂಡಿಲೈಟಿಸ್, ಥೈರಾಯಿಡ್ ಮುಂತಾದ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ’ ಎನ್ನುತ್ತಾರೆ ಡಾ.ಚಂದ್ರಶೇಖರ್.

‘ಪ್ರತಿಧ್ವನಿ’ ಐಟಿ ಉದ್ಯೋಗಿಗಳ ಕಲ್ಯಾಣ ಸಂಸ್ಥೆಯಾಗಿದ್ದು, ಕೆಲಸದ ಒತ್ತಡ, ಸುದೀರ್ಘ ಅವಧಿಯ ದುಡಿಮೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಸಮೀಕ್ಷೆ ನಡೆಸುತ್ತಿದೆ. ಐಟಿ ಕಂಪನಿಗಳಲ್ಲಿ ಉದ್ಯೋಗಿಗಳ ಮಾನಸಿಕ ಆರೋಗ್ಯದ ರಕ್ಷಣೆಗಾಗಿ ಪ್ರತ್ಯೇಕ ವಿಭಾಗ ತೆರೆಯುವುದು, ಆಗಿಂದಾಗ್ಗೆ ಆರೋಗ್ಯ ಪರೀಕ್ಷೆ ನಡೆಸುವುದು ಸೇರಿದಂತೆ ಹಲವು ಕ್ರಮ ಕೈಗೊಳ್ಳುವಂತೆ ಒತ್ತಾಯಿಸುವ ನಿಟ್ಟಿನಲ್ಲಿ ಸಂಸ್ಥೆಯು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಮನವಿ ಪತ್ರ ಸಲ್ಲಿಸಲು ಸಿದ್ಧತೆ ನಡೆಸುತ್ತಿದೆ. 

ಸರ್ಕಾರಿ ಕೆಲಸದಲ್ಲಿಯೂ ಒತ್ತಡ...

ಹಿಂದೆ, ಸರ್ಕಾರಿ ಕೆಲಸ ಎಂದರೆ, ಒತ್ತಡರಹಿತವಾಗಿರುತ್ತದೆ ಎನ್ನುವ ವಾತಾವರಣ ಇತ್ತು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಕೇಂದ್ರ ಸರ್ಕಾರದ ಬ್ಯಾಂಕಿಂಗ್, ರಾಜ್ಯ ಸರ್ಕಾರದ ಪೊಲೀಸ್ ಇಲಾಖೆ ಸೇರಿದಂತೆ ಹಲವು ಇಲಾಖೆಗಳಲ್ಲಿ ಕಾಯಂ ಸಿಬ್ಬಂದಿಯ ಕೊರತೆ ಇದೆ. ಆರ್ಥಿಕ ಹೊರೆ ಎನ್ನುವ ಕಾರಣಕ್ಕೆ ಸರ್ಕಾರಗಳು ಆ ಸ್ಥಾನಗಳಿಗೆ ನೇಮಕಾತಿ ಮಾಡುತ್ತಿಲ್ಲ. ಇದರಿಂದಾಗಿ ಇರುವ ಸಿಬ್ಬಂದಿಗೆ ಕೆಲಸದ ಒತ್ತಡ ಹೆಚ್ಚಾಗಿದೆ. ಜತೆಗೆ ಕಾಲಕ್ಕೆ ತಕ್ಕಂತೆ ಕೆಲಸದ ಸ್ವರೂಪವೂ ಬದಲಾಗಿದ್ದು, ಸರ್ಕಾರಿ ಕೆಲಸ ಆರಾಮದಾಯಕ ಎನ್ನುವ ಭಾವನೆ ನಿಧಾನಕ್ಕೆ ಕಣ್ಮರೆಯಾಗುತ್ತಿದೆ. 

ಬದುಕಲು ಯಾವುದಾದರೊಂದು ಉದ್ಯೋಗ ಮಾಡಬೇಕು. ಆದರೆ, ಬದುಕಲು ಕೆಲಸ ಬೇಕೋ ಅಥವಾ ಕೆಲಸಕ್ಕಾಗಿ ಬದುಕಬೇಕೋ ಎನ್ನುವ ಬಗ್ಗೆ ವೃತ್ತಿಪರರಿಗೆ ಸ್ಪಷ್ಟತೆ ಬೇಕಾಗಿದೆ ಎನ್ನುತ್ತಾರೆ ತಜ್ಞರು. 

ಇನ್ಫೋಗ್ರಾಫಿಕ್ಸ್

ಇನ್ಫೋಗ್ರಾಫಿಕ್ಸ್

ಕಣಕಾಲಮಠ

ಕೆಲಸದ ವಿವಿಧ ಮಾನದಂಡಗಳ ಪ್ರಕಾರ ದಕ್ಷಿಣ ಏಷ್ಯಾದಲ್ಲಿ ಭಾರತದ ಸ್ಥಾನ

ಇನ್ಫೋಗ್ರಾಫಿಕ್ಸ್

ಇನ್ಫೋಗ್ರಾಫಿಕ್ಸ್

ಶಿಲ್ಪಾ ಕಬ್ಬಿಣಕಂತಿ

ಕೆಲಸದ ಅವಧಿ ಹೆಚ್ಚಳಕ್ಕೆ ವಿರೋಧ

ಅಲಿಬಾಬಾ ಕಂಪನಿಯ ಸಂಸ್ಥಾಪಕ ಜಾಕ್ ಮಾ ಅವರು ಹಿಂದೊಮ್ಮೆ ‘ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ವಾರದ 6 ದಿನ ದುಡಿಯುವುದು (996 ಸೂತ್ರ) ದೊಡ್ಡ ಕಂಪನಿಗಳು ಮತ್ತು ಸ್ಟಾರ್ಟ್ ಅಪ್‌ಗಳ ನೌಕರರಿಗೆ ಅನಿವಾರ್ಯ’ ಎಂದು ಹೇಳಿದ್ದು ವಿವಾದವಾಗಿತ್ತು. ಇನ್ಫೋಸಿಸ್‌ ಸಹ ಸಂಸ್ಥಾಪಕ ಎನ್‌.ಆರ್.ನಾರಾಯಣಮೂರ್ತಿ ಅವರು ‘ಭಾರತದ ಕೆಲಸ ಸಂಸ್ಕೃತಿ ಬದಲಾಗಬೇಕು ಮತ್ತು ಜಾಗತಿಕ ಮಟ್ಟದಲ್ಲಿ ಭಾರತ ಪಾರಮ್ಯ ಮೆರೆಯಲು ಯುವಜನರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು’ ಎಂದು ಹೇಳಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ರಾಜ್ಯದಲ್ಲಿ ಐಟಿ ಬಿಟಿ ವಲಯದ ಉದ್ಯೋಗಿಗಳ ಕೆಲಸದ ಅವಧಿಯನ್ನು 14 ಗಂಟೆಗೆ ವಿಸ್ತರಿಸಬೇಕು; ಅದಕ್ಕಾಗಿ ಅಂಗಡಿಗಳು ಮತ್ತು ವಾಣಿಜ್ಯ ಸ್ಥಾಪನೆ ಕಾಯ್ದೆ–1961ಕ್ಕೆ ತಿದ್ದುಪಡಿ ತರಬೇಕು ಎಂದು ಕೆಲ ಉದ್ಯಮಿಗಳು ಎರಡು ತಿಂಗಳ ಹಿಂದೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರು. ಅದಕ್ಕೆ ಕಾರ್ಮಿಕ ವಲಯದಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ‘ಈ ವಲಯದಲ್ಲಿ ಈಗಾಗಲೇ ಕೆಲಸದ ಅವಧಿ 12 ಗಂಟೆ ಇದ್ದು ಅದನ್ನು 14 ಗಂಟೆಗೆ ವಿಸ್ತರಿಸುವುದು ಜೀವವಿರೋಧಿಯಾಗುತ್ತದೆ’ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. 

‘ಸರ್ಕಾರದಿಂದ ಕಾರ್ಮಿಕ ಕಾನೂನು ದುರ್ಬಲ’

ಭಾರತದ ಉದ್ಯೋಗಿಗಳಲ್ಲಿ ಕೆಲಸದ ಒತ್ತಡ ಹೆಚ್ಚುತ್ತಿರುವುದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಮಿಕ ಕಾನೂನುಗಳೇ ಕಾರಣ ಎನ್ನುವುದು ಕಾರ್ಮಿಕ ಮುಖಂಡ ಹಾಗೂ ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಕೆ.ಪ್ರಕಾಶ್ ಅವರ ವಾದ. ‘ಕೆಲಸದ ಒತ್ತಡದಿಂದ ಹಲವರು ಸಾಯುತ್ತಿದ್ದಾರೆ. ಇದು ಬಂಡವಾಳ ಮತ್ತು ಶ್ರಮದ ನಡುವಿನ ಸಂಘರ್ಷ; ಕಡಿಮೆ ಬಂಡವಾಳದಲ್ಲಿ ಹೆಚ್ಚು ಲಾಭ ಮಾಡಬೇಕೆನ್ನುವ ಪ್ರಕ್ರಿಯೆಯ ತೀವ್ರವಾದ ಪರಿಣಾಮ. ಬಂಡವಾಳದ ಪ್ರಮುಖ ಪ್ರಶ್ನೆ ಲಾಭ. ಬಂಡವಾಳದಾರರು ಅದನ್ನೇ ಅನುಸರಿಸುತ್ತಿದ್ದಾರೆ. ಇನ್ಫೋಸಿಸ್‌ನ ನಾರಾಯಣಮೂರ್ತಿಯವರು ಹೇಳುತ್ತಿರುವುದು ಕೂಡ ಅದನ್ನೇ. ಅದರ ಪರಿಣಾಮವಾಗಿ ಏನಾಗುತ್ತಿದೆ ಎಂದರೆ ವೇತನಗಳ ಪಾಲು ಕುಸಿಯುತ್ತಾ ಹೋಗುತ್ತಿದೆ ಬಂಡವಾಳಿಗರ ಲಾಭದ ಪಾಲು ಹೆಚ್ಚುತ್ತಾ ಹೋಗುತ್ತಿದೆ’ ಎಂದರು. ‘ಮೇಲುಮಟ್ಟದ ಕೆಲಸಗಳಲ್ಲಿ ಇರುವವರು ಆತ್ಮಹತ್ಯೆ ಮಾಡಿಕೊಳ್ಳುವಂಥ ಸ್ಥಿತಿ ಇದೆ. ಕೆಳಗಿನ ಹಂತದ ಕೆಲಸಗಾರರ ಪರಿಸ್ಥಿತಿ ಇನ್ನೂ ಘೋರವಾಗಿದೆ. ವಿಪರೀತ ಒತ್ತಡದ ಜತೆಗೆ ನಾನಾ ತರಹದ ದೌರ್ಜನ್ಯ ಶೋಷಣೆಯೂ ನಡೆಯುತ್ತಿದೆ. ಆದರೆ ಅದು ಹೆಚ್ಚು ಪ್ರಚಾರಕ್ಕೆ ಬರುತ್ತಿಲ್ಲ’ ಎಂದು ಆಪಾದಿಸಿದರು. ‘ಕಾರ್ಮಿಕರಿಗಿರುವ ಎಲ್ಲ ರಕ್ಷಣಾ ಸೌಲಭ್ಯಗಳನ್ನು ದುರ್ಬಲಗೊಳಿಸಲಾಗುತ್ತಿದೆ. ಕೇಂದ್ರ ಸರ್ಕಾರವು ಕಾರ್ಮಿಕರಿಗೆ ಸಂಬಂಧಿಸಿದ 29 ಕಾಯ್ದೆಗಳನ್ನು ರದ್ದುಪಡಿಸಿ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರೂಪಿಸಿದೆ. ಅವು ಕಾಯ್ದೆಗಳಾಗಿದ್ದರೂ ಇನ್ನೂ ನಿಯಮಗಳನ್ನು ರೂಪಿಸಿಲ್ಲ. ಅದಕ್ಕೆ ಮುಂಚೆಯೇ ಕಾಯ್ದೆಗಳಲ್ಲಿರುವ ಅಂಶಗಳನ್ನು ಜಾರಿ ಮಾಡಲಾಗುತ್ತಿದೆ. ಕರ್ನಾಟಕದಲ್ಲಿ ಐಟಿ ವಲಯ ಸೇರಿದಂತೆ ಹಲವು ವಲಯಯಗಳಲ್ಲಿ ಈಗಾಗಲೇ 12 ಗಂಟೆ ಕೆಲಸ ಮಾಡಿಸಿಕೊಳ್ಳಲಾಗುತ್ತಿದ್ದು ಅದನ್ನು 14 ಗಂಟೆಗೆ ಏರಿಸಬೇಕು ಎನ್ನುವ ಕೂಗೆದ್ದಿರುವುದು ಕೂಡ ಇದೇ ದಿಸೆಯಲ್ಲಿಯೇ. ಉಳಿದ ಕ್ಷೇತ್ರಗಳಲ್ಲಿ 48 ಗಂಟೆ ಕೆಲಸದ ಮಿತಿ ಇದೆ. ಆದರೆ ಐಟಿ ರಾಜಧಾನಿ ಎನಿಸಿಕೊಂಡಿರುವ ಕರ್ನಾಟಕದಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ರಾಜ್ಯದಲ್ಲಿ ಯಾವುದೇ ಪಕ್ಷದ ಸರ್ಕಾರ ಇದ್ದಾಗಲೂ 20 ವರ್ಷಗಳಿಂದ ಐಟಿ ಬಿಟಿ ವಲಯಗಳಿಗೆ ಕೈಗಾರಿಕಾ ಸ್ಥಾಯಿ ಆದೇಶಗಳ ಕಾಯ್ದೆಯಿಂದ ವಿನಾಯಿತಿ ನೀಡಲಾಗಿದೆ. ಸಂಘಟಿತರಾಗುವುದೂ ಸೇರಿದಂತೆ ಅವರಿಗೆ ಯಾವ ಕಾರ್ಮಿಕ ಕಾಯ್ದೆಯೂ ಅನ್ವಯವಾಗುವುದಿಲ್ಲ. ಹಕ್ಕುಗಳೂ ಇರುವುದಿಲ್ಲ. ಅವರನ್ನು ಎಷ್ಟು ಗಂಟೆ ಬೇಕಾದರೂ ದುಡಿಸಿಕೊಳ್ಳಬಹುದು ಯಾವಾಗ ಬೇಕಾದರೂ ಕೆಲಸದಿಂದ ಕಿತ್ತುಹಾಕಬಹುದು ಎನ್ನುವ ಪರಿಸ್ಥಿತಿ ಇದೆ’ ಎಂದು ಬೇಸರ ವ್ಯಕ್ತಪಡಿಸಿದರು. ‘ಬಂಡವಾಳ ಹಾಕುತ್ತಾರೆ ಉದ್ಯೋಗ ಸೃಷ್ಟಿ ಮಾಡುತ್ತಾರೆ ಎನ್ನುವ ನೆಪದಲ್ಲಿ ಅವರಿಗೆ ಎಲ್ಲ ಕಾಯ್ದೆಗಳಿಂದ ವಿನಾಯಿತಿ ಕೊಡುವುದು ಸರಿ ಅಲ್ಲ. ಇಡೀ ಕಾರ್ಪೊರೇಟ್ ವಲಯದ ವ್ಯವಸ್ಥೆಯೇ ಹೀಗಿದೆ. ಈ ವ್ಯವಸ್ಥೆ ಸಂಪೂರ್ಣವಾಗಿ ಬದಲಾಗಬೇಕು ಎನ್ನುವುದು ನಮ್ಮ ಬೇಡಿಕೆ’ ಎನ್ನುವರು.

ಉದ್ಯೋಗಿಗಳಿಗೆ ಆರೋಗ್ಯ ತಜ್ಞರ ಸಲಹೆಗಳು

* ಕೆಲಸದ ನಡುವೆ ಸಣ್ಣ ಸಣ್ಣ ಅವಧಿಯ ವಿಶ್ರಾಂತಿ ತೆಗೆದುಕೊಳ್ಳಿ

* ನಿಮ್ಮ ಶರೀರದ ಯೋಗಕ್ಷೇಮ ನೋಡಿಕೊಳ್ಳಿ 

* ಕೆಲಸದ ಒತ್ತಡ ನೀಗಿಸಿಕೊಳ್ಳುವುದಕ್ಕಾಗಿ ಧೂಮಪಾನ ಮದ್ಯಪಾನದ ಚಟಕ್ಕೆ ಬಲಿಯಾಗಬೇಡಿ 

* ಒತ್ತಡ ನಿವಾರಣೆಗೆ ಅಗತ್ಯಕ್ಕಿಂತ ಹೆಚ್ಚು ಆಹಾರ ಸೇವನೆ ಮಾಡುವುದು ಅನಾರೋಗ್ಯಕಾರಿ

* ಒಳ್ಳೆಯ ಪುಸ್ತಕ ಓದಿ ಇಷ್ಟವಾದ ಸಂಗೀತ ಕೇಳಿ. ಸಾಧ್ಯವಾದರೆ ಧ್ಯಾನ ಮಾಡಿ

* ಉತ್ತಮ ಅಭ್ಯಾಸಗಳಿಂದ ಕೂಡಿದ ಜೀವನ ಶೈಲಿ ರೂಢಿಸಿಕೊಳ್ಳಿ

* ಪ್ರಶಾಂತ ಮನ ಇದ್ದರೆ ಪ್ರಶಾಂತ ಕಾಯ. ಇವೆರಡೂ ಇದ್ದರೆ ಪ್ರಶಾಂತ ಜೀವನ

‘ಕೆಲಸದ ಅವಧಿ ವಿಸ್ತರಿಸುವ ಚಿಂತನೆ ಇಲ್ಲ’ 

‘ಐಟಿ ಸೇವೆಗಳ ರಫ್ತಿನಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದ್ದು ರಾಜ್ಯದಲ್ಲಿ ಐಟಿ ಉದ್ಯೋಗಿಗಳ ಕೆಲಸದ ಅವಧಿಯನ್ನು ವಿಸ್ತರಿಸುವ ಪ್ರಸ್ತಾವ ಸರ್ಕಾರದ ಮುಂದೆ ಇಲ್ಲ. ಐಟಿ ಉದ್ಯೋಗಿಗಳು ದಿನಕ್ಕೆ 10 ಗಂಟೆ ಕೆಲಸ ಮಾಡುತ್ತಿದ್ದಾರೆ. ಇದನ್ನು ಹೆಚ್ಚಿಸಲು ಕಾರ್ಮಿಕ ಇಲಾಖೆಗೆ ನಿರ್ದಿಷ್ಟ ಐಟಿ ಕಂಪನಿಗಳು ಅರ್ಜಿ ಸಲ್ಲಿಸಬೇಕಾಗುತ್ತದೆ’ ಎಂದು ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ‘ಕರ್ನಾಟಕವು ಪಶ್ಚಿಮ ಬಂಗಾಳ ಆಗಬಾರದು ಎಂಬ ಉದ್ದೇಶದಿಂದ ಐಟಿ ವಲಯದಲ್ಲಿ ಕಾರ್ಮಿಕ ಸಂಘಟನೆಗಳಿಗೆ ಸರ್ಕಾರ ಮಾನ್ಯತೆ ನೀಡಿಲ್ಲ. ಹಾಗೆಂದು ಐಟಿ ಉದ್ಯೋಗಿಗಳ ಶೋಷಣೆಗೆ ಅವಕಾಶವಿಲ್ಲ. ಈ ಬಗ್ಗೆ ವಿವಿಧ ಸರ್ಕಾರೇತರ ಸಂಘಟನೆಗಳು ನೀಡುವ ವರದಿಗಳನ್ನು ಆಧರಿಸಿ ಆಯಾ ಐಟಿ ಕಂಪನಿಗಳಿಗೆ ಪತ್ರ ಬರೆಯುತ್ತಿದ್ದೇವೆ’ ಎಂದರು.

ಅಭಿಪ್ರಾಯ ಸಂಗ್ರಹ: ಓಬಳೇಶ್ ಕೆ.ಎಚ್., ಮನೋಜ್‌ಕುಮಾರ್ ಗುದ್ದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT