ಬೆಂಗಳೂರು: ರಾಜ್ಯದ ಕೆಲವು ಉಪ ವಿಭಾಗಾಧಿಕಾರಿಗಳು ಅರೆ ನ್ಯಾಯಿಕ ನ್ಯಾಯಾಲಯಗಳಲ್ಲಿ (ಎ.ಸಿ ಕೋರ್ಟ್) ದಾಖಲಾಗಿರುವ ಭೂ ಸಂಬಂಧಿ ತಕರಾರು ಪ್ರಕರಣಗಳನ್ನು ತಮ್ಮ ಹಂತದಲ್ಲಿಯೇ ಇತ್ಯರ್ಥಗೊಳಿಸದೆ, ಮರು ವಿಚಾರಣೆ ನಡೆಸಲು ತಹಶೀಲ್ದಾರ್ಗಳಿಗೆ ಹಿಂದಿರುಗಿಸುತ್ತಿದ್ದಾರೆ.

ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಅಂತಹ ಪ್ರಕರಣಗಳನ್ನು ಸಕಾರಣಗಳೊಂದಿಗೆ ಹಿಂದಿರುಗಿಸಲಾಗಿದೆಯೇ ಎಂಬ ಬಗ್ಗೆ ವಿವರವಾದ ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಅಷ್ಟೇ ಅಲ್ಲದೆ, ವಿಚಾರಣೆ ಪೂರ್ಣಗೊಳಿಸಿದ ಪ್ರಕರಣಗಳಿಗೆ ಸಂಬಂಧಿಸಿದಂತೆ 15 ದಿನಗಳು ಕಳೆದರೂ ಆದೇಶ ಹೊರಡಿಸದಿರುವುದೂ ಉಪ ವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳ ಪ್ರಗತಿ ಪರಿಶೀಲನೆ ವೇಳೆ ಪತ್ತೆಯಾಗಿದೆ. ದೊಡ್ಡಬಳ್ಳಾಪುರ ಉಪ ವಿಭಾಗಾಧಿಕಾರಿಯವರ ನ್ಯಾಯಾಲಯವೊಂದರಲ್ಲಿಯೇ ವಿಚಾರಣೆ ಪೂರ್ಣಗೊಂಡಿರುವ 286 ಪ್ರಕರಣಗಳಿಗೆ 15 ದಿನಗಳು ಕಳೆದರೂ ಆದೇಶ ಹೊರಡಿಸಿಲ್ಲ. ಈ ಬಗ್ಗೆ ವರದಿ ನೀಡುವಂತೆ ಇಲಾಖೆಯ ಆಯುಕ್ತರಿಗೆ ಸೂಚಿಸಿದ್ದಾರೆ.

ಉಪ ವಿಭಾಗಾಧಿಕಾರಿ ನ್ಯಾಯಾಲಯಗಳಲ್ಲಿನ ಈ ಬೆಳವಣಿಗೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಸಚಿವರು, ಪ್ರಕರಣಗಳ ವಿಲೇವಾರಿಯ ಗುಣಮಟ್ಟದ ಬಗ್ಗೆಯೇ ಆತಂಕಕಾರಿ ವಿಷಯಗಳು ಗಮನಕ್ಕೆ ಬಂದಿವೆ ಎಂದಿದ್ದಾರೆ. ಈ ಕಾರಣಕ್ಕೆ ಅವರು, ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿರುವ ಹೆಚ್ಚಿನ ಸಂಖ್ಯೆಯ ಪ್ರಕರಣಗಳನ್ನು ಮರು ವಿಚಾರಣೆ ನಡೆಸಲು ತಹಶೀಲ್ದಾರ್ಗಳಿಗೆ ಹಿಂದಿರುಗಿಸುತ್ತಿರುವುದು ಮತ್ತು ವಿಚಾರಣೆ ಪೂರ್ಣಗೊಂಡಿರುವ ಪ್ರಕರಣಗಳಲ್ಲಿ ಆದೇಶ ಹೊರಡಿಸದಿರುವುದರ ಹಿಂದಿನ ಕಾರಣ ಅರಿಯಲು ಮುಂದಾಗಿದ್ದಾರೆ.

ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ರಾಮನಗರ, ಮಧುಗಿರಿ, ಕೋಲಾರ, ತುಮಕೂರು, ಕುಂದಾಪುರ, ತಿಪಟೂರು, ಶಿವಮೊಗ್ಗ ಈ ಒಂಬತ್ತು ಉಪ ವಿಭಾಗಾಧಿಕಾರಿಗಳು ಹೆಚ್ಚಿನ ಸಂಖ್ಯೆಯ (ಒಟ್ಟು 2,290) ಪ್ರಕರಣಗಳನ್ನು ಮರು ವಿಚಾರಣೆಗಾಗಿ ತಹಶೀಲ್ದಾರ್ಗಳಿಗೆ ಹಿಂದಿರುಗಿಸಿದ್ದಾರೆ. ಈ ಉಪ ವಿಭಾಗಗಳಲ್ಲಿ ತಹಶೀಲ್ದಾರ್ಗಳಿಗೆ ಹಿಂದಿರುಗಿಸಿರುವ ಪ್ರಕರಣಗಳನ್ನು ಸಮರ್ಪಕ ಕಾರಣಗಳೊಂದಿಗೆ ಹಿಂದಿರುಗಿಸಲಾಗಿದೆಯೇ ಎಂದು ವಿವರವಾದ ವರದಿಯನ್ನು ಏಳು ದಿನಗಳ ಒಳಗೆ ನೀಡುವಂತೆ ಆಯಾ ಜಿಲ್ಲಾಧಿಕಾರಿಗಳಿಗೆ ಸಚಿವರು ಟಿಪ್ಪಣಿ ರವಾನಿಸಿದ್ದಾರೆ.

ಉಪ ವಿಭಾಗಾಧಿಕಾರಿ ನ್ಯಾಯಾಲಯಗಳಲ್ಲಿ ಇರುವ ಆರ್ಆರ್ಟಿ (ರೆವೆನ್ಯೂ ರೆಕಾರ್ಡ್ಸ್ ಟ್ರಾನ್ಸಾಕ್ಷನ್) ಮತ್ತು ಪಿಟಿಸಿಎಲ್ (ಪರಿಶಿಷ್ಟರ ಜಮೀನುಗಳ ಅಕ್ರಮ ಪರಭಾರೆಯನ್ನು ತಡೆಯುವ ಕಾಯ್ದೆ) ತಕರಾರು ಪ್ರಕರಣಗಳನ್ನು ಆರು ತಿಂಗಳ ಒಳಗೆ ವಿಲೇವಾರಿ ಮಾಡಬೇಕು ಎಂಬುದು ಕಾನೂನು. ಆದರೆ, ಈ ಅವಧಿ ಮೀರಿದ ಸಾವಿರಾರು ಪ್ರಕರಣಗಳು ಇತ್ಯರ್ಥವಾಗದೆ ಎ.ಸಿ ಕೋರ್ಟ್ಗಳಲ್ಲಿ ಇವೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ವಹಿಸಿಕೊಂಡಾಗ, ಉಪ ವಿಭಾಗಾಧಿಕಾರಿ ನ್ಯಾಯಾಲಯಗಳಲ್ಲಿ ಒಂದು ವರ್ಷಕ್ಕಿಂತ ಹೆಚ್ಚಿನ 59,339 ಪ್ರಕರಣಗಳು ವಿಲೇ ಆಗದೆ ಬಾಕಿ ಇದ್ದವು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಬಾಕಿ ಪ್ರಕರಣಗಳ ವಿಲೇವಾರಿಗೆ ಅಭಿಯಾನ ಮಾದರಿಯಲ್ಲಿ ಕ್ರಮ ತೆಗೆದುಕೊಂಡಿದ್ದರು. ಪ್ರಕರಣಗಳ ಶೀಘ್ರ ಇತ್ಯರ್ಥಕ್ಕಾಗಿ ವಿಶೇಷ ಉಪ ವಿಭಾಗಾಧಿಕಾರಿಗಳನ್ನು ನೇಮಕ ಮಾಡಿದ್ದರು. ಕಳೆದ ಜನವರಿ ವೇಳೆಗೆ ಶೇ 55ರಷ್ಟು ಪ್ರಕರಣಗಳನ್ನು ವಿಲೇ ಮಾಡಲು ಅವರು ಸಫಲರಾಗಿದ್ದರು. ಉಳಿದಿದ್ದ 29 ಸಾವಿರಕ್ಕೂ ಹೆಚ್ಚು ಪ್ರಕರಣಗಳನ್ನು ಆರು ತಿಂಗಳ ಒಳಗೆ ಇತ್ಯರ್ಥಗೊಳಿಸಬೇಕೆಂದು ಉಪ ವಿಭಾಗಾಧಿಕಾರಿಗಳಿಗೆ ಗಡುವು ವಿಧಿಸಿದ್ದರು. ಆದರೂ ಪ್ರಕರಣಗಳ ವಿಲೇವಾರಿ ನಿರೀಕ್ಷೆಯಂತೆ ಆಗಿಲ್ಲ.

ಹೆಚ್ಚು ಪ್ರಕರಣಗಳನ್ನು ಹೊಂದಿರುವ (ಎ.ಸಿ ಕೋರ್ಟ್ಗಳು) ಆಯ್ದ ಉಪ ವಿಭಾಗಾಧಿಕಾರಿಗಳ ಸಭೆಯನ್ನು ಕೃಷ್ಣ ಬೈರೇಗೌಡ ಅವರು ಅ. 31ರಂದು ನಡೆಸಿದ್ದರು. ಈ ವೇಳೆ ಕೆಲವು ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಪ್ರಕರಣಗಳ ವಿಲೇವಾರಿಯ ಗುಣಮಟ್ಟದ ಬಗ್ಗೆ ಕೆಲವು ಆತಂಕಕಾರಿ ವಿಷಯಗಳನ್ನು ಗಮನಿಸಿದ್ದ ಅವರು, ಆ ಉಪ ವಿಭಾಗಗಳಿರುವ ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಶಿವಮೊಗ್ಗ ಮತ್ತು ಉಡುಪಿ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಟಿಪ್ಪಣಿ ಕಳುಹಿಸಿ, ಸಮಗ್ರ ವರದಿ ನೀಡುವಂತೆ ಸೂಚಿಸಿದ್ದಾರೆ.

266 ಹೊಸ ಪ್ರಕರಣ ದಾಖಲು

ದೊಡ್ಡಬಳ್ಳಾಪುರ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಆಗಸ್ಟ್ 13ರಿಂದ ಅ. 30 ರವರೆಗಿನ ಪ್ರಗತಿ ಪರಿಶೀಲನೆಯನ್ನು ನಡೆಸಿದಾಗ ಅಲ್ಲಿ ಅತೀ ಹೆಚ್ಚು 266 ಹೊಸ ಪ್ರಕರಣಗಳು ದಾಖಲಾಗಿರುವುದು ಗೊತ್ತಾಗಿದೆ. ಈ ಎಲ್ಲ ಪ್ರಕರಣಗಳು ಅರ್ಹ ಪ್ರಕರಣಗಳೇ ಎಂದು ಪರಿಶೀಲಿಸಬೇಕು. ಅಲ್ಲದೆ ಇಲ್ಲಿನ ಉಪ ವಿಭಾಗಾಧಿಕಾರಿ ಅತೀ ಹೆಚ್ಚು 456 ಪ್ರಕರಣಗಳನ್ನು ಮರು ವಿಚಾರಣೆಗಾಗಿ ತಹಶೀಲ್ದಾರ್ಗಳಿಗೆ ಹಿಂದಿರುಗಿಸಿದ್ದು ಈ ಬಗ್ಗೆ ಹಾಗೂ ವಿಚಾರಣೆ ಪೂರ್ಣಗೊಂಡ 286 ಪ್ರಕರಣಗಳಲ್ಲಿ 15 ದಿನ ಕಳೆದರೂ ಆದೇಶ ಹೊರಡಿಸದಿರುವ ಬಗ್ಗೆ ಪರಿಶೀಲಿಸಬೇಕು. ಜೊತೆಗೆ ಈ ಉಪ ವಿಭಾಗದ ತಕರಾರು ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರಾದೇಶಿಕ ಆಯುಕ್ತರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಸಲ್ಲಿಸಿರುವ ವರದಿಯನ್ನೂ ಪರಿಗಣಿಸಿ ಸಮಗ್ರ ವರದಿ ನೀಡಬೇಕೆಂದು ಇಲಾಖೆಯ ಆಯುಕ್ತರಿಗೆ ಕೃಷ್ಣ ಬೈರೇಗೌಡ ಅವರು ನಿರ್ದೇಶನ ನೀಡಿದ್ದಾರೆ.

ಅಧಿಕಾರಕ್ಕೆ ಸಂಚಕಾರ

ಬೆಂಗಳೂರು ಉತ್ತರ ಉಪ ವಿಭಾಗಾಧಿಕಾರಿಯ ನ್ಯಾಯಾಲಯದಲ್ಲಿ ದಾಖಲಾಗಿದ್ದ ಅರೆನ್ಯಾಯಿಕ ಪ್ರಕರಣಗಳ ವಿಲೇವಾರಿಯಲ್ಲಿ ಪ್ರಗತಿ ಆಗದ ಕಾರಣ ಅಲ್ಲಿನ ಉಪ ವಿಭಾಗಾಧಿಕಾರಿ ಕಿರಣ್ ಅವರ ಅಧಿಕಾರಕ್ಕೇ ಸಂಚಕಾರ ಬಂದಿದೆ. ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 136 (2) ಅಡಿ ವಿಚಾರಣೆ ನಡೆಸಿ ಇತ್ಯರ್ಥ ಪಡಿಸಲು ದಾಖಲಾಗಿರುವ ಪ್ರಕರಣಗಳ ಪೈಕಿ ಆರ್ಆರ್ಟಿ ಪ್ರಕರಣಗಳು ಮತ್ತು ಪಿಟಿಸಿಎಲ್ ಪ್ರಕರಣಗಳು ಹಾಗೂ ಇತರ ಭೂ ಸಂಬಂಧಿತ ಪ್ರಕರಣಗಳನ್ನು ತಕ್ಷಣದಿಂದ ಮುಂದಿನ ಆದೇಶದವರೆಗೆ ಕಿರಣ್ ಅವರಿಂದ ಹಿಂಪಡೆದು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಇದೇ 12ರಂದು ಆದೇಶ ಹೊರಡಿಸಿದ್ದಾರೆ.

‘ಅಧಿಕಾರ ದುರುಪಯೋಗಕ್ಕೆ ಕಡಿವಾಣ’

ಕೆಲವು ಉಪ ವಿಭಾಗಾಧಿಕಾರಿಗಳು ಅಧಿಕಾರ ದುರುಪಯೋಗ ಮಾಡುತ್ತಿದ್ದಾರೆ. ಸಿವಿಲ್ ಕೋರ್ಟ್ ವಿಚಾರಣೆ ನಡೆಸಬೇಕಾದ ಪ್ರಕರಣಗಳನ್ನೂ ಅರೆ ನ್ಯಾಯಿಕ ನ್ಯಾಯಾಲಯದಲ್ಲಿ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ತಮ್ಮ ಅಧಿಕಾರ ಮೀರಿ ಆದೇಶಗಳನ್ನೂ ಕೊಡುತ್ತಿದ್ದಾರೆ. ಕೆಲವು ಪ್ರಕರಣಗಳಲ್ಲಿ ದೂರುದಾರ– ಪ್ರತಿವಾದಿಗಳಿಗೆ ನೋಟಿಸ್ ನೀಡದೆ ಆನ್ಲೈನ್ನಲ್ಲಿ ಪ್ರಕರಣಗಳ ಪ್ರಕ್ರಿಯೆ ನಡೆಸದೆ ಇಷ್ಟಬಂದಂತೆ ವರ್ತಿಸುತ್ತಿದ್ದಾರೆ. ಸಕಾರಣಗಳಿಲ್ಲದೆ ತಹಶೀಲ್ದಾರ್ಗಳಿಗೆ ಪ್ರಕರಣಗಳನ್ನು ಹಿಂದಿರುಗಿಸುತ್ತಿದ್ದಾರೆ. ಈ ದುರ್ವತನೆ ಸಹಿಸಲು ಸಾಧ್ಯವಿಲ್ಲ. ಈ ತಪ್ಪುಗಳಿಗೆ ಕಡಿವಾಣ ಹಾಕಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂಬ ಕಾರಣಕ್ಕೆ ವಿವರವಾದ ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಕೃಷ್ಣ ಬೈರೇಗೌಡ ಕಂದಾಯ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.