ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಪ್ರವೇಶ ತಡೆದು ರೈತರೊಂದಿಗೆ ಸಂಘರ್ಷಕ್ಕಿಳಿದ ಸರ್ಕಾರ; ವಿಪಕ್ಷಗಳ ಖಂಡನೆ

ಭರವಸೆಗೆ ಮಣಿಯದ ಭಾರತೀಯ ಕಿಸಾನ್‌ ಒಕ್ಕೂಟ, ಪ್ರತಿಭಟನೆ ಮುಂದುವರಿಸಲು ನಿರ್ಧಾರ
Last Updated 2 ಅಕ್ಟೋಬರ್ 2018, 11:30 IST
ಅಕ್ಷರ ಗಾತ್ರ

ನವದೆಹಲಿ:ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು ರಾಷ್ಟ್ರ ರಾಜಧಾನಿ ಪ್ರವೇಶಿಸುವುದನ್ನು ಪೊಲೀಸರು ಬಲಪ್ರಯೋಗಿಸಿ ಉತ್ತರಪ್ರದೇಶ ಗಡಿಯಲ್ಲಿಯೇ ರೈತರನ್ನು ತಡೆದಿದ್ದು, ಇದಕ್ಕೆ ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಈ ನಡುವೆ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಮಾತುಕತೆ ನಡೆಸಿ ನೀಡಿರುವ ಸರ್ಕಾರದ ಭರವಸೆಯನ್ನು ಭಾರತೀಯ ಕಿಸಾನ್‌ ಒಕ್ಕೂಟ ಒಪ್ಪದೇ ಪ್ರತಿಭಟನೆ ಮುಂದುವರಿಸುವುದಾಗಿ ಹೇಳಿದೆ.

ದೆಹಲಿ ಗಡಿಯಲ್ಲಿ ಜಮಾಯಿಸಿದ್ದ ಸುಮಾರು 20 ಸಾವಿರ ರೈತರನ್ನು ತಡೆದು ನಿಲ್ಲಿಸಲು ಭಾರಿ ಸಂಖ್ಯೆ ಪೊಲೀಸರು ಮತ್ತು ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿತ್ತು. ರೈತರ ದೆಹಲಿ ಪ್ರವೇಶ ತಡೆದ ಸಂದರ್ಭ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದಿದೆ.

ರೈತರು ಪ್ರತಿಭಟನೆ ನಡೆಸುತ್ತಾರೆ ಎಂಬ ವಿಷಯ ತಿಳಿದಿದ್ದರೂ ಸೂಕ್ತ ವ್ಯವಸ್ತೆ ಕಲ್ಪಿಸುವುದನ್ನು ಬಿಟ್ಟು ಅವರನ್ನು ತಡೆದಿರುವುದು ವಿರೋಧಕ್ಕೆ ಕಾರಣವಾಗಿದೆ. ಇದೇ ವಿಷಯವನ್ನು ಬಂಡವಾಳವಾಗಿಸಿಕೊಂಡಿರುವ ಕಾಂಗ್ರೆಸ್ ಹಾಗೂ ಇತರ ಪಕ್ಷಗಳು ಪ್ರಧಾನಿ ನರೇಂದ್ರ ಮೊದಿ ಹಾಗೂ ಅವರ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಪೊಲೀಸರ ಕ್ರಮಕ್ಕೆ ವಿಪಕ್ಷಗಳ ಖಂಡನೆ

ರೈತರ ನೋವು ಕೇಳುವ ಬದಲು ಲಾಠಿ ಬೀಸುತ್ತಿದೆ: ಕಾಂಗ್ರೆಸ್‌
‘ದೇಶದ ರೈತರು ತುಳಿತಕ್ಕೊಳಗಾದವರು, ಅವರನ್ನು ಬಲಿಪಶುಗಳನ್ನಾಗಿ ಮಾಡಲಾಗುತ್ತಿದೆ. ಸರ್ಕಾರ ಅವರ ನೋವನ್ನು ಕೇಳುವ ಬದಲು ಅವರ ಮೇಲೆ ಲಾಠಿ ಬೀಸುವ ಹಾಗೂ ಜಲಫಿರಂಗಿಗಳ ಪ್ರಯೋಗ ಮಾಡುತ್ತಿದೆ. ಹಿಂಸಾರೂಪಕ್ಕೆ ಕಾರಣವಾಗಿರುವ ಈ ಘಟನೆಯ ಖಂಡನೀಯ. ರೈತರ ಮತ್ತು ಕಾರ್ಮಿಕರ ಕುರಿತಾಗಿ ಸಂವೇದನಾಶೀಲರಾಗದ ನಿಮ್ಮನ್ನು 2019ರ ಚುನಾವಣೆಯಲ್ಲಿ ಅಧಿಕಾರದಿಂದ ದೂರ ಉಳಿಯುವಂತೆ ಮಾಡಲು ಅವರು ತಮ್ಮ ಹಕ್ಕು ಚಲಾಯಿಸುತ್ತಾರೆ’ ಎಂದು ಕಾಂಗ್ರೆಸ್ ವಕ್ತಾರ ರಂದೀಪ್‌ ಸಿಂಗ್‌ ಸುರ್ಜೆವಾಲ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಹರಿಹಾಯ್ದಿದ್ದಾರೆ.

ರೈತರ ಪರ ನಿಂತ ಕೇಜ್ರಿವಾಲ್‌
ರೈತರನ್ನು ತಡೆದಿರುವ ಪೊಲೀಸರ ಕ್ರಮವನ್ನು ಖಂಡಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌, ‘ರೈತರು ದೆಹಲಿ ಪ್ರವೇಶಿಸಲು ಅವಕಾಶ ನೀಡಡಬೇಕು. ಅವರ ದೆಹಲಿ ಪ್ರವೇಶವನ್ನು ಏಕೆ ಅನುಮತಿ ನೀಡುವುದಿಲ್ಲ? ತಡೆದಿರುವ ಈ ಕ್ರಮ ತಪ್ಪು. ನಾವು ರೈತರ ಜತೆಗಿದ್ದೇವೆ’ ಎಂದಿದ್ದಾರೆ.

ರೈತರಿಗೆ ನೀಡಿದ್ದ ಭರವಸೆ ಈಡೇರಿಸದ ಮೋದಿ ಸರ್ಕಾರ: ಅಖಿಲೇಶ್‌ ಯಾದವ್‌
ಘಟನೆಯನ್ನು ಖಂಡಿಸಿರುವ ಸಮಾಜವಾದಿ ಪಕ್ಷದ ಮುಖಂಡ ಹಾಗೂ ಉತ್ತರಪ್ರದೇಶ ಮಾಜಿ ಮುಖ್ಯಮಂತ್ರಿಅಖಿಲೇಶ್‌ ಯಾದವ್‌, ಪ್ರಧಾನಿ ನರೇಂದ್ರ ಮೋದಿ ಅವರು ರೈತರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ ಎಂದು ದೂರಿದ್ದಾರೆ.

‘ಹಿಂದಿನ ಐದು ವರ್ಷಗಳಲ್ಲಿ 50 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರಲ್ಲೂ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಹೆಚ್ಚಿನ ರೈತರು ಆತ್ಮಹತ್ಯೆ ಸಂಭವಿಸುತ್ತಿವೆ. ಪ್ರತಿಭಟಿಸಲು ರೈತರಿಗೆ ಎಲ್ಲಾ ಹಕ್ಕುಗಳಿವೆ. ರೈತರ ಈ ಚಳವಳಿಯನ್ನು ನಾವು ಬೆಂಬಲಿಸುತ್ತೇವೆ’ ಎಂದು ಅಖಿಲೇಶ್‌ ಹೇಳಿದ್ದಾರೆ.

ಪ್ರತಿಭಟನಾ ನಿತರ ರೈತರ ಮೇಲೆ ಅಶ್ರುವಾಯು ಸಿಡಿಸಿದ ಭದ್ರತಾ ಸಿಬ್ಬಂದಿ. ಚಿತ್ರ: ಎಎಫ್‌ಪಿ
ಪ್ರತಿಭಟನಾ ನಿತರ ರೈತರ ಮೇಲೆ ಅಶ್ರುವಾಯು ಸಿಡಿಸಿದ ಭದ್ರತಾ ಸಿಬ್ಬಂದಿ. ಚಿತ್ರ: ಎಎಫ್‌ಪಿ

ಕೃಷಿ ಬಿಕ್ಕಟ್ಟಿಗೆ ಮೋದಿ ಸರ್ಕಾರ ಕಾರಣ: ಸೀತಾರಾಮ್‌ ಯೆಚೂರಿ
‘ದೇಶದ ಅತಿದೊಡ್ಡ ಕೃಷಿ ಬಿಕ್ಕಟ್ಟಿಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕಾರಣ’ ಎಂದು ದೂರಿರುವ ಸಿಪಿಐಎಂನ ಪ್ರಧಾನ ಕಾರ್ಯದರ್ಶಿ ಸೀತಾರಾಮ್‌ ಯೆಚೂರಿ, ‘ಮೋದಿ ಸರ್ಕಾರ ರೈತ ವಿರೋಧಿ. ಅವರಿಗೆ ಪರಿಹಾರವನ್ನು ನೀಡುವ ಬದಲು ಕೃಷಿ ಕ್ಷೇತ್ರದ ಬಿಕ್ಕಟ್ಟನ್ನು ಉಲ್ಬಣಗೊಳಿಸುತ್ತಿದ್ದಾರೆ. ರೈತರ ಆತ್ಮಹತ್ಯೆ ಪ್ರಚೋದನೆ ನೀಡುವಂತೆ ವರ್ತಿಸುತ್ತಿದೆ. ನಾವು ಸ್ವಾತಂತ್ರ್ಯಾ ನಂತರ ಭಾರತದಲ್ಲಿ ಇಂತಹ ಕೃಷಿ ಬಿಕ್ಕಟ್ಟನ್ನು ನೋಡಿರಲಿಲ್ಲ’ ಎಂದು ಹೇಳಿದ್ದಾರೆ.

ಈ ಎಲ್ಲಾ ಘಟನೆಗಳ ನಡುವೆ ಹಲವು ರೈತರು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್‌ ಅವರೊಂದಿಗೆ ದೆಹಲಿಯ ಅವರ ನಿವಾಸದಲ್ಲಿ ಮಾತುಕತೆ ನಡೆಸಿದ್ದಾರೆ. ಕೃಷಿ ರಾಜ್ಯ ಖಾತೆ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ಉಪಸ್ಥಿತರಿದ್ದರು.

ಪೊಲೀಸ್‌ರ ವಿರುದ್ಧ ಲಾಠಿ ಹಿಡಿದು ತಿರುಗಿಬಿದ್ದ ರೈತ.
ಪೊಲೀಸ್‌ರ ವಿರುದ್ಧ ಲಾಠಿ ಹಿಡಿದು ತಿರುಗಿಬಿದ್ದ ರೈತ.

ಸಭೆ ಕರೆದ ರಾಜನಾಥ; ಪರಿಹಾರಗಳ ಕುರಿತು ಚರ್ಚೆ
ರೈತರು ನಡೆಸುತ್ತಿರುವ ಪ್ರತಿಭಟನೆಯಿಂದಾಗಿ ಗೃಹ ಸಚಿವ ರಾಜನಾಥ ಸಿಂಗ್‌ ಅವರು ಮಂಗಳವಾರ ತಕ್ಷಣ ಸಭೆ ಕರೆದಿದ್ದಾರೆ. ಕೇಂದ್ರ ಕೃಷಿ ಸಚಿವ ರಾಧ ಮೋಹನ್‌ ಸಿಂಗ್‌ ಮತ್ತು ಐವರ ಜತೆ ರೈತರ ಸಮಸ್ಯೆ ನಿವಾರಿಸುವಲ್ಲಿ ಮಾತುಕತೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರೈತರ ಸಾಲಮನ್ನಾ, ತೈಲ ಬೆಲೆ ಇಳಿಕೆ ಮಾಡುವುದು ಸೇರಿದಂತೆ ಇತರ ಬೇಡಿಕೆಗಳ ಈಡೇರಿಕೆಗೆ ಭಾರತೀಯ ಕಿಸಾನ್‌ ಒಕ್ಕೂಟ(ಬಿಕೆಯು) ಕರೆನೀಡಿದ್ದ ‘ಕಿಸಾನ್ ಕ್ರಾಂತಿ ಯಾತ್ರಾ’ದಕುರಿತು ಮಾಹಿತಿ ಪಡೆದಿದ್ದಾರೆ.

ಜತೆಗೆ ಬಿಕೆಯುನ ಅಧ್ಯಕ್ಷ ರಾಕೇಶ್‌ ಟಿಕಾಯತ್‌ ಅವರೊಂದಿಗೆ ಮಾತನಾಡಿರುವ ರಾಜನಾಥ ಅವರು, ‘ತಮ್ಮ ಬೇಡಿಕೆಗಳನ್ನು ಬಗೆಹರಿಸಲು ಸರ್ಕಾರ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಿದೆ’ ಎಂದು ಅವರಿಗೆ ಭರವಸೆ ನೀಡಿದ್ದಾರೆ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.

ಭರವಸೆ ಒಪ್ಪುವುದಿಲ್ಲ ಎಂದಬಿಕೆಯು
‘ಸರ್ಕಾರದ ಭರವಸೆಗಳನ್ನು ರೈತರು ಒಪ್ಪುವುದಿಲ್ಲ’ ಎಂದು ಹೇಳಿರುವ ಬಿಕೆಯುನ ಅಧ್ಯಕ್ಷ ರಾಕೇಶ್‌ ಟಿಕಾಯತ್‌ ಅವರು, ‘ನಮ್ಮ ಪ್ರತಿಭಟನೆಯನ್ನು ಮುಂದುವರಿಸುತ್ತೇವೆ’ ಎಂದು ಹೇಳಿದ್ದಾರೆ. ಇದರೊಂದಿಗೆ ಸರ್ಕಾರ ರೈತರನ್ನು ಸಮಾಧಾನಪಡಿಸಲು ಮಾಡಿದ ಯತ್ನಕ್ಕೆ ಹಿನ್ನಡೆಯಾಗಿದೆ.

ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಜಲಫಿರಂಗಿ ಪ್ರಯೋಗ ನಡೆಸಿದ ದೃಶ್ಯ . ಚಿತ್ರ: ಪಿಟಿಐ
ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಜಲಫಿರಂಗಿ ಪ್ರಯೋಗ ನಡೆಸಿದ ದೃಶ್ಯ . ಚಿತ್ರ: ಪಿಟಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT