ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಎಂ ಆಯ್ಕೆ: ಮುಂದುವರಿದ ಕಸರತ್ತು| 3 ರಾಜ್ಯಗಳಿಗೆ ವೀಕ್ಷಕರ ನೇಮಕ ಸಾಧ್ಯತೆ

Published 7 ಡಿಸೆಂಬರ್ 2023, 23:30 IST
Last Updated 7 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ನವದೆಹಲಿ: ಮಧ್ಯಪ್ರದೇಶ, ಛತ್ತೀಸಗಢ ಮತ್ತು ರಾಜಸ್ಥಾನದಲ್ಲಿ ನೂತನ ಮುಖ್ಯಮಂತ್ರಿ ಆಯ್ಕೆಗೆ ತೆರೆಮರೆಯ ಕಸರತ್ತು ಮುಂದುವರಿದಿದ್ದು, ಈ ವಾರಾಂತ್ಯಕ್ಕೆ ಆಯ್ಕೆ ಅಂತಿಮಗೊಳ್ಳುವ ಸಾಧ್ಯತೆಯಿದೆ.

ಈ ಮೂರು ರಾಜ್ಯಗಳಲ್ಲಿ ಶಾಸಕಾಂಗ ಪಕ್ಷದ ನಾಯಕರ ನೇಮಕಕ್ಕೆ ಬಿಜೆಪಿ ಹೈಕಮಾಂಡ್‌ ಶುಕ್ರವಾರ ವೀಕ್ಷಕರನ್ನು ನೇಮಿಸಲಿದ್ದು, ಅವರು ಆಯಾ ರಾಜ್ಯಕ್ಕೆ ತೆರಳಿ ಶಾಸಕರ ಅಭಿಪ್ರಾಯ ಸಂಗ್ರಹಿಸಲಿದ್ದಾರೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ತಿಳಿಸಿದರು.

‘ಯಾರನ್ನು ಮುಖ್ಯಮಂತ್ರಿ ಮಾಡಬೇಕು ಎಂಬ ಬಗ್ಗೆ ಯಾವುದೇ ತೀರ್ಮಾನ ಆಗಿಲ್ಲ. ಪಕ್ಷವು ಈ ಮೂರು ರಾಜ್ಯಗಳಲ್ಲಿ ಸಿ.ಎಂ ಆಯ್ಕೆ ಮಾಡುವಾಗ ಸಾಮಾಜಿಕ, ಪ್ರಾದೇಶಿಕ, ಆಡಳಿತ ಮತ್ತು ಸಾಂಸ್ಥಿಕ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಳ್ಳಲಿದೆ’ ಎಂದು ಅವರು ಹೇಳಿದರು.

ಮೂರು ರಾಜ್ಯಗಳ ಮುಖಂಡರು ಹಾಗೂ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳು ಗೃಹ ಸಚಿವ ಅಮಿತ್‌ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಸೇರಿದಂತೆ ಪಕ್ಷದ ನಾಯಕರನ್ನು ನವದೆಹಲಿಯಲ್ಲಿ ಭೇಟಿಯಾಗುತ್ತಿದ್ದಾರೆ. ಇದು ಸಹಜ ಭೇಟಿಯಾಗಿದ್ದು, ಹೆಚ್ಚಿನ ಮಹತ್ವ ನೀಡುವ ಅಗತ್ಯವಿಲ್ಲ ಎಂದು ಮೂಲಗಳು ಹೇಳಿವೆ.

‘ಈ ರಾಜ್ಯಗಳ ಹಲವು ಮುಖಂಡರು ಪಕ್ಷದ ರಾಷ್ಟ್ರೀಯ ನಾಯಕರನ್ನು ಭೇಟಿಯಾಗುತ್ತಿದ್ದಾರೆ. ಮುಖ್ಯಮಂತ್ರಿಯಾಗಲು ಅವಕಾಶವಿರುವುದು ಮೂವರಿಗೆ ಮಾತ್ರ. ಆದ್ದರಿಂದ ಭೇಟಿಗೆ ವಿಪರೀತ ಅರ್ಥ ಕಲ್ಪಿಸುವುದು ಬೇಡ’ ಎಂದು ತಿಳಿಸಿವೆ. 

ಕೇಂದ್ರ ಸಚಿವರೂ ಆಗಿರುವ ಮಧ್ಯಪ್ರದೇಶದ ಬಿಜೆಪಿ ಮುಖಂಡ ನರೇಂದ್ರ ಸಿಂಗ್‌ ತೋಮರ್‌ ಮತ್ತು ರಾಜಸ್ಥಾನದ ಬಾಬಾ ಬಾಲಕನಾಥ ಅವರು ಗುರುವಾರ ಅಮಿತ್‌ ಶಾ ಅವರನ್ನು ಭೇಟಿಯಾದರು. ವಿಧಾನಸಭೆಗೆ ಆಯ್ಕೆಯಾದ ಕಾರಣ ಇವರಿಬ್ಬರು ಲೋಕಸಭೆ ಸದಸ್ಯತ್ವಕ್ಕೆ ಬುಧವಾರ ರಾಜೀನಾಮೆ ನೀಡಿದ್ದರು.

ಮಧ್ಯಪ್ರದೇಶದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಶಿವರಾಜ್‌ ಸಿಂಗ್‌ ಚೌಹಾಣ್‌, ತೋಮರ್ ಮತ್ತು ಪ್ರಹ್ಲಾದ್‌ ಸಿಂಗ್‌ ಪಟೇಲ್‌ ಅವರ ಹೆಸರು ಕೇಳಿಬರುತ್ತಿದೆ. 

ಛತ್ತೀಸಗಢದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಅರುಣ್‌ ಸಾವ್, ಕೇಂದ್ರ ಸಚಿವರಾದ ಗೋಮತಿ ಸಾಯ್ ಮತ್ತು ಲತಾ ಉಸೆಂಡೀ ಅವರ ಹೆಸರು ಮುಂಚೂಣಿಯಲ್ಲಿದೆ. ಅರುಣ್‌ ಅವರು ಇತರೆ ಹಿಂದುಳಿದ ವರ್ಗಕ್ಕೆ ಸೇರಿದರೆ, ಗೋಮತಿ ಮತ್ತು ಲತಾ ಅವರು ಪರಿಶಿಷ್ಟ ಪಂಗಡಕ್ಕೆ ಸೇರಿದವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT