ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಡ್ಡಾ ಅವಧಿ ವಿಸ್ತರಣೆ ಸಾಧ್ಯತೆ: ಪಕ್ಷ ಪುನರ್ ಸಂಘಟನೆಗೆ ಬಿಜೆಪಿ ಸಿದ್ಧತೆ

Published 11 ಜೂನ್ 2024, 23:30 IST
Last Updated 11 ಜೂನ್ 2024, 23:30 IST
ಅಕ್ಷರ ಗಾತ್ರ

ನವದೆಹಲಿ: ಪಕ್ಷಕ್ಕೆ ಹೊಸ ಸದಸ್ಯರನ್ನು ಸೇರಿಸಿಕೊಳ್ಳುವುದು, ರಾಜ್ಯಗಳಲ್ಲಿ ಆಂತರಿಕ ಚುನಾವಣೆಗಳನ್ನು ನಡೆಸುವುದು ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನು ಆಯ್ಕೆ ಮಾಡಲು ಚುನಾವಣೆ ನಡೆಸುವುದಕ್ಕೆ ಬಿಜೆಪಿ ಮುಂದಾಗಿದ್ದು, ಪಕ್ಷ ಪುನರ್ ಸಂಘಟನೆಗೆ ಸಿದ್ಧತೆ ಆರಂಭಿಸಿದೆ.

ಪಕ್ಷದ ಹಾಲಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಅಧಿಕಾರವಧಿಯನ್ನು ವಿಸ್ತರಣೆ ಮಾಡಲಾಗಿತ್ತು. ಅದು ಜೂನ್‌ 30ಕ್ಕೆ ಕೊನೆಗೊಳ್ಳಲಿದೆ. ಬಿಜೆಪಿಯ ಸಂವಿಧಾನಕ್ಕೆ ಇತ್ತೀಚೆಗೆ ತಿದ್ದುಪಡಿ ತರಲಾಗಿದ್ದು, ಅದು ಅಧ್ಯಕ್ಷರ ಅವಧಿ ಸೇರಿದಂತೆ ತುರ್ತು ಸಂದರ್ಭಗಳಲ್ಲಿ ನಿರ್ಧಾರ ಕೈಗೊಳ್ಳುವ ಅವಕಾಶವನ್ನು ಪಕ್ಷದ ಸಂಸದೀಯ ಮಂಡಳಿಗೆ ಕಲ್ಪಿಸಿದೆ.

ನಡ್ಡಾ ಅವರು ಆರೋಗ್ಯ ಸಚಿವರಾಗಿ ಮೋದಿ ಸಂಪುಟ ಸೇರಿರುವುದರಿಂದ ಅವರನ್ನು ಬದಲಿಸಬೇಕಾದ ಪರಿಸ್ಥಿತಿ ಏರ್ಪಟ್ಟಿದೆ. ಇಷ್ಟಾದರೂ ಪಕ್ಷದ ಚುನಾವಣೆ ಮುಗಿಯುವವರೆಗೆ ಸಂಸದೀಯ ಮಂಡಳಿಯು ನಡ್ಡಾ ಅವರ ಅವಧಿಯನ್ನು ವಿಸ್ತರಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. 

ಕೆಲವು ರಾಜ್ಯಗಳ ಘಟಕಗಳ ಅಧ್ಯಕ್ಷರು ಕೇಂದ್ರ ಸರ್ಕಾರದಲ್ಲಿ ಅಥವಾ ರಾಜ್ಯ ಸರ್ಕಾರಗಳಲ್ಲಿ ಸಚಿವರಾಗಿದ್ದಾರೆ. ಅಂಥ ರಾಜ್ಯಗಳಲ್ಲಿ ಮತ್ತು ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆ ಉಂಟಾಗಿರುವ ರಾಜ್ಯಗಳಲ್ಲಿ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲು ಪಕ್ಷ ಸಜ್ಜಾಗಿದೆ. 

ಪಶ್ಚಿಮ ಬಂಗಾಳ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಸುಕಾಂತ ಮಜುಂದಾರ್ ಕೇಂದ್ರ ಸಚಿವರಾಗಿದ್ದಾರೆ. ಬಿಹಾರ ಘಟಕದ ಅಧ್ಯಕ್ಷ ಸಾಮ್ರಾಟ್ ಚೌಧರಿ ರಾಜ್ಯದ ಉಪಮುಖ್ಯಮಂತ್ರಿಯಾಗಿದ್ದಾರೆ. ಹರಿಯಾಣದ ಮುಖ್ಯಮಂತ್ರಿ ನಾಯಬ್ ಸಿಂಗ್ ಸೈನಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿಯೂ ಕೆಲಸ ಮಾಡುತ್ತಿದ್ದಾರೆ.    

ಲೋಕಸಭಾ ಚುನಾವಣೆಯ ಕಾರಣಕ್ಕೆ ಪಕ್ಷದ ಆಂತರಿಕ ಚುನಾವಣೆಯನ್ನು ಮತ್ತು ಬದಲಾವಣೆಗಳನ್ನು ಮುಂದೂಡಲಾಗಿತ್ತು. ಚುನಾವಣೆಯಲ್ಲಿ ಪಕ್ಷವು ಕೆಲವು ರಾಜ್ಯಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸಾಧನೆ ಮಾಡದೇ ಇರುವುದರಿಂದ ಶೀಘ್ರದಲ್ಲಿಯೇ ಬದಲಾವಣೆ ಪ್ರಕ್ರಿಯೆಯನ್ನು ಆರಂಭಿಸಲಿದೆ.

ಪ್ರಧಾನ ಕಾರ್ಯದರ್ಶಿಗೆ ಪಟ್ಟ?

ಅಮಿತ್ ಶಾ ಅವರು 2019ರ ಲೋಕಸಭಾ ಚುನಾವಣೆಯ ನಂತರ ಕೇಂದ್ರ ಸಂಪುಟಕ್ಕೆ ಸೇರಿದ್ದರು. ಆಗ ಪಕ್ಷದ ಕಾರ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದ ನಡ್ಡಾ ಅವರು ಜನವರಿ 2020ರಲ್ಲಿ ಪೂರ್ಣಪ್ರಮಾಣದಲ್ಲಿ ಅಧ್ಯಕ್ಷರಾಗಿದ್ದರು. ಪಕ್ಷದಲ್ಲಿ ಉತ್ತಮ ಸಂಘಟನಾ ಚಾತುರ್ಯವುಳ್ಳ ಧರ್ಮೇಂದ್ರ ಪ್ರಧಾನ್ ಭೂಪೇಂದ್ರ ಯಾದವ್ ರೀತಿಯ ನಾಯಕರು ಮೋದಿ ಸರ್ಕಾರದಲ್ಲಿ ಸಚಿವರಾಗಿದ್ದಾರೆ. ಹೀಗಾಗಿ ಪಕ್ಷವು ರಾಜ್ಯ ಘಟಕಗಳಿಂದ ಅಥವಾ ಪಕ್ಷದ ಪ್ರಧಾನ ಕಾರ್ಯದರ್ಶಿಗಳಿಂದ ಅಧ್ಯಕ್ಷರನ್ನು ಆಯ್ಕೆ ಮಾಡಬಹುದು ಎನ್ನಲಾಗುತ್ತಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT