ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3 ಸೆಮಿಕಂಡಕ್ಟರ್ ಘಟಕ ಸ್ಥಾಪನೆಗೆ ಕೇಂದ್ರ ಅನುಮೋದನೆ

ಗುಜರಾತ್‌ನಲ್ಲಿ ಎರಡು, ಅಸ್ಸಾಂನಲ್ಲಿ ಒಂದು ಸ್ಥಾಪನೆ * ₹ 1.26 ಲಕ್ಷ ಕೋಟಿ ವೆಚ್ಚ
Published 29 ಫೆಬ್ರುವರಿ 2024, 16:04 IST
Last Updated 29 ಫೆಬ್ರುವರಿ 2024, 16:04 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸಚಿವ ಸಂಪುಟವು ₹1.26 ಲಕ್ಷ ಕೋಟಿ ವೆಚ್ಚದಲ್ಲಿ ಮೂರು ಸೆಮಿಕಂಡಕ್ಟರ್‌ ಉತ್ಪಾದನಾ ಘಟಕಗಳನ್ನು ಸ್ಥಾಪಿಸುವುದಕ್ಕೆ ಗುರುವಾರ ಅನುಮೋದನೆ ನೀಡಿದೆ.

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಭೆ ಬಳಿಕ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌ ಅವರು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

‘ಎರಡು ಘಟಕಗಳು ಗುಜರಾತ್‌ ಹಾಗೂ ಒಂದು ಘಟಕವನ್ನು ಅಸ್ಸಾಂನಲ್ಲಿ ಸ್ಥಾಪಿಸಲಾಗುವುದು. ಈ ಮೂರು ಘಟಕಗಳ ನಿರ್ಮಾಣ ಕಾಮಗಾರಿ ಮುಂದಿನ 100 ದಿನಗಳ ಒಳಗಾಗಿ ಆರಂಭವಾಗಲಿದೆ’ ಎಂದು ತಿಳಿಸಿದರು.

ಮೊದಲ ಘಟಕವನ್ನು ಟಾಟಾ ಎಲೆಕ್ಟ್ರಾನಿಕ್ಸ್‌ ಮತ್ತು ತೈವಾನ್‌ನ ಪವರ್‌ಚಿಪ್‌ ಸೆಮಿಕಂಡಕ್ಟರ್‌ ಮ್ಯಾನುಫ್ಯಾಕ್ಚರಿಂಗ್ ಸಹಭಾಗಿತ್ವದಲ್ಲಿ ಗುಜರಾತ್‌ನ ಢೊಲೇರಾದಲ್ಲಿ ₹91 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವುದು. ಈ ಘಟಕವು ವರ್ಷಕ್ಕೆ 300 ಕೋಟಿ ಚಿಪ್‌ಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ ಎಂದು ಹೇಳಿದರು.

ಮತ್ತೊಂದು ಘಟಕವನ್ನು ಗುಜರಾತ್‌ನ ಸಾನಂದ್‌ನಲ್ಲಿ ₹7,600 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವುದು. ಸಿಜಿ ಪವರ್‌, ಜಪಾನ್‌ನ ರೆನೆಸಸ್‌ ಎಲೆಕ್ಟ್ರಾನಿಕ್ಸ್‌ ಕಾರ್ಪೋರೇಷನ್ ಹಾಗೂ ಥಾಯ್ಲೆಂಡ್‌ನ ಮೈಕ್ರೊ ಎಲೆಕ್ಟ್ರಾನಿಕ್ಸ್‌ ಸಹಭಾಗಿತ್ವದಲ್ಲಿ ಈ ಘಟಕವನ್ನು ಸ್ಥಾಪಿಸಲಾಗುವುದು. ಇಲ್ಲಿ ವರ್ಷಕ್ಕೆ 1.5 ಕೋಟಿ ಚಿಪ್‌ಗಳನ್ನು ಉತ್ಪಾದಿಸಲಾಗುತ್ತದೆ.

ಅಸ್ಸಾಂನ ಮೋರಿಗಾಂವ್‌ನಲ್ಲಿ ₹27 ಸಾವಿರ ಕೋಟಿ ವೆಚ್ಚದಲ್ಲಿ ಮೂರನೇ ಘಟಕವನ್ನು ಸ್ಥಾಪಿಸಲಾಗುವುದು. ಟಾಟಾ ಸಮೂಹ ಒಡೆತನದ ಟಾಟಾ ಸೆಮಿಕಂಡಕ್ಟರ್ ಅಸೆಂಬ್ಲಿ ಅಂಡ್‌ ಟೆಸ್ಟ್‌ ಪ್ರೈವೇಟ್‌ ಲಿಮಿಟೆಡ್‌ (ಟಿಎಸ್‌ಎಟಿ) ಈ ಘಟಕವನ್ನು ಸ್ಥಾಪಿಸಲಿದ್ದು, ವಾರ್ಷಿಕ 4.8 ಕೋಟಿ ಚಿಪ್‌ಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ ಎಂದು ಸಚಿವ ವೈಷ್ಣವ್‌ ತಿಳಿಸಿದರು.

ಇದರೊಂದಿಗೆ, ಗುಜರಾತ್‌ ರಾಜ್ಯವು ದೇಶದ ಸೆಮಿಕಂಡಕ್ಟರ್‌ ಉತ್ಪಾದನಾ ಕೇಂದ್ರವಾಗಿ ಹೊರಹೊಮ್ಮಲಿದೆ. ಈ ಘಟಕಗಳಿಂದಾಗಿ, ತಂತ್ರಜ್ಞಾನಕ್ಕೆ ಸಂಬಂಧಿಸಿ 20 ಸಾವಿರ ನೇರ ಉದ್ಯೋಗ ಹಾಗೂ 60 ಸಾವಿರ ಪರೋಕ್ಷ ಉದ್ಯೋಗಗಳ ಸೃಜನೆಯಾಗಲಿದೆ ಎಂದು ಎಲೆಕ್ಟ್ರಾನಿಕ್ಸ್‌ ಮತ್ತು ಐಟಿ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT