ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರದಲ್ಲೂ ಜಾತಿಗಣತಿ ಕೂಗು

ಕುಣಬಿ ಸಮುದಾಯಕ್ಕೆ ಒಬಿಸಿ ಪ್ರಮಾಣಪತ್ರ ಬೇಡ: ಸಚಿವ ಭುಜಬಲ್
Published 26 ನವೆಂಬರ್ 2023, 12:42 IST
Last Updated 26 ನವೆಂಬರ್ 2023, 12:42 IST
ಅಕ್ಷರ ಗಾತ್ರ

ಮುಂಬೈ: ಮರಾಠ ಸಮುದಾಯದ ಕುಣಬಿ ಸಮುದಾಯಕ್ಕೆ ಕುಣಬಿ ಪ್ರಮಾಣಪತ್ರ ವಿತರಣೆ ಪ್ರಕ್ರಿಯೆಯನ್ನು ಸರ್ಕಾರ ತಕ್ಷಣವೇ ನಿಲ್ಲಿಸಬೇಕು. ಜೊತೆಗೆ ಕುಣಬಿ ಸಮುದಾಯಕ್ಕೆ ಪ್ರಮಾಣ ಪತ್ರ ಕಲ್ಪಿಸಲು ರಚಿಸಲಾಗಿರುವ ನಿವೃತ್ತ ನ್ಯಾಯಮೂರ್ತಿ ಸಂದೀಪ್ ಶಿಂದೆ ಸಮಿತಿಯನ್ನು ಕೂಡಲೇ ವಿಸರ್ಜನೆ ಮಾಡಬೇಕು ಎಂದು ಮಹಾರಾಷ್ಟ್ರದ ಹಿರಿಯ ಸಚಿವ ಹಾಗೂ ಒಬಿಸಿ ಮುಖಂಡ ಛಗನ್‌ ಭುಜಬಲ್‌ ಅವರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. 

ಹಿಂಗೋಳಿಯಲ್ಲಿ ಭಾನುವಾರ ನಡೆದ ಒಬಿಸಿ ಎಲ್ಗಾರ್ ಮಹಾಸಭಾ ಉದ್ದೇಶಿಸಿ ಮಾತನಾಡಿದ ಅವರು, ‘ನಾವು ಈ ವಿಚಾರದಲ್ಲಿ ಹೋರಾಟ ಮಾಡುತ್ತೇವೆ. ಈ ಸಮಸ್ಯೆಗೆ ಜಾತಿಗಣತಿಯೊಂದೇ ಪರಿಹಾರವಾಗಿದ್ದು, ಬಿಹಾರದಲ್ಲಿ ಸಾಧ್ಯವಿರುವ ಜಾತಿಗಣತಿ ಮಹಾರಾಷ್ಟ್ರದಲ್ಲಿ ಏಕೆ ಸಾಧ್ಯವಿಲ್ಲ’ ಎಂದು ಪ್ರಶ್ನಿಸಿದರು.  

ಹೀಗಾಗಿ, 2024ರ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ವೇಳೆ ಒಬಿಸಿ ಸಮುದಾಯದ ಶಕ್ತಿಯನ್ನು ತೋರಿಸಬೇಕು ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಮನವಿ ಮಾಡಿದರು. 

ತಾವು ಮರಾಠ ಸಮುದಾಯಕ್ಕೆ ನೀಡುವ ಮೀಸಲಾತಿಯ ವಿರೋಧಿಯಲ್ಲ. ಆದರೆ, ಹಿಂಬಾಗಿಲಿನಿಂದ ಒಬಿಸಿ ಮೀಸಲಾತಿಗೆ ಪ್ರವೇಶ ಪಡೆಯುವುದು ಸರಿಯಲ್ಲ ಎಂದೂ ಹೇಳಿದ್ದಾರೆ. 

ಶಿಕ್ಷಣದಲ್ಲಿ ಮೀಸಲಾತಿಗೆ ಮುಸ್ಲಿಂ ಸಮುದಾಯ ಒತ್ತಾಯ: ‘ಶಿಕ್ಷಣ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯಕ್ಕೆ ಶೇ 5ರಷ್ಟು ಮೀಸಲಾತಿಯನ್ನು ಪುನರ್ ಸ್ಥಾಪಿಸಬೇಕು ಎಂಬ ಒತ್ತಾಯವನ್ನು ಮಹಾರಾಷ್ಟ್ರ ಸರ್ಕಾರ ಈಡೇರಿಸದಿದ್ದರೆ, ಮರಾಠ ಸಮುದಾಯದ ರೀತಿ ನಮ್ಮ ಸಮುದಾಯವೂ ಬೀದಿಗಿಳಿಯಬೇಕಾಗಲಿದೆ’ ಎಂದು ಮುಸ್ಲಿಂ ಸಮುದಾಯದ ಸಂಘಟನೆ ಅಖಿಲ ಭಾರತ ಉಲೇಮಾ ಮಂಡಳಿ (ಎಐಯುಬಿ) ಒತ್ತಾಯಿಸಿದೆ.

ರಾಜ್ಯದಲ್ಲಿ ಮರಾಠ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಬೇಕು ಹಾಗೂ ಧನಗರ ಸಮುದಾಯವು ತಮಗೆ ನೀಡಲಾಗುತ್ತಿರುವ ಅಲೆಮಾರಿ ಬುಡಕಟ್ಟು ಪ್ರಮಾಣಪತ್ರದ ಬದಲಿಗೆ ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ನೀಡಬೇಕು ಎಂದು ಒತ್ತಾಯಿಸುತ್ತಿರುವ ನಡುವೆಯೇ, ಶಿಕ್ಷಣ ಕ್ಷೇತ್ರದಲ್ಲಿ ಶೇ 5ರಷ್ಟು ಮೀಸಲಾತಿಯನ್ನು ಪುನರ್ ಸ್ಥಾಪಿಸದಿದ್ದರೆ, ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಸರ್ಕಾರಕ್ಕೆ ಮುಸ್ಲಿಂ ಸಮುದಾಯ ಎಚ್ಚರಿಕೆ ನೀಡಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT