ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಚಿಂಗ್‌ ಕೇಂದ್ರಗಳಿಗೆ ಮಾರ್ಗಸೂಚಿ: 16 ವರ್ಷದೊಳಗಿನವರ ದಾಖಲಾತಿ ಬೇಡ

Published 18 ಜನವರಿ 2024, 12:51 IST
Last Updated 18 ಜನವರಿ 2024, 12:51 IST
ಅಕ್ಷರ ಗಾತ್ರ

ನವದೆಹಲಿ: ‘ಕೋಚಿಂಗ್ ಕೇಂದ್ರಗಳಿಗೆ ದಾಖಲಾಗುವ ವಿದ್ಯಾರ್ಥಿಗಳ ವಯಸ್ಸು 16 ವರ್ಷಕ್ಕಿಂತ ಕೆಳಗಿರಬಾರದು. ದಾರಿ ತಪ್ಪಿಸುವಂತ ಸುಳ್ಳು ಭರವಸೆಗಳನ್ನು ನೀಡುವಂತಿಲ್ಲ ಮತ್ತು ರ‍್ಯಾಂಕ್ ಅಥವಾ ಅಧಿಕ ಅಂಕಗಳ ಗ್ಯಾರೆಂಟಿ ನೀಡುವಂತಿಲ್ಲ’ ಎಂಬ ಷರತ್ತುಗಳನ್ನು ಒಳಗೊಂಡ ಹೊಸ ಮಾರ್ಗಸೂಚಿಯನ್ನು ಕೇಂದ್ರ ಶಿಕ್ಷಣ ಮಂತ್ರಾಲಯ ಗುರುವಾರ ಬಿಡುಗಡೆ ಮಾಡಿದೆ.

ಹೆಚ್ಚುತ್ತಿರುವ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ದೂರುಗಳನ್ನು ಗಂಭೀರವಾಗಿ ಪರಿಗಣಿಸಿದ ಸಚಿವಾಲಯವು, ಖಾಸಗಿ ಕೋಚಿಂಗ್ ಕೇಂದ್ರಗಳ ಅನಿಯಂತ್ರಿತ ಬೆಳವಣಿಗೆಗೆ ಕಡಿವಾಣ ಹಾಗೂ ಇವುಗಳ ನಿಯಂತ್ರಣಕ್ಕೆ ಕಾನೂನಿನ ಚೌಕಟ್ಟು ರಚಿಸುವ ಉದ್ದೇಶದಿಂದ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ.

  • ಯಾವುದೇ ಕೋಚಿಂಗ್ ಕೇಂದ್ರಗಳು ಪದವಿ ತರಗತಿಗಿಂತ ಕಡಿಮೆ ವಿದ್ಯಾರ್ಹತೆ ಹೊಂದಿರುವ ಶಿಕ್ಷಕರನ್ನು ನೇಮಿಸಿಕೊಳ್ಳುವಂತಿಲ್ಲ.

  • ವಿದ್ಯಾರ್ಥಿಗಳ ದಾಖಲಾತಿಗೆ ಅಧಿಕ ರ‍್ಯಾಂಕ್ ಹೆಚ್ಚಿನ ಅಂಕ ಗಳಿಕೆಯ ಸುಳ್ಳು ಭರವಸೆಗಳನ್ನು ಪಾಲಕರಿಗೆ ನೀಡುವಂತಿಲ್ಲ.

  • 16 ವರ್ಷದೊಳಗಿನ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳುವಂತಿಲ್ಲ. ಪ್ರೌಢಶಾಲೆ ಪರೀಕ್ಷೆ ನಂತರವೇ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಬೇಕು

  • ಯಾವುದೇ ಕೋಚಿಂಗ್ ಕೇಂದ್ರಗಳು ತಮ್ಮ ಫಲಿತಾಂಶ ಅಥವಾ ತಮ್ಮ ಕೇಂದ್ರದ ವಿದ್ಯಾರ್ಥಿಯ ಫಲಿತಾಂಶ ಆಧರಿಸಿ ಸಂಸ್ಥೆಯ ಶಿಕ್ಷಣ ಗುಣಮಟ್ಟ ಕುರಿತು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಯಾವುದೇ ಜಾಹೀರಾತು ನೀಡುವಂತಿಲ್ಲ

  • ಸರ್ಕಾರದ ಮಾರ್ಗಸೂಚಿ ಒಳಗೊಂಡ ಕೌನ್ಸಲಿಂಗ್‌ ನಡೆಸದ ಸಂಸ್ಥೆಗಳ ನೋಂದಣಿಯಾಗದು

  • ಪ್ರತಿ ಕೋಚಿಂಗ್‌ ಕೇಂದ್ರಗಳು ತಮ್ಮದೇ ಆದ ವೆಬ್‌ಸೈಟ್‌ ಹೊಂದಿರಬೇಕು. ಅದರಲ್ಲಿ ತನ್ನ ಎಲ್ಲ ಬೋಧಕರ ಅರ್ಹತೆ, ಲಭ್ಯವಿರುವ ಕೋರ್ಸ್‌ಗಳು, ಅದರ ಅವಧಿ, ಪಠ್ಯಕ್ರಮ, ಹಾಸ್ಟೆಲ್‌ ಸೌಲಭ್ಯ, ಪರಿಷ್ಕರಿಸಿದ ಶುಲ್ಕ ವಿವರಗಳನ್ನು ಪ್ರಕಟಿಸಬೇಕು.

  • ಕಲಿಕೆಯಿಂದ ವಿದ್ಯಾರ್ಥಿಗಳು ಒತ್ತಡಕ್ಕೆ ಸಿಲುಕದಂತೆಯೂ ಕೋಚಿಂಗ್‌ ಕೇಂದ್ರಗಳು ನೋಡಿಕೊಳ್ಳಬೇಕು. ಅಲ್ಲದೆ ಮನೋವೈದ್ಯರು ಮತ್ತು ನುರಿತ ಸಮಾಲೋಚಕರ ಹೆಸರು ಮತ್ತು ಅವರು ಲಭ್ಯವಿರುವ ಸಮಯದ ಮಾಹಿತಿಯನ್ನು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ನೀಡಬೇಕು. ಈ ಮೂಲಕ ವಿದ್ಯಾರ್ಥಿಗಳಿಗೆ ಪರಿಣಾಮಕಾರಿ ಮಾರ್ಗದರ್ಶನ ದೊರೆಯುವಂತೆ ನೋಡಿಕೊಳ್ಳಬೇಕು.

  • ವಿವಿಧ ಕೋರ್ಸ್‌ಗಳಿಗೆ ವಿಧಿಸುವ ಬೋಧನಾ ಶುಲ್ಕ ನ್ಯಾಯೋಚಿತ ಮತ್ತು ಸಮಂಜಸವಾಗಿರಬೇಕು. ಈ ಶುಲ್ಕಕ್ಕೆ ಸರಿಯಾದ ರಸೀದಿಗಳನ್ನು ನೀಡಬೇಕು.

  • ಯಾವುದೇ ಕೋರ್ಸ್‌ಗೆ ಪೂರ್ಣ ಶುಲ್ಕ ಪಾವತಿಸಿದ ವಿದ್ಯಾರ್ಥಿಯೂ ಕೋರ್ಸ್‌ ಅನ್ನು ಅರ್ಧಕ್ಕೆ ಮೊಟಕುಗೊಳಿಸಿದರೆ, ಉಳಿದ ಮೊತ್ತವನ್ನು ಲೆಕ್ಕ ಹಾಕಿ, 10 ದಿನಗಳಲ್ಲಿ ಮರುಪಾವತಿಸಬೇಕು. ಅಂತೆಯೇ ವಿದ್ಯಾರ್ಥಿ ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದರೆ ಹಾಸ್ಟೆಲ್‌ ಶುಲ್ಕ, ಮೆಸ್ ಶುಲ್ಕ ಇತ್ಯಾದಿಗಳನ್ನೂ ಮರು ಪಾವತಿಸಬೇಕು.

  • ದಂಡ: ಅತಿಯಾದ ಶುಲ್ಕ ವಿಧಿಸುವ, ವಿದ್ಯಾರ್ಥಿಗಳ ಆತ್ಮಹತ್ಯೆ ಅಥವಾ ಇತರ ದುಷ್ಕೃತ್ಯಗಳಿಗೆ ಕಾರಣವಾಗುವ ಕೋಚಿಂಗ್‌ ಕೇಂದ್ರಗಳಿಗೆ ₹ 1 ಲಕ್ಷ ದಂಡ ವಿಧಿಸಲು ಅಥವಾ ಕೇಂದ್ರದ ನೋಂದಣಿಯನ್ನು ರದ್ದುಗೊಳಿಸಲು ಮಾರ್ಗಸೂಚಿಯಲ್ಲಿ ಅವಕಾಶ ಕಲ್ಪಿಸಲಾಗಿದೆ.

  • ಕೋಚಿಂಗ್‌ ಕೇಂದ್ರಗಳ ಚಟುವಟಿಕೆಗಳ ಮೇಲೆ ನಿಗಾ, ಮೇಲ್ವಿಚಾರಣೆ, ನೋಂದಣಿಯ ಜವಾಬ್ದಾರಿ ಆಯಾ ರಾಜ್ಯ ಸರ್ಕಾರಗಳದ್ದು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT