ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೀಮ್‌ ಆರ್ಮಿ ಮುಖ್ಯಸ್ಥನ ಆರೋಗ್ಯ ಸ್ಥಿರ; ಕೃತ್ಯಕ್ಕೆ ಬಳಸಿದ್ದ ವಾಹನ ವಶ

Published 29 ಜೂನ್ 2023, 11:38 IST
Last Updated 29 ಜೂನ್ 2023, 11:38 IST
ಅಕ್ಷರ ಗಾತ್ರ

ಸಹಾರನ್‌ಪುರ( ಉತ್ತರಪ್ರದೇಶ): ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಅವರ ಮೇಲೆ ಗುಂಡಿನ ದಾಳಿ ನಡೆಸಲು ದುಷ್ಕರ್ಮಿಗಳು ಬಳಸಿದ್ದ ವಾಹನವನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬುಧವಾರ ತಡರಾತ್ರಿ ಮಿರಗ್‌ಪುರ ಗ್ರಾಮದಲ್ಲಿ ವಾಹನ ವಶಪಡಿಸಿಕೊಳ್ಳಲಾಗಿದೆ. ದಾಳಿಗೆ ಬಳಸಿದ ಕಾರಿನ ನಂಬರ್ ಹರಿಯಾಣದಲ್ಲಿ ನೋಂದಣಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಬಲಿಗರೊಬ್ಬರ ಮನೆಯಲ್ಲಿ ಬುಧವಾರ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಲ್ಲಿಂದ ತೆರಳುತ್ತಿದ್ದಾಗ ಅವರ ಮೇಲೆ ಕಾರಿನ ಮೇಲೆ ಗುಂಡಿನ ದಾಳಿ ನಡೆಸಲಾಯಿತು. ಗುಂಡು ಆಜಾದ್ ಹೊಟ್ಟೆಯನ್ನು ತಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಸದ್ಯಕ್ಕೆ ಸ್ಥಿರವಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ನಗರ) ಅಭಿಮನ್ಯು ಮಂಗಳಿಕ್ ಹೇಳಿದ್ದಾರೆ. 

ಆಸ್ಪತ್ರೆ ಆವರಣದಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಿ, ಬಿಗಿ ಭದ್ರತೆ ಒದಗಿಸಲಾಗಿದೆ. ಆಸ್ಪತ್ರೆ ಆವರಣದ ಎದುರು ಆಜಾದ್ ಬೆಂಬಲಿಗರು ಜಮಾಯಿಸಿ,  ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹಿಸಿ  ಘೋಷಣೆಗಳನ್ನು ಕೂಗಿದರು.  

ಬುಧವಾರ ರಾತ್ರಿ ವಿಡಿಯೊ ಸಂದೇಶದಲ್ಲಿ, ಶಾಂತವಾಗಿರುವಂತೆ ಆಜಾದ್  ಬೆಂಬಲಿಗರಿಗೆ ಸಲಹೆ ನೀಡಿದರು ಮತ್ತು ಸಾಂವಿಧಾನಿಕವಾಗಿ ಹೋರಾಡುವುದನ್ನು ಮುಂದುವರಿಸುವುದಾಗಿ ಪ್ರತಿಪಾದಿಸಿದರು.

ಘಟನೆ ನಡೆದ ಸ್ಥಳವನ್ನು ವಿಧಿವಿಜ್ಞಾನ ತಂಡ ಪರಿಶೀಲಿಸಿದೆ. ಪ್ರಾಥಮಿಕ ತನಿಖೆ ಪ್ರಕಾರ ಆಜಾದ್ ಅವರ ವಾಹನದ ಮೇಲೆ ನಾಲ್ಕು ಗುಂಡುಗಳನ್ನು ಹಾರಿಸಲಾಗಿದೆ. ನಾಲ್ಕರಿಂದ ಐದು ದಾಳಿಕೋರರು ಇದ್ದರು ಎಂದು  ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ.

ಈ ನಡುವೆ ಚಂದ್ರಶೇಖರ್ ಆಜಾದ್ ಅವರಿಗೆ ಝಡ್ ಪ್ಲಸ್ ಭದ್ರತೆ ನೀಡುವಂತೆ ಒತ್ತಾಯಿಸಿ ರಾಷ್ಟ್ರಪತಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಮತ್ತು ರಾಜ್ಯಪಾಲರಿಗೆ ಮನವಿ ಪತ್ರ ಕಳುಹಿಸಲಾಗುವುದು ಎಂದು ಆಜಾದ್ ಸಮಾಜ್ ಪಕ್ಷದ ಸ್ಥಾಪಕ ಸದಸ್ಯ ಮತ್ತು ಮಾಧ್ಯಮ ಉಸ್ತುವಾರಿ ಅಜಯ್ ಗೌತಮ್ ಸುದ್ದಿಸಂಸ್ಥೆಗೆ  ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT