ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ನ ಓಲೈಕೆ ರಾಜಕಾರಣಕ್ಕೆ ಸೋಲಾಗಲಿದೆ: ಅಮಿತ್‌ ಶಾ

Published 23 ನವೆಂಬರ್ 2023, 13:48 IST
Last Updated 23 ನವೆಂಬರ್ 2023, 13:48 IST
ಅಕ್ಷರ ಗಾತ್ರ

ಜೈಪುರ: ‘ರಾಜಸ್ಥಾನದ ಕಾಂಗ್ರೆಸ್‌ ನೇತೃತ್ವದ ಸರ್ಕಾರವು ಓಲೈಕೆ ರಾಜಕಾರಣದಲ್ಲಿ ತೊಡಗಿದೆ, ಜನರು ಬೇಸತ್ತಿದ್ದಾರೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಗುರುವಾರ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜಯ ಸಾಧಿಸಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಮಹಿಳೆಯರು, ದಲಿತರು ಸೇರಿ ಯಾರಾದರೂ ಕಷ್ಟದಲ್ಲಿದ್ದಾರೆ ಎಂದರೆ ಅದಕ್ಕೆ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌ ನೇತೃತ್ವದ ಸರ್ಕಾರದ ಓಲೈಕೆ ನೀತಿಯೇ ಕಾರಣ. ಮತಬ್ಯಾಂಕ್‌ ರಾಜಕಾರಣಕ್ಕಾಗಿ ಗಲಭೆಕೋರರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಂಡಿಲ್ಲ ಎಂದು ಅಮಿತ್‌ ಶಾ ಆರೋಪಿಸಿದರು. 

ರಾಮಮಂದಿರ ನಿರ್ಮಾಣ, ತ್ರಿವಳಿ ತಲಾಖ್‌ ರದ್ದತಿ, ಸಂವಿಧಾನದ ವಿಧಿ 370ರ ಅಡಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನದ ಹಿಂಪಡೆದಿದ್ದನ್ನು ಉಲ್ಲೇಖಿಸಿ ಮಾತನಾಡಿದ ಅವರು, ಕಠಿಣ ನಿರ್ಣಯಗಳನ್ನು ಕಾರ್ಯರೂಪಕ್ಕೆ ತಂದಿರುವ ದಾಖಲೆ ಬಿಜೆಪಿಯದ್ದಾಗಿದೆ ಎಂದರು.

‘ಪಿ.ಎಂ ಎಂದರೆ ಪನೌತಿ ಮೋದಿ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ‘ಪ್ರಧಾನಿ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಪದಗಳನ್ನು ಬಳಸಲಾಗಿದೆ. ಇದಕ್ಕೆ ಜನರು ಮತದಾನದ ವೇಳೆ ಉತ್ತರಿಸಲಿದ್ದಾರೆ’ ಎಂದರು.

‘ರೆಡ್‌ ಡೈರಿ’ ವಿಷಯದ ಉಲ್ಲೇಖವೇ ಅಸಂಬದ್ಧ ಎಂದು ಗೆಹಲೋತ್‌ ಅವರು ನೀಡಿರುವ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ, ‘ರಾಜ್ಯ ಸರ್ಕಾರ ನಡೆಸಿರುವ ಅವ್ಯವಹಾರಗಳ ದಾಖಲೆ ಇರುವ ರೆಡ್ ಡೈರಿ ಕುರಿತು ಕಾಂಗ್ರೆಸ್‌ ಶಾಸಕರೇ ಆರೋಪಿಸಿದ್ದಾರೆ. ಈ ವಿಚಾರವನ್ನು ಗೆಹಲೋತ್‌ ಏಕೆ ತನಿಖೆಗೊಪ್ಪಿಸಲಿಲ್ಲ’ ಎಂದು ಪ್ರಶ್ನಿಸಿದರು.

ತಮ್ಮ ಮಗ ವೈಭವ್‌ ಗೆಹಲೋತ್‌ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದೇ ಗೆಹಲೋತ್‌ ಅವರ ಕಾರ್ಯತಂತ್ರವಾಗಿದೆ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT