ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿದ್ಯಾರ್ಥಿ ಆತ್ಮಹತ್ಯೆ: ಕೋಟಾದ ವಸತಿನಿಲಯಕ್ಕೆ ಬೀಗ

Published 3 ಫೆಬ್ರುವರಿ 2024, 12:43 IST
Last Updated 3 ಫೆಬ್ರುವರಿ 2024, 12:43 IST
ಅಕ್ಷರ ಗಾತ್ರ

ಕೋಟಾ(ರಾಜಸ್ಥಾನ): ನೀಟ್‌ಗೆ ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿಯೊಬ್ಬರು ಇಲ್ಲಿನ ವಸತಿನಿಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿ, ಸೀಲಿಂಗ್‌ ಫ್ಯಾನ್‌ಗೆ ಸ್ಪ್ರಿಂಗ್‌ ಸಾಧನ (ಆತ್ಮಹತ್ಯೆ ತಡೆ ಸಾಧನ) ಅಳವಡಿಸದಿರುವ ಕಾರಣಕ್ಕೆ ಅಧಿಕಾರಿಗಳು ವಸತಿನಿಲಯಕ್ಕೆ ಬೀಗ ಹಾಕಿದ್ದಾರೆ.

ಕೋಟಾದ ರಾಜೀವ್‌ ಗಾಂಧಿ ನಗರದ ‘ಕಾಂಚನ್ ರೆಸಿಡೆನ್ಸಿ’ ವಿದ್ಯಾರ್ಥಿನಿಲಯದಲ್ಲಿ ಉತ್ತರಪ್ರದೇಶದ ಮೊರಾದಾಬಾದ್‌ನ 19 ವರ್ಷದ ವಿದ್ಯಾರ್ಥಿ, ಜನವರಿ 23ರಂದು ಫ್ಯಾನ್‌ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

ವಿದ್ಯಾರ್ಥಿಗಳ ಸುರಕ್ಷತೆಗಾಗಿ ನೀಡಿರುವ ಮಾರ್ಗದರ್ಶನಗಳನ್ನು ಉಲ್ಲಂಘಿಸಿರುವ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೋಟಾ ಜಿಲ್ಲಾಧಿಕಾರಿ ಡಾ. ರವೀಂದ್ರ ಗೋಸ್ವಾಮಿ ತಿಳಿಸಿದರು.

ಪ್ರಕರಣದ ಕುರಿತ ವರದಿಯನ್ನು ಪರಿಶೀಲಿಸಿರುವ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ವಸತಿನಿಲಯಕ್ಕೆ ಬೀಗ ಹಾಕಲು ಆದೇಶಿಸಿದೆ ಎಂದು ವಿವರಿಸಿದರು.

‘ಕಾಂಚನ್ ರೆಸಿಡೆನ್ಸಿ’ಯ 32 ಕೋಣೆಗಳ ಪೈಕಿ 10ಕೋಣೆಗಳಲ್ಲಿ ಮಾತ್ರ ವಿದ್ಯಾರ್ಥಿಗಳು ಉಳಿದುಕೊಂಡಿದ್ದು, ಅವರನ್ನು ಇದೇ 5ರೊಳಗೆ ಬೇರೆ ವಸತಿನಿಲಯಕ್ಕೆ ಕಳುಹಿಸುವಂತೆ ನ್ಯಾಯಾಲಯವು ವಸತಿನಿಲಯದ ಮಾಲೀಕ ಹಿಸುಬ್‌ ಸೋನಿ ಮತ್ತು ಮೇಲ್ವಿಚಾರಕ ರಘುನಂದನ್‌ ಶರ್ಮಾ ಅವರಿಗೆ ಸೂಚಿಸಿದೆ.

ಕೋಟಾದಲ್ಲಿರುವ ಎಲ್ಲಾ ವಸತಿನಿಲಯಗಳು ಕಡ್ಡಾಯವಾಗಿ ‘ಸ್ಪ್ರಿಂಗ್‌ ಫ್ಯಾನ್‌’ಗಳನ್ನು ಅಳವಡಿಸುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಸೀಲಿಂಗ್‌ ಫ್ಯಾನ್‌ಗೆ ‘ಸ್ಪ್ರಿಂಗ್‌’ ಜೋಡಿಸಿದರೆ ಅದಕ್ಕೆ ಅಧಿಕ ತೂಕದ ವಸ್ತು ನೇತುಬಿದ್ದರೆ ಹಿಗ್ಗುತ್ತದೆ ಮತ್ತು ಸೈರನ್ ಮೊಳಗಿಸುತ್ತದೆ.

ಜಿಲ್ಲಾಧಿಕಾರಿ ಜೊತೆ ಭೋಜನ ಕೂಟ:

ನೀಟ್‌ ಮೊದಲಾದ ಪರೀಕ್ಷೆಗಳಿಗೆ ತಯಾರಿ ನಡೆಸುವ ವಿದ್ಯಾರ್ಥಿಗಳ ಮಾನಸಿಕ ಒತ್ತಡ ನಿವಾರಣೆಗಾಗಿ ಜಾರಿಗೆ ತಂದಿರುವ ‘ಕಾಮ್ಯಾಬ್‌ ಕೋಟಾ’ ಅಭಿಯಾನದ ಅಡಿ ವಾರಕ್ಕೊಮ್ಮೆ ‘ಜಿಲ್ಲಾಧಿಕಾರಿ ಜೊತೆ ಭೋಜನ ಕೂಟ’ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಗೋಸ್ವಾಮಿ ಅವರು ಈಚೆಗೆ ಚಾಲನೆ ನೀಡಿದ್ದರು.

ಪ್ರತಿ ಶುಕ್ರವಾರ ವಸತಿನಿಲಯದಲ್ಲಿ ವಿದ್ಯಾರ್ಥಿಗಳ ಜೊತೆ ಭೋಜನ ಸವಿಯಲಿರುವ ಜಿಲ್ಲಾಧಿಕಾರಿ, ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT