ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚುನಾವಣಾ ಬಾಂಡ್: ಇಂದೇ ವಿವರ ಹಂಚಿಕೊಳ್ಳಲು SBIಗೆ ಸುಪ್ರೀಂ ಕೋರ್ಟ್ ತಾಕೀತು

Published 12 ಮಾರ್ಚ್ 2024, 0:02 IST
Last Updated 12 ಮಾರ್ಚ್ 2024, 0:02 IST
ಅಕ್ಷರ ಗಾತ್ರ

ನವದೆಹಲಿ: ಚುನಾವಣಾ ಬಾಂಡ್‌ ಕುರಿತ ವಿವರಗಳನ್ನು ಸಲ್ಲಿಸಲು ನೀಡಿದ್ದ ಗಡುವು ವಿಸ್ತರಿಸುವಂತೆ ಕೋರಿ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದ್ದು, ಮಂಗಳವಾರ (ಮಾರ್ಚ್‌ 12) ಕಚೇರಿ ವ್ಯವಹಾರದ ಅವಧಿ ಒಳಗಾಗಿ ಎಲ್ಲ ಮಾಹಿತಿಯನ್ನು ಒದಗಿಸುವಂತೆ ತಾಕೀತು ಮಾಡಿದೆ.

ತಾನು ನೀಡಿರುವ ನಿರ್ದೇಶನಗಳು ಮತ್ತು ಗಡುವು ಪಾಲಿಸಲು ವಿಫಲವಾದಲ್ಲಿ, ಫೆಬ್ರುವರಿ 15ರ ತೀರ್ಪಿಗೆ ‘ಉದ್ದೇಶಪೂರ್ವಕ ಅವಿಧೇಯತೆ’ ತೋರಿದ್ದಕ್ಕಾಗಿ ಕಾನೂನು ಕ್ರಮ ಕೈಗೊಳ್ಳಲು ಪ್ರಕ್ರಿಯೆ ಆರಂಭಿಸುವುದಾಗಿ ಎಚ್ಚರಿಕೆಯನ್ನೂ ಕೊಟ್ಟಿದೆ. ಸು‍ಪ್ರೀಂ ಕೋರ್ಟ್‌ನ ಆದೇಶವು, ದೇಶದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ ಎಸ್‌ಬಿಐಗೆ ಆಗಿರುವ ಭಾರಿ ಹಿನ್ನಡೆ ಎಂದು ವಿಶ್ಲೇಷಿಸಲಾಗಿದೆ.

ಬ್ಯಾಂಕ್‌ ಹಂಚಿಕೊಂಡ ವಿವರಗಳನ್ನು ಮಾರ್ಚ್‌ 15ರ ಸಂಜೆ 5ರ ಒಳಗಾಗಿ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸುವಂತೆ ಚುನಾವಣಾ ಆಯೋಗಕ್ಕೆ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ನೇತೃತ್ವದ ಸಂವಿಧಾನ ಪೀಠವು ಸೋಮವಾರ ನಿರ್ದೇಶನ ನೀಡಿದೆ. 

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದ ಚುನಾವಣಾ ಬಾಂಡ್ ಯೋಜನೆಯು ‘ಅಸಾಂವಿಧಾನಿಕ’ ಎಂದು ಸುಪ್ರೀಂ ಕೋರ್ಟ್‌ ಫೆ.15ರಂದು ಮಹತ್ವದ ತೀರ್ಪು ನೀಡಿತ್ತು.  

2019ರ ಏಪ್ರಿಲ್‌ 12ರ ನಂತರದಲ್ಲಿ ಚುನಾವಣಾ ಬಾಂಡ್ ಮೂಲಕ ದೇಣಿಗೆ ಪಡೆದ ಪಕ್ಷಗಳ ವಿವರವನ್ನು ಸಲ್ಲಿಸುವಂತೆ ಎಸ್‌ಬಿಐಗೆ ಸೂಚಿಸಿತ್ತು. ರಾಜಕೀಯ ಪಕ್ಷಗಳು ನಗದೀಕರಿಸಿಕೊಂಡ ಬಾಂಡ್‌ಗಳ ವಿವರ, ಪಕ್ಷಗಳು ಯಾವ ದಿನಾಂಕಕ್ಕೆ ಬಾಂಡ್ ನಗದು ಮಾಡಿಕೊಂಡವು, ಯಾವ ಮೌಲ್ಯದ ಬಾಂಡ್‌ ನಗದು ಮಾಡಿಕೊಂಡವು ಎಂಬುದನ್ನು ಮಾರ್ಚ್‌ 6ರೊಳಗೆ ಆಯೋಗಕ್ಕೆ ಸಲ್ಲಿಸಬೇಕು ಎಂದು ಸೂಚಿಸಿತ್ತು.

ಎಸ್‌ಬಿಐ ಕಡೆಯಿಂದ ಸಿಗುವ ವಿವರಗಳನ್ನು ಚುನಾವಣಾ ಆಯೋಗವು ತನ್ನ ವೆಬ್‌ಸೈಟ್‌ನಲ್ಲಿ ಮಾರ್ಚ್‌ 13ಕ್ಕೆ ಮೊದಲು ಪ್ರಕಟಿಸಬೇಕು ಎಂದೂ ಆದೇಶಿಸಿತ್ತು.

ಗಡುವನ್ನು 2024ರ ಜೂನ್‌ 30ರವರೆಗೆ ವಿಸ್ತರಿಸುವಂತೆ ಕೋರಿ ಎಸ್‌ಬಿಐ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸಂವಿಧಾನ ಪೀಠ ಸೋಮವಾರ ನಡೆಸಿತು. ಸುಪ್ರೀಂ ಕೋರ್ಟ್‌ ತೀರ್ಪನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ ಎಸ್‌ಬಿಐ ವಿರುದ್ಧ ಪ್ರತ್ಯೇಕವಾಗಿ ಸಲ್ಲಿಕೆಯಾಗಿದ್ದ ನ್ಯಾಯಾಂಗ ನಿಂದನೆ ಅರ್ಜಿಗಳ ವಿಚಾರಣೆಯನ್ನು ಪೀಠವು ಇದೇ ವೇಳೆ ಕೈಗೆತ್ತಿಕೊಂಡಿತು.

ನ್ಯಾಯಾಲಯವು ಬಹಿರಂಗಪಡಿಸಲು ನಿರ್ದೇಶಿಸಿರುವ ಮಾಹಿತಿಯು ಸುಲಭವಾಗಿ ಲಭ್ಯವಿದೆ ಎಂಬುದು ಎಸ್‌ಬಿಐ ಸಲ್ಲಿಸಿರುವ ಅರ್ಜಿಯಲ್ಲಿಯೇ ಅಡಕವಾಗಿದೆ ಎಂಬುದನ್ನು ಪೀಠವು ಗಮನಕ್ಕೆ ತೆಗೆದುಕೊಂಡಿತು.

ಕೋರ್ಟ್ ನೀಡಿರುವ ನಿರ್ದೇಶನಗಳ ಪಾಲನೆ ವಿಚಾರದಲ್ಲಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಿಂದ ಪ್ರಮಾಣಪತ್ರ ಸಲ್ಲಿಸಬೇಕು ಎಂದೂ ಪೀಠ ಹೇಳಿತು.

‘ತಾಳೆ ಮಾಡಲು ಹೇಳಿಲ್ಲ’

ಎಸ್‌ಬಿಐ ಪರ ಹಾಜರಿದ್ದ ಹಿರಿಯ ವಕೀಲ ಹರೀಶ್‌ ಸಾಳ್ವೆ ಅವರು, ‘ಬಾಂಡ್‌ಗಳ ವಿವರಗಳನ್ನು ಎರಡು ಕಡೆ ಪ್ರತ್ಯೇಕವಾಗಿ ಸಂಗ್ರಹಿಸಿಡಲಾಗಿದೆ. ಎಲ್ಲ ಮಾಹಿತಿ ಕಲೆಹಾಕಿ ತಾಳೆ ಮಾಡುವ ಕೆಲಸಕ್ಕೆ ಹೆಚ್ಚಿನ ಕಾಲಾವಕಾಶ ಬೇಕು’ ಎಂದು ಪೀಠವನ್ನು ಕೇಳಿಕೊಂಡರು.

ಈ ವಾದ ಒಪ್ಪಿಕೊಳ್ಳದ ಪೀಠ, ‘ತಾಳೆ ಮಾಡುವ ಕೆಲಸ ಕೈಗೊಳ್ಳುವಂತೆ ನಾವು ನಿಮಗೆ ಸೂಚಿಸಿಲ್ಲ. ವಿವರಗಳನ್ನು ಬಹಿರಂಗಪಡಿಸಲಷ್ಟೇ ಹೇಳಿದ್ದೇವೆ’ ಎಂದಿತು. ‘ಮುಚ್ಚಿದ ಲಕೋಟೆ ತೆರೆದು ಅದರಲ್ಲಿರುವ ವಿವರಗಳನ್ನು ನೀಡುವುದಷ್ಟೇ ನಿಮ್ಮ ಕೆಲಸ’ ಎಂದು ನ್ಯಾಯಮೂರ್ತಿ ಸಂಜೀವ್‌ ಖನ್ನಾ ಹೇಳಿದರು.

ವಿವರಗಳನ್ನು ಬಹಿರಂಗಪಡಿಸಿದರೆ ದೇಣಿಗೆ ನೀಡಿದವರು ಬ್ಯಾಂಕ್‌ ವಿರುದ್ಧ ಕಾನೂನು ಕ್ರಮ ಜರುಗಿಸಬಹುದು ಎಂದು ಸಾಳ್ವೆ ಹೇಳಿದರು. ಅದಕ್ಕೆ ನ್ಯಾಯಮೂರ್ತಿ ಬಿ.ಆರ್. ಗವಾಯಿ, ‘ನೀವು ಸುಪ್ರೀಂ ಕೋರ್ಟ್‌ನ ನಿರ್ದೇಶನದಂತೆ ಈ ಕೆಲಸ ಮಾಡುತ್ತಿದ್ದೀರಿ. ನಿಮ್ಮ ಮೇಲೆ ಕಾನೂನು ಕ್ರಮಕ್ಕೆ ಮುಂದಾಗುವ ಪ್ರಶ್ನೆ ಎಲ್ಲಿದೆ’ ಎಂದು ಕೇಳಿದರು.

26 ದಿನಗಳಿಂದ ಏನು ಮಾಡುತ್ತಿದ್ದಿರಿ?

ಫೆಬ್ರವರಿ 15ರ ತೀರ್ಪಿನಲ್ಲಿ ನೀಡಿರುವ ನಿರ್ದೇಶನಗಳನ್ನು ಪಾಲಿಸಲು ತೆಗೆದುಕೊಂಡ ಕ್ರಮಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡದಿರುವುದಕ್ಕೆ ಪೀಠವು, ಬ್ಯಾಂಕ್‌ಅನ್ನು ತರಾಟೆಗೆ ತೆಗೆದುಕೊಂಡಿತು.

‘ಕಳೆದ 26 ದಿನಗಳಲ್ಲಿ ನೀವು ಯಾವ ಕ್ರಮಗಳನ್ನು ತೆಗೆದುಕೊಂಡಿದ್ದೀರಿ? ನಿಮ್ಮ ಅರ್ಜಿಯಲ್ಲಿ ಆ ಬಗ್ಗೆ ಯಾವುದೇ ಮಾಹಿತಿ ಇಲ್ಲ’ ಎಂದು ಪೀಠವು ಹೇಳಿತು. 

ಸಂವಿಧಾನ ಪೀಠದಲ್ಲಿದ್ದವರು

ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿ.ಆರ್. ಗವಾಯಿ, ಜೆ.ಬಿ. ಪಾರ್ದೀವಾಲಾ ಮತ್ತು ಮನೋಜ್ ಮಿಶ್ರಾ 

ಚುನಾವಣಾ ಬಾಂಡ್: ಆಗುಹೋಗುಗಳು

* 2017: ಚುನಾವಣಾ ಬಾಂಡ್‌ ಯೋಜನೆಯನ್ನು ಹಣಕಾಸು ಮಸೂದೆಯಲ್ಲಿ ಪರಿಚಯಿಸಲಾಯಿತು

* 2017 ಸೆಪ್ಟೆಂಬರ್‌ 14: ಈ ಯೋಜನೆಯನ್ನು ಪ್ರಶ್ನಿಸಿ ಅಸೋಸಿಯೇಷನ್‌ ಫಾರ್‌ ಡೆಮಾಕ್ರೆಟಿಕ್‌ ರಿಫಾರ್ಮ್ಸ್‌ ಎಂಬ ಸ್ವಯಂ ಸೇವಾ ಸಂಸ್ಥೆಯಿಂದ ಸುಪ್ರೀಂ ಕೋರ್ಟ್‌ಗೆ ಅರ್ಜಿ

* 2017 ಅಕ್ಟೋಬರ್‌ 3: ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ನೋಟಿಸ್‌ ಜಾರಿಗೊಳಿಸಿದ ಸುಪ್ರೀಂ ಕೋರ್ಟ್

* 2018 ಜನವರಿ 2: ಚುನಾವಣಾ ಬಾಂಡ್‌ ಯೋಜನೆ ಕುರಿತು ಅಧಿಸೂಚನೆ ಹೊರಡಿಸಿದ ಕೇಂದ್ರ

* 2022 ನವೆಂಬರ್‌ 7: ಯಾವುದಾದರೂ ವಿಧಾನಸಭೆಯ ಚುನಾವಣೆ ನಿಗದಿಯಾಗುವ ಸಾಧ್ಯತೆ ಇರುವ ವರ್ಷದಲ್ಲಿ ಚುನಾವಣಾ ಬಾಂಡ್‌ಗಳನ್ನು ಮಾರಾಟ ಮಾಡುವ ಅವಧಿಯನ್ನು 70 ದಿನಗಳಿಂದ 85 ದಿನಗಳಿಗೆ ಏರಿಕೆ ಮಾಡಿ ಯೋಜನೆಗೆ ತಿದ್ದುಪಡಿ ತರಲಾಯಿತು

* 2023 ಅಕ್ಟೋಬರ್‌ 16: ಚುನಾವಣಾ ಬಾಂಡ್‌ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆಯನ್ನು ಐವರು ನ್ಯಾಯಮೂರ್ತಿಗಳಿರುವ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಿದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ನೇತೃತ್ವದ ನ್ಯಾಯಪೀಠ

*2023 ಅಕ್ಟೋಬರ್‌ 31: ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ನೇತೃತ್ವದ ಸಾಂವಿಧಾನಿಕ ಪೀಠದಿಂದ ವಿಚಾರಣೆ ಆರಂಭ

* 2023 ನವೆಂಬರ್‌ 2: ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್

* 2024 ಫೆಬ್ರುವರಿ 15: ಚುನಾವಣಾ ಬಾಂಡ್‌ ಯೋಜನೆಯನ್ನು ರದ್ದುಗೊಳಿಸಿ, ಸರ್ವಾನುಮತದ ತೀರ್ಪು ಪ್ರಕಟ

* 2024 ಮಾರ್ಚ್‌ 4: ರಾಜಕೀಯ ಪಕ್ಷಗಳು ಸ್ವೀಕರಿಸಿರುವ ಚುನಾವಣಾ ಬಾಂಡ್‌ಗಳ ಮಾಹಿತಿಯನ್ನು ಸಲ್ಲಿಸುವ ಅವಧಿಯನ್ನು ಜೂನ್‌ 30ರ ವರೆಗೆ ವಿಸ್ತರಿಸಬೇಕೆಂದು ಕೋರಿ ಸುಪ್ರೀಂ ಕೋರ್ಟ್ ಮೊರೆಹೋದ ಎಸ್‌ಬಿಐ

* 2024 ಮಾರ್ಚ್‌ 7: ಮಾರ್ಚ್‌ 6ರೊಳಗೆ ಚುನಾವಣಾ ಬಾಂಡ್‌ಗಳ ಮಾಹಿತಿ ಸಲ್ಲಿಸದೆ ನ್ಯಾಯಾಂಗ ನಿಂದನೆ ಮಾಡಿರುವುದಕ್ಕೆ ಸ್ಟೇಟ್‌ ಬ್ಯಾಂಕ್ ಆಫ್‌ ಇಂಡಿಯಾ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆ

* 2024 ಮಾರ್ಚ್‌ 11: ಅವಧಿ ವಿಸ್ತರಣೆ ಕೋರಿ ಸ್ಟೇಟ್‌ ಬ್ಯಾಂಕ್ ಆಫ್‌ ಇಂಡಿಯಾ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸಾಂವಿಧಾನಿಕ ಪೀಠ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT