ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷ ಮೇಲ್ಪಟ್ಟ ಮಹಿಳಾ ಕೈದಿಗಳ ಬಿಡುಗಡೆ: ಕೇಂದ್ರದ ತೀರ್ಮಾನ

Last Updated 5 ಜುಲೈ 2022, 15:11 IST
ಅಕ್ಷರ ಗಾತ್ರ

ನವದೆಹಲಿ: ಸ್ವಾತಂತ್ರ್ಯ ಅಮೃತಮಹೋತ್ಸವದ ಅಂಗವಾಗಿ 50 ವರ್ಷ ಮೇಲ್ಪಟ್ಟ ಮಹಿಳಾ ಹಾಗೂ ತೃತೀಯ ಲಿಂಗಿ ಕೈದಿಗಳನ್ನುಸನ್ನಡತೆ ಆಧಾರದಲ್ಲಿ ಅವಧಿಗೂ ಮುನ್ನವೇ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.

60 ವರ್ಷ ಮೇಲ್ಪಟ್ಟ ಪುರುಷ ಮತ್ತು ಅಂಗವಿಕಲ ಕೈದಿಗಳನ್ನೂ ಸೆರೆವಾಸದಿಂದ ಮುಕ್ತರನ್ನಾಗಿಸಲು ತೀರ್ಮಾನಿಸಲಾಗಿದೆ. ಈಗಾಗಲೇ ಶಿಕ್ಷೆಯ ಅವಧಿ ಪೂರೈಸಿರುವ, ದಂಡ ಮೊತ್ತ ಪಾವತಿಸಲಾಗದೆ ಜೈಲಿನಲ್ಲಿರುವ ಬಡ ಮತ್ತು ನಿರ್ಗತಿಕ ಕೈದಿಗಳ ದಂಡ ಮೊತ್ತ ಸಂಪೂರ್ಣವಾಗಿ ಮನ್ನಾ ಮಾಡಲೂ ನಿರ್ಧರಿಸಲಾಗಿದೆ.

ಅರ್ಹ ಕೈದಿಗಳನ್ನು ಮೂರು ಹಂತಗಳಲ್ಲಿ (2022ರ ಆಗಸ್ಟ್‌ 15, 2023ರ ಜನವರಿ 26 ಮತ್ತು ಆಗಸ್ಟ್‌ 15) ಬಿಡುಗಡೆ ಮಾಡುವಂತೆ ಗೃಹಸಚಿವಾಲಯವು ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶಿಸಿದೆ.

‘ಮರಣದಂಡನೆ ಹಾಗೂ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ, ಉಗ್ರ ಕೃತ್ಯ, ಅತ್ಯಾಚಾರ, ಹಣ ಅಕ್ರಮ ವರ್ಗಾವಣೆ, ವರದಕ್ಷಿಣೆ ಕಿರುಕುಳ, ಮಾನವ ಕಳ್ಳಸಾಗಾಣೆ, ರಾಷ್ಟ್ರೀಯ ಭದ್ರತಾ ಕಾಯ್ದೆ, ಶಸ್ತ್ರಾಸ್ತ್ರಗಳ ಅಕ್ರಮ ಸಂಗ್ರಹ ಪ್ರಕರಣಗಳಡಿ ಜೈಲು ಸೇರಿರುವ ಅಪ‍ರಾಧಿಗಳಿಗೆ ಈ ಯೋಜನೆ ಅನ್ವಯವಾಗುವುದಿಲ್ಲ’ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ.

‘ಈಗಾಗಲೇ ಶಿಕ್ಷೆಯ ಪ್ರಮಾಣದ ಅರ್ಧದಷ್ಟು ಅವಧಿಯನ್ನು ಜೈಲಿನಲ್ಲಿ ಕಳೆದಿರುವ 18 ರಿಂದ 21 ವರ್ಷದೊಳಗಿನ ಕೈದಿಗಳ ವಿರುದ್ಧ ಇತರ ಯಾವುದೇ ಕ್ರಿಮಿನಲ್‌ ಪ್ರಕರಣಗಳೂ ಇಲ್ಲದಿದ್ದರೆ ಅವರನ್ನೂ ಈ ಯೋಜನೆಯಡಿ ಬಿಡುಗಡೆ ಮಾಡಬಹುದು’ ಎಂದೂ ತಿಳಿಸಿದೆ.

‘ಗೃಹ ಸಚಿವಾಲಯದ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಶೋಧನಾ ಸಮಿತಿ ರಚಿಸಬೇಕು. ಕಾನೂನು ಸಚಿವಾಲಯದಪ್ರಧಾನ ಕಾರ್ಯದರ್ಶಿಯನ್ನು ಸದಸ್ಯರನ್ನಾಗಿ ಹಾಗೂ ಕಾರಾಗೃಹ ಇಲಾಖೆಯ ಮಹಾನಿರ್ದೇಶಕರನ್ನು ಸದಸ್ಯ ಕಾರ್ಯದರ್ಶಿಯನ್ನಾಗಿ ನೇಮಿಸುವಂತೆ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಲಾಗಿದೆ. ಈ ಸಮಿತಿಯು ಕೈದಿಗಳ ದಾಖಲೆಗಳನ್ನು ಪರಿಶೀಲಿಸಿ ಅರ್ಹರನ್ನು ಆಯ್ಕೆ ಮಾಡಲಿದೆ’ ಎಂದು ಹೇಳಿದೆ.

‘ಸನ್ನಡತೆ ಹೊಂದಿರುವ ಕೈದಿಯ ಬಿಡುಗಡೆಗೆ ಕೇಂದ್ರ ಸರ್ಕಾರದ ಅನುಮತಿ ಬೇಕಿದ್ದರೆ, ಅಂತಹ ಕೈದಿಗಳ ದಾಖಲೆಗಳನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ಕಳುಹಿಸಿ ಅನುಮೋದನೆ ಪಡೆಯುವಂತೆಯೂ ನಿರ್ದೇಶಿಸಲಾಗಿದೆ’ ಎಂದೂ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT