ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉತ್ತರಾಖಂಡದ ಹಲ್ದ್ವಾನಿ ಹಿಂಸಾಚಾರದ ಸೂತ್ರಧಾರಿಯ ಪತ್ನಿ ಉತ್ತರ ಪ್ರದೇಶದಲ್ಲಿ ಸೆರೆ

Published 4 ಏಪ್ರಿಲ್ 2024, 11:33 IST
Last Updated 4 ಏಪ್ರಿಲ್ 2024, 11:33 IST
ಅಕ್ಷರ ಗಾತ್ರ

ಡೆಹ್ರಾಡೂನ್‌: ಹಲ್ದ್ವಾನಿಯ ಬನ್‌ಭೂಲ್‌ಪುರ ಹಿಂಸಾಚಾರ ಪ್ರಕರಣದ ಸೂತ್ರಧಾರಿ ಅಬ್ದುಲ್‌ ಮಲಿಕ್‌ನ ಪತ್ನಿಯನ್ನು ಉತ್ತರ ಪ್ರದೇಶದಲ್ಲಿ ಬಂಧಿಸಲಾಗಿದೆ ಎಂದು ಉತ್ತರಾಖಂಡ ಪೊಲೀಸರು ಗುರುವಾರ ತಿಳಿಸಿದ್ದಾರೆ.

ಸಾಫಿಯಾ ಬಂಧಿತ ಮಹಿಳೆ. ಆಕೆಯನ್ನು ಬರೇಲಿ ಜಿಲ್ಲೆಯ ಬಿಹಾರಿಪುರ್‌ ಗ್ರಾಮದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್‌ ಆಧಿಕಾರಿಯೊಬ್ಬರು ಹೇಳಿದ್ದಾರೆ.

ಮೃತ ವ್ಯಕ್ತಿಯ ಹೆಸರು ಬಳಸಿಕೊಂಡು ಹಲ್ದ್ವಾನಿಯ ಬನ್‌ಭೂಲ್‌ಪುರದ 'ಮಲಿಕ್‌ ಕಾ ಬಗೀಚಾ' ಪ್ರದೇಶದಲ್ಲಿ ಸರ್ಕಾರಿ ಭೂಮಿ ಅತಿಕ್ರಮಿಸಲು ಪ್ರಯತ್ನಿಸಿದ್ದು ಸೇರಿದಂತೆ, ಭೂ ಹಗರಣಕ್ಕೆ ಸಂಬಂಧಿಸಿದ ಹಲವು ಪ್ರಕರಣಗಳು ಸಾಫಿಯಾ ವಿರುದ್ಧ ದಾಖಲಾಗಿದ್ದವು. ಅದರಂತೆ ಆಕೆಯನ್ನು ಬಂಧಿಸಲಾಗಿದೆ ಎಂದು ನೈನಿತಾಲ್‌ ಎಸ್‌ಎಸ್‌ಪಿ ಪ್ರಹ್ಲಾದ್‌ ನಾರಾಯಣ್‌ ಮೀನಾ ಮಾಹಿತಿ ನೀಡಿದ್ದಾರೆ.

ಸಾಫಿಯಾ ಪತಿ ಆಬ್ದುಲ್‌ ಮಲಿಕ್‌ ಹಾಗೂ ಈ ದಂಪತಿಯ ಮಗ ಅಬ್ದುಲ್‌ ಮೊಯೀದ್‌ ಸದ್ಯ ಪೊಲೀಸರ ವಶದಲ್ಲಿದ್ದಾರೆ. ಅವರನ್ನು ಕ್ರಮವಾಗಿ ಫೆಬ್ರುವರಿ 24 ಹಾಗೂ 28ರಂದು ಬಂಧಿಸಲಾಗಿತ್ತು.

'ಮಲಿಕ್‌ ಕಾ ಬಗೀಚಾ' ಪ್ರದೇಶದಲ್ಲಿ ಅಕ್ರಮವಾಗಿ ತಲೆಎತ್ತಿದ್ದ ಮದರಸಾ ಮತ್ತು ಮಸೀದಿ ಕೆಡವಲು ನೂರಾರು ಪೊಲೀಸರ ಜತೆಗೆ ಹಲ್ದ್ವಾನಿ ಮುನಿಸಿಪಲ್ ಕಾರ್ಪೊರೇಶನ್‌ನ ಒತ್ತುವರಿ ನಿಗ್ರಹ ತಂಡವು ಫೆಬ್ರುವರಿ 8ರಂದು ಸ್ಥಳಕ್ಕೆ ಹೋದಾಗ ಹಿಂಸಾಚಾರ ಭುಗಿಲೆದ್ದಿತ್ತು.

ದುಷ್ಕರ್ಮಿಗಳು ಪೊಲೀಸರು ಮತ್ತು ಒತ್ತುವರಿ ನಿಗ್ರಹ ತಂಡದ ಮೇಲೆ ಕಲ್ಲುತೂರಾಟ ನಡೆಸಿದ್ದರು. ಈ ವೇಳೆ ಆರು ಮಂದಿ ಮೃತಪಟ್ಟು, ಪೊಲೀಸರು, ಪತ್ರಕರ್ತರು ಸೇರಿದಂತೆ ನೂರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT