ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾದ್ರಾ– ಡಿಎಲ್‌ಎಫ್‌ ಭೂಮಿ ಹಸ್ತಾಂತರ: ನಿಯಮ ಉಲ್ಲಂಘನೆಯಾಗಿಲ್ಲ- ಹರಿಯಾಣ ಸರ್ಕಾರ

ಹೈಕೋರ್ಟ್‌ಗೆ ಹರಿಯಾಣ ಸರ್ಕಾರ ಪ್ರಮಾಣಪತ್ರ ಸಲ್ಲಿಕೆ
Last Updated 21 ಏಪ್ರಿಲ್ 2023, 15:46 IST
ಅಕ್ಷರ ಗಾತ್ರ

ಚಂಡೀಗಢ: ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್‌ ವಾದ್ರಾ ಪಾಲುದಾರಿಕೆಯ ಡಿಎಲ್ಎಫ್‌ ಕಂಪನಿಗೆ ಅವರದೇ ಒಡೆತನದ ಸ್ಕೈಲೈಟ್‌ ಹಾಸ್ಪಿಟಾಲಿಟಿ ಕಂಪನಿಯಿಂದ ಭೂಮಿ ಹಸ್ತಾಂತರ ಒಪ್ಪಂದ ಪ್ರಕ್ರಿಯೆಯಲ್ಲಿ ಯಾವುದೇ ನಿಯಮಾವಳಿಗಳ ಉಲ್ಲಂಘನೆಯಾಗಿಲ್ಲ ಎಂದು ಹರಿಯಾಣ ಸರ್ಕಾರವು, ಪಂಜಾಬ್‌–ಹರಿಯಾಣ ಹೈಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದೆ.

2012ರ ಸೆಪ್ಟೆಂಬರ್‌ನಲ್ಲಿ ಸ್ಕೈಲೈಟ್‌ ಹಾಸ್ಪಿಟಾಲಿಟಿ ಕಂಪನಿಯು 3.5 ಎಕರೆ ಜಮೀನನ್ನು ಡಿಎಲ್‌ಎಫ್‌ ಸಂಸ್ಥೆಗೆ ಮಾರಾಟ ಮಾಡಿದೆ. ಮಾರಾಟ ಪ್ರಕ್ರಿಯೆಯಲ್ಲಿ ಯಾವುದೇ ನಿಯಮಾವಳಿಗಳು ಉಲ್ಲಂಘನೆಯಾಗಿಲ್ಲವೆಂದು ಗುರುಗ್ರಾಮ ಜಿಲ್ಲೆಯ ಮಾನೆಸರ್‌ ತಹಶೀಲ್ದಾರ್‌ ವರದಿ ಸಲ್ಲಿಸಿದ್ದಾರೆ ಎಂದು ಸರ್ಕಾರವು ಹೈಕೋರ್ಟ್‌ಗೆ ತಿಳಿಸಿದೆ.

ಆದರೆ, ಭೂ ದಾಖಲೆಗಳ ವ್ಯವಹಾರದ ಬಗ್ಗೆ ತನಿಖೆಗೆ ಮಾರ್ಚ್‌ 22ರಂದು ವಿಶೇಷ ತನಿಖಾ ತಂಡ(ಎಸ್‌ಐಟಿ) ರಚಿಸಲಾಗಿದೆ. ಈ ತಂಡ ತನಿಖೆ ಮುಂದುವರಿಸಲಿದೆ ಎಂದು ಪ್ರಮಾಣ ಪತ್ರದಲ್ಲಿ ಸ್ಪಷ್ಟಪಡಿಸಿದೆ.

2018ರಲ್ಲಿ ಮಾಜಿ ಮುಖ್ಯಮಂತ್ರಿ ಭೂಪಿಂದರ್‌ ಸಿಂಗ್‌ ಹೂಡಾ ಮತ್ತು ವಾದ್ರಾ ವಿರುದ್ಧ ಭೂಮಿ ಹಸ್ತಾಂತರದಲ್ಲಿ ನಿಯಮಾವಳಿ ಉಲ್ಲಂಘಿಸಿರುವ ಆರೋಪ ಕೇಳಿಬಂದಿತ್ತು. ಕಾಂಗ್ರೆಸ್‌ ಅಧಿಕಾರಾವಧಿಯಲ್ಲಿ ವಾದ್ರಾ ಶಾಮೀಲಾಗಿರುವ ಈ ಭೂಮಿ ಖರೀದಿ ಒಪ್ಪಂದದಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿತ್ತು. 2014ರ ವಿಧಾನಸಭಾ ಚುನಾವಣೆಯಲ್ಲಿ ಈ ವಿಷಯವೇ ತೀವ್ರ ಕಾವು ಪಡೆದಿತ್ತು.

‌ನೂಹ ನಿವಾಸಿ ಸುರಿಂಧರ್‌ ಶರ್ಮಾ ಎಂಬುವರು ಭೂಮಿ ಖರೀದಿ, ಹಸ್ತಾಂತರದಲ್ಲಿ ನಿಯಮಾವಳಿಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿದ್ದರು. ಹಾಗಾಗಿ, ಭಾರತೀಯ ದಂಡ ಸಂಹಿತೆ ಹಾಗೂ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಹೂಡಾ ಸೇರಿದಂತೆ ಹಲವರ ವಿರುದ್ಧ ಖೇರ್ಕಿ ದೌಲಾ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು. ಆದರೆ, ಆರೋಪವನ್ನು ಕಾಂಗ್ರೆಸ್‌, ಹೂಡಾ ಹಾಗೂ ವಾದ್ರಾ ನಿರಾಕರಿಸಿದ್ದರು.

ಅಲ್ಲದೇ, ನಿಯಮಾವಳಿ ಉಲ್ಲಂಘಿಸಿ ವಾಜಿರಾಬಾದ್‌ನಲ್ಲೂ 350 ಎಕರೆ ಜಮೀನನ್ನು ಡಿಎಲ್‌ಎಫ್‌ ಕಂಪನಿಗೆ ಮಂಜೂರು ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು. ಈ ಭೂಮಿ ಸದ್ಯಕ್ಕೆ ಹರಿಯಾಣದ ಎಚ್‌ಎಸ್‌ವಿಪಿ/ಎಚ್‌ಎಸ್‌ಐಐಡಿಸಿ ಹೆಸರಿನಲ್ಲಿಯೇ ಇದೆ. ಡಿಎಲ್‌ಎಫ್‌ ಹೆಸರಿನಲ್ಲಿ ಇಲ್ಲವೆಂದು ವಾಜಿರಾಬಾದ್‌ ತಹಶೀಲ್ದಾರ್‌ ವರದಿ ಸಲ್ಲಿಸಿದ್ದಾರೆ ಎಂದು ತಿಳಿಸಿದೆ.

ಹೈಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಕೆಗೂ ಮೊದಲು ಮಾತನಾಡಿದ ಗುರುಗ್ರಾಮದ ಐಜಿಪಿ (ಅಪರಾಧ ವಿಭಾಗ) ಡಾ.ರಾಜ್‌ ಶ್ರೀ ಸಿಂಗ್, ‘ವಿವಿಧ ಬ್ಯಾಂಕ್‌ಗಳು ಮತ್ತು ಇಲಾಖೆಗಳು ಈ ವಿವಾದದಲ್ಲಿ ಶಾಮೀಲಾಗಿವೆಯೇ ಎಂಬ ಬಗ್ಗೆ ಎಸ್‌ಐಟಿ ಸ್ಪಷ್ಟ ವಿವರಣೆ ಪಡೆಯುತ್ತಿದೆ. ಭೂ ವ್ಯವಹಾರ ಸಂಬಂಧ ಕೆಲವು ಷೇರುದಾರರ ಹೇಳಿಕೆಗಳನ್ನು ದಾಖಲಿಸುತ್ತಿದೆ’ ಎಂದು ತಿಳಿಸಿದ್ದಾರೆ.

2012ರಲ್ಲಿ ಗುರುಗ್ರಾಮ ಜಿಲ್ಲೆಯ ಮಾನೆಸರ್‌– ಶಿಖೋಪುರ್‌ನಲ್ಲಿ ಸ್ಕೈಲೈಟ್ ಹಾಸ್ಪಿಟಾಲಿಟಿ ಮತ್ತು ಡಿಎಲ್‌ಎಫ್‌ಗೆ ನಿಯಮ ಮೀರಿ 3.5 ಎಕರೆ ಜಮೀನು ಹಂಚಿಕೆ ಮಾಡಲಾಗಿದೆ ಎಂದು ಐಎಎಸ್‌ ಅಧಿಕಾರಿ ಅಶೋಕ್‌ ಖೇಮ್ಕಾ ಅವರು, ಈ ಭೂಮಿಯ ಮ್ಯೂಟೇಶನ್‌ ಅನ್ನು ರದ್ದುಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT