ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಲಿಟರಿ ವೆಚ್ಚ: ನಾಲ್ಕನೆಯ ಸ್ಥಾನದಲ್ಲಿ ಭಾರತ

Published 23 ಏಪ್ರಿಲ್ 2024, 15:27 IST
Last Updated 23 ಏಪ್ರಿಲ್ 2024, 15:27 IST
ಅಕ್ಷರ ಗಾತ್ರ

ನವದೆಹಲಿ: ಜಾಗತಿಕವಾಗಿ ಮಿಲಿಟರಿ ಅಗತ್ಯಗಳಿಗಾಗಿ ಅತಿ ಹೆಚ್ಚಿನ ಮೊತ್ತವನ್ನು ವಿನಿಯೋಗಿಸುವ ದೇಶಗಳ ಸಾಲಿನಲ್ಲಿ ಭಾರತವು ನಾಲ್ಕನೆಯ ಸ್ಥಾನದಲ್ಲಿ ಇದೆ ಎಂದು ‘ಸ್ಟಾಕ್‌ಹೋಂ ಇಂಟರ್‌ನ್ಯಾಷನಲ್ ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್’ (ಎಸ್‌ಐಪಿಆರ್‌ಐ) ವರದಿ ಹೇಳಿದೆ.

2023ರಲ್ಲಿ ಭಾರತವು ಮಿಲಿಟರಿಗಾಗಿ ಸರಿಸುಮಾರು ₹6.96 ಲಕ್ಷ ಕೋಟಿ ವೆಚ್ಚ ಮಾಡಿದೆ.

ಅಮೆರಿಕ, ಚೀನಾ ಮತ್ತು ರಷ್ಯಾ ಕ್ರಮವಾಗಿ ಮೊದಲ ಮೂರು ಸ್ಥಾನಗಳಲ್ಲಿ ಇವೆ. ಎಸ್‌ಐಪಿಆರ್‌ಐ ಸಂಸ್ಥೆಯು ತನ್ನ ವೆಬ್‌ಸೈಟ್‌ನಲ್ಲಿ ವರದಿಯನ್ನು ಪ್ರಕಟಿಸಿದೆ. ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧ, ಏಷ್ಯಾ, ಮಧ್ಯಪ್ರಾಚ್ಯ ಹಾಗೂ ಓಷಿಯಾನಿಯ ಪ್ರದೇಶದಲ್ಲಿ ಸಂಘರ್ಷ ಹೆಚ್ಚುತ್ತಿರುವುದು ಮಿಲಿಟರಿ ವೆಚ್ಚದಲ್ಲಿ ಹೆಚ್ಚಳಕ್ಕೆ ಕಾರಣ ಎಂದು ವರದಿಯು ಹೇಳಿದೆ.

‘2023ರಲ್ಲಿಯೂ ವಿಶ್ವಮಟ್ಟದಲ್ಲಿ ಮಿಲಿಟರಿ ವೆಚ್ಚ ಹೆಚ್ಚಳ ಕಂಡಿದೆ. ಅಂದರೆ ಈ ವೆಚ್ಚಗಳು ಸತತ ಒಂಬತ್ತು ವರ್ಷಗಳಿಂದ ಹೆಚ್ಚುತ್ತಿವೆ. 2023ರಲ್ಲಿ ಒಟ್ಟು ₹203 ಲಕ್ಷ ಕೋಟಿಯನ್ನು ಮಿಲಿಟರಿಗಾಗಿ ವಿನಿಯೋಗಿಸಲಾಗಿದೆ. 2023ರಲ್ಲಿ ಮಿಲಿಟರಿ ಮೇಲಿನ ವೆಚ್ಚವು ಶೇ 6.8ರಷ್ಟು ಹೆಚ್ಚಳ ಕಂಡಿದ್ದು, ಇದು 2009ರ ನಂತರದ ಅತ್ಯಂತ ತೀವ್ರ ಪ್ರಮಾಣದ ಏರಿಕೆ’ ಎಂದು ವರದಿ ಉಲ್ಲೇಖಿಸಿದೆ.

ಮಿಲಿಟರಿಯ ತಲಾವಾರು ವೆಚ್ಚವು ಪ್ರತಿ ವ್ಯಕ್ತಿಗೆ 306 ಡಾಲರ್ (₹25,483) ಎಂದು ಸಂಸ್ಥೆ ಹೇಳಿದೆ. ಭಾರತವು 2023ರಲ್ಲಿ ಮಿಲಿಟರಿಗಾಗಿ ₹6.96 ಲಕ್ಷ ಕೋಟಿ ವೆಚ್ಚ ಮಾಡಿದೆ. 2022ರ ವೆಚ್ಚಕ್ಕೆ ಹೋಲಿಸಿದರೆ ಭಾರತ 2023ರಲ್ಲಿ ಮಾಡಿದ ವೆಚ್ಚವು ಶೇ 4.2ರಷ್ಟು ಹೆಚ್ಚಾಗಿದೆ, 2014ರ ವೆಚ್ಚಕ್ಕೆ ಹೋಲಿಸಿದರೆ ಶೇ 44ರಷ್ಟು ಜಾಸ್ತಿಯಾಗಿದೆ. ಭಾರತದಲ್ಲಿ ವೆಚ್ಚ ಹೆಚ್ಚಾಗಿದ್ದಕ್ಕೆ ಮುಖ್ಯ ಕಾರಣ ಕಾರ್ಯಾಚರಣೆ ವೆಚ್ಚದಲ್ಲಿ ಏರಿಕೆ ಹಾಗೂ ಸಿಬ್ಬಂದಿ ಮೇಲಿನ ವೆಚ್ಚದಲ್ಲಿ ಏರಿಕೆ. ಈ ಎರಡು ವೆಚ್ಚಗಳು ಒಟ್ಟು ಮಿಲಿಟರಿ ವೆಚ್ಚದ ಶೇ 80ರಷ್ಟಾಗುತ್ತವೆ ಎಂದು ವರದಿ ಹೇಳಿದೆ.

ಚೀನಾ ಹಾಗೂ ಪಾಕಿಸ್ತಾನದ ಜೊತೆ ಬಿಗುವಿನ ಪರಿಸ್ಥಿತಿ ಇರುವ ಕಾರಣ ಕೇಂದ್ರ ಸರ್ಕಾರವು ದೇಶದ ಸೇನಾಪಡೆಗಳ ಸನ್ನದ್ಧತೆಯನ್ನು ಇನ್ನಷ್ಟು ಹೆಚ್ಚುಮಾಡುವುದನ್ನು ಆದ್ಯತೆಯ ಕೆಲಸವನ್ನಾಗಿಸಿಕೊಂಡಿದೆ. ವೆಚ್ಚ ಹೆಚ್ಚಳವು ಕೇಂದ್ರದ ಆದ್ಯತೆಗೆ ಅನುಗುಣವಾಗಿ ಇದೆ ಎಂದು ಉಲ್ಲೇಖಿಸಲಾಗಿದೆ.

ವಿಶ್ವದಲ್ಲಿ ಮಿಲಿಟರಿ ವೆಚ್ಚಗಳನ್ನು ಅತಿಹೆಚ್ಚಿನ ಪ್ರಮಾಣದಲ್ಲಿ ಮಾಡುವುದು ಅಮೆರಿಕ. ಅದು ಚೀನಾದ ಮಿಲಿಟರಿ ವೆಚ್ಚಗಳಿಗಿಂತ 3.1 ಪಟ್ಟು ಹೆಚ್ಚು ಮೊತ್ತವನ್ನು ಮಿಲಿಟರಿಗಾಗಿ 2023ರಲ್ಲಿ ವಿನಿಯೋಗಿಸಿದೆ. ಚೀನಾ ದೇಶವು 2023ರಲ್ಲಿ ಅಂದಾಜು ₹24 ಲಕ್ಷ ಕೋಟಿ ವೆಚ್ಚ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT