ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಜನೌಷಧ ಯೋಜನೆಗೆ ಮಾರಿಷಸ್‌ ಸೇರ್ಪಡೆ: ಪ್ರಧಾನಿ ಮೋದಿ

Published 29 ಫೆಬ್ರುವರಿ 2024, 14:27 IST
Last Updated 29 ಫೆಬ್ರುವರಿ 2024, 14:27 IST
ಅಕ್ಷರ ಗಾತ್ರ

ನವದೆಹಲಿ: ಹಿಂದೂ ಮಹಾಸಾಗರ ಪ್ರದೇಶದಲ್ಲಿನ ವಿವಿಧ ಸವಾಲುಗಳನ್ನು ಎದುರಿಸಲು ಭಾರತ ಮತ್ತು ಮಾರಿಷಸ್‌ ಜತೆಯಾಗಿ ಕೆಲಸ ಮಾಡಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಭಾರತದ ಆರ್ಥಿಕ ನೆರವಿನಿಂದ ದ್ವೀಪರಾಷ್ಟ್ರದಲ್ಲಿ ಕೈಗೊಂಡಿರುವ ಹಲವು ಅಭಿವೃದ್ದಿ ಯೋಜನೆಗಳನ್ನು ಗುರುವಾರ ವರ್ಚುವಲ್‌ ಆಗಿ ಉದ್ಘಾಟಿಸಿ ಅವರು ಮಾತನಾಡಿದರು. ಮಾರಿಷಸ್‌ನ ಅಗಲೇಗ ದ್ವೀಪದಲ್ಲಿ ನಿರ್ಮಿಸಿರುವ ರನ್‌ವೇ ಮತ್ತು ಜೆಟ್ಟಿ ಕೂಡಾ ಈ ಯೋಜನೆಯಲ್ಲಿ ಸೇರಿವೆ.

ಮೋದಿ ಮತ್ತು ಮಾರಿಷಸ್‌ ಪ್ರಧಾನಿ ಪ್ರವಿಂದ್ ಜಗನ್ನಾಥ್ ಅವರು ಇದೇ ವೇಳೆ ಜಂಟಿಯಾಗಿ ವಿವಿಧ ಸಮುದಾಯ ಅಭಿವೃದ್ಧಿ ಯೋಜನೆಗಳನ್ನೂ ಲೋಕಾರ್ಪಣೆಗೊಳಿಸಿದರು. 

ಭಾರತದ ‘ಜನೌಷಧ’ ಯೋಜನೆಗೆ ಮಾರಿಷಸ್‌ ಸೇರ್ಪಡೆಗೊಳ್ಳಲಿದೆ ಎಂದು ಘೋಷಿಸಿದ ಪ್ರಧಾನಿ, ಈ ಯೋಜನೆ ಸೇರಲಿರುವ ಮೊದಲ ದೇಶವಾಗಲಿದೆ ಎಂದರು.

'ನೆರೆಹೊರೆ ಮೊದಲು' ನೀತಿಯಡಿ ಮಾರಿಷಸ್‌, ಭಾರತದ ಪ್ರಮುಖ ಪಾಲುದಾರ ಎಂದು ಬಣ್ಣಿಸಿದ ಪ್ರಧಾನಿ, ಕಳೆದ ಕೆಲವು ವರ್ಷಗಳಲ್ಲಿ ಉಭಯ ದೇಶಗಳು ಪರಸ್ಪರ ಸಹಕಾರದಲ್ಲಿ ‘ಹೊಸ ಎತ್ತರ’ ಸಾಧಿಸಿವೆ ಎಂದರು.

‘ಹಿಂದೂಮಹಾಸಾಗರ ಪ್ರದೇಶದಲ್ಲಿ ಎದುರಾಗುತ್ತಿರುವ ಸವಾಲುಗಳು ನಮ್ಮ ಅರ್ಥವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ. ಈ ಪ್ರದೇಶದಲ್ಲಿ ಭದ್ರತೆ, ಅಭಿವೃದ್ಧಿ ಮತ್ತು ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಭಾರತ ಮತ್ತು ಮಾರಿಷಸ್‌ ಪರಸ್ಪರ ಸಹಕಾರದೊಂದಿಗೆ ಸಕ್ರಿಯವಾಗಿ ಕೆಲಸ ಮಾಡುತ್ತಿವೆ’ ಎಂದು ತಿಳಿಸಿದರು. 

‘ಹೊಸ ಜೆಟ್ಟಿ, ರನ್‌ವೇ ಹಾಗೂ ಇತರ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡುವುದರೊಂದಿಗೆ ನಾವು ಇತಿಹಾಸ ನಿರ್ಮಿಸಿದ್ದೇವೆ. ಭಾರತ– ಮಾರಿಷಸ್‌ ನಡುವಣ ಆದರ್ಶಪ್ರಾಯ ಪಾಲುದಾರಿಕೆಗೆ ಇದು ಸಂಭ್ರಮದ ಕ್ಷಣ’ ಎಂದು ಪ್ರವಿಂದ್ ಪ್ರತಿಕ್ರಿಯಿಸಿದ್ದಾರೆ.

ಭಾರತದ ಡಿಜಿಟಲ್‌ ಪಾವತಿ ಸೇವೆ (ಯುಪಿಐ) ಮತ್ತು ರುಪೇ ಕಾರ್ಡ್‌ ಸೇವೆಯನ್ನು ಮಾರಿಷಸ್‌ನಲ್ಲಿ ಕೆಲ ದಿನಗಳ ಹಿಂದೆ ಚಾಲನೆ ನೀಡಲಾಗಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT