ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲಿ ಸಂಖ್ಯೆ ಏರಿಕೆ ಕತೆ

Last Updated 29 ಜುಲೈ 2019, 20:25 IST
ಅಕ್ಷರ ಗಾತ್ರ

ನವದೆಹಲಿ: ವಿನಾಶದ ಅಂಚಿಗೆ ಸಾಗುತ್ತಿದ್ದ ಹುಲಿಗಳನ್ನು ಸಂರಕ್ಷಿಸಿ ಅವುಗಳ ಸಂಖ್ಯೆಯನ್ನು ದುಪ್ಪಟ್ಟು ಮಾಡುವುದು 2010ರಲ್ಲಿ ಸೇಂಟ್‌ ಪೀಟರ್ಸ್‌ಬರ್ಗ್‌ನಲ್ಲಿ ನಡೆದ ಹುಲಿ ಶೃಂಗ ಸಭೆಯ ಘೋಷಣೆಯಾಗಿತ್ತು. 2022ರಲ್ಲಿ ಈ ಗುರಿ ಸಾಧನೆ ಮಾಡಬೇಕು ಎಂದು ತೀರ್ಮಾನಿಸಲಾಗಿತ್ತು. ಆದರೆ, ಗಡುವಿಗೆ ಇನ್ನೂ ನಾಲ್ಕು ವರ್ಷಗಳಿರುವಾಗ ಆ ಸಾಧನೆ ಮಾಡಿದ ಹೆಮ್ಮೆ ನಮ್ಮ ದೇಶದ್ದಾಗಿದೆ.

2014–18ರ ನಡುವೆ ಭಾರತದಲ್ಲಿ ಹುಲಿಗಳ ಸಂಖ್ಯೆ ಏರುತ್ತಲೇ ಸಾಗಿದೆ. ಹುಲಿ ಗಣತಿ ಆರಂಭಿಸಿದ ಬಳಿಕ ಹಿಂದೆಂದೂ ಏರಿಲ್ಲದ ಗತಿಯಲ್ಲಿ ವ್ಯಾಘ್ರ ಸಂತತಿ ಹೆಚ್ಚಾಗಿದೆ. ಛತ್ತೀಸಗಡ ಮತ್ತು ಮಿಜೋರಾಂನಲ್ಲಿ ಹುಲಿಗಳ ಸಂಖ್ಯೆ ಕಮ್ಮಿಯಾಗಿದೆ, ಒಡಿಶಾದಲ್ಲಿ ಯಾವುದೇ ವ್ಯತ್ಯಾಸ ಆಗಿಲ್ಲ. ಉಳಿದ ಎಲ್ಲ ರಾಜ್ಯಗಳಲ್ಲಿಯೂ ಗಣನೀಯವಾಗಿ ಏರಿಕೆ ಆಗಿದೆ. ಹುಲಿ ಆವಾಸಸ್ಥಾನಗಳನ್ನು ಐದು ವಲಯಗಳಲ್ಲಿ ಗುರುತಿಸಲಾಗಿದೆ. ಈ ಎಲ್ಲ ಐದು ವಲಯಗಳಲ್ಲಿಯೂ ಸಂಖ್ಯೆ ಏರಿದೆ. ಮಧ್ಯ ಭಾರತ ವಲಯವು ಅತಿ ಹೆಚ್ಚಿನ ಏರಿಕೆಗೆ ಸಾಕ್ಷಿಯಾಗಿದೆ.

ಕೆಳಗಿಳಿದ ಕರ್ನಾಟಕ
1995ರಿಂದಲೇ ಮಧ್ಯ ಪ್ರದೇಶವು ‘ಹುಲಿ ರಾಜ್ಯ’ ಎಂಬ ಹಿರಿಮೆಯನ್ನು ಹೊಂದಿತ್ತು. ಆಗ, ಭಾರತದಲ್ಲಿದ್ದ ಹುಲಿಗಳ ಪೈಕಿ ಶೇ 20ರಷ್ಟು ಆ ರಾಜ್ಯದಲ್ಲಿಯೇ ಇದ್ದವು. ಜಗತ್ತಿನ ಒಟ್ಟು ಹುಲಿಗಳಲ್ಲಿ ಶೇ 10ರಷ್ಟು ಅಲ್ಲಿ ಇದ್ದವು. ಆದರೆ, 2011ರಲ್ಲಿ ಚಿತ್ರಣ ಬದಲಾಯಿತು. 2006ರಲ್ಲಿ ಮಧ್ಯ ಪ್ರದೇಶದಲ್ಲಿ 300 ಹುಲಿಗಳಿದ್ದವು. 2011ರ ಗಣತಿಯ ಹೊತ್ತಿಗೆ ಇದು 257ಕ್ಕೆ ಇಳಿದಿತ್ತು. 300 ಹುಲಿಗಳನ್ನು ಹೊಂದಿದ್ದ ಕರ್ನಾಟಕಕ್ಕೆ ಪ್ರತಿಷ್ಠೆಯ ಮೊದಲ ಸ್ಥಾನ ದೊರೆಯಿತು.

2014ರ ಗಣತಿಯಲ್ಲಿಯೂ ಕರ್ನಾಟಕವು ಮೊದಲ ಸ್ಥಾನವನ್ನು ಉಳಿಸಿಕೊಂಡಿತ್ತು. ಆದರೆ, ಈ ಬಾರಿ ಅತ್ಯಲ್ಪ ಅಂತರದಲ್ಲಿ ಈ ಸ್ಥಾನ ಕೈತಪ್ಪಿದೆ.

ಮುಖ್ಯ ಕಾರಣ
ಕರ್ನಾಟಕವು ಮೊದಲ ಸ್ಥಾನವನ್ನು ಕಳೆದು ಕೊಳ್ಳಲಿದೆ ಎಂಬುದು ನಿರೀಕ್ಷಿತವೇ ಆಗಿತ್ತು. ಬಂಡಿಪುರ–ನಾಗರಹೊಳೆ ಹುಲಿ ರಕ್ಷಿತಾರಣ್ಯಗಳಲ್ಲಿ ಹುಲಿಗಳ ಸಂಖ್ಯೆ ಗರಿಷ್ಠ ಮಟ್ಟವನ್ನು ತಲುಪಿದೆ. ಹಾಗಾಗಿ, ಈ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇಲ್ಲ ಎಂದು ತಜ್ಞರು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT